ಕರೋನಾ ಸಂಕಷ್ಟದ ನಡುವೆ ವಿದ್ಯುತ್ ದರದಲ್ಲಿ ಭಾರೀ ಹೆಚ್ಚಳ ಮಾಡಿರುವುದು ಸಹಜವಾಗೇ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ರಾಜಕೀಯ ಪಕ್ಷಗಳು ಮತ್ತು ಉದ್ಯಮ ವಲಯದಿಂದಲೂ ಈ ಉದ್ಯೋಗ, ಉದ್ಯಮ, ವ್ಯವಹಾರಗಳೆಲ್ಲಾ ಸಂಕಷ್ಟದಲ್ಲಿರುವ ಈ ಹೊತ್ತಿನಲ್ಲಿ ಜನರ ನೆರವಿಗೆ ಬರಬೇಕಾದ ಸರ್ಕಾರಗಳು, ಹೀಗೆ ದರ ಹೆಚ್ಚಳದ ಮೂಲಕ ಗಾಯದ ಮೇಲೆ ಉಪ್ಪು ಸವರುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.
ಒಂದು ಕಡೆ , ಬರೋಬ್ಬರಿ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿ ದೇಶದ ಜನರ ಆತಂಕ ದೂರ ಮಾಡುವುದಾಗಿ ಹೇಳಿದ್ದ ಸರ್ಕಾರಗಳು ಮತ್ತೊಂದು ಕಡೆ ವಿದ್ಯುತ್, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಬದುಕಿಗೆ ಯಾವ ರೀತಿ ಉಪಕಾರ ಮಾಡುತ್ತಿವೆ ಎಂಬುದಕ್ಕೂ ಈ ದರ ಏರಿಕೆ ನಿದರ್ಶನ. ಕರೋನಾ ನಿರ್ವಹಣೆ ಮತ್ತು ದಿಢೀರ್ ಲಾಕ್ ಡೌನ್ ನಂತಹ ತನ್ನ ವೈಫಲ್ಯಗಳು ಮತ್ತು ಯೋಜನಾರಹಿತ ದುಡುಕು ಕ್ರಮಗಳಿಂದಾಗಿ ಜನಸಾಮಾನ್ಯರ ಬದುಕು ಬಸವಳಿದಿದೆ. ಅಂತಹ ಹೊತ್ತಿನಲ್ಲಿ ಕನಿಷ್ಟ ತೀರಾ ಮೂಲಭೂತ ಅಗತ್ಯಗಳು ಬೆಲೆ ಏರಿಕೆಯನ್ನಾದರೂ ತಡೆದು, ಜನರ ಹಿತ ಕಾಯಬೇಕಾದ ಸರ್ಕಾರಗಳು, ಅದಕ್ಕೆ ತದ್ವಿರುದ್ಧವಾಗಿ ಬಿದ್ದವನ ಮೇಲೆ ಕಲ್ಲು ಎತ್ತಿಹಾಕಿದ ರೀತಿಯಲ್ಲಿ ಪ್ರತಿ ಅಗತ್ಯವಸ್ತು ಮತ್ತು ಸೇವೆಗಳ ಬೆಲೆಯನ್ನು ಹಿಂದೆಂದೂ ಕಂಡರಿಯದ ಪ್ರಮಾಣದಲ್ಲಿ ಹೆಚ್ಚಿಸುತ್ತಿವೆ. ಸರ್ಕಾರಗಳು ಜನಪರವೋ ಅಥವಾ ಕಾರ್ಪೊರೇಟ್ ಕಂಪನಿಗಳು ಮತ್ತು ಉದ್ಯಮಿಗಳ ಪರವೋ ಎಂಬುದನ್ನೂ ಇಂತಹ ಅಮಾನುಷ ನಡೆ ಜಗಜ್ಜಾಹೀರುಗೊಳಿಸಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರಾಜ್ಯದಲ್ಲಿ ನವೆಂಬರ್ 1ರಿಂದಲೇ ಜಾರಿಗೆ ಬಂದಿರುವ ಶೇ.5.4ರಷ್ಟು ವಿದ್ಯುತ್ ಬೆಲೆ ಏರಿಕೆಯಿಂದಾಗಿ ಪ್ರತಿ ಯುನಿಟ್ ವಿದ್ಯುತ್ ಬೆಲೆ ಸರಾಸರಿ 40 ಪೈಸೆಯಷ್ಟು ದುಬಾರಿಯಾಗಲಿದೆ. ಇದು ಮೂಲ ಬೆಲೆಯಲ್ಲಿನ ಏರಿಕೆ. ಯೂನಿಟ್ ಹಂತವಾರು ಏರಿಕೆಯಲ್ಲಿ ಈ ಪ್ರಮಾಣ ಇನ್ನಷ್ಟು ದುಬಾರಿಯಾಗಲಿದೆ. ಆದರೆ, ವಿದ್ಯುತ್ ನಿಯಂತ್ರಣ ಆಯೋಗ ಇದೊಂದು ವಾರ್ಷಿಕ ಬೆಲೆ ಪರಿಷ್ಕರಣೆಯ ಮಾಮೂಲಿ ಕ್ರಮ. ಪ್ರತಿ ವರ್ಷ ಏಪ್ರಿಲ್ ನಿಂದ ಜಾರಿಗೆ ಬರುವಂತೆ ಪರಿಷ್ಕರಣೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಕರೋನಾ ಹಿನ್ನೆಲೆಯಲ್ಲಿ ನವೆಂಬರ್ ನಿಂದ ಜಾರಿಗೆ ತರಲಾಗಿದೆ. ಆ ಮಟ್ಟಿಗೆ ಗ್ರಾಹಕರಿಗೆ ಒಂದಿಷ್ಟು ನೆರವಾಗಿದೆ ಎಂದು ಹೇಳಿದೆ.
Also Read: ರೈಲ್ವೇ ಖಾಸಗೀಕರಣ; ಪ್ರಯಾಣ ದರ ನಿಗದಿ ಅಧಿಕಾರವೂ ಖಾಸಗಿಯವರಿಗೆ
ಆದರೆ, ವಾಸ್ತವವಾಗಿ ಇದು ಕೇವಲ ವಾರ್ಷಿಕ ಬೆಲೆ ಪರಿಷ್ಕರಣೆಯ ಕ್ರಮವಾಗಿ ಸೀಮಿತವಲ್ಲ; ಬದಲಾಗಿ ದೇಶವ್ಯಾಪಿ ವಿದ್ಯುತ್ ವಲಯವನ್ನು ಖಾಸಗೀಕರಣ ಮಾಡುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರದ ನೀತಿಯ ಭಾಗವಾಗಿ ಈ ಬೆಲೆ ಏರಿಕೆ ಜಾರಿಗೆ ಬಂದಿದೆ ಎಂಬುದು ಬಲವಾಗಿ ಕೇಳಿಬರುತ್ತಿರುವ ಮಾತು. ಅದರಲ್ಲೂ ದೇಶದ ಸಾರ್ವಜನಿಕ ಸಾರಿಗೆಯ ರೈಲ್ವೆ, ವಿಮಾನಯಾನ, ಆರೋಗ್ಯ ವ್ಯವಸ್ಥೆ ಸೇರಿದಂತೆ ಜನಸಾಮಾನ್ಯರ ಬಳಕೆಯ ಎಲ್ಲವನ್ನೂ ಕೇವಲ ಲಾಭ ಮತ್ತು ಉದ್ಯಮಿಗಳ ಆದಾಯ ಕೊಬ್ಬಿಸುವ ಏಕೈಕ ಉದ್ದೇಶದಿಂದ ಖಾಸಗೀಕರಣ ಮಾಡುತ್ತಿರುವ ಮೋದಿಯವರ ಸರ್ಕಾರ, ಇದೀಗ ದೇಶದ ಇಡೀ ವಿದ್ಯುತ್ ವಲಯವನ್ನು, ಖಾಸಗೀಕರಣ ಮಾಡಲು ನಿರ್ಧರಿಸಿದೆ.
ಆ ಸಂಬಂಧ ಕರೋನಾ ಸಂಕಷ್ಟದ ನಡುವೆಯೇ ಹೊಸ ವಿದ್ಯುತ್ ಮಸೂದೆ-2020ನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದೆ. ಮುಖ್ಯವಾಗಿ ವಿದ್ಯುತ್ ವಲಯವನ್ನು ವಿತರಣಾ ಕಂಪನಿ(ಡಿಸ್ಕಾಂ) ಮಟ್ಟದಿಂದಲೇ ಸಂಪೂರ್ಣ ಖಾಸಗೀಕರಣ ಮಾಡುವುದು ಮತ್ತು ಅದಕ್ಕೆ ತಕ್ಕಂತೆ ವಿದ್ಯುತ್ ವಲಯದಲ್ಲಿ ಕೃಷಿಕರು, ಉದ್ಯಮಿಗಳು ಮತ್ತು ಸಾಮಾನ್ಯ ಗ್ರಾಹಕರು ಸೇರಿದಂತೆ ಒಟ್ಟಾರೆ ಎಲ್ಲರಿಗೂ ವಿವಿಧ ಸ್ತರದಲ್ಲಿ ಈವರೆಗೆ ನೀಡುತ್ತಿರುವ ಎಲ್ಲಾ ಬಗೆಯ ವಿದ್ಯುತ್ ಸಹಾಯಧನ ಮತ್ತು ನೆರವನ್ನು ಸಂಪೂರ್ಣ ತೆಗೆದುಹಾಕುವುದು. ಮತ್ತು ವಿದ್ಯುತ್ ಸೇವೆಯಲ್ಲಿ ದೂರವಾಣಿ ವಲಯದಲ್ಲಿ ಇರುವಂತೆ ಸ್ಪರ್ಧಾತ್ಮಕ ವಾತಾವರಣ ಕಲ್ಪಿಸುವ ಮೂಲಕ ವಿದ್ಯುತ್ ವಲಯವನ್ನು ಖಾಸಗೀ ಕಂಪನಿಗಳಿಗೆ ಸಂಪೂರ್ಣ ಮುಕ್ತ ವ್ಯಾಪಾರ ವಲಯವಾಗಿ ನೀಡುವುದು ಈ ಹೊಸ ತಿದ್ದುಪಡಿ ಮಸೂದೆಯ ಒಟ್ಟಾರೆ ಉದ್ದೇಶ.
Also Read: ಸಂಕಷ್ಟದ ಹೊತ್ತಲ್ಲಿ ಮೋದಿಯ ಖಾಸಗೀಕರಣ ಸಮೃದ್ಧ ಕೊಯಿಲು!
ಈಗಾಗಲೇ ದೇಶದ ಎಲ್ಲಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಮಸೂದೆಗೆ ಸಂಸತ್ ಅಂಗೀಕಾರ ಪಡೆಯುವ ಮುಂಚೆಯೇ ವಿದ್ಯುತ್ ವಲಯವನ್ನು ಖಾಸಗೀ ಹೂಡಿಕೆದಾರರಿಗೆ ಮುಕ್ತಗೊಳಿಸಲಾಗಿದೆ. ಒಡಿಶಾದಲ್ಲಿ ಕೂಡ ಇದೇ ಅಕ್ಟೋಬರಿನಿಂದಲೇ ಜಾರಿಗೆ ಬರುವಂತೆ ವಿದ್ಯುತ್ ವಲಯವನ್ನು ಖಾಸಗೀಕರಣಗೊಳಿಸಲಾಗಿದೆ. ಹೊಸ ಮಸೂದೆಗೆ 11 ರಾಜ್ಯ ಸರ್ಕಾರಗಳು ಮತ್ತು ಪುದುಚೆರಿ ಕೇಂದ್ರಾಡಳಿತ ಪ್ರದೇಶ ಪ್ರಬಲ ವಿರೋಧ ವ್ಯಕ್ತಪಡಿಸಿದ ಹೊರತಾಗಿಯೂ ಕೇಂದ್ರ ಸರ್ಕಾರ ತನ್ನದೇ ಮೊಂಡುತನದಲ್ಲಿ ಮಸೂದೆ ಜಾರಿಗೆ ಮುಂಚೆಯೇ ಖಾಸಗೀಕರಣಕ್ಕೆ ಮುಂದಾಗಿದೆ. ಇದು ಸ್ಪಷ್ಟವಾಗಿ ಕೇಂದ್ರ ಬಿಜೆಪಿ ಸರ್ಕಾರದ ಆದ್ಯತೆ ಯಾವುದು ಎಂಬುದಕ್ಕೆ ಸಾಕ್ಷಿ.
Also Read: ಸರ್ಕಾರಿ ಸಾಮ್ಯದ ಬ್ಯಾಂಕುಗಳನ್ನು ಖಾಸಗೀಕರಣ ಮಾಡಲು ಹೊರಟಿರುವ ಮೋದಿ ಸರ್ಕಾರ
ಆದರೆ, ಹೀಗೆ ಖಾಸಗೀಕರಣ ಮಾಡಲು, ಮುಖ್ಯವಾಗಿ ಬೇಕಾಗಿರುವುದು ಡಿಸ್ಕಾಂಗಳ ಮಟ್ಟದಲ್ಲಿ ಕ್ಲೀನ್ ಬ್ಯಾಲೆನ್ಸ್ ಶೀಟ್. ಅಂದರೆ, ಪ್ರತಿ ವಿತರಣಾ ಕಂಪನಿಯ ಮಟ್ಟದಲ್ಲಿ ಆಯಾ ಕಂಪನಿಗಳು ನಷ್ಟದಲ್ಲಿರಬಾರದು, ಲಾಭದಲ್ಲಿರಬೇಕು. ವಿದ್ಯುತ್ ಬಾಕಿ ಮತ್ತು ಸಾಲ ಇರಬಾರದು. ಸಬ್ಸಿಡಿ ಮತ್ತು ರಿಯಾಯ್ತಿಗಳಿಗೆ ಸಂಬಂಧಿಸಿದ ಯಾವುದೇ ಹೊರೆಗಳಿರಬಾರದು. ಇಂತಹ ಹೊರೆಗಳೊಂದಿಗೆ ಅಂತಹ ಡಿಸ್ಕಾಂಗಳನ್ನು ಖರೀದಿಸಲು ಯಾವುದೇ ಖಾಸಗೀ ಹೂಡಿಕೆದಾರರು ಆಸಕ್ತಿ ವಹಿಸುವುದಿಲ್ಲ. ಅದಾದ ಬಳಿಕ ಖಾಸಗೀ ಕಂಪನಿಗಳಿಗೆ ವಿದ್ಯುತ್ ಉತ್ಪಾದಕರಿಂದ ಸಬ್ಸಿಡಿ ದರದಲ್ಲಿ ಖರೀದಿ ಅವಕಾಶ ನೀಡುವುದು ಮತ್ತು ಅದೇ ಹೊತ್ತಿಗೆ ಕನಿಷ್ಟ 5ರಿಂದ 7 ವರ್ಷಗಳವರೆಗೆ ಸಿಬ್ಬಂದಿ, ತಾಂತ್ರಿಕತೆ, ಹಣಕಾಸು ಸೇರಿದಂತೆ ಎಲ್ಲಾ ಬಗೆಯ ಮೂಲಸೌಕರ್ಯ ಮತ್ತು ಸೌಲಭ್ಯಗಳ ವರ್ಗಾವಣೆಯ ರಿಯಾಯ್ತಿ ಅವಧಿಯನ್ನು ನೀಡಬೇಕು ಎಂಬ ಖಾಸಗೀ ಕಂಪನಿಗಳ ಹಿತಕಾಯುವ ಅಂಶಗಳನ್ನೂ ಮಸೂದೆ ಒಳಗೊಂಡಿದೆ.
Also Read: ವಿದ್ಯುಚ್ಛಕ್ತಿ ಮಂಡಳಿ ಖಾಸಗೀಕರಣ ಪ್ರಸ್ತಾವನೆಗೆ ಕರ್ನಾಟಕದಲ್ಲೂ ನೌಕರರ ವಿರೋಧ
ಹಾಗಾಗಿ, ಖಾಸಗೀ ಕಂಪನಿಗಳನ್ನು ಆಕರ್ಷಿಸಲು ಮೊದಲ ಹೆಜ್ಜೆಯಾಗಿ ಕೇಂದ್ರ ಸರ್ಕಾರ, ದೇಶದ ಎಲ್ಲಾ ಡಿಸ್ಕಾಂಗಳಿಗೆ ತಮ್ಮ ಬ್ಯಾಲೆನ್ಸ್ ಶೀಟ್ ಶುದ್ಧೀಕರಣಕ್ಕೆ ಸೂಚನೆ ನೀಡಿದೆ. ಅಂತಹ ಸೂಚನೆಯ ಭಾಗವಾಗಿಯೇ ಇದೀಗ ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಆಯಾ ವಿದ್ಯುತ್ ಸರಬರಾಜು ಕಂಪನಿಗಳು ಭಾರೀ ಬೆಲೆ ಏರಿಕೆಯ ಪ್ರಸ್ತಾಪಗಳನ್ನು ಆಯಾ ವಿದ್ಯುತ್ ನಿಯಂತ್ರಣ ಪ್ರಾಧಿಕಾರಗಳ ಮುಂದಿಟ್ಟಿವೆ. ರಾಜ್ಯದಲ್ಲಿ ಕೂಡ ಪ್ರತಿ ಯುನಿಟ್ ಗೆ ಕನಿಷ್ಟ 1.26 ಪೈಸೆಯಷ್ಟು ಹೆಚ್ಚಳ ಮಾಡಲು ಎಸ್ಕಾಂಗಳು ಬೇಡಿಕೆ ಇಟ್ಟಿದ್ದವು. ಆದರೆ, ಕರ್ನಾಟಕ ವಿದ್ಯುತ್ ನಿಯಂತ್ರಣ ಪ್ರಾಧಿಕಾರ ಕೇವಲ ಸರಾಸರಿ 40 ಪೈಸೆ ಹೆಚ್ಚಳಕ್ಕೆ ಅನುಮೋದನೆ ನೀಡಿದೆ ಎನ್ನಲಾಗಿದೆ.
ಹಾಗಾಗಿ ನಷ್ಟದಲ್ಲಿರುವ ವಿದ್ಯುತ್ ಕಂಪನಿಗಳ ಲೆಕ್ಕ ಚುಕ್ತ ಮಾಡಲು, ಕೊಳ್ಳುವ ಖಾಸಗೀ ಕಂಪನಿಗಳಿಗೆ ಆಕರ್ಷಕವಾಗಿ ಕಾಣಲು ರಾಜ್ಯದ ಬಡ ಬೋರೇಗೌಡನ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ! ದೇಶದ ಜನಸಾಮಾನ್ಯರ ಹಿತ ಕಾಯಬೇಕಾದ ಸರ್ಕಾರಗಳು, ಕಾರ್ಪೊರೇಟ್ ಕಂಪನಿಗಳ ಹಿತಕ್ಕಾಗಿ ಶ್ರಮಿಸತೊಡಗಿದರೆ ಏನಾಗುತ್ತದೆ ಎಂಬುದಕ್ಕೆ ಈ ಹೊಸ ತಿದ್ದುಪಡಿ ವಿದ್ಯುತ್ ಮಸೂದೆ ಮತ್ತು ಅದಕ್ಕೆ ತಕ್ಕಂತೆ ಏರಿಕೆಯಾಗುತ್ತಿರುವ ವಿದ್ಯುತ್ ದರವೇ ನಿದರ್ಶನ!