ಮುಸ್ಲಿಂ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುವಂತೆ ರಾಜಸ್ಥಾನದ ಆಸ್ಪತ್ರಯೊಂದರ ವೈದ್ಯರ ವಾಟ್ಸಾಪ್ ಮೆಸೇಜ್‌ಗಳು ಇದೀಗ ವೈರಲ್ ಆಗುತ್ತಿವೆ. ಜೈಪುರ್‌ನ ಶ್ರೀಚಂದ್ ಬರಾದಿಯಾ ರೋಗ್ ನಿದನ್ ಕೇಂದ್ರ ಎಂಬ ಖಾಸಗಿ ಆಸ್ಪತ್ರೆಯ ವೈದ್ಯರ ಸಂದೇಶಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಮುಸ್ಲಿಂ ರೋಗಿಗಳನ್ನು ಮುಸ್ಲಿಂ ವೈದ್ಯರ ಬಳಿ ಮಾತ್ರ ಕಳುಹಿಸಿಕೊಡಬೇಕು, ಹಿಂದುಗಳಿಗೆ ಹಿಂದು ವೈದ್ಯರು ಮಾತ್ರ ಚಿಕಿತ್ಸೆ ನೀಡಬೇಕೆಂದು ಮೆಸೇಜ್‌ಗಳಲ್ಲಿ ಹೇಳಲಾಗಿದೆ.
ಮುಸ್ಲಿಂರಿಗೆ ಚಿಕಿತ್ಸೆ ನೀಡುವುದಿಲ್ಲ
“ನಾಳೆಯಿಂದ ಯಾರಾದರೂ ಮುಸ್ಲಿಂರು ನನ್ನ ಬಳಿ ಎಕ್ಸ್-ರೇ ತೆಗೆಸಲು ಬಂದರೆ, ನಾನು ಎಕ್ಸ್-ರೇ ತೆಗೆಯುವುದಿಲ್ಲ. ಇದು ನನ್ನ ಶಫಥ,” ಎಂದು ಓರ್ವ ವೈದ್ಯ ಹೇಳಿದ್ದಾರೆ. ಅದಕ್ಕೆ ಉತ್ತರವಾಗಿ ಇನ್ನೊಬ್ಬರು “ಯಾರಾದರೂ ಹಿಂದುಗಳಿಗೆ ಕರೋನಾ ಸೋಂಕು ಇರುವುದು ಪತ್ತೆಯಾದರೆ, ಮುಸ್ಲಿಂ ವೈದ್ಯರು ಅವರಿಗೆ ಚಿಕಿತ್ಸೆ ನೀಡುವುದಿಲ್ಲ. ಮುಸ್ಲಿಂ ಹೊರರೋಗಿಗಳನ್ನು ನಾನು ನೋಡಲೂ ಹೋಗುವುದಿಲ್ಲ. ಮೇಡಂ ಇಲ್ಲ ಅಂತ ಹೇಳಿ ಬಿಡಿ ಅವರಿಗೆಲ್ಲ,” ಎಂದು ಇನ್ನೋರ್ವ ವೈದ್ಯೆ ಹೇಳಿದ್ದಾರೆ.
ಈ ಎಲ್ಲಾ ವಿಚಾರಗಳು ಬಯಲಾಗುತ್ತಿದ್ದಂತೇ, ಭಾರೀ ಪ್ರತಿರೋಧ ವ್ಯಕ್ತವಾದವು. ಸಾಮಾಜಿಕ ಜಾಲತಾಣಗಳಲ್ಲಿ ಆಸ್ಪತ್ರೆಯ ವಿರುದ್ದ ಆಕ್ರೋಶ ಹೆಚ್ಚುತ್ತಿದ್ದಂತೆ, ಸಂಸ್ಥೆಯ ಮಾಲಕರಾದ ಸುನೀಲ್ ಚೌಧರಿ ಅವರು ಫೇಸ್‌ಬುಕ್‌ನಲ್ಲಿ ಕ್ಷಮೆಯಾಚಿಸಿದ್ದಾರೆ. “ನನ್ನ ಆಸ್ಪತ್ರೆಯ ಸಿಬ್ಬಂದಿಗಳಾಗಲಿ ಅಥವಾ ನನಗಾಗಲಿ ಯಾವುದೇ ಧರ್ಮದ ವ್ಯಕ್ತಿಗಳ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶವಿರಲಿಲ್ಲ,” ಎಂದು ಹೇಳಿದ್ದಾರೆ.
ಇನ್ನು ಚೌಧರಿ ಹೇಳಿರುವ ಪ್ರಕಾರ ದೇಶದಲ್ಲಿ ತಬ್ಲೀಘ್ ಜಮಾತ್‌ನ ಪ್ರಕರಣಗಳು ಜಾಸ್ತಿಯಾಗಿದ್ದ ಸಮಯದಲ್ಲಿ ನಡೆದ ಸಂಭಾಷಣೆ ಇದಾಗಿದೆ. ಆದರೆ, ಯಾವುದೇ ಜಾತಿ ಧರ್ಮದ ಬೇಧ ಭಾವವಿಲ್ಲದೇ ನಾವು ಎಲ್ಲರಿಗೂ ಚಿಕಿತ್ಸೆ ನೀಡಿದ್ದೇವೆ ಎಂದು ಚೌಧರಿ ಹೇಳಿದ್ದಾರೆಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಈ ಕುರಿತು ಎಫ್‌ಐಆರ್ ಕೂಡಾ ದಾಖಲಾಗಿದ್ದು, ಧರ್ಮಗಳ ನಡುವೆ ದ್ವೇಷಭಾವನೆ ಹುಟ್ಟು ಹಾಖಿದಕ್ಕಾಗಿ ಸೆಕ್ಷನ್ 153A ಮತ್ತು 505ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.