‘ಚಿಂತಕರ ಚಾವಡಿ’ ಎಂದೇ ಪ್ರಖ್ಯಾತಿ ಗಳಿಸಿರುವ ವಿಧಾನ ಪರಿಷತ್ ಸಚಿವಾಲಯದ ಕಂಪ್ಯೂಟರ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಲು ಹೊರಗುತ್ತಿಗೆ ಆಧಾರದ ನೇಮಕಾತಿಗಳಲ್ಲಿ ಸ್ವಜನ ಪಕ್ಷಪಾತ ಹಾಗೂ ಅಕ್ರಮದ ಆರೋಪ ಪ್ರಬಲವಾಗಿ ಕೇಳಿಬಂದಿದೆ. ಕಾರ್ಯದರ್ಶಿ ಹಾಗೂ ಜಂಟಿ ಕಾರ್ಯದರ್ಶಿಯವರು ವಿಧಾನ ಪರಿಷತ್ ಸಚಿವಾಲಯದ ನೇಮಕಾತಿ ನಿಯಮಗಳನ್ನು ತಿರುಚಿ, ಸರ್ಕಾರದ ಅಧೀನದಲ್ಲಿ ಬರುವ ಕಿಯೋನಿಕ್ಸ್ ಮೂಲಕ ಕಂಪ್ಯೂಟರ್ ವಿಭಾಗದ ಜ್ಯೂನಿಯರ್ ಪ್ರೋಗ್ರಾಮರ್ (2), ಜೂನಿಯರ್ ಕನ್ಸೋಲ್ ಆಪರೇಟರ್ (3), ಕಂಪ್ಯೂಟರ್ ಆಪರೇಟರ್ (4) ಗಳನ್ನು ನೇಮಿಸಿಕೊಂಡಿದ್ದಾರೆ. ನೇಮಕಗೊಂಡ ಅಭ್ಯರ್ಥಿಗಳು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಅಧಿಕಾರಿಗಳ ಜೊತೆ ವೈಯಕ್ತಿಕ ಅಥವಾ ವ್ಯಾವಹಾರಿಕ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಮೂಲಕ ಅಧಿಕಾರಿಗಳು ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳನ್ನು ಉಲ್ಲಂಘಿಸಿದ್ದು, ಹಿತಾಸಕ್ತಿ ಸಂಘರ್ಷಕ್ಕೆ ನಾಂದಿ ಹಾಡುವುದರೊಂದಿಗೆ ಸರ್ಕಾರದ ಬೊಕ್ಕಸಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಮಾಡುತ್ತಿದ್ದಾರೆ ಎಂದು ದೂರಲಾಗಿದೆ.
ಕಳೆದೆರಡು ವರ್ಷಗಳಿಂದ ಪರಿಷತ್ ಸಚಿವಾಲಯದ ಕಂಪ್ಯೂಟರ್ ವಿಭಾಗಕ್ಕೆ ಹೊರಗುತ್ತಿಗೆ ನೇಮಕಾತಿ ಚಾಲ್ತಿಯಲ್ಲಿದೆ. ನೇಮಕಗೊಂಡವರ ಪೈಕಿ ಕೆಲವರು ರಾಜಕಾರಣಿಗಳ ಸಹಾಯಕರ ಸಂಬಂಧಿಗಳು ಎನ್ನಲಾಗಿದೆ. “ಜನಪ್ರತಿನಿಧಿಗಳ ಕೆಲವು ಹಿಂಬಾಲಕರಿಗೆ ಆಶ್ರಯ ಕಲ್ಪಿಸುವ ಮೂಲಕ ತಮ್ಮ ಅಕ್ರಮವನ್ನು ಮುಚ್ಚಿಕೊಳ್ಳುವ ಯತ್ನವನ್ನು ಪರಿಷತ್ ಸಚಿವಾಲಯದ ಪ್ರಮುಖ ಅಧಿಕಾರಿಗಳು ಮಾಡಿದ್ದಾರೆ” ಎನ್ನುತ್ತಾರೆ ಇದೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿರುವ ಅಧಿಕಾರಿಯೊಬ್ಬರು.
ಹಿಂದಿನ ಸಮ್ಮಿಶ್ರ ಸರ್ಕಾರವು ರೈತರ ಸಾಲಮನ್ನಾ ಮಾಡಿದ್ದ ಹಿನ್ನೆಲೆಯಲ್ಲಿ ಸರ್ಕಾರದ ಬೊಕ್ಕಸ ಖಾಲಿಯಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಘೋಷಿಸಿದ್ದರಿಂದ ರಾಜ್ಯ ಸರ್ಕಾರಕ್ಕೆ ಸಂಗ್ರಹವಾಗಬೇಕಾದ ತೆರಿಗೆ ನಿಂತು ಹೋಗಿದೆ. ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನಗಳಲ್ಲಿ ಸಾಕಷ್ಟು ವ್ಯತ್ಯಯವಾಗಿದೆ. ಇದರ ಮಧ್ಯೆ, ಬಡವರು ಹಾಗೂ ನಿರಾಶ್ರಿತರಿಗೆ ನೆರವಾಗುವ ಉದ್ದೇಶದಿಂದ ಸರ್ಕಾರವು ಸಾವಿರಾರು ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಿಸಿ ಅದಕ್ಕೆ ಹಣ ಹೊಂದಿಸಲಾಗದೆ ಹೆಣಗುತ್ತಿದೆ. ಈ ಎಲ್ಲಾ ಕಾರಣಗಳಿಂದ ರಾಜ್ಯ ಸರ್ಕಾರವು ಮಿತವ್ಯಯದ ಬಗ್ಗೆ ಚಿಂತನೆ ನಡೆಸುತ್ತಿರುವಾಗ ‘ಹೊರಗುತ್ತಿಗೆ’ ಅಸ್ತ್ರವನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ವಿಧಾನ ಪರಿಷತ್ ಅಧಿಕಾರಿಗಳು ತಮ್ಮ ಸಂಬಂಧಿಗಳಿಗೆ ಉದ್ಯೋಗ ಕಲ್ಪಿಸುವುದರೊಂದಿಗೆ ಸರ್ಕಾರವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.
“ವಿಧಾನ ಪರಿಷತ್, ವಿಧಾನಸಭೆ ಹಾಗೂ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಇ-ಆಡಳಿತ ಹಾಗೂ ನ್ಯಾಷನಲ್ ಇನ್ಫಾರ್ಮೇಷನ್ ಸೆಂಟರ್ (NIC) ಮೂಲಕ ಇ-ವಿಧಾನ್, ಇ-ಆಫೀಸ್ ಸೇರಿದಂತೆ ಹಲವು ತಂತ್ರಾಂಶಗಳನ್ನು ಸಿದ್ಧಪಡಿಸಿ ಪೂರೈಸಲಾಗುತ್ತಿದೆ. ಇದನ್ನು ನಿರ್ವಹಿಸಲು ಅಗತ್ಯವಾದ ಕಾಯಂ ಸಿಬ್ಬಂದಿ ಸರ್ಕಾರದಲ್ಲಿದ್ದಾರೆ. ಇದಾಗ್ಯೂ ಹೊರಗುತ್ತಿಗೆಯ ಮೂಲಕ ನೇಮಕಾತಿಗಳನ್ನು ಮಾಡಿಕೊಂಡು ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿರುವುದೇಕೆ?” ಎಂದು ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ.
“ಕಿಯೋನಿಕ್ಸ್ ಮೂಲಕ ನೇಮಕಗೊಂಡ ಅಭ್ಯರ್ಥಿಗಳನ್ನು ಇಂಥದ್ದೇ ಸ್ಥಳಕ್ಕೆ ನಿಯುಕ್ತಿಗೊಳಿಸಬೇಕು ಎಂದು ಆದೇಶಿಸಲಾಗಿದೆ. ಈ ಮೂಲಕ ತಮ್ಮ ಅಭ್ಯರ್ಥಿಗಳನ್ನು ತಾವಿರುವ ಸ್ಥಳಗಳಿಗೆ ನಿಯುಕ್ತಿಗೊಳಿಸಿ ಪೋಷಿಸುವುದು ಒಂದೆಡೆಯಾದರೆ ಮುಂದಿನ ದಿನಗಳಲ್ಲಿ ಹೊರಗುತ್ತಿಗೆ ಸೇವೆಯನ್ನು ಪರಿಗಣಿಸಿ ಅವರನ್ನು ಅದೇ ಉದ್ಯೋಗದಲ್ಲಿ ಕಾಯಂಗೊಳಿಸಬಹುದು. ಹೀಗೆ ಮಾಡಿದಲ್ಲಿ ಹೊರಗಿನ ಅಭ್ಯರ್ಥಿಗಳು ನಿರ್ದಿಷ್ಟ ಹುದ್ದೆಗೆ ಅರ್ಜಿ ಹಾಕಿದರೂ ಅಗತ್ಯವಾದ ಅನುಭವ ಹೊಂದಿಲ್ಲದೇ ಅವರ ಅರ್ಜಿ ತಿರಸ್ಕೃತಗೊಳ್ಳುವಂತೆ ಮಾಡಿ, ತಮ್ಮ ಅಭ್ಯರ್ಥಿಗಳನ್ನು ಕಾಯಂಗೊಳಿಸುವ ವ್ಯವಸ್ಥಿತ ಸಂಚು ರೂಪಿಸಲಾಗಿದೆ” ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯ ಅಧ್ಯಕ್ಷರಾಗಿದ್ದ ಕೆ ಬಿ ಕೋಳಿವಾಡ ಅವರ ಕಾಲದಲ್ಲಿ ವಿಧಾನಸಭೆಯ ವಿವಿಧ ಹುದ್ದೆಗಳಿಗೆ ಅಕ್ರಮ ನೇಮಕ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಲಕ್ಷಾಂತರ ರೂಪಾಯಿ ಲಂಚ ನೀಡಿ ಉದ್ಯೋಗ ಹಿಡಿದಿದ್ದ ಹಲವು ಅಭ್ಯರ್ಥಿಗಳಿಗೆ ಹಲವು ತಿಂಗಳು ಕಳೆದಿದ್ದರೂ ವೇತನ ದೊರೆತಿರಲಿಲ್ಲ ಎನ್ನುವುದನ್ನು ಇಲ್ಲಿ ನೆನೆಯಬಹುದಾಗಿದೆ. “ವಿಧಾನಸಭೆ ಹಾಗೂ ವಿಧಾನ ಪರಿಷತ್ ಸಚಿವಾಲಯಗಳು ಸರ್ಕಾರದ ಎರಡು ಕಣ್ಣುಗಳಿದ್ದ ಹಾಗೆ. ಇಲ್ಲಿ ರೂಪುಗೊಳ್ಳುವ ನೀತಿ-ನಿಯಮಗಳನ್ನು ರಾಜ್ಯದ ಜನತೆ ಪಾಲಿಸಬೇಕಾಗುತ್ತದೆ.
ಅನ್ಯಾಯ, ಅಕ್ರಮ, ಅಸಮಾನತೆಗಳನ್ನು ಮುಕ್ತವಾಗಿ ಚರ್ಚಿಸುವ ಸದನಗಳನ್ನು ಹೊಂದಿರುವ ಸಚಿವಾಲಯಗಳಲ್ಲಿ ಅಕ್ರಮಗಳ ವಾಸನೆ ಕೇಳಿಬರುವುದರಿಂದ ಶಾಸಕಾಂಗದ ಮಹತ್ವವೇ ಮಣ್ಣು ಪಾಲಾಗುತ್ತದೆ. ಪ್ರಜಾಪ್ರಭುತ್ವದ ಪ್ರಮುಖ ಅಂಗವಾದ ಶಾಸಕಾಂಗದ ಮಹತ್ವ ಕಾಪಾಡುವ ಉದ್ದೇಶದಿಂದ ವಿಧಾನಸಭೆ ಹಾಗೂ ವಿಧಾನ ಪರಿಷತ್ ಸಚಿವಾಲಯದ ನೇಮಕಗಳನ್ನು ಕರ್ನಾಟಕ ನಾಗರಿಕ ಸೇವಾ ಸಂಸ್ಥೆ (KPSC) ವ್ಯಾಪ್ತಿಗೆ ತಂದರೆ ತಕ್ಕಮಟ್ಟಿಗೆ ಪಾರದರ್ಶಕತೆ ಕಂಡುಬರಲಿದೆ” ಎಂಬುದು ಸಚಿವಾಲಯದ ಒಳಗಿನ ಬೆಳವಣಿಗೆಗಳನ್ನು ಗುರುತಿಸುತ್ತಿರುವ ಅಧಿಕಾರಿಗಳ ಕಾಳಜಿ.
ಹೊರಗುತ್ತಿಗೆ ನೇಮಕವಾದ ಅಭ್ಯರ್ಥಿಗಳಿಗೆ ವೇತನ ನಿಗದಿಯಲ್ಲಿಯೂ ಅಕ್ರಮ ಎಸಲಾಗಿದ್ದು, ದಿನಗೂಲಿ ಕಾಯ್ದೆಗೆ ವಿರುದ್ಧವಾಗಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸಚಿವಾಲಯದ ಆಂತರಿಕ ಹಣಕಾಸು ಸಲಹಾ ಅಧಿಕಾರಿಯು ವಿಧಾನ ಪರಿಷತ್ ಸಚಿವಾಲಯದ ಕಾರ್ಯದರ್ಶಿ ಮಹಾಲಕ್ಷ್ಮಿ ಅವರಿಗೆ ವಿವರಣೆ ನೀಡಿದ್ದಾರೆ ಎನ್ನಲಾಗಿದೆ. ಹಣಕಾಸು ಇಲಾಖೆಯು ಹೊರಗುತ್ತಿಗೆ ಅಡಿ ನೇಮಕವಾದ ಅಧಿಕಾರಿಗಳ ವೇತನದ ಬಗ್ಗೆ ತಕರಾರು ದಾಖಲಿಸಿದೆ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ವಿಧಾನ ಪರಿಷತ್ ಸಚಿವಾಲಯದ ಆಂತರಿಕ ಹಣಕಾಸು ಸಲಹಾ ಅಧಿಕಾರಿ ಸುಮಾ ನಿರಾಕರಿಸಿದ್ದಾರೆ.
ತಮ್ಮ ಮೇಲಿನ ಆರೋಪಗಳಿಗೆ ಪ್ರತಿಕ್ರಿಯೆ ಬಯಸಿ ‘ಪ್ರತಿಧ್ವನಿ’ಯು ವಿಧಾನ ಪರಿಷತ್ ಕಾರ್ಯದರ್ಶಿ ಕೆ ಆರ್ ಮಹಾಲಕ್ಷ್ಮಿ ಅವರನ್ನು ಮೊಬೈಲ್ ಮತ್ತು ವಾಟ್ಸ್ ಆಪ್ ಮೂಲಕ ಸಂಪರ್ಕಿಸಲು ಹಲವು ಬಾರಿ ಪ್ರಯತ್ನಿಸಿದೆ. ಆದರೆ, ಅವರು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಇದೇ ಆರೋಪಗಳಿಗೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಜಂಟಿ ಕಾರ್ಯದರ್ಶಿ ಜೆ ಎಸ್ ನಿರ್ಮಲಾ ಅವರು “ಯಾವುದೇ ಅಕ್ರಮ ನಡೆದಿಲ್ಲ. ನಿಯಮಾನುಸಾರ ನೇಮಕಾತಿಯಾಗಿದೆ. ಹೆಚ್ಚಿಗೆ ಮಾಹಿತಿ ನೀಡಲಾಗದು” ಎಂದು ಕರೆ ತುಂಡರಿಸಿದ್ದಾರೆ. ಹೆಚ್ಚಿನ ವಿವರಣೆ ಬಯಸಿ ನಿರಂತರವಾಗಿ ನಿರ್ಮಲಾ ಅವರನ್ನು ಸಂಪರ್ಕಿಸಲು ‘ಪ್ರತಿಧ್ವನಿ’ ಯತ್ನಿಸಿದಾಗಲೂ ಅವರು ಕರೆ ಸ್ವೀಕರಿಸಲಿಲ್ಲ. ವಾಟ್ಸ್ ಆಪ್ ಮೂಲಕ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಇನ್ನು ವಿಧಾನ ಪರಿಷತ್ ಚೇರ್ಮನ್ ಪ್ರತಾಪ್ ಚಂದ್ರ ಶೆಟ್ಟಿ ಅವರನ್ನು ಸಂಪರ್ಕಿಸಲು ‘ಪ್ರತಿಧ್ವನಿ’ಯು ಹಲವು ಬಾರಿ ಪ್ರಯತ್ನಿಸಿತ್ತಾದರೂ ಅವರು ಕರೆ ಸ್ವೀಕರಿಸಲಿಲ್ಲ.