ವಿಶಾಖಪಟ್ಟಣಂನಲ್ಲಿ ಮೇ 6 ಮಧ್ಯರಾತ್ರಿ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಟೈರಿನ್ ಅನಿಲ ಸೋರಿಕೆಯಿಂದ 11 ಜೀವಗಳು ಬಲಿಯಾಗಿ ಹಲವಾರು ಮಂದಿ ವಿಷಾನಿಲದಿಂದಾಗಿ ಅಸ್ವಸ್ಥರಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಆಂಧ್ರ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಸು ಮೊಟೊ (Suo Moto) ಪ್ರಕರಣ ದಾಖಲಿಸಿದೆ. ಘಟನೆಯಿಂದ ಆಗಿರುವ ನಷ್ಟವನ್ನು ತಗ್ಗಿಸಲು ಅಗತ್ಯವಿರುವ ಎಲ್ಲಾ ಕ್ರಮವನ್ನು ತೆಗೆದುಕೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನ್ಯಾಯಾಲಯ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸುವಾಗ 8 ಸಾವು ವರದಿಯಾಗಿದ್ದು ಈಗ ಸಾವಿನ ಸಂಖ್ಯೆ 11 ಕ್ಕೇರಿದೆ.
ಪರಿಸರ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಸ್ಟೈರಿನ್ ಅನಿಲವನ್ನು ಅಪಾಯಕಾರಿಯೆಂದು ಸೂಚಿಸಲಾಗಿದೆ. ಇದರ ಸೇವನೆಯು ಮನುಷ್ಯನ ಜೀವಕ್ಕೆ ಅಪಾಯಕಾರಿ. ಈ ಅಪಾಯಕಾರಿ ಅನಿಲದ ಉತ್ಪಾದಕರು, ಸಂಗ್ರಾಹಕರು, ಮತ್ತು ಆಮದುದಾರರಿಗೆ ಇರುವ ಜವಾಬ್ದಾರಿಯನ್ನು ಈ ಪ್ರಕರಣದಲ್ಲಿ ಪಾಲಿಸಿದ್ದಾರೆಯೋ ಇಲ್ಲವೋ ಎಂಬುವುದನ್ನು ತ್ವರಿತವಾಗಿ ಪರಿಶೀಲಿಸಲಾಗುವುದು ಎಂದು ಕೋರ್ಟ್ ಹೇಳಿದೆ. ಬಳಿಕ ಕಾನೂನಿನ ಚೌಕಟ್ಟಿನಲ್ಲಿ ಕಾರ್ಖಾನೆ ಕಾರ್ಯಾಚರಿಸುತ್ತಿತ್ತೇ ಎಂಬುವುದನ್ನೂ ಪರಿಶೀಲಿಸಲಾಗುವುದು ಎಂದಿದೆ.
ಅನಿಲ ಸೋರಿಕೆಯಿಂದ ಆರೋಗ್ಯದ ಮೇಲೆ ಪರಿಣಾಮ ಬೀರಿದವರಿಗೆ ವೈದ್ಯಕೀಯ ಸೇವೆ ನೀಡುವುದು ಕೋರ್ಟಿನ ಆದ್ಯತೆಯಾಗಿದೆ. ಕಾರ್ಖಾನೆಯ ಸುತ್ತಮುತ್ತಲ ಜನರನ್ನು ಸ್ಥಳಾಂತರಿಸುವುದು NDRF ನ ಜವಾಬ್ದಾರಿ ಎಂದು ಕೋರ್ಟ್ ಹೇಳಿದೆ. ಸರ್ಕಾರಿ ಆಸ್ಪತ್ರೆಗಳಲ್ಲದೆ ಉಳಿದ ಸ್ಥಳೀಯ ಆಸ್ಪತ್ರೆಗಳೂ ಚಿಕಿತ್ಸೆ ನೀಡಲು ತೆರೆದಿರಬೇಕು ಎಂದು ಕೋರ್ಟ್ ಆದೇಶಿಸಿದೆ. ವೈದ್ಯಕೀಯ ಚಿಕಿತ್ಸೆ ಜೊತೆಗೆ ಮಕ್ಕಳಿಗೆ, ಮಹಿಳೆಯರಿಗೆ ಸಾಕಷ್ಟು ಪೌಷ್ಟಿಕ ಆಹಾರ ನೀಡುವ ಬಗ್ಗೆಯೂ ಕೋರ್ಟ್ ತನ್ನ ಕಾಳಜಿ ವಹಿಸಿದೆ.
ಘಟನೆ ಸಂಭವಿಸಿದ ಬೆನ್ನಲ್ಲಿ ಕೇಂದ್ರ ಕೆಲವು ಮಾರ್ಗದರ್ಶನದೊಂದಿಗೆ ಗೋವಾ, ಗುವಾಹಟಿ, ದಿಯು & ದಮನ್ನಲ್ಲಿದ್ದ NDRF ಪಡೆಯನ್ನು ವಿಶಾಖಪಟ್ಟಣಕ್ಕೆ ಕಳುಹಿಸಲಾಯಿತೆಂದು ಕೋರ್ಟಿಗೆ ತಿಳಿಸಲಾಯಿತು. ಜನರನ್ನು ಸ್ಥಳಾಂತರಿಸಲು, ವೈದ್ಯಕೀಯ ಚಿಕಿತ್ಸೆ ಮೊದಲಾದ ಅಗತ್ಯ ಕಾರ್ಯಾಚರಣೆಗಳಿಗೆ ಮತ್ತಷ್ಟು NDRF ಸಿಬ್ಬಂದಿಗಳ ಅಗತ್ಯವಿದ್ದಲ್ಲಿ ಅವರನ್ನು ಕರೆಸಿಕೊಳ್ಳುವ ಸ್ವಾತಂತ್ರ್ಯವನ್ನು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೀಡಿದೆ.
ವಿಶಾಖಪಟ್ಟಣದಲ್ಲಿರುವ ಎಲ್ಲಾ ಆಸ್ಪತ್ರೆಗಳೂ ಚಿಕಿತ್ಸೆಗೆ ಲಭ್ಯವಿರುವಂತೆ ನೋಡಿಕೊಳ್ಳಬೇಕು, ದುರಂತ ಸಂಭವಿಸಿದ ಪ್ರದೇಶದಲ್ಲಿ ಅನಿಲ ಸೋರಿಕೆಯ ಪರಿಣಾಮವನ್ನು ತಗ್ಗಿಸಲು ಅಗ್ನಿ ಶಾಮಕ ದಳ ನೀರು ಸಿಂಪಡಿಸಿದೆಯೇ ಎಂದು ಪರಿಶೀಲಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್ ಆದೇಶಿಸಿದೆ.
ಜೀತೇಂದ್ರ ಕುಮಾರ್ ಮಹೇಶ್ವರಿ ಮತ್ತು ಲಲಿತಾ ಕಣ್ಣೇಗಂತೀ ಅವರನ್ನು ಒಳಗೊಂಡ ಪೀಠವು ಮೇ 20 ರಂದು ಮುಂದಿನ ವಿಚಾರಣೆ ಕೈಗೊಳ್ಳಲಿದೆ.