ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಬೆನ್ನಲ್ಲೇ ಸಮುದಾಯವನ್ನು ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಗೆ ಸೇರಿಸಿ ಎಂದು ಕೇಂದ್ರಕ್ಕೆ ಶಿಫಾರಸು ಮಾಡಲು ಮುಂದಾಗಿದ್ದ ಸಿಎಂ ಬಿಎಸ್ ಯಡಿಯೂರಪ್ಪಯೀಗ ತನ್ನ ನಿರ್ಧಾರದಿಂದ ಹಿಂಸರಿದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರ ಆದೇಶದ ಮೇರೆಗೆ ಸಿಎಂ ಬಿಎಸ್ ಯಡಿಯೂರಪ್ಪ ಈ ನಿರ್ಧಾರ ಕೈಬಿಟ್ಟಿದ್ದಾರೆ ಎನ್ನಲಾಗಿದೆ.
ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ಹಾಗಾಗಿಯೇ ಇತ್ತೀಚೆಗೆ ಯಾವುದೋ ತರಾತುರಿಯಲ್ಲಿ ಮರಾಠ ಅಭಿವೃದ್ಧಿ ನಿಗಮ ಬೆನ್ನಲ್ಲೇ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡಿ 500 ಕೋಟಿ ರೂ. ಅನುದಾನ ಮಂಜೂರು ಮಾಡಿದರು. ಇದಕ್ಕೆ ಒಪ್ಪಿಗೆ ಸಿಗುತ್ತಿದ್ದಂತೆಯೇ ಒಂದೆಜ್ಜೆ ಮುಂದೋಗಿ ವೀರಶೈವ ಲಿಂಗಾಯತ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಲು ಮುಂದಾದರು. ಹೀಗೆ ತರಾತುರಿಯಲ್ಲಿ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾ ಹೋದರೆ ಬಿಜೆಪಿ ಸರ್ಕಾರಕ್ಕೆ ಏನಾದರೂ ಅಡಚಣೆ ಉಂಟಾಗಬಹುದು ಎಂದು ಭಾವಿಸಿ ಅಮಿತ್ ಶಾ ಅವರೇ ಖುದ್ದು ಕರೆ ಮಾಡಿ ಈ ವಿಚಾರ ಕೈಬಿಡುವಂತೆ ಯಡಿಯೂರಪ್ಪರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಇಂದು ವೀರಶೈವ ಲಿಂಗಾಯರಿಗೆ ಓಬಿಸಿ ಮೀಸಲಾತಿ ನೀಡಿ ಮುಂದೊಂದು ದಿನ ತನ್ನ ಶಕ್ತಿ ಪ್ರದರ್ಶನ ಮಾಡಬಹುದು. ಆಗ ಇದೇ ವಿಚಾರ ಪಕ್ಷಕ್ಕೆ ಬಿಸಿ ತುಪ್ಪವಾಗಲಿದೆ. ಹಾಗಾಗಿ ಸಿಎಂ ಯಡಿಯೂರಪ್ಪರ ಶಕ್ತಿ ಪ್ರದರ್ಶನಕ್ಕೆ ಸೆಡ್ಡು ಹೊಡೆಯಲು ಬಿಜೆಪಿ ಹೈಕಮಾಂಡ್ ಮಧ್ಯಪ್ರವೇಶಿಸಿದೆ ಎಂದೇಳಲಾಗುತ್ತಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ವೀರಶೈ ಲಿಂಗಾಯತ ಸಮುದಾಯಕ್ಕೆ ಮಹಾರಾಷ್ಟ್ರ `ಮರಾಠ ಮೀಸಲಾತಿ’ ಮಾದರಿಯಲ್ಲಿ ಶೇ.16 ರಷ್ಟು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರವನ್ನು ಹಲವು ದಿನಗಳಿಂದ ಒತ್ತಾಯಿಸಲಾಗುತ್ತಿದೆ. ಮಿಸಲಾತಿ ಪ್ರಮಾಣ ಶೇ.50 ಮೀರಬಾರದು ಎಂದು ಸುಪ್ರೀಂ ಕೋರ್ಟ್ 1992ರಲ್ಲಿ ಆದೇಶ ಹೊರಡಿಸಿದೆ. ಆದರೆ, ರಾಜ್ಯ ಸರ್ಕಾರಗಳಿಗೆ ಯಾವುದೇ ಸಮುದಾಯ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದೆ ಎಂದು ಮನವರಿಕೆಯಾದಲ್ಲಿ ಅಂತವರಿಗೆ ವಿಶೇಷ ಮೀಸಲಾತಿ ನೀಡಬಹುದು. ಹಾಗಾಗಿ ಶೇ.16 ರಷ್ಟು ಮೀಸಲಾತಿ ನೀಡಿ ಎಂದು ವೀರಶೈವ ಲಿಂಗಾಯತ ಸಮುದಾಯವರು ಆಗ್ರಹಿಸುತ್ತಲೇ ಇದ್ದರು.
ಇತ್ತೀಚೆಗಂತೂ ವೀರಶೈವ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡಿ ಎಂದು ಪಂಚಮಸಾಲಿ ಪೀಠದ ಶ್ರೀಗಳು ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅಲ್ಲದೆ ವೀರಶೈವ ಲಿಂಗಾಯ ಸಮುದಾಯಕ್ಕೆ ಒಬಿಸಿ ಸೇರ್ಪಡೆ ಮಾಡುವಂತೆ ಜೆಡಿಎಸ್ ಮುಖಂಡ ಬಸವರಾಜ್ ಹೊರಟ್ಟಿ, ಎಂ.ಬಿ.ಪಾಟೀಲ್ ಹಾಗೂ ವೀರಶೈವ ಮಹಾಸಭಾ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರು. ಎಲ್ಲರ ಮನವಿಯನ್ನು ಪುರಸ್ಕರಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ವೀರಶೈವ ಲಿಂಗಾಯತ ಸಮುದಾಯವನ್ನು ಒಬಿಸಿ ಸೇರ್ಪಡೆಗೆ ಶಿಫಾರಸ್ಸು ಮಾಡಲು ಮುಂದಾಗಿದ್ದರು.
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರದ 2ಎ ಹಾಗೂ ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಹಕ್ಕೊತ್ತಾಯಕ್ಕೆ ಕೆಲವೇ ದಿನಗಳಲ್ಲಿ ಒಳ್ಳೆಯ ನಿರ್ಧಾರವನ್ನು ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿಯವರ ನಿಯೋಗಕ್ಕೆ ಸಕಾರಾತ್ಮಕ ಭರವಸೆಯೂ ನೀಡಿದ್ದರು.
ಸದ್ಯ ಹಿಂದುಳಿದ ವರ್ಗ 3ಬಿ ಅಡಿಯಲ್ಲಿ ಶೇ.5ರಷ್ಟು ಮೀಸಲಾತಿ ಇದೆ. ವೀರಶೈವ ಲಿಂಗಾಯತ ಸೇರಿ 42 ಉಪ ಜಾತಿಗಳಿಗೆ ಮೀಸಲಾತಿ ಅನ್ವಯವಾಗಲಿದೆ. ಹೀಗಾಗಿ 2(ಎ)ಗೆ ಸೇರಿಸುವಂತೆ ವೀರಶೈವ ಮುಖಂಡರು ಒತ್ತಡ ಹೇರಿದ್ದರು. ಆದರೆ 2(ಎ)ಗೆ ಸೇರಿಸುವ ಬದಲು ಕೇಂದ್ರದ ಓಬಿಸಿ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಲು ಯೋಜನೆ ರೂಪಿಸಲಾಗಿತ್ತು. ಈ ಮೂಲಕ ರಾಜ್ಯ ಮೀಸಲಾತಿ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ಪ್ಲಾನ್ ಮಾಡಲಾಗಿತ್ತು. ಆದರೀಗ, ಹೈಕಮಾಂಡ್ ಮಧ್ಯಪ್ರವೇಶದಿಂದಾಗಿ ಈ ಪ್ರಸ್ತಾವಣೆ ಸಂಪುಟ ಸಭೆಯಿಂದ ನೆನೆಗುದಿಗೆ ಬಿತ್ತು ಎಂದು ಬಿಜೆಪಿ ವಲಯದಲ್ಲಿ ವಿಶ್ಲೇಷಣೆ ಮಾಡಲಾಗುತ್ತಿದೆ.
1994ರಲ್ಲಿಯೇ ವೀರಶೈವ ಲಿಂಗಾಯತರನ್ನು ಓಬಿಸಿಗೆ ಸೇರಿಸಬೇಕು ಎಂದು ಬೇಡಿಕೆ ಇಡಲಾಗಿದೆ. ಇದರ ಜೊತೆಗೆ ಇನ್ನು ಕೆಲವು ಸಮುದಾಯಗಳನ್ನು ಒಳಗೊಂಡು ಸಮಗ್ರ ಅಧ್ಯಯನ ನಡೆಸಿ, ಕೇಂದ್ರಕ್ಕೆ ಶಿಫಾರಸು ಸಲ್ಲಿಸಲು ನಿರ್ಧಾರಿಸಲಾಗಿದೆ. ಈ ಮೀಸಲಾತಿಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ. ಕೇಂದ್ರ ಸರ್ಕಾರದ ಕೋಟಾದಡಿ ಮೀಸಲಾತಿ ನೀಡಿ ಎಂಬುದು ವೀರಶೈವ – ಲಿಂಗಾಯತರ ಬೇಡಿಕೆ. ಇದಕ್ಕಾಗಿ 1999ರಿಂದ ವೀರಶೈವ ಮಹಾಸಭಾ ಕೇಂದ್ರ ಸರಕಾರದೊಂದಿಗೆ ಹೋರಾಟ ಮಾಡುತ್ತಾ ಬಂದಿದೆ. ಈ ಸಂಬಂಧ ಮಹಾಸಭಾ ತನ್ನ ಪ್ರಯತ್ನ ಮುಂದುವರಿಸಬೇಕು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.
ಮೀಸಲಾತಿ ಎಂದರೇನು?
ಮೀಸಲಾತಿ ಎಂಬ ಪದ ಪ್ರಯೋಗವೇ ತಪ್ಪು! ಸಂವಿಧಾನದಲ್ಲಿ ಇದಕ್ಕಾಗಿ ಬಳಸಿರುವ ಪದ ಪ್ರಾತಿನಿಧ್ಯ. ವೈಯಕ್ತಿಕ ನೆಲೆಗಟ್ಟಿನಲ್ಲಿ ಇದನ್ಯಾರಿಗು ನೀಡಲಾಗಿಲ್ಲ. ವೈಯಕ್ತಿಕವಾಗಿ ನೀಡಿರುವುದು ಅವರು ಪ್ರತಿನಿಧಿಸುವ ಶೋಷಿತ ಸಮುದಾಯಗಳ ಕಾರಣಕ್ಕೆ ಮಾತ್ರ. ಈ ಅವಕಾಶವನ್ನು ಪಡೆದವರು ತಮ್ಮ ಸಮುದಾಯದ ಇತರೇ ಜನರಿಗೆ ಸಹಾಯಕವಾಗಲೆಂಬ ಕಾರಣದಿಂದ ಎನ್ನುತ್ತಾರೆ ಪ್ರಗತಿಪರ ಚಿಂತಕರು ಮತ್ತು ಹಿರಿಯ ವಕೀಲರಾದ ಸಿ.ಎಸ್ ದ್ವಾರಕನಾಥ್.
ಮೀಸಲಾತಿ ಏಕೆ?
ಸಮುದಾಯಗಳ ನಡುವಿನ ತಾರತಮ್ಯ ಹೋಗಲಾಡಿಸಿ, ಅವಕಾಶ ವಂಚಿತ ಸಮುದಾಯಗಳಿಗೆ ಸಹಾಯ ಮಾಡುವುದು ಮೀಸಲಾತಿಯ ಉದ್ದೇಶ. ಸಮಾಜದ ಹಲವಾರು ಸಮುದಾಯಗಳು ಅಸ್ಪೃಶ್ಯತೆಯ ಕಾರಣದಿಂದಾಗಿ ಶಿಕ್ಷಣದ ಹಕ್ಕು, ಸಂಪತ್ತಿನ ಹಕ್ಕು, ವ್ಯಾಪಾರದ ಹಕ್ಕು ಸೇರಿದಂತೆ ಅನೇಕ ನಾಗರಿಕ ಹಕ್ಕುಗಳಿಂದ ವಂಚಿತವಾಗಿವೆ. ಇತಿಹಾಸದಲ್ಲಿನ ಇಂತಹ ತಾರತಮ್ಯಗಳನ್ನು ನಿವಾರಿಸಿ ಭವಿಷ್ಯದಲ್ಲಿ ಅವರ ಹಕ್ಕುಗಳನ್ನು ಸಂರಕ್ಷಿಸಲು ಈ ಮೀಸಲಾತಿಯನ್ನು ಕಲ್ಪಿಸಲಾಗಿದೆ ಎಂದು ಮೀಸಲಾತಿ ಏಕೇ? ಎಂಬ ಪ್ರಶ್ನೆಗೆ ಸಿ.ಎಸ್ ದ್ವಾರಕನಾಥ್ ಉತ್ತರಿಸಿದರು.