ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕರೋನಾ ಬರುವುದಕ್ಕೂ ಮುನ್ನ ದೇಶಾದ್ಯಂತ ಬೃಹತ್ ಹೋರಾಟಗಳು ನಡೆಯುತ್ತಿದ್ದವು. ದೆಹಲಿ ಸೇರಿದಂತೆ ದೇಶದ ಬಹುತೇಕ ನಗರಗಳಲ್ಲಿ ನಿರಂತರವಾದ ಪ್ರತಿಭಟನೆಗಳು ನಡೆಯುತ್ತಿದ್ದವು. ಅದರಲ್ಲಿ ದೆಹಲಿಯ ಶಾಹೀನ್ ಭಾಗ್ ಕೂಡ ಒಂದು. ಇಲ್ಲಿನ ಮಹಿಳೆಯರು, ಮಕ್ಕಳೂ ಸೇರಿದಂತೆ ಸಾವಿರಾರು ಜನರು ಒಂದೂವರೆ ತಿಂಗಳಿಗೂ ಹೆಚ್ಚಿನ ಕಾಲ ನಿರಂತರ ಪ್ರತಿಭಟನೆ ಮಾಡುವ ಮೂಲಕ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿಲುವನ್ನು ಖಂಡಿಸಿದ್ದರು. ಕೇಂದ್ರ ಸರ್ಕಾರದ ಮಂತ್ರಿಗಳು, ಬಿಜೆಪಿ ಸಂಸದರು ದೆಹಲಿಯ ಸಿಎಎ ಹೋರಾಟಗಾರರ ಬಗ್ಗೆ ಮಾಡದೆ ಇರುವ ಟೀಕೆಗಳು ಇಲ್ಲ ಎನ್ನುವ ಮಟ್ಟಿಗೆ ಆಕ್ರೋಶದ ಕಟ್ಟೆ ಒಡೆದಿತ್ತು. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಹಾಗೂ ಮತ್ತೋರ್ವ ಸಂಸದ ಪರ್ವೇಶ್ ವರ್ಮಾ ನೀಡಿದ್ದ ಹೇಳಿಕೆಗಳು ಭಾರೀ ವಿವಾದ ಪಡೆದುಕೊಂಡಿದ್ದವು. ಮುಸ್ಲಿಂ ಸಮುದಾಯದ ಹೋರಾಟಗಾರರನ್ನು ಗುರಿಯಾಗಿಸಿ ಮಾಡಿದ ಹೋರಾಟಗಳೆಲ್ಲವೂ ಇದೀಗ ಊಫಿ ಊಫಿ..
`ನೆನಪಿರಲಿ ನಿಮ್ಮ ಮನೆಗೆ ನುಗ್ತಾರೆ, ರೇಪ್ ಮಾಡ್ತಾರೆ’
ಈ ಮೇಲಿನ ಮಾತುಗಳನ್ನು ಹೇಳಿದ್ದು ಬಿಜೆಪಿ ಸಂಸದ ಪರ್ವೇಶ್ ವರ್ಮಾ. ಈ ಮಾತು ಹೇಳಿ ವರ್ಷವಾಗಿಲ್ಲ. ಯಾರ ಬಗ್ಗೆ ಮಾತನಾಡಿದ್ದರೋ ಅದೇ ಸಮುದಾಯದ ನೂರಾರು ಜನರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಭಾನುವಾರ ರಾತ್ರಿ ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ ಗುಪ್ತಾ ಸಮ್ಮುಖದಲ್ಲಿ 500ಕ್ಕೂ ಹೆಚ್ಚು ಮುಸ್ಲಿಂ ಮುಖಂಡರು ಬಿಜೆಪಿಗೆ ಸೇರ್ಪಡೆಯಾದರು. ಶಾಹೀನ್ ಭಾಗ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ನಿಜಾಮುದ್ದೀನ್ ಹಾಗೂ ಓಕ್ಲಾ ಪ್ರದೇಶದ ನೂರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸ್ವತಃ ಅಧ್ಯಕ್ಷರೇ ಬಿಜೆಪಿ ಬಾವುಟ ಹಾಕುವ ಮೂಲಕ ಮುಸ್ಲಿಂ ಸಮುದಾಯದ ನಾಯಕರನ್ನು ಪಕ್ಷಕ್ಕೆ ಸ್ವಾಗತ ಮಾಡಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಕೆಲಸವನ್ನು ಮೆಚ್ಚಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಮುಸ್ಲಿಂ ಸಮುದಾಯದ ಜನರಿಗೆ ಭಾರತೀಯ ಜನತಾ ಪಕ್ಷದ ಮೇಲೆ ನಂಬಿಕೆ ಬರುತ್ತಿದೆ ಎನ್ನಲು ಇಲ್ಲಿ ನೆರೆದಿರುವ ಜನರೇ ಸಾಕ್ಷಿ ಎಂದಿದ್ದಾರೆ ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ.
#WATCH: BJP MP Parvesh Verma says, “…Lakhs of people gather there (Shaheen Bagh). People of Delhi will have to think & take a decision. They'll enter your houses, rape your sisters&daughters, kill them. There's time today, Modi ji & Amit Shah won't come to save you tomorrow…” pic.twitter.com/1G801z5ZbM
— ANI (@ANI) January 28, 2020
ಶಾಹೀನ್ ಬಾಗ್ ಹೋರಾಟದಲ್ಲಿ ಭಾಗಿಯಾಗಿದ್ದ ಸಾಮಾಜಿಕ ಕಾರ್ಯಕರ್ತ ಶಹಜಾದ್ ಅಲಿ ಮಾತನಾಡಿ, ಇಲ್ಲಿ ಪ್ರತಿಭಟನೆ ಮಾಡುತ್ತಿದ್ದ ಕೆಲವು ಜನರು ಸರ್ಕಾರದ ಕಡೆಯಿಂದ ಯಾರಾದರೂ ಒಬ್ಬರು ಬಂದು ನಮಗೆ ಇರುವ ಗೊಂದಲಗಳನ್ನು ಬಗೆಹರಿಸಬೇಕು ಎಂದು ಬಯಸಿದ್ದರು. ಇವತ್ತು ಆ ಸಮಯ ಬಂದಿದೆ. ಸಿಎಎ ಬಗ್ಗೆ ಇರುವ ಎಲ್ಲಾ ಗೊಂದಲಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇನೆ. ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಕುಳಿತು ಚರ್ಚೆ ನಡೆಸುತ್ತೇವೆ ಎಂದಿದ್ದಾರೆ. ನಮ್ಮ ಸಮುದಾಯಕ್ಕೆ ಬಿಜೆಪಿ ಶತ್ರು ಎಂಬಂತೆ ಬಿಂಬಿಸಿರುವುದನ್ನು ಸುಳ್ಳು ಎಂದು ಸಾಬೀತು ಮಾಡಲು ಕೆಲಸ ಮಾಡುತ್ತೇನೆ ಎಂದಿದ್ದಾರೆ. ಇನ್ನೂ ಬಿಜೆಪಿ ನಾಯಕ ನಿಗತ್ ಅಬ್ಬಾಸ್ ಮಾತನಾಡಿ ಶಾಹೀನ್ ಭಾಗ್ ಹೋರಾಟಗಾರರೇ 50 ಜನರು ಬಿಜೆಪಿ ಸೇರಿದ್ದಾರೆ. ಒಟ್ಟಾರೆ ಸಿಎಎ ವಿರೋಧಿಸುವವರು ಹಾಗೂ ಬೆಂಬಲಿಸುವವರು ಎಲ್ಲರೂ ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ ಎಂದಿದ್ದಾರೆ. ವಾಸ್ತುಶಿಲ್ಪಿ ಆಗಿರುವ ಆಸಿಫ್ ಅನೀಸ್ ಮಾತನಾಡಿ, ಶಾಹೀನ್ ಭಾಗ್ ಹೋರಾಟ ಒಂದು ಕಾನೂನಿನ ವಿರುದ್ಧವೇ ಹೊರತು ಒಂದು ಪಕ್ಷದ ವಿರುದ್ಧವಲ್ಲ ಎಂದಿದ್ದಾರೆ. ನೀವು ಸಿಎಎ ಸಪೋರ್ಟ್ ಮಾಡ್ತೀರಾ..? ಎನ್ನುವ ಪ್ರಶ್ನೆಗೆ ನಾನು ಪರವೋ ವಿರುದ್ಧವೋ ಎನ್ನುವುದು ಅಥವಾ ಕಾಯ್ದೆ ಜಾರಿಯಾಗುತ್ತೋ ಇಲ್ಲವೋ ಎನ್ನುವುದು ಮುಖ್ಯವಲ್ಲ. ಈ ದೇಶದ ಪ್ರಜೆಗಳಿಗೆ ಅದರಿಂದ ತೊಂದರೆ ಆಗುವುದಿಲ್ಲ ಎಂದಿದ್ದಾರೆ.
ಸಿಎಎ ಕಾಯ್ದೆ ಬೆದರಿಸಲು ಮಾತ್ರ ಸೀಮಿತವೇ..?
ಭಾರತೀಯ ಜನತಾ ಪಾರ್ಟಿಯ ಪ್ಲಸ್ ಮತ್ತು ಮೈನಸ್ ಎಂದರೆ ಹಿಂದುತ್ವ ಅಜೆಂಡಾ. ಹಿಂದೂಗಳ ಪಕ್ಷ ಎನ್ನುವ ಕಾರಣಕ್ಕೆ ಭಾರೀ ಪ್ರಚಂಡ ಬೆಂಬಲೂ ದೊರೆಯುತ್ತದೆ. ಅದೇ ರೀತಿ ಹಿಂದೂಗಳನ್ನು ಓಲೈಕೆ ಮಾಡುತ್ತಾರೆ ಎನ್ನುವ ಕಾರಣಕ್ಕೆ ಮುಸ್ಲಿಂ ಸಮುದಾಯ ಪಕ್ಷದಿಂದ ದೂರ ಉಳಿದಿತ್ತು. ಇತ್ತೀಚಿನ ದಿನಗಳಲ್ಲಿ ಮುಸ್ಲಿಂ ಸಮುದಾಯ ಬಿಜೆಪಿ ವಿರುದ್ಧ ಕೆಂಡಕಾರುತ್ತಿತ್ತು. ಮುಸ್ಲಿಂ ಸಮುದಾಯದ ವೈಯಕ್ತಿಕ ಕಾನೂನು ತೆಗೆದು ಹಾಕಲು ಮುಂದಾಗಿದ್ದು ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ಮುಂದಾಗಿದ್ದು ಆಕ್ರೋಶದ ಕಟ್ಟೆ ಪಡೆಯುವಂತೆ ಮಾಡಿತ್ತು. ಇದೀಗ ಎಲ್ಲವೂ ಸರಿಯಾದಂತೆ ಕಾಣಿಸುತ್ತಿದೆ. ಪಾಕಿಸ್ತಾನಿಗಳು, ದೇಶದ್ರೋಹಿಗಳು ಎಂದು ಟೀಕಿಸಿದ್ದ ಜನರನ್ನೇ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ. ಬಿಜೆಪಿಗೆ ಬಲವರ್ಧನೆ ಆದಂತೆ ಆಯ್ತು. ಇದೀಗ ಸಿಎಎ ಜಾರಿ ಮಾಡಿ, ಎಲ್ಲರೂ ಭಾರತೀಯರೇ ಎಂದು ಹೇಳುವ ಬದಲು ಸುಮ್ಮನಿರುವುದೇ ಲೇಸು.
ತಂತ್ರಗಾರಿಕೆ ಬಳಸಿಕೊಂಡಾರೆ ಹೋರಾಟಗಾರರು?
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯಾರು ಯಾವ ಪಕ್ಷವನ್ನಾದರೂ ಬೆಂಬಲಿಸಲು ಅವಕಾಶವಿದೆ. National Register of Citizens (ರಾಷ್ಟ್ರೀಯ ಪೌರತ್ವ ನೋಂದಣಿ) Citizenship Amendment Act (ಪೌರತ್ವ ತಿದ್ದುಪಡಿ ಕಾಯ್ದೆ) ವಿರುದ್ಧ ತಿಂಗಳುಗಟ್ಟಲೆ ಹೋರಾಟ ಮಾಡುತ್ತಾ ಕೆಲವೊಮ್ಮೆ ಪೊಲೀಸರ ಲಾಠಿ ಏಟು ತಿನ್ನುವ ಬದಲು ಬಿಜೆಪಿ ಪಕ್ಷಕ್ಕೇ ಸೇರ್ಪಡೆಯಾದರೆ..! ಇದು ತಂತ್ರಗಾರಿಕೆ. ಯಾವುದೇ ಪಕ್ಷದ ಸರ್ಕಾರ ಇದ್ದರೂ ತನ್ನದೇ ಪಕ್ಷದ ಜನರ ವಿರುದ್ಧ ನಿಲುವು ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಇಲ್ಲೀವರೆಗೂ ವಿರೋಧಿಸುತ್ತಿದ್ದ ಮುಸ್ಲಿಂ ಸಮುದಾಯ ಬಿಜೆಪಿಗೆ ಸೇರ್ಪಡೆಯಾದರೆ ಯಾವುದೇ ಸಮಸ್ಯೆ ಇಲ್ಲದೆ ಸಹಬಾಳ್ವೆಗೂ ಅನುಕೂಲವಾಗಲಿದೆ ಎಂಬ ಅಂದಾಜಿಗೆ ಬಂದಿದ್ದಾರೆಯೇ?. ಆದರೆ 6 ತಿಂಗಳ ಹಿಂದೆ ಬಿಜೆಪಿಯವರ ಪಾಲಿಗೆ ದೇಶದ್ರೋಹಿಗಳು, ಪಾಕಿಸ್ತಾನಿಗಳು, ರೇಪಿಸ್ಟ್‍ಗಳು ಆಗಿದ್ದ ಮುಸ್ಲಿಂ ಸಮುದಾಯದ ಜನರು ಈಗ ಹೇಗೆ ಪಾವನರಾದರು..? ಇದನ್ನು ಬಿಜೆಪಿ ನಾಯಕರು ಹೇಗೆ ಸಮರ್ಥನೆ ಮಾಡಿಕೊಳ್ತಾರೆ..? ಎನ್ನುವುದಷ್ಟೇ ಈಗಿರುವ ಕುತೂಹಲ.