ಒಂದಲ್ಲ, ಎರಡೆರಡು ಬಾರಿ ಇಡೀ ದೇಶವನ್ನೇ ಲಾಕ್ಡೌನ್ ಮಾಡಲಾಗಿತ್ತು. ಆದರೆ ಕರೋನಾ ಎಂಬ ಹೆಮ್ಮಾರಿಯನ್ನು ಕಟ್ಟಿ ಹಾಕುವುದಕ್ಕೆ ಸಾಧ್ಯವಾಗಿಲ್ಲ. ಲಾಕ್ಡೌನ್ನಿಂದ ಸಣ್ಣ ಪ್ರಮಾಣದಲ್ಲಿ ಅನುಕೂಲ ಆಗಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಯಾಕಂದ್ರೆ ಲಾಕ್ಡೌನ್ ಮಾಡಿದರೂ ಈ ಪ್ರಮಾಣದಲ್ಲಿ ಕರೋನಾ ಸೋಂಕು ಹರಡಿದೆ ಎಂದ ಮೇಲೆ ಒಂದೊಮ್ಮೆ ಲಾಕ್ಡೌನ್ ಮಾಡದಿದ್ದರೆ ಎಷ್ಟು ಪ್ರಮಾಣದಲ್ಲಿ ಕರೋನಾ ಸೋಂಕು ಹರಡುತ್ತಿತ್ತು ಎನ್ನುವುದನ್ನು ಊಹೆ ಮಾಡಿಕೊಂಡರೆ ಭಯವಾಗುತ್ತದೆ. ಈ ಪರಿಸ್ಥಿತಿಯಲ್ಲಿ ವಿರೋಧ ಪಕ್ಷಗಳ ನಿರ್ಧಾರವೂ ಮಹತ್ವದ್ದು ಆಗುತ್ತದೆ. ಯಾಕಂದರೆ ಯಾವುದೇ ರಾಜ್ಯದ ಯಾವುದೇ ವಿರೋಧ ಪಕ್ಷ ಕರೋನಾ ವಿಚಾರದಲ್ಲಿ ರಾಜಕೀಯ ಮಾಡಲು ಮುಂದಾಗಲಿಲ್ಲ. ಸರ್ಕಾರದ ಸಣ್ಣಪುಟ್ಟ ಹುಳುಗಳನ್ನು ಎತ್ತಿ ತೋರಿಸುತ್ತಾ ಟೀಕೆ ಮಾಡುವ ಗೋಜಿಗೆ ಹೋಗಲಿಲ್ಲ. ಸರ್ಕಾರ ಮಾಡುತ್ತಿದ್ದ ಕೆಲಸಕ್ಕೆ ಸೈ ಎಂದಿದ್ದರಿಂದ ಸರ್ಕಾರವೂ ನಿರಾಳತೆಯಿಂದ ಕೆಲಸ ಮಾಡಲು ಸಾಧ್ಯವಾಗಿತ್ತು. ಆದರೆ ಇದೀಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿರೋಧ ಪಕ್ಷದ ಮುಖಂಡರು ಹಾಗೂ ರೈತರ ಸಭೆ ಕರೆದಿದ್ದರು. ಇದು ಸರ್ಕಾರಕ್ಕೆ ಭೀತಿಯನ್ನು ಉಂಟು ಮಾಡಿದೆ.
ಕರ್ನಾಟಕದಲ್ಲಿ ಕರೋನಾ ಸೋಂಕು ನಿಯಂತ್ರಣ ಮಾಡುತ್ತಿರುವ ರೀತಿ, ಸರ್ಕಾರಕ್ಕೆ ವಿರೋಧ ಪಕ್ಷವಾಗಿ ನೀಡಬೇಕಾಗಿರುವ ಸಲಹೆಗಳು, ರೈತರು ಅನುಭವಿಸುತ್ತಿರುವ ಸಂಕಷ್ಟಗಳ ಆಧಾರದಲ್ಲಿ ಸರ್ಕಾರದ ಗಮನ ಸೆಳೆಯಲು ವಿರೋಧ ಪಕ್ಷಗಳು ಮಾಡಬೇಕಿರುವ ಕೆಲಸದ ಬಗ್ಗೆ ವಿಧಾನಸೌಧದಲ್ಲಿ ಚರ್ಚೆ ನಡೆಸಲಾಯ್ತು. ಜೆಡಿಎಸ್ ಮುಖಂಡರಾದ ಹೆಚ್.ಡಿ ರೇವಣ್ಣ, ಬಂಡೆಪ್ಪ ಕಾಶಂಪುರ, ಕುಪೇಂದ್ರ ರೆಡ್ಡಿ, ಚೌಡರೆದ್ದಿ ತೂಪಲ್ಲಿ, ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವಾರು ರೈತ ಮುಖಂಡರು, ರಾಜಕೀಯ ನಾಯಕರು ಸಭೆಯಲ್ಲಿ ಭಾಗಿಯಾಗಿ ಸಿದ್ದರಾಮಯ್ಯ ಅವರಿಗೆ ಸಲಹೆ ಸೂಚನೆಗಳನ್ನು ನೀಡಿದರು.
ಸಭೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಕರೋನಾ ವೈರಸ್ ತಡೆಗಟ್ಟಲು ಸರ್ಕಾರ ಅನೇಕ ಕ್ರಮ ಕೈಗೊಂಡಿದೆ ಅಂತ ಪ್ರಧಾನಮಂತ್ರಿ ಮೇಲಿಂದ ಮೇಲೆ ಭಾಷಣ ಮಾಡಿದ್ರು. ಎಲ್ಲಾ ರಾಜ್ಯಗಳ ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮಾಡಿದ್ರು. ಅದ್ರೆ ನನ್ನ ಪ್ರಕಾರ ಲಾಕ್ ಡೌನ್ ಮುನ್ನ ಮುನ್ನೆಚ್ಚರಿಕೆ ಕೈಗೊಳ್ಳಬೇಕಿತ್ತು. ಅಂತರರಾಷ್ಟ್ರೀಯ ವಿಮಾನಗಳನ್ನು ಫೆಬ್ರವರಿಯಲ್ಲಿ ನಿರ್ಬಂಧ ಮಾಡಬೇಕಿತ್ತು. ವಿದೇಶದಿಂದ ಬಂದವರಿಂದಲೇ ಈ ಸೋಂಕು ಜಾಸ್ತಿ ಆಯ್ತು. ತಬ್ಲಿಘಿಗಳ ಸಮಾವೇಶಕ್ಕೆ ಪರ್ಮಿಷನ್ ಕೊಟ್ಟಿದ್ದು ಯಾರು..? ಅದು ಭಾರತ ಸರ್ಕಾರ. ಕರೋನಾ ತಡೆಗಟ್ಟಲು ವಿಫಲವಾಗಿದ್ದು ಇವರೇ ಎಂದು ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಿದ್ರು. ಫೆಬ್ರವರಿಯಲ್ಲಿ ದೇಶದಲ್ಲಿ ಸೋಂಕು ಕಾಣಿಸಿಕೊಂಡಾಗ ಅಮೇರಿಕ ಅಧ್ಯಕ್ಷರನ್ನ ಕರೆಯಿಸಿದ್ರಿ. ಗುಜರಾತ್ನಲ್ಲಿ ಮೆರವಣಿಗೆ ಮಾಡಿಸಿದ್ರಿ ಅದು ತಪ್ಪು ಎಂದು ಖಂಡಿಸಿದ್ದಾರೆ. ನಾಲ್ಕೈದು ಬಾರಿ ಪ್ರಧಾನಮಂತ್ರಿಗಳು ಭಾಷಣ ಮಾಡಿ ಮಾಸ್ಕ್ ಹಾಕ್ಕೊಳ್ಳಿ, ಸ್ಯಾನಿಟೈಸರ್ ಹಾಕ್ಕೊಳಿ ಅಂದ್ರು. ಅದ್ರೆ ಲಾಕ್ಡೌನ್ನಿಂದ ಅಸಂಘಟಿತ ಕಾರ್ಮಿಕರ ಸಮಸ್ಯೆ, ರೈತರು, ಕಾರ್ಮಿಕರ ಬಗ್ಗೆ ಏನು ಹೇಳಲ್ಲ ಎಂದು ಕಿಡಿಕಾರಿದ್ದಾರೆ.
ರೈತರ ಬೆಳೆಗಳಿಗೆ ಸೂಕ್ತ ವ್ಯವಸ್ಥೆ ಮಾಡಲಿಲ್ಲ. ತರಕಾರಿ, ಹೂ ಹಣ್ಣು ಬೆಳೆದು ಮಣ್ಣು ಪಾಲಾದವು. ಸರ್ಕಾರಕ್ಕೆ ರೈತರ ಬಳಿ ಕೊಂಡುಕೊಳ್ಳುವಂತೆ ಸಲಹೆ ಕೊಟ್ಟಿದ್ದೆವು ಅದನ್ನು ಮಾಡಲಿಲ್ಲ. 21 ಲಕ್ಷ ಜನ ಸಂಘಟಿತ ಕಾರ್ಮಿಕರಿದ್ದಾರೆ. ಬೆಂಗಳೂರಿನಲ್ಲಿ ವಲಸೆ ಕಾರ್ಮಿಕರು ಇದ್ದಾರೆ. ಇವರಿಗೆ ಊಟ, ವಸತಿ, ರೇಷನ್, ಪ್ಯಾಕೇಜ್ ಘೋಷಣೆಯಾಗಲಿ ಯಾವುದು ಇದುವರೆಗೂ ಆಗಿಲ್ಲ. 21 ಲಕ್ಷ ಕಾರ್ಮಿಕರಲ್ಲಿ, 12 ಲಕ್ಷ ಕಾರ್ಮಿಕರಿಗೆ ಮಾತ್ರ ಕೊಟ್ಟಿದ್ದಾರೆ. ಕೆಲಸ ಇಲ್ಲದೆ ಉದ್ಯೋಗ ಕಳೆದುಕೊಂಡಿದ್ದಾರೆ. ಬಿಪಿಎಲ್ ಕಾರ್ಡ್ ಇರಲಿ ಇಲ್ಲದೆ ಇರಲಿ ಎಲ್ಲರಿಗೂ ರೇಷನ್ ಕೊಡಬೇಕು. ಕೇರಳ ಮಾದರಿಯಲ್ಲಿ 17 ಐಟಂ ರೇಷನ್ ಕೊಡ್ತಿದ್ದಾರೆ ಅದೇ ರೀತಿ ನಮ್ಮ ರಾಜ್ಯದಲ್ಲೂ ಕೊಡಬೇಕು ಎಂದು ಆಗ್ರಹ ಮಾಡಿದ್ದಾರೆ.
ಸಿಎಂ ರಿಲೀಫ್ ಫಂಡ್ ಬಗ್ಗೆ ಮಾಹಿತಿ ಇಲ್ಲ. ಎಷ್ಟು ಬಂತು, ಯಾರಿಗೆ ಕೊಟ್ರು ಅನ್ನೋ ಮಾಹಿತಿ ಇಲ್ಲ. ಪಿಎಂ ಕೇರ್ ಫಂಡ್ ಗೆ ರಾಜ್ಯದಿಂದ ಹಣ ಕೊಟ್ಟಿದ್ದಾರೆ. ಅದ್ರೆ ರಾಜ್ಯಕ್ಕೆ ಅಲ್ಲಿಂದ ಏನು ಬಂದಿಲ್ಲ. ಹೆಚ್ ಡಿ ರೇವಣ್ಣ ಪತ್ರ ಬರೆದು ಕೊರೋನಾ ಸಿಎಂ ರಿಲೀಫ್ ಫಂಡ್ ಬಗ್ಗೆ ಮಾಹಿತಿ ಕೇಳಿದ್ರು ಉತ್ತರ ಕೊಟ್ಟಿಲ್ಲ. ನಾವು ಕೊಟ್ಟ ಸಲಹೆ ಸೂಚನೆ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ನಿಸ್ಸಾಹಾಯಕ ವರ್ಗಕ್ಕೆ ಪರಿಹಾರ ಕೊಟ್ಟಿಲ್ಲ. ಅದಕ್ಕೆ ನಾವು ಚಾರ್ಟ್ ಆಫ್ ಡಿಮಾಂಡ್ಸ್ ಇಡ್ತೀವಿ. ಅದನ್ನ ಸರ್ಕಾರ ನಿಗದಿತ ವೇಳೆ ಕಾರ್ಯಗತಗೊಳಿಸಬೇಕು. ಇಲ್ಲದೆ ಇದ್ರೆ ವಿರೋಧ ಪಕ್ಷವಾಗಿ ರಾಜ್ಯದ ಹಿತದೃಷ್ಟಿಯಿಂದ ಅನಿವಾರ್ಯವಾಗಿ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ. ಇನ್ನೂ ಮೂರು ದಿನಗಳಲ್ಲಿ ಚಾರ್ಟ್ ಆಫ್ ಡಿಮಾಂಡ್ ಸಿದ್ಧಗೊಳಿಸಿ ಮುಖ್ಯಮಂತ್ರಿಗಳಿಗೆ ಕೊಟ್ಟು ಚರ್ಚೆ ಮಾಡ್ತೀವಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕೇಂದ್ರ ಸರ್ಕಾರ ಏಕೆ ಸಹಾಯ ಘೋಷಣೆ ಮಾಡಿಲ್ಲ. ಪಿಎಂ ಕೇರ್ ಫಂಡ್ ನಮಗೆ ಯಾಕೆ ಕೊಟ್ಟಿಲ್ಲ ಎಂದು ಹೆಚ್.ಡಿ ರೇವಣ್ಣ ಪ್ರಶ್ನೆ ಮಾಡಿದ್ದಾರೆ. ನಮ್ಮ ರಾಜ್ಯದಿಂದ 1500 ಕೋಟಿ ರೂಪಾಯಿ ಹಣವನ್ನು ನಮ್ಮ ರಾಜ್ಯದಿಂದ ಕೊಟ್ಟಿದ್ದಾರೆ. ಆದರೂ ನಮ್ಮ ರಾಜ್ಯಕ್ಕೆ ಕೇಂದ್ರದಿಂದ ಸಹಾಯ ಬಂದಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ಸಾರ್ವಜನಿಕವಾಗಿ ರಾಜ್ಯದ ಜನತೆ ಏನಿದೆ ಅನ್ನೋದು ಹೇಳಬೇಕು. ದೇವೇಗೌಡರು, ಕುಮಾರಸ್ವಾಮಿ ಎಲ್ಲರೂ ಪತ್ರ ಬರೆದಿದ್ರು. ಇಂದು ಒಟ್ಟಾಗಿ ಸೇರಿ ಸಭೆ ಮಾಡಿದ್ದೇವೆ. 5 ಗಂಟೆ ಸುದೀರ್ಘ ಸಭೆಯಾಗಿದೆ. ಸಿದ್ದರಾಮಯ್ಯನವರ ಹೋರಾಟದಲ್ಲಿ ಎಲ್ಲರೂ ಬಾಗಿಯಾಗ್ತಾರೆ. ಕರೊನಾದಲ್ಲಿ ಸಾರ್ವಜನಿಕರಿಂದ ಎಷ್ಟು ಹಣ ಬಂದಿದೆ ಅನ್ನೋ ಮಾಹಿತಿ ಇಲ್ಲ. ನಮ್ಮ ಜನ, ರೈತರನ್ನ ಉಳಿಸಿಕೊಳ್ಳಬೇಕು ಎಂದು ಜೆಡಿಎಸ್ ನಾಯಕ ಹೆಚ್.ಡಿ ರೇವಣ್ಣ ಒತ್ತಾಯ ಮಾಡಿದ್ದಾರೆ.
ವಿರೋಧ ಪಕ್ಷದ ನಾಯಕರ ಸಭೆ ಆಡಳಿತ ಪಕ್ಷಕ್ಕೆ ತಂದಿಟ್ಟ ಭೀತಿ..!
ಸಿದ್ದರಾಮಯ್ಯ ನೇತೃತ್ವದ ಸಭೆಯ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿದ್ದು, ವಿರೋಧ ಪಕ್ಷದ ನಾಯಕರು ಸಭೆ ಮಾಡಿದನ್ನ ಗಮನಿಸಿದ್ದೇನೆ. ಯಡಿಯೂರಪ್ಪನವರ ಸರ್ಕಾರ ಕರೊನ ತಡೆಗೆ ಬಹಳಷ್ಟು ಕೆಲಸ ಮಾಡ್ತಿದೆ. ದೇಶದಲ್ಲಿ ಕೇರಳ ಮತ್ತು ಕರ್ನಾಟಕ ಎರಡು ರಾಜ್ಯಗಳು ಈ ಹೋರಾಟದಲ್ಲಿ ಮಾದರಿಯಾಗಿವೆ. ಏನಾದ್ರು ಲೋಪದೋಷಗಳಿದ್ದರೆ ಸರ್ಕಾರಕ್ಕೆ ಸಲಹೆ ಕೊಡಲಿ. ಆದರೆ ರಾಜಕೀಯ ಮಾಡುವುದು ಬೇಡ ಎಂದು ಮನವಿ ಮಾಡಿದ್ದಾರೆ.