ಮಂಗಳವಾರ ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೆಜ್ ಒಂದೊಮ್ಮೆ ಇಡೀ ದೇಶವನ್ನೇ ಹುಬ್ಬೇರುವಂತೆ ಮಾಡಿತ್ತು. ಅದಾಗಲೇ ಟ್ವಿಟ್ಟರ್‌ನಲ್ಲಿ ಕಾಲೆಳೆಯಲು ಆರಂಭಿಸಿದ ಜಾಲತಾಣಿಗರು 20ಲಕ್ಷ ಕೋಟಿ ರೂಪಾಯಿಯಿಂದ ದೇಶದ 135 ಕೋಟಿ ಜನಸಂಖ್ಯೆಯನ್ನ ಭಾಗಿಸಿದರೆ ಪ್ರತಿ ತಲೆಗೆ ಎಷ್ಟು ಹಣ ಸಿಗಬಹುದು ಅನ್ನೋ ಲೆಕ್ಕಾಚಾರಕ್ಕೆ ಇಳಿದಿದ್ದರು. ಇನ್ನೂ ಕೆಲವರು One More Jumla ಎಂದು ಹ್ಯಾಷ್‌ಟ್ಯಾಗ್ ಬಳಸಿ ಟ್ವಿಟ್ಟರ್ ತುಂಬಾ ಟ್ರೆಂಡಿಂಗ್ ಕ್ರಿಯೇಟ್ ಮಾಡಿದ್ದರು. ಇನ್ನೂ ಕೆಲವರು 15 ಲಕ್ಷ ಹಾಕದೇ ಇದ್ದರೂ ಪರ್ವಾಗಿಲ್ಲ, 15 ಸಾವಿರ ರೂಪಾಯಿ ಸಿಕ್ಕರೆ ಸಾಕು ಅಂತಾ ವ್ಯಂಗ್ಯವಾಡೋದಕ್ಕೆ ಶುರುಮಾಡಿದ್ದರು. ತಮಾಷೆ ಅಂದ್ರೆ ಖುದ್ದು ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರೇ ಪ್ರಧಾನಿ ಭಾಷಣದ ಬಳಿಕ ಮಾಡಿದ ಟ್ವೀಟ್ ಕೂಡಾ ಎಡವಟ್ಟು ಪ್ರದರ್ಶಿಸಿತ್ತು. 20 ಲಕ್ಷ ಕೋಟಿ ಬದಲು 20 ಲಕ್ಷ ಎಂದು ಬರೆಯುವ ಮೂಲಕ ಟ್ವೀಟ್ ಮಾಡಿ ಆ ಬಳಿಕ ಕ್ಷಮೆಯಾಚಿಸಿ 20 ಲಕ್ಷ ಕೋಟಿ ಓದುವಂತೆ ತಿಳಿಸಿದ್ದರು.
ಇನ್ನು ಪ್ರಧಾನಿ ಮೋದಿ ಭಾಷಣ ಮುಗಿಯುತ್ತಲೇ 20 ಲಕ್ಷ ಕೋಟಿ ಪ್ಯಾಕೇಜ್ ಅಸಲಿಯತ್ತು ಏನೆಂದು ʼಪ್ರತಿಧ್ವನಿʼ ಸವಿವರವಾಗಿ ವಿವರಿಸಿತ್ತು. ದೇಶದ ಆರ್ಥಿಕ ಪರಿಸ್ಥಿತಿ ಗೊತ್ತಿದ್ದವರು ಯಾರೊಬ್ಬರೂ ಇದು ಸುಲಭ ಎಂದು ಹೇಳಲು ಸಾಧ್ಯವೇ ಇಲ್ಲ. ಕಾರಣ, ಹದಗೆಟ್ಟಿರುವ ದೇಶದ ಆರ್ಥಿಕ ಪರಿಸ್ಥಿತಿ ಇದೆಲ್ಲವನ್ನೂ ಬಹಿರಂಗವಾಗಿಯೇ ನಮ್ಮ ಮುಂದಿಟ್ಟಿದೆ. ಆದರೂ ಬಿಜೆಪಿ ಬೆಂಬಲಿಗರು ಮಾತ್ರ ʼಸ್ವಾವಲಂಬನೆ ಭಾರತʼಕ್ಕಾಗಿ ಇತಿಹಾಸದಲ್ಲಿಯೇ ತೆಗೆದುಕೊಂಡ ಬಹುದೊಡ್ಡ ನಿರ್ಧಾರ ಅಂತಾ ಗುಲ್ಲೆಬ್ಬಿಸತೊಡಗಿದ್ದಾರೆ.
Also Read: ₹20 ಲಕ್ಷ ಕೋಟಿ ಪ್ಯಾಕೇಜ್: ಎಷ್ಟು ಸುಳ್ಳು? ಎಷ್ಟು ಸತ್ಯ?
ಈ ಮಧ್ಯೆ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಟ್ವೀಟ್‌ವೊಂದು ಮಾಡಿದ್ದು ನಿರ್ಮಲಾ ಸೀತರಾಮನ್ ಇಂದಿನ ಪತ್ರಿಕಾಗೋಷ್ಟಿ ಬಗ್ಗೆ ಕುತೂಹಲ ಹುಟ್ಟಿಸಿದೆ. ಕಾರಣ, 20 ಲಕ್ಷ ಕೋಟಿ ರೂಪಾಯಿ ಪ್ಯಾಕೆಜ್ ಘೋಷಿಸಿರುವ ನರೇಂದ್ರೆ ಮೋದಿ ಅದರ ಮುಂದುವರಿದ ಭಾಗದ ಕತೆಯನ್ನ ವಿವರಿಸಲು ನಿರ್ಮಲಾ ಸೀತರಾಮನ್ ಅವರಿಗೆ ಒಪ್ಪಿಸಿದ್ದಾರೆ. ಇದನ್ನೇ ವ್ಯಂಗ್ಯ ಮಾಡಿರುವ ಪಿ.ಚಿದಂಬರಂ ತನ್ನ ಟ್ವೀಟ್ ನಲ್ಲಿ , ““ನಿನ್ನೆ ಖಾಲಿ ಪೇಪರ್‌ನಲ್ಲಿ ಹೆಡ್‌ಲೈನ್ ಕೊಟ್ಟಿದ್ದಾರೆ. ಇವತ್ತು ಅದನ್ನ ಹಣಕಾಸು ಸಚಿವರು fill ಮಾಡಲಿದ್ದಾರೆ. ಆದರೆ ನಾವು ಪ್ರತಿ ಹೆಚ್ಚುವರಿ ರೂಪಾಯಿಗೂ ಜಾಗರೂಕರಾಗಿ ಲೆಕ್ಕ ಹಾಕಲಿದ್ದೇವೆ” ಎಂದು ತನ್ನ ಸರಣಿ ಟ್ವೀಟ್ ಮೂಲಕ ತಿಳಿಸಿದ್ದಾರೆ. ಈ ಮೂಲಕ ಪ್ರಧಾನಿ 20 ಲಕ್ಷ ಕೋಟಿ ಪ್ಯಾಕೇಜ್ ಅನ್ನು ʼಹೆಡ್‌ಲೈನ್ ಹೊಂದಿರುವ ಖಾಲಿ ಪೇಪರ್ʼ ಗೆ ಹೋಲಿಸಿದ್ದಾರೆ. ಅಲ್ಲದೇ ಸಹಜವಾಗಿ ಇದೊಂದು ಖಾಲಿ ಪೇಪರ್ ಆಗಿಯೇ ಇರಲಿದೆ ಎಂದಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕರು ಮೋದಿಯವರ 20 ಲಕ್ಷ ಕೋಟಿ ಪ್ಯಾಕೆಜ್ ಸ್ವಾಗತಿಸುವುದಾಗಿ ತಿಳಿಸಿದ್ದಾರೆ. ಆದರೆ ಇದರ ಪೂರ್ಣ ವಿವರಕ್ಕಾಗಿ ಕಾಯುವುದಾಗಿಯೂ ತಿಳಿಸಿದೆ. ಆ ಮೂಲಕ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಬುಧವಾರ ಸಂಜೆ 4 ಗಂಟೆಗೆ ನಡೆಸಲಿರುವ ಭಾಷಣದ ಬಗ್ಗೆ ಹೆಚ್ಚು ಕುತೂಹಲ ಮೂಡುವಂತೆ ಮಾಡಿದೆ.
ಒಟ್ಟಿನಲ್ಲಿ ಪ್ರಧಾನಿ ಭಾಷಣದಲ್ಲಿ ಘೋಷಿಸಿರುವ 20 ಲಕ್ಷ ಕೋಟಿ ರೂಪಾಯಿ ಹಣದ ನಿಖರ ಮಾಹಿತಿ ನೀಡಲು ಹಣಕಾಸು ಸಚಿವೆಗೆ ಬಿಟ್ಟಿರೋದು ನೋಡಿದರೆ, ತನಗೆ ಪೂರಕವಾಗಿರುವ ಹಾಗೂ ಜನ ಮರುಳಾಗುವ ಮಾಹಿತಿಯನ್ನ ಮಾತ್ರ ತಾನೇ ಹೇಳಿ ಮುಗಿಸಿ, ಒಂದಿಷ್ಟು ಟ್ವಿಸ್ಟ್ ಇರುವ ವಿಚಾರಗಳನ್ನ ದೇಶದ ಹಣಕಾಸು ಸಚಿವೆಗೆ, ಆರ್‌ಬಿಐ ಗವರ್ನರ್ ಗೆ ಅಥವಾ ಐಸಿಎಂಆರ್ ಅಧಿಕಾರಿಗಳಿಗೆ ಬಿಟ್ಟು ಕೈ ತೊಳೆದುಕೊಳ್ಳುವುದರಲ್ಲಿ ಪ್ರಧಾನಿ ಮೋದಿ ತನ್ನ ನಿಸ್ಸೀಮತನವನ್ನ ಪ್ರದರ್ಶಿಸುವಂತಿದೆ.