ಮಾತಿನ ಬಗ್ಗೆ ನಮ್ಮ ಹಿರಿಯರು ಸಾಕಷ್ಟು ನುಡಿಗಟ್ಟುಗಳನ್ನು ಕಟ್ಟಿಕೊಟ್ಟಿದ್ದಾರೆ. ಅದರಲ್ಲಿ ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎನ್ನುವುದು ಕೂಡ ಸಾಕಷ್ಟು ಅರ್ಥ ಕೊಡುವ ಗಾದೆ ಮಾತು. ಆದರೆ, ನಮ್ಮ ರಾಜ್ಯ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿರುವ ಮಾಧುಸ್ವಾಮಿ ಅವರಿಗೆ ಮಾತ್ರ ತಾಳ್ಮೆ ಎನ್ನುವುದು ಕಿಲೋ ಮೀಟರ್‌ಗಟ್ಟಲೆ ದೂರ. ಎಲ್ಲಿ ಹೋದರೂ ಎಲ್ಲಿ ಬಂದರು ಜನರ ಮೇಲೆ ಮುಂಗುಸಿಯಂತೆ ಮುಗಿ ಬೀಳುವುದೇ ಕೆಲಸ. ಈಗ ಹೊಸತಾಗಿ ವಿವಾದ ಸೃಷ್ಟಿಸಿಕೊಂಡಿರುವ ಮಾಧುಸ್ವಾಮಿ ತಮ್ಮ ಸ್ವಂತ ಜಿಲ್ಲೆಯಲ್ಲಿ ರೈತರ ಮೇಲೆ ಎಗರಾಡಿದ್ದಾರೆ.
ಮಾತೇ ಮೃತ್ಯು, ಮಾತೇ ಮುತ್ತು ಎನ್ನುವ ಗಾಧೆ ಮಾತಿದೆ. ಈ ಮಾತು ಸಚಿವ ಮಾಧುಸ್ವಾಮಿ ಅವರಿಗೆ ಅನ್ವಯ ಆಗುವ ಯಾವುದೇ ಲಕ್ಷಗಳು ಕಾಣಿಸುತ್ತಿಲ್ಲ. ಸಚಿವ ಮಾಧುಸ್ವಾಮಿ ಮಾತು ಆಡಿದರೆ ನಾನು ಸಚಿವ ನಾನು ಸಚಿವ ಎನ್ನುತ್ತಾರೆ. ಸಚಿವರನ್ನು ಮಾಡಿದವರ ಬಳಿಯೇ ಹೋಗಿ ನಾನು ಸಚಿವ ನಾನು ಸಚಿವ ಎಂದರೆ ಮುಂದಿನ ಬಾರಿ ಶಾಸಕನನ್ನಾಗಿಯೂ ಮಾಡುವುದಿಲ್ಲ ಎನ್ನುವುದು ಯಾಕೆ ಅರ್ಥವಾಗ್ತಿಲ್ಲ. ಕೋಪದಲ್ಲಿ ಕೊಯ್ದು ಮೂಗು ಮತ್ತೆ ಬರುವುದಿಲ್ಲ ಎನ್ನುವುದನ್ನು ಜನಪ್ರತಿನಿಧಿ ಆಗಿರುವ ಮಾಧುಸ್ವಾಮಿ ಶೀಘ್ರವಾಗಿ ಅರ್ಥ ಮಾಡಿಕೊಳ್ಳಬೇಕಿದೆ. ಇಲ್ಲದಿದ್ದರೆ ಜನರು ಸೂಕ್ತ ಕಾಲದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಶತಸಿದ್ಧ. ಸಚಿವ ಸ್ಥಾನ ಶಾಶ್ವತವಲ್ಲ ಎನ್ನುವುದನ್ನು ಕಮಲ ಪಕ್ಷದ ನಾಯಕರು ಅರ್ಥ ಮಾಡಿಸಬೇಕಿದೆ.
ಅಷ್ಟಕ್ಕೂ ಮಾಧುಸ್ವಾಮಿ ರೇಗಾಡಿದ್ದು ಯಾಕೆ..?
ಬಿಜೆಪಿ ಸರ್ಕಾರ ಜಾರಿ ಮಾಡಲು ಹೊರಟಿರುವ ಭೂಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರು. ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘದವ ಸದಸ್ಯರು ಪ್ರತಿಭಟನೆ ನಡೆಸುವಾಗ ಸಚಿವ ಮಾಧುಸ್ವಾಮಿ ಅಲ್ಲಿಗೆ ಬಂದರು. ಈ ವೇಳೆ ರೈತ ಮುಖಂಡರು ಸಚಿವ ಜೆ ಸಿ ಮಾಧುಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು. ನಿಮ್ಮದೇ ಸರ್ಕಾರದಲ್ಲಿ ರೈತರಿಗೆ ಭಾರೀ ಅನ್ಯಾಯ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರೈತರ ತೀಕ್ಷ್ಣ ಪ್ರಶ್ನೆಗೆ ಕೆರಳಿದ ಸಚಿವ ನಡುವೆ ಜೆ ಸಿ ಮಾಧುಸ್ವಾಮಿ ಫುಲ್ ಗರಂ ಆದರು. ಮಾತಿನ ಮಧ್ಯೆ ಮಾತನಾಡಿದ ರೈತ ಮುಖಂಡನ ವಿರುದ್ಧ ರೇಗಿದರು. ಏಯ್ ನಾನು ಮಿನಿಸ್ಟರ್ ಎಂದು ರೇಗಿದ ಮಾಧುಸ್ವಾಮಿ, ರೈತನ ಮಾತನ್ನು ತಡೆಯುವ ಯತ್ನ ಮಾಡಿದರು.
ಆದರೆ, ರೈತ ಮುಖಂಡ ಕೂಡ ಮಾಧುಸ್ವಾಮಿ ಕೋಪಕ್ಕೆ ಸೊಪ್ಪು ಹಾಕಲಿಲ್ಲ. ನೀವು ಮಿನಿಸ್ಟರ್ ಆಗಿದ್ದೇ ನಮ್ಮಿಂದ..! ನಾವು ವೋಟ್ ಹಾಕಿದ್ದಕ್ಕೆ ನೀವು ಮಿನಿಸ್ಟರ್ ಆಗಿದ್ದು ಎಂದು ತಿರುಗೇಟು ಕೊಟ್ಟರು. ಇದರಿಂದ ಮತ್ತಷ್ಟು ಕೆರಳಿದ ಮಿನಿಸ್ಟರ್ ಮಾಧುಸ್ವಾಮಿ, ಯೂ ಫೈಟ್ ಯುವರ್ ಕೇಸ್, ನಾನು ಮಾತಾಡೋವರೆಗೂ ಯಾರು ಮಾತಾಡಬಾರದು ಎಂದು ಮತ್ತೊಮ್ಮೆ ಗುಡುಗಿದರು. ಕೊನೆಗೆ ರೈತರ ಗುಂಪು ಸಚಿವರ ವಿರುದ್ಧ ಧಿಕ್ಕಾರದ ಸುರಿಮಳೆ ಸುರಿಸಿತ್ತು. ರೈತರ ಕೋಪಕ್ಕೆ ಬೆದರಿದ ಮಾಧುಸ್ವಾಮಿ ಕೆರಳಿ ಕುಪಿತಗೊಂಡು ಕಾರಿಗೆ ಹೋಗಿ ಕುಳಿತರು.
ನಾವು ವೋಟ್ ಹಾಕಿದ್ದರಿಂದಲೇ ತಾವು ಸಚಿವರಾಗಿದ್ದು ಎಂದು ಮಾಧುಸ್ವಾಮಿ ವಿರುದ್ಧ ರೈತರು ಧಿಕ್ಕಾರದ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಮನವೊಲಿಕೆ ಮಾಡಿದ ಬಳಿಕ ಸಚಿವ ಮಾಧುಸ್ವಾಮಿ ರೈತರಿಂದ ಮನವಿ ಪತ್ರ ಸ್ವೀಕರಿಸಿ ತೆರಳಿದ್ದಾರೆ. ಆದರೆ ಸಚಿವರಾದ ಮಾಧುಸ್ವಾಮಿ ಅವರಿಗೆ ತಾಳ್ಮೆ ಎನ್ನುವುದೇ ಇಲ್ಲವೇ ಎನ್ನುವ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಎಷ್ಟೇ ಚಾಣಾಕ್ಯನಾದರೂ ಮಾತು ಆಡುವಾಗ ನೂರು ಬಾರಿ ಯೋಚಿಸಿ ಮಾತನಾಡಬೇಕು. ಎಲ್ಲಿ ಯಾವಾಗ ಹೇಗೆ ಮಾತನಾಡುತ್ತೇನೆ ಎನ್ನುವುದು ಅಷ್ಟೇ ಮುಖ್ಯವಾಗುತ್ತದೆ ಎನ್ನುವುದನ್ನು ಮಾಧುಸ್ವಾಮಿ ಗೊತ್ತು ಮಾಡಿಕೊಳ್ಳಬೇಕಿದೆ.
ಈಗಷ್ಟೇ ಮಾಧುಸ್ವಾಮಿ ಕಿರಿಕಿರಿ ಅಲ್ಲ..!
ಕೋಲಾರದಲ್ಲಿ ಕೆಸಿ ವ್ಯಾಲಿ ಯೋಜನೆ ವೀಕ್ಷಣೆಗೆ ಹೋಗಿದ್ಧ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಕೆರೆ ಬಳಿ ಭೂಮಿ ಒತ್ತುವರಿ ಆಗಿದೆ ಎಂದು ಪ್ರಶ್ನಿಸಿದ ರೈತ ಮಹಿಳೆ ವಿರುದ್ಧ ಕಿಡಿಕಾರಿದ್ದರು. ಒತ್ತುವರಿ ಆಗಿದ್ದರೆ ನಾನೇನು ಮಾಡಲಿ, ನೀನ್ಯಾಕೆ ನನ್ನ ಬಳಿ ಕೇಳ್ತಿದ್ದೀಯಾ ಎಂದು ರೈತಸಂಘದ ಅಧ್ಯಕ್ಷೆ ನಳಿನಿಗೌಡಗೆ ಬೈದಿದ್ದರು. ಈ ಘಟನೆ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ‘ನಾನು ತುಂಬಾ ಕೆಟ್ಟ ಮನುಷ್ಯ ಇದ್ದೀನಿ, ಏಯ್ ರಾಸ್ಕಲ್ ಮುಚ್ಚು ಬಾಯ್’ ಎಂದು ಕೀಳು ಭಾಷೆ ಪ್ರಯೋಗ ಮಾಡಿದ್ದರು. ಸಚಿವರ ಅಸಹ್ಯ ಮಾತಿನ ಬಗ್ಗೆ ಪ್ರತಿಧ್ವನಿ ವರದಿ ಮಾಡಿತ್ತು.
Also Read: ಮಾಧುಸ್ವಾಮಿ ಅವರೇ ನಿಮ್ಮ ಭಂಡತನಕ್ಕೆ ಬ್ರೇಕ್ ಯಾವಾಗ..?

ವಿವಾದಗಳ ಸರಮಾಲೆಯನ್ನೇ ಸೃಷ್ಟಿಸಿಕೊಂಡು ಸರ್ಕಾರದಲ್ಲಿ ವಿವಾದಿತ ಸಚಿವರಾಗಿರುವ ಮಾಧುಸ್ವಾಮಿ ಅವರಿಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿರುವುದು ಮಾಧುಸ್ವಾಮಿಯ ಭಂಡತನಕ್ಕೆ ಕಾರಣವಾಗಿದೆ. ಕಾನೂನು ವಿಚಾರದಲ್ಲಿ ಸ್ವಲ್ಪ ತಿಳಿದುಕೊಂಡಿರುವ ಕಾರಣ ಮುಖ್ಯಮಂತ್ರಿ ಆದ್ಯತೆ ಕೊಡುವುದನ್ನೇ ಭಂಡವಾಳ ಮಾಡಿಕೊಂಡಿರೋ ಮಾಧುಸ್ವಾಮಿ, ಬಂದಲ್ಲಿ ಹೋದಲ್ಲಿ ದರ್ಪ ಮೆರೆಯುತ್ತಾರೆ.
ಎರಡು ಬಾರಿ ಗೆದ್ದು ಮಂತ್ರಿ ಆಗಿರುವ ಮಾಧುಸ್ವಾಮಿ ಜೆಡಿಎಸ್, ಕಾಂಗ್ರೆಸ್ ಕಿತ್ತಾಟದಿಂದ ಗೆದ್ದು ಮಂತ್ರಿ ಆಗಿದ್ದಾರೆ. ಈಗಲೂ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತ ಹೆಸರು ಇಲ್ಲ. ಓರ್ವ ಜನಪ್ರತಿನಿಧಿ ಕ್ಷೇತ್ರದ ಜನರಿಗಾಗಿ ಕೆಲಸ ಮಾಡಬೇಕು. ಜೊತೆಗೆ ಜನರ ಜೊತೆಗೆ ಮಾತನಾಡುವಾಗ ತಾಳ್ಮೆ ಎನ್ನುವುದನ್ನು ಬೆಳೆಸಿಕೊಂಡರೆ, ಮುಂದಿನ ರಾಜಕೀಯ ಜೀವನಕ್ಕೆ ದಾರಿಯಾಗುತ್ತದೆ. ಇಲ್ಲದಿದ್ದರೆ ಸರ್ಕಾರ ಇರುವ ತನಕ ಅಧಿಕಾರ ಅನುಭವಿಸಬಹುದು. ಆದರೆ ಮಾಧುಸ್ವಾಮಿ ನಡವಳಿಕೆಯಿಂದ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ ಎನ್ನುವ ಪರಿಸ್ಥಿತಿ ಸಿಎಂಗೆ ಬರಲಿದೆ. ಶಕ್ತಿಗಿಂತ ಯುಕ್ತಿ ಮೇಲು ಎಂಬುದನ್ನು ಅರಿತರೆ ಮಾಧುಸ್ವಾಮಿ ಉತ್ತಮ ವಾಗ್ಮಿಯಾಗಬಹುದು.