ಶಾಹಿನ್‌ಬಾಗ್‌ನಲ್ಲಿ ಪ್ರತಿಭಟಿಸುತ್ತಿರುವ ಮಹಿಳೆಯರು ದಿನವೊಂದಕ್ಕೆ 500ರೂ ರೀತಿಯಲ್ಲಿ ಹಣ ಪಡೆದು ಪ್ರತಿಭಟನೆ ನಡೆಸುತ್ತಿದ್ದಾರೆ ಹಾಗೂ ಇದರ ಹಿಂದೆ ಕಾಂಗ್ರೆಸ್‌ನ ಕೈವಾಡ ಇದೆ ಎಂದು ಜನವರಿ 15ರಂದು ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಳವಿಯ ಒಂದು ವಿಡಿಯೋ ಬಿಡುಗಡೆ ಮಾಡಿದ್ದರು. ದೆಹಲಿಯ ಅಂಗಡಿಯೊಂದರ ಮಾಲಿಕ ʼಕುಟುಕು ಕಾರ್ಯಾಚರಣೆʼಯಲ್ಲಿ ಬಯಲು ಮಾಡಿದ ರಹಸ್ಯವಿದು ಎಂದು, ಬಿಜೆಪಿಯ ನಾಯಕರು ಹಾಗೂ ಕೆಲವು ರಾಷ್ಟ್ರೀಯ ಸುದ್ದಿವಾಹಿನಿಗಳು ಈ ಸುದ್ದಿಯನ್ನು ಬಿತ್ತರಿಸಿದವು. ದೆಹಲಿ ಚುನಾವಣೆಯ ಸಂಧರ್ಭದಲ್ಲಿ ಬಿಜೆಪಿ ನಾಯಕರ ಇದೊಂದು ಪ್ರಮುಖ ಅಸ್ತ್ರವಾಗಿತ್ತು. ಈ ವಿಷಯವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳ ವಿರುದ್ದ ಹರಿಹಾಯ್ದಿದ್ದರು. ಬಹಳಷ್ಟು ಚರ್ಚೆಗೆ ಗ್ರಾಸವಾಗಿದ್ದ ಈ ವಿಡಿಯೋ ಅಸಲಿಯತ್ತು ಏನೆಂದು ತಿಳಿಯಲು ಆಂಗ್ಲ ಜಾಲತಾಣಗಳಾದ Alt News ಮತ್ತು News Laundry ಬಹಳಷ್ಟು ಪರಿಶ್ರಮ ಪಟ್ಟು ಈಗ ಯಶಸ್ವಿಯಾಗಿದ್ದಾರೆ.
ಬಿಜೆಪಿ ವತಿಯಿಂದ ನಿಜವಾಗಿಯೂ ಇಂತಹದೊಂದು ಕುಟುಕು ಕಾರ್ಯಾಚರಣೆ ನಡೆದಿತ್ತೇ? ಅಥವಾ ತಮ್ಮ ಚುನಾವಣಾ ಪ್ರಚಾರಕ್ಕಾಗಿ ನಕಲಿ ಸ್ಟಿಂಗ್ ಆಪರೇಷನ್ ಮಾಡಿ ಅದರ ಲಾಭವನ್ನು ಬಿಜೆಪಿ ನಾಯಕರು ಪಡೆಯಲು ಯತ್ನಿಸಿದರೇ? ಎಂಬುದರ ಜಾಡು ಹಿಡಿಯುತ್ತಾ ಸಾಗಿದ Alt News ಮತ್ತು News Laundry ತಂಡ ಯಾವ ರೀತಿ ಇದರ ಅಸಲಿಯತ್ತನ್ನು ಬಯಲಿಗೆಳೆಯಿತು ಎಂಬ ವಿವರ ಇಲ್ಲಿದೆ.
ಬಿಜೆಪಿ ನಾಯಕರು ಬಿಡುಗಡೆ ಮಾಡಿದ್ದ ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿ ಒಂದು ಮೊಬೈಲ್ ನಂಬರ್ ಕಾಣಿಸುತ್ತದೆ. ಆ ನಂಬರ್ ಯಾರದ್ದೆಂದು ಪರಿಶೀಲಿಸಿದಾಗ, ʼಕುಸ್ಮಿ ಟೆಲಿಕಾಂ ಸೆಂಟರ್ʼ ಎಂಬ ಹೆಸರಿನ ಮೊಬೈಲ್ ಶಾಪ್ ಒಂದು ವಿಳಾಸ ದೊರೆಯುತ್ತದೆ. ಆ ಅಂಗಡಿಗೆ ಭೇಟಿ ನೀಡಿದಾಗ, ವೀಡಿಯೊದಲ್ಲಿರುವ ಅಂಗಡಿಯ ಗೋಡೆಗಳ ಬಣ್ಣ ಹಾಗೂ ಕುಸ್ಮಿ ಟೆಲಿಕಾಂ ಸೆಂಟರ್ ಅಂಗಡಿಯ ಗೋಡೆಯ ಬಣ್ಣ ಒಂದೇ ಎಂದು ತಿಳಿದು ಬರುತ್ತದೆ. ಆ ಅಂಗಡಿಯು ಶಾಹಿನ್‌ಬಾಗ್‌ನಿಂದ ಸುಮಾರು ಎಂಟು ಕಿಲೋಮೀಟರ್ ದೂರದ ದಕ್ಷಿಣ ದೆಹಲಿಯ ಪ್ರಹ್ಲಾದ್‌ಪುರ್‌ನಲ್ಲಿತ್ತು. ಅಲ್ಲಿನ ತುಘಲಕಾಬಾದ್ ಮೆಟ್ರೋ ಸ್ಟೇಷನ್ ಸಮೀಪದ ಮಿತ್ತಲ್ ಕಾಲೋನಿ ಎ-ಬ್ಲಾಕ್‌ನಲ್ಲಿನ ಅಂಗಡಿ ನಂಬರ್ 134ರಲ್ಲಿ ಬಿಜೆಪಿಯ ಸ್ಟಿಂಗ್ ಆಪರೇಷನ್ ನಡೆದಿತ್ತು.
ಆ ಅಂಗಡಿಯ ಮಾಲಿಕ ಅಶ್ವನಿ ಕುಮಾರ್. ಆ ಅಂಗಡಿಯಲ್ಲಿ ಅವರೊಂದಿಗೆ ವಯಸ್ಸಾದ ಅವರ ತಂದೆಯೂ ಇದ್ದರೂ. ಮೊಬೈಲ್ ಕರೆನ್ಸಿ, ಪ್ರಿಂಟ್ ಔಟ್, ಕುರುಕಲು ತಿಂಡಿ, ಮೊಟ್ಟೆ ಹಾಗೂ ಸಿಗರೆಟ್ ಇಷ್ಟೇ ಅಲ್ಲಿನ ವ್ಯಾಪಾರ. ಅಂಗಡಿಯಲ್ಲಿನ ಗೋಡೆ ಗಡಿಯಾರ ಮಾತ್ರ ಆಕರ್ಷಣಿಯವಾಗಿತ್ತು. ಏಕೆಂದರೆ ಆ ಗಡಿಯಾರದಲ್ಲಿ ನರೇಂದ್ರ ಮೋದಿ ಭಾವ ಚಿತ್ರ ಅಲ್ಲಿಗೆ ಭೇಟಿ ನೀಡುವ ಪ್ರತಿಯೊಬ್ಬರಿಗೂ ಎದ್ದು ಕಾಣಿಸುತ್ತಿತ್ತು. ಮೊದಲಿಗೆ ಆ ವೀಡಿಯೋ ತೆಗಿದಿದ್ದು ತಮ್ಮ ಅಂಗಡಿಯಲ್ಲಿ ಅಲ್ಲ ಎಂದು ಅಲ್ಲಗೆಳೆಯುತ್ತಿದ್ದ ಅಶ್ವನಿ ಕುಮಾರ್ ಸ್ವಲ್ಪ ಸಮಯದ ನಂತರ ಸತ್ಯ ಒಪ್ಪಿಕೊಂಡರು.
ತಮ್ಮ ಅಂಗಡಿಗೆ ಬಂದು ವಿಚಾರಿಸುತ್ತಿರುವವರು ಮಾಧ್ಯಮದವರು ಎಂದು ತಿಳಿಯದೇ, ಹರಟೆಯ ಭರದಲ್ಲಿ ತಾನೊಬ್ಬ ಬಿಜೆಪಿ ಕಾರ್ಯಕರ್ತ ಎಂದು ಒಪ್ಪಿಕೊಂಡರು. ತಾನು ತನ್ನಿದಾದಷ್ಟು ಸಮಾಜ ಸೇವೆ ಮಾಡುತ್ತಿದ್ದು, ತನ್ನ ಬಳಿ ಬರುವ ಜನರಿಗೆ ಸರ್ಕಾರದಿಂದ ಸೌಲಭ್ಯ ಕೊಡಿಸಲು ಪ್ರಯತ್ನಿಸುತ್ತೇನೆ, ಎಂದು ಎಂದು ತಮ್ಮ ಅಂಗಡಿಯಲ್ಲಿ ಜೋಡಿಸಿಟ್ಟಿದ್ದ ಫೈಲುಗಳನ್ನು ತೋರಿಸಿದರು.
ಇನ್ನು ಪತ್ರಕರ್ತರು ತಮ್ಮ ಹರಟೆಯನ್ನು ಶಾಹೀನ್‌ಬಾಗ್ ಕಡೆಗೆ ಹರಿಸಿ ಅಲ್ಲಿ ನಡೆಯುತ್ತಿರುವ ಪ್ರತಿಭಟನೆ ಪ್ರಾಯೋಜಿತವೇ ಎಂದು ಪ್ರಶ್ನಿಸಿದ್ದಕ್ಕೆ, ಹಾಗಂತ ಹೇಳುವುದು ತಪ್ಪಾಗುತ್ತೆ ಎಂಬ ಉತ್ತರ ನೀಡಿದರು. ಜನರು ಸುಳ್ಳು ಸುದ್ದಿಯ ಪ್ರಾರ ನೀಡುತ್ತಿರಬಹುದು. ಆ ಕುರಿತಾಗಿ ತಪ್ಪಾಗಿ ಮಾತನಾಡುವುದು ಕೂಡಾ ತಪ್ಪು ಎಂದು ಹೇಳಿದರು ಅಶ್ವನಿ ಕುಮಾರ್.
ಈ ಮೊದಲ ಇಪ್ಪತ್ತು ನಿಮಿಷಗಳ ಮಾತುಕತೆಯಲ್ಲಿ ತಿಳಿದುಬಂದ ವಿಷಯಗಳೇನೆಂದರೆ, ಮೊದಲನೆಯದಾಗಿ, ಬಿಜೆಪಿಯವರು ತಮ್ಮ ಸ್ಟಿಂಗ್ ಆಪರೇಷನ್‌ಗಾಗಿ ಆಯ್ಕೆ ಮಾಡಿದ್ದು ಬಿಜೆಪಿ ಕಾರ್ಯಕರ್ತನ ಅಂಗಡಿಯನ್ನು ಮತ್ತು ಆ ಅಂಗಡಿಯಲ್ಲಿನ ವಸ್ತುಗಳು ಬಿಜೆಪಿಯವರು ಬಿಡುಗಡೆ ಮಾಡಿದ ವೀಡಿಯೋ ಜೊತೆಗೆ ತಾಳೆಯಾಗುತ್ತಿದ್ದವು.
ಎರಡನೇಯದಾಗಿ, ಅಮಿತ್ ಮಾಳವಿಯ ಬಿಡುಗಡೆ ಮಾಡಿದ್ದ ವೀಡಿಯೋದಲ್ಲಿ ಮೂರು ಧ್ವನಿಗಳನ್ನು ಗುರುತಿಸಬಹುದಿತ್ತು, ಒಂದು ಶಾಹಿನ್‌ಬಾಗ್ ಪ್ರತಿಭಟನಾಕಾರರ ಮೇಲೆ ಆರೋಪ ಮಾಡುತ್ತಿರುವ ವ್ಯಕ್ತಿ (ವೀಡಿಯೋದಲ್ಲಿ ಕಾಣಬಹುದು ಮತ್ತು ಇಬ್ಬರು ವ್ಯಕ್ತಿಗಳು ವೀಡಿಯೋದಲ್ಲಿ ಕಾಣುತ್ತಿರಲಿಲ್ಲ. ಅವರಲ್ಲಿ ಓರ್ವ ವ್ಯಕ್ತಿಯ ಧ್ವನಿ ಸ್ವಲ್ಪ ಗಡುಸಾಗಿದ್ದು ವಯಸ್ಸಾದ ವ್ಯಕ್ತಿಯ ರೀತಿ ಇತ್ತು. ಆ ವ್ಯಕ್ತಿ ಅಶ್ವನಿ ಅವರ ತಂದೆ ಎಂಬುದು ಖಚಿತವಾಯಿತು. ಅವರು ವೀಡಿಯೋದಲ್ಲಿ ʼಸಬ್ ಕಾಂಗ್ರೆಸ್ ಕಾ ಖೇಲ್ ಹೇ (ಎಲ್ಲಾ ಕಾಂಗ್ರೆಸ್ಸಿನವರ ಆಟ) ಎಂದು ಹೇಳಿರುವುದ ಸ್ಪಷ್ಟವಾಗಿ ಕೇಳುತ್ತಿತ್ತು ಮತ್ತು ಈ ವಾಕ್ಯವನ್ನೇ ಅಮಿತ್ ಮಾಳವಿಯ ತಮ್ಮ ಟ್ವೀಟ್‌ನಲ್ಲೂ ಬಳಸಿಕೊಂಡಿದ್ದರು. ಇನ್ನು ಆ ವಿಡಿಯೋದಲ್ಲಿನ ಕೊನೇಯ ಧ್ವನಿ ಅಶ್ವನಿ ಕುಮಾರ್ ಅವರ ಧ್ವನಿಯನ್ನು ಹೋಲುತ್ತಿತ್ತು.
ಇನ್ನು ಈ ವಿಡಿಯೋ ಮಾಡಲು ಬಳಸಿಕೊಂಡಿದ್ದು ಯಾವುದೇ ಹಿಡನ್ ಕ್ಯಾಮೆರಾ ಅಲ್ಲ. ಬದಲಾಗಿ ಈ ವಿಡಿಯೋವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಲಾಗಿತ್ತು. ವಿಡಿಯೋ ಫ್ರೇಂ ಸೈಜ್ ಗಮನಿಸಿದಾಗ ಅದು ಫೋನ್ ಬಳಸಿ ತೆಗೆದ ವಿಡಿಯೋ ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಆದರೆ, ಇದನ್ನು ಟ್ವಿಟರ್‌ಗೆ ಅಪ್‌ಲೋಡ್ ಮಾಡುವ ಸಂಧರ್ಭದಲ್ಲಿ ಫ್ರೇಂ ಸೈಜ್ ಸಣ್ಣದು ಮಾಡಿ Hidden Camera ಬಳಸಿ ತೆಗೆದ ವಿಡಿಯೋ ರೀತಿಯಲ್ಲಿ ತೋರಿಸಲಾಗಿತ್ತು. ಇವೆಲ್ಲಾ ಅಂಶಗಳನ್ನು ತಾಳೆ ಹಾಕಿದಾಗ ಅಶ್ವನಿ ಕುಮಾರ್ ಅವರೇ ಈ ವಿಡಿಯೋ ಚಿತ್ರಿಕರಿಸಿದ್ದರೇ ಎಂಬ ಪ್ರಶ್ನೆ ಮೂಡುತ್ತದೆ.
ಇಷ್ಟೆಲ್ಲಾ ಮಾತುಕತೆ ನಡೆದಾಗ ಅಶ್ವನಿ ಕುಮಾರ್‌ಗೆ ಈ ಪತ್ರಕರ್ತರು ಶಾಹಿನ್‌ಬಾಗ್ ವಿಡಿಯೋ ಕುರಿತು ವಿಚಾರಣೆ ನಡೆಸುತ್ತಿದ್ದರು ಎಂಬುದು ಸ್ಪಷ್ಟವಾಯಿತು. ಒಮ್ಮಗೆ, defensive moodಗೆ ಬಂದ ಆಸ್ವನಿ ಕುಮಾರ್ ನಂತರ ತಮ್ಮ ಉತ್ತರಗಳನ್ನು ಅಳೆದು ತೂಗಿ ನೀಡಲಾರಂಭಿಸಿದರು. ಪತ್ರಕರ್ತರ ಕೈಯಲ್ಲಿದ್ದ ನೋಟ್‌ಬುಕ್ ಕಸಿದು ಅದರ ಪುಟಗಳನ್ನು ಹರಿದು ಹಾಕಿದರು. ಉಳಿದ ಪುಟಗಳಲ್ಲಿ ಬರೆದಿದ್ದ ಮಾಹಿತಿಯ ಮೇಲೆ ಪೆನ್ನಿನಿಂದ ಗೀಚು ಹಾಕಿ ಅಳಿಸಲು ಪ್ರಯತ್ನಿಸಿದರು.
“ಆ ವಿಡಿಯೋ ಈ ಅಂಗಡಿಯಲ್ಲಿ ಚಿತ್ರೀಕರಿಸಿದ್ದಲ್ಲ. ಆ ವಿಡಿಯೋದಲ್ಲಿರುವ ಹುಡುಗ ಇನ್ನೂ ಚಿಕ್ಕವನು. ಅವನಿಗೆ ಇನ್ನೂ ಪ್ರಬುದ್ದತೆ ಮೂಡಿಲ್ಲ. ನನಗೆ ಆಮ್ ಆದ್ಮಿ ಪಾರ್ಟಿ, ಬಿಜೆಪಿ ಹಾಗೂ ಕಾಂಗ್ರೆಸ್ ಜೊತೆ ಯಾವುದೇ ಸಂಬಂಧವಿಲ್ಲ,” ಎಂದು ಅಶ್ವನಿ ಕುಮಾರ್ ತಡಬಡಾಯಿಸಿದರು. ಪತ್ರಕರ್ತರು ಅವರ ಅಂಗಡಿಯನ್ನು ಬಿಟ್ಟು ಹೋಗುವ ವರೆಗೂ ಆ ವಿಡಿಯೋ ಚಿತ್ರೀಕರಿಸಿದ್ದು ತಮ್ಮ ಅಂಗಡಿಯಲ್ಲಿ ಅಲ್ಲ ಎಂದು ವಾದಿಸಿದರು.
ಇದು ನಡೆದು ನಾಲ್ಕು ದಿನಗಳ ನಂತರ ಪತ್ರಕರ್ತರಲ್ಲಿ ಒಬ್ಬರಿಗೆ ಕರೆ ಮಾಡಿ ಮಾತನಾಡಿದ ಅಶ್ವನಿ ಕುಮಾರ್, ಆ ವಿಡಿಯೋ ತೆಗೆದದ್ದು ತಮ್ಮ ಅಂಗಡಿಯಲ್ಲೇ ಎಂಬ ಸತ್ಯ ಒಪ್ಪಿಕೊಂಡರು. ನಂತರ ಆ ವಿಡಿಯೋ ಮಾಡಿದವರು ಯಾರೆಂದು ತಿಳಿದಿಲ್ಲ. ಆ ವಿಡಿಯೋದಲ್ಲಿ ಹೇಳೀರುವ ವಿಷಯಗಳು ಸತ್ಯವೆಂದು ಹೇಳಲಾಗುವುದಿಲ್ಲ ಎಂದು ಕೂಡ ಹೇಳಿದ್ದರು.
ಒಟ್ಟಿನಲ್ಲಿ Alt News ಮತ್ತು News Laundry ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ತಿಳಿದು ಬಂದಿದ್ದು ಏನೆಂದರೆ, ಒಂದು ವೇಳೆ ರಾಷ್ಟ್ರೀಯ ಮಾಧ್ಯಮಗಳು ಈ ವಿಡಿಯೋ ಕುರಿತು ಪ್ರೈಮ್ ಟೈಮ್ ಡಿಬೇಟ್ ನಡೆಸದೇ ಇದ್ದಿದ್ದರೆ ಇಂತಹ ಒಂದು ನಕಲಿ ವಿಡಿಯೋ ಕುರಿತು ಜನರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ದೆಹಲಿಯ ಯಾರೋ ಮೂವರು, ಯಾವುದೋ ಮೂಲೆಯಲ್ಲಿ ಕುಳಿತು ಮಾಡಿದ ವಿಡಿಯೋ ಎಂಟು ಕಿಲೋಮೀಟರ್ ದೂರ ಇರುವ ಶಾಹಿನ್‌ಬಾಗ್‌ನಲ್ಲಿನ ಮಹಿಳೆಯರ ಮೇಲೆ ಸಂದೇಹ ಪಡುವಂತೆ ಮಾಡಿತ್ತು. Republic TV, Times Now ಹಾಗೂ India Todayಯಂತಹ ಅಗ್ರಮಾಣ್ಯ ಚಾನೆಲ್‌ಗಳು ಈ ಸುದ್ದಿತ ಸತ್ಯಾಸತ್ಯತೆಯನ್ನು ಅರಿಯದೇ, ದಿನವಿಡೀ ಚರ್ಚೆ ನಡೆಸಿದವು. ಆದರೆ, ಈ ವಿಡಿಯೋ ಮಾಡಿದವರು ಮತ್ತು ಮಾಡಿಸಿದವರು (ಬಿಜೆಪಿ ನಾಯಕರು?), ಇದರ ಕುರಿತಾಗಿ ಯಾವುದೇ ಸಕ್ಷಮ ದಾಖಲೆಯನ್ನು ಒದಗಿಸಲು ಸಾಧ್ಯವಾಗದೇ ಒದ್ದಾಡಿದವು.