ಸುಮಾರು 12 ಜನರನ್ನು ಬಲಿ ಪಡೆದಿದ್ದ ವೈಜಾ಼ಗ್‌ನ ವಿಷಾನಿಲ ದುರಂತದ ಕುರಿತ ಸಮಗ್ರ ವರದಿಯನ್ನು ಆಂಧ್ರ ಪ್ರದೇಶದ ಉನ್ನತಾಧಿಕಾರ ಸಮಿತಿಯು ಸರ್ಕಾರಕ್ಕೆ ಸಲ್ಲಿಸಿದೆ. ದುರ್ಬಲ ಸುರಕ್ಷಣಾ ಶಿಷ್ಟಚಾರ ಹಾಗೂ ದೋಷಪೂರಿತ ತುರ್ತು ಸ್ಪಂದನಾ ಪ್ರಕ್ರಿಯೆಗಳು ಈ ಅವಘಡಕ್ಕೆ ಕಾರಣವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಮೇ 7ರಂದು ಎಲ್‌ಜಿ ಪಾಲಿಮರ್ಸ್ ಎಂಬ ಕಂಪೆನಿಯ ಕೈಗಾರಿಕಾ ಘಟಕದಿಂದ ಸ್ಟೈರೀನ್ ಎಂಬ ವಿಷಾನಿಲವು ಸೋರಿಕೆಯಾಗಿತ್ತು. ಈ ಅನಿಲ ಸೋರಿಕೆ ದೇಶಾದ್ಯಂತ ಸಾಕಷ್ಟು ಸುದ್ದಿಯನ್ನು ಕೂಡಾ ಮಾಡಿತ್ತು. ಸುಮಾರು 12 ಜನರು ಸಾವನ್ನಪ್ಪಿ 585 ಜನರು ತೀವ್ರವಾಗಿ ಅಸ್ವಸ್ಥರಾಗಿದ್ದರು. ಈ ದುರ್ಘಟನೆಯ ಹಿಂದಿನ ಕಾರಣವನ್ನು ತಿಳಿಯಲು ಆಂದ್ರ ಪ್ರದೇಶ ಸರ್ಕಾರವು ಒಂದು ಉನ್ನತಾಧಿಕಾರ ಸಮಿತಿಯನ್ನು ರಚಿಸಿ ತನಿಖೆಯನ್ನು ಶೀಘ್ರವಾಗಿ ಮುಗಿಸುವಂತೆ ಆದೇಶ ನೀಡಿತ್ತು.
ಕಂಪೆನಿಯ ಆಡಳಿತದ ನಿರ್ಲಕ್ಷ್ಯದಿಂದ ಕೈಗಾರಿಕಾ ಘಟಕದಲ್ಲಿ ಸುರಕ್ಷತೆಯು ಸಾಕಷ್ಟು ದುರ್ಬಲವಾಗಿತ್ತು. ಅಲ್ಲಿನ ಕಾರ್ಮಿಕರಲ್ಲಿ ಸುರಕ್ಷತೆಯ ಕುರಿತು ಸಾಕಷ್ಟು ಅರಿವು ಇರಲಿಲ್ಲ. ಇದರಿಂದಾಗಿ ಈ ಘಟನೆಯು ಸಂಭವಿಸಿದೆ, ಎಂದು ಅರಣ್ಯ ಮತ್ತು ಪರಿಸರ ಇಲಾಖೆಯ ವಿಶೇಷ ಮುಖ್ಯ ಕಾರ್ಯದರ್ಶಿಯಾದ ನೀರಭ್ ಕುಮಾರ್ ಪ್ರಸಾದ್ ಅವರ ನೇತೃತ್ವದ ಸಮಿತಿಯು ವರದಿಯಲ್ಲಿ ತಿಳಿಸಿದೆ.
ಸುಮಾರು 4,000 ಪುಟಗಳ ವರದಿಯನ್ನು ಸಲ್ಲಿಸಲಾಗಿತ್ತು. ಈ ವರದಿಯನ್ನು ಆಂಧ್ರ ಮುಖ್ಯಮಂತ್ರಿ ವೈ ಎಸ್ ಜಗನ್‌ಮೋಹನ್ ರೆಡ್ಡಿ ಅವರಿಗೆ ಸಲ್ಲಿಸಲಾಗಿದೆ.

“ಎಲ್‌ಜಿ ಕೈಗಾರಿಕ ಘಟಕದ M6 ಟ್ಯಾಂಕ್‌ನಿಂದ ವಿಷಾನಿಲ ಸೋರಿಕೆಯಾಗಿದೆ. ಅಪಾಯಕಾರಿ ರಾಸಾಯನಿಕಗಳ ತಯಾರಿಕೆ, ಸಂಗ್ರಹ ಹಾಗು ಆಮದು ನಿಯಮ 1989ರ ಅಡಿಯಲ್ಲಿ ಇದೊಂದು ಗುರುತರವಾದ ಅಪಘಾತವಾಗಿದೆ. ಕಳಪೆ ಅನಿಲ ಸಂಗ್ರಾಹಕಗಳು, ಅಸಮರ್ಪಕ ಶೀತಗೃಹಗಳು, ಸುರಕ್ಷಾ ಕ್ರಮಗಳ ಅಸಮರ್ಪಕ ನಿರ್ವಹಣೆಯಿಂದಾಗಿ ಈ ಘಟನೆ ನಡೆದಿದೆ” ಎಂದು ನೀರಭ್ ಕುಮಾರ್ ಹೇಳಿದ್ದಾರೆ.
ಇನ್ನು ಅಲ್ಲಿನ ಕಾರ್ಮಿಕರಿಗೆ ಸ್ಟೈರೀನ್ ಅನಿಲದ ರಾಸಾಯನಿಕ ಗುಣಗಳ ಕುರಿತು ಮಾಹಿತಿ ಇಲ್ಲದಿರುವ ಅಂಶವನ್ನು ಕೂಡಾ ಸಮಿತಿಯು ವರದಿಯಲ್ಲಿ ದಾಖಲಿಸಿದೆ. ಇನ್ನು ಘಟಕದಲ್ಲಿ 36 ಅಲಾರ್ಮ್ ವ್ಯವಸ್ಥೆಗಳಿದ್ದರೂ, ಯಾವುದೂ ಕೂಡಾ ಬಳಸಲ್ಪಟ್ಟಿಲ್ಲ. ಒಂದು ವೇಳೆ ಅವುಗಳನ್ನು ಬಳಸಿದ್ದೇ ಆದಲ್ಲಿ ಸುತ್ತಮುತ್ತಲಿನ ಜನರನ್ನು ಎಚ್ಚರಿಸಿ ಹೆಚ್ಚಿನ ಸಾವುನೋವುಗಳನ್ನು ತಡೆಯಬಹುದಿತ್ತು ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಜಗನ್ ಅಗತ್ಯವಿದ್ದಲ್ಲಿ ಈಗಿರುವ ಕಾಯ್ದೆಗಳಿಗೆ ತಿದ್ದುಪಡಿಯನ್ನು ತರಲಾಗುವುದು. ಇನ್ನು ಸಮಿತಿಯ ಶಿಫಾರಸ್ಸಿನಂತೆ ಕೈಗಾರಿಕೆಗಳನ್ನು ಹಸಿರು ಮತ್ತು ಬಿಳಿ ಎಂದು ವಿಂಗಡಿಸಿ ಅವುಗಳನ್ನು ಜನವಸತಿ ಪ್ರದೇಶದಿಂದ ದೂರವಿರಿಸಲಾಗುವುದು” ಎಂದು ಹೇಳಿದ್ದಾರೆ.