ಸತತ ಪ್ರತಿಭಟನೆಗಳ ನಡುವೆಯೂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ಬೆಂಬಲಿಸಿರುವ ಪ್ರಧಾನಿ ಮೋದಿಯವರು, ಏನೇ ಆದರೂ ಈ ಕಾಯ್ದೆಗಳನ್ನು ರದ್ದು ಮಾಡುವುದಿಲ್ಲ ಎಂದು ಹೇಳಿದೆ. ದೇಶದ ರೈತರನ್ನು ಎಷ್ಟು ದಾರಿ ತಪ್ಪಿಸುವ ಕೆಲಸ ಮಾಡಿದರೂ, ಅವರಿಗೆ ಮನವರಿಕೆ ಮಾಡುವ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
“ಕಳೆದ ಹಲವು ವರ್ಷಗಳಿಂದ ರೈತರು ಮತ್ತು ವಿರೋಧ ಪಕ್ಷಗಳು ಮುಂದಿಟ್ಟಿರುವ ಬೇಡಿಕೆಯನ್ನು ಈ ಕಾಯ್ದೆಗಳು ಪೂರೈಸಿವೆ. ಈಗ ವಿರೋಧ ಪಕ್ಷಗಳು ಪ್ರತಿಭಟನೆಯನ್ನು ಹುಟ್ಟು ಹಾಕುತ್ತಿವೆ ಹಾಗೂ ರೈತರನ್ನು ದಾರಿತಪ್ಪಿಸುತ್ತಿವೆ. ದೇಶದ ರೈತರ ಹೆಗಲಿನ ಮೇಲೆ ಬಂದೂಕು ಹಿಡಿದು ನಿಂತಿರುವವರನ್ನು ರೈತರು ಸೋಲಿಸುತ್ತಾರೆ ಎಂಬ ವಿಶ್ವಾಸವಿದೆ,” ಎಂದವರು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಭಾರತ ಸರ್ಕಾರವು ರೈತರ ಹಿತಕ್ಕಾಗಿ ಸದಾ ಬದ್ದವಾಗಿರುತ್ತದೆ. ಇದನ್ನು ರೈತರಿಗೆ ಮತ್ತೆ ಮತ್ತೆ ಮನವರಿಕೆ ಮಾಡುತ್ತೇವೆ ಮತ್ತು ಅವರ ತೊಂದರೆಗಳಿಗೆ ನಾವು ಪರಿಹಾರ ಒದಗಿಸುತ್ತೇವೆ,” ಎಂದು ಹೇಳಿದ್ದಾರೆ.
ಕಳೆದ ಸುಮಾರು ಮೂರು ವಾರಗಳಿಂದ ದೆಹಲಿ ಗಡಿಯಲ್ಲಿ ರೈತ ಸಂಘಟನೆಗಳ ಒಕ್ಕೂಟವು ಪ್ರತಿಭಟನೆ ನಡೆಸುತ್ತಿದೆ. ಈವರೆಗೆ ಹಲವು ಸುತ್ತಿನ ಮಾತುಕತೆಯನ್ನು ಕೇಂದ್ರ ಸರ್ಕಾರ ನಡೆಸಿದ್ದರೂ, ರೈತು ಪ್ರತಿಭಟನೆಯನ್ನು ವಾಪಾಸ್ ಪಡೆಯಲು ಒಪ್ಪುತ್ತಿಲ್ಲ. ಕೃಷಿ ಕಾಯ್ದೆ ತಿದ್ದುಪಡಿಗಳನ್ನು ವಾಪಾಸ್ ಪಡೆಯುವವರೆಗೂ ಪ್ರತಿಭಟನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಪ್ರತಿಬಟನಾಕಾರರು ಪಟ್ಟು ಹಿಡಿದು ಕುಳಿತಿದ್ದಾರೆ.