ಭಾರತ ಕರೋನಾ ರೋಗಕ್ಕೆ ತುತ್ತಾದ ಪರಿಣಾಮ ದೇಶದ ಪ್ರತಿ ವರ್ಗವೂ ಸಂಕಷ್ಟಕ್ಕೆ ಸಿಲುಕಿದೆ. ಜಗತ್ತಿನಾದ್ಯಂತ ವೈರಸ್ ಹಬ್ಬಿರುವುದರಿಂದ ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೂ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ. ರೋಗ ನಿಯಂತ್ರಿಸಲು ಕಠಿಣ ಕ್ರಮಕ್ಕೆ ಮುಂದಾಗಿರುವ ಗಲ್ಫ್ ರಾಷ್ಟ್ರಗಳಲ್ಲಿ ಒಂದಾದ ಯುಎಇ ಈಗಾಗಲೇ ತಮ್ಮ ದೇಶದಲ್ಲಿರುವ ಇತರೆ ದೇಶದ ಮಂದಿಯನ್ನ ವಾಪಾಸ್ ಕರೆಸಿಕೊಳ್ಳುವಂತೆ ಸೂಚಿಸಿದೆ ಅಂತಾ ಅಲ್ಲಿನ ವೆಬ್‌ಸೈಟ್‌ವೊಂದು ವರದಿ ಮಾಡಿದೆ. ಅಲ್ಲದೇ ಯಾವುದಾದರೂ ದೇಶ ವಾಪಾಸ್ ಕರೆಸಿಕೊಳ್ಳದೇ ಇದ್ದಲ್ಲಿ ಅಂತಹ ದೇಶಗಳ ವಿರುದ್ಧ ಕಠಿಣ ನಿರ್ಧಾರ ಪ್ರಕಟಿಸುವ ಸಾಧ್ಯತೆಯೂ ಬಗ್ಗೆ ಯಎಇಯ ಮಾನವ ಸಂಪನ್ಮೂಲ ತಿಳಿಸಿರುವುದಾಗಿ ವರದಿ ಮಾಡಲಾಗಿದೆ. ಇದರಿಂದಾಗಿ ಸಹಜವಾಗಿಯೇ ಯುಎಇ ಯಲ್ಲಿರುವ 30 ಲಕ್ಷದಷ್ಟು ಭಾರತೀಯರು ಸಂಕಷ್ಟಕ್ಕೊಳಗಾಗಲಿದ್ದಾರೆ.
ಅಂತೆಯೇ ಭಾರತದ ಸಮುದ್ರಯಾನಿಗಳು ಅದೆಷ್ಟೋ ರಾಷ್ಟ್ರಗಳಲ್ಲಿ ಸಂಕಷ್ಟಕ್ಕೀಡಾಗಿದ್ದಾರೆ. ಮಾರ್ಚ್ 23 ರಂದು ಏಕಾಏಕಿ ಲಾಕ್‌ಡೌನ್ ಘೋಷಿಸಿದ ಪರಿಣಾಮ, ಏರ್‌ಪೋರ್ಟ್ ಗಳು ಮುಚ್ಚಿದ್ದು, ಸಮುದ್ರಯಾನಿಗಳನ್ನ, ಮೀನುಗಾರರನ್ನ ಸಂಕಷ್ಟಕ್ಕೀಡು ಮಾಡುತ್ತಿದೆ. ಇದರಿಂದ ವಿದೇಶಗಳಿಗೆ ತೆರಳಿದ ನೌಕೆಗಳಲ್ಲಿ ಅದೆಷ್ಟೋ ಭಾರತೀಯರು ಬಾಕಿಯಾಗಿದ್ದು, ಆಸೆಗಣ್ಣಿನಿಂದ ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಈ ರೀತಿ ವಿದೇಶಿ ಸಮುದ್ರ ದಡದಿ ದೇಶದ ಸುಮಾರು 40ಸಾವಿರ ಮಂದಿ ಭಾರತೀಯರು ದೇಶಕ್ಕೆ ಹಿಂತಿರುಗಲಾಗದೆ ಸಂಕಷ್ಟಕ್ಕೀಡಾಗಿದ್ದಾರೆ. ಇದರಲ್ಲಿ ಸರಕು ಸಾಗಿಸುವ ಕಾರ್ಗೋ ಹಾಗೂ ಐಷಾರಾಮಿ ನೌಕೆಗಳಲ್ಲಿ ದುಡಿಯುವ ಅಧಿಕಾರಿಗಳು, ಸಿಬ್ಬಂದಿಗಳು, ಮೀನುಗಾರರು ಸೇರಿದ್ದಾರೆ.
ಈ ಮಧ್ಯೆ ತಮಿಳುನಾಡು ಮೂಲದ ಶಾಂತಾ ಎಂಬ ಮಹಿಳೆಯೊಬ್ಬರು ಇರಾನ್‌ನಲ್ಲಿ ಬಾಕಿಯಾದ ತನ್ನ ಪತಿ ಸಮೇತ 860 ಮಂದಿಯನ್ನ ಸುರಕ್ಷಿತವಾಗಿ ಕರೆತರುವಂತೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಈ ರೀತಿ ಇರಾನ್ ಕಡಲತಡಿಯಲ್ಲಿ ಬಾಕಿಯಾದ ಮೀನುಗಾರರಿಗೆ ಭಾರತೀಯ ರಾಯಭಾರ ಕಚೇರಿಯಿಂದಾಗಲೀ, ಇರಾನ್ ಸರಕಾರದಿಂದಾಗಲೀ ಯಾವುದೇ ನೆರವು ಸಿಗುತ್ತಿಲ್ಲ ಅನ್ನೋದು ಶಾಂತಾ ಅವರ ದೂರು.
ʼಸೋಂಕು ಲಕ್ಷಣ ಇಲ್ಲದೇ ಇರುವವರನ್ನಷ್ಟೇ ಶೀಘ್ರದಲ್ಲಿ ಕರೆತರಲಾಗುವುದುʼ ಅನ್ನೋ ಕೇಂದ್ರ ಸರಕಾರದ ನಿರ್ಧಾರವನ್ನೂ ಶಾಂತಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಆದರೆ ಕೇಂದ್ರ ವಿದೇಶಾಂಗ ಸಚಿವಾಲಯ, ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವವರ ವಾಪಾಸ್ ಕರೆತರುವ ಪ್ರಯತ್ನ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಮಹತ್ವದ ಸಂಪರ್ಕ ಸಾಧಿಸಲು ಸಾಧ್ಯವಾಗಿದೆ ಎನ್ನುತ್ತಿದೆ.

ಆದರೆ ಭಾರತೀಯ ನೌಕೆಗಳು ವಾಪಾಸ್ ಬರಲು ಸಿದ್ಧವಾಗಿದ್ದರೂ, ಸರಕಾರದ ಲಾಕ್‌ಡೌನ್ ನಿಂದಾಗಿ ಅನುಮತಿ ನೀಡುತ್ತಿಲ್ಲ ಅಂತಾ ಗೋವಾ ಸೀಮೆನ್ ಎಸೋಸಿಯೇಶನ್ ಆಫ್ ಇಂಡಿಯಾ ಸಂಸ್ಥಾಪಕಾಧ್ಯಕ್ಷ ಡಿಕ್ಸೋನ್ ವಾಝ್ ತಿಳಿಸಿದ್ದಾರೆ.
ಹಡಗಿನಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ ಇಬ್ಬರು ಭಾರತೀಯರು:
ಆಘಾತದ ಸುದ್ದಿ ಅಂದರೆ ಈಗಾಗಲೇ ಇಬ್ಬರು ಸಮುದ್ರಯಾನಿಗಳು ತಾವಿದ್ದ ಹಡಗಿನಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾರೆ. ಭಾರತ ಸರಕಾರದ ಸಹಾಯದ ನಿರೀಕ್ಷೆಯಲ್ಲಿದ್ದವರು ಇಬ್ಬರು ಸಾವನ್ನಪ್ಪಿದದಾರೆ. ಇವರ ಸಾವಿಗೆ ಕೋವಿಡ್-19 ಸೋಂಕು ಹರಡಿರುವುದೇ ಕಾರಣವಾಗಿರಬಹುದು ಅಂತಾ ಅಂದಾಜಿಸಲಾಗಿದೆ.
ಏಪ್ರಿಲ್ 8ರ ಬುಧವಾರದಂದು ಗೋವಾ ಮೂಲದ ಯುವಕ, 30ರ ಹರೆಯದ ಗ್ಲೆನ್ ಪಿರೇರಾ ಹಡಗಿನಲ್ಲಿಯೇ ಸಾವನ್ನಪ್ಪಿದ್ದಾರೆ. ಇವರು ಮೆಕ್ಸಿಕೋದಿಂದ ಯೂರೋಪ್ ಕಡೆ ಹೊರಟಿದ್ದ ಹಡಗಿನಲ್ಲಿ ತೆರಳಿದ್ದರು. ಕರೋನಾ ಅತಿಯಾದ ಕಾರಣ ಅಟ್ಲಾಂಟಿಕ್ ಸಾಗರದಲ್ಲಿ ಹಡಗನ್ನು ನಿಲ್ಲಿಸಿದ್ದರು. ಈ ಸಂದರ್ಭ ಕುಟುಂಬಿಕರ ಜೊತೆ ಮಾತಾಡಿದ್ದ ಗ್ಲೆನ್ ಪಿರೇರಾ ಅತಿಯಾದ ಗಂಟಲು ಸೋಂಕು ಹಾಗೂ ಜ್ವರದಿಂದ ಬಳಲುತ್ತಿದ್ದರ ಬಗ್ಗೆ ಮಾಹಿತಿ ನೀಡಿದ್ದಾರೆ. ಆ ನಂತರ ಹಡಗಿನಲ್ಲಿಯೇ ಇದ್ದ ಐಸೋಲೇಶನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗ್ಲೆನ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಇನ್ನು ಏಪ್ರಿಲ್ 5 ರಂದು ಫ್ಲೋರಿಡಾದ ಮಿಯಾಮಿ ಎಂಬಲ್ಲಿ ಆಸ್ಪತ್ರೆ ದಾಖಲಾಗಿದ್ದ ಮುಂಬೈ ಮೂಲದ ಆಂಡ್ರೂ ಫೆರ್ನಾಂಡಿಸ್ ಕರೋನಾ ಸೋಂಕಿನಿಂದಾಗಿ ಶ್ವಾಸಕೋಶದ ಸಮಸ್ಯೆಗೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಉಸಿರಾಟದ ಸಮಸ್ಯೆ ಕಾಣಿಸಿಕೊಂಡಾಗಲೇ ಅವರಿಗೆ ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿತ್ತಾದರೂ ಅವರು ಬದುಕಿ ಉಳಿಯಲಿಲ್ಲ. ಇವರು ʼಕೋಸ್ಟಾ ಫಾವೋಲೋಸಾʼ ಹಡಗಿನಲ್ಲಿ ಸಹಾಯಕಯ ಭದ್ರತಾ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದರು.
ಇದರಿಂದಾಗಿ ಹಡಗುಗಳಲ್ಲಿರುವ ಬಹುತೇಕ ಮಂದಿಯನ್ನ ಐಸೋಲೇಶನ್ ವಾರ್ಡ್‌ಗಳಲ್ಲಿ ಇರಿಸಲಾಗಿದೆ. ಕರೋನಾ ಸೋಂಕು ನೌಕೆಯಲ್ಲಿದ್ದವರೆಲ್ಲರಿಗೂ ಹರಡುವ ಭೀತಿಯೂ ಅತಿಯಾಗಿದೆ. ಅದರಿಂದಾಗಿ ಹಡಗಿನಲ್ಲಿರುವ ಸಿಬ್ಬಂದಿಗಳೆಲ್ಲರನ್ನ ಐಸೋಲೇಶನ್ ವಾರ್ಡ್‌ನಲ್ಲಿ ಇರಿಸುವ ವ್ಯವಸ್ಥೆ ಮಾಡಲಾಗಿದೆ.
ಇನ್ನು ಕರೋನಾ ಸೋಂಕಿನ ಭೀಕರತೆಗೆ ನಲುಗಿರುವ ಇಟೆಲಿ ದೇಶದಲ್ಲಿ ಲಂಗರು ಹಾಕಿರುವ ಭಾರತೀಯ ಮೂಲದ ಹಡಗುವೊಂದರಲ್ಲಿ 350 ಮಂದಿ ಇದ್ದು, ಅದರಲ್ಲಿ ಸುಮಾರು 200 ರಷ್ಟು ಭಾರತೀಯರಿದ್ದಾರೆ. ಈ ಹಡಗಿನಲ್ಲಿರುವವರಲ್ಲಿ 14 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಅದರಲ್ಲಿ 4 ಮಂದಿ ಭಾರತೀಯರೂ ಇದ್ದಾರೆ. ಆದರೆ ವಿಷಾದದ ಸಂಗತಿ ಅಂದ್ರೆ ಭಾರತೀಯರನ್ನ ಹೊರತುಪಡಿಸಿ ಇನ್ನಿತರ ದೇಶದ ನಿವಾಸಿಗಳನ್ನ ಅಲ್ಲಿಂದ ಸ್ಥಳಾಂತರಗೊಳಿಸಲಾಗಿದೆ.
ಹಾಗಂತ ಏಕಾಏಕಿ ಸ್ವದೇಶಕ್ಕೆ ಭಾರತೀಯರನ್ನು ಕರೆಸಿಕೊಳ್ಳುವುದು ಒಂದು ರೀತಿಯ ಸವಾಲಿನ ಸಂಗತಿಯೇ ಸರಿ. ಏಕೆಂದರೆ ಈ ರೀತಿ ಸಮುದ್ರಯಾನದಲ್ಲಿ ಬಾಕಿಯಾದ ಸುಮಾರು 40 ಸಾವಿರ ಮಂದಿಯಲ್ಲಿ ನೂರಾರು ಜನರಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿರುವುದಾಗಿ ತಿಳಿದುಬಂದಿದೆ. ಆದ್ದರಿಂದ ಕೇಂದ್ರ ಸರಕಾರ ಏರ್‌ಲಿಫ್ಟ್ ಮೂಲಕವಾಗಲೀ, ಇಲ್ಲವೇ ಹಡಗಿನ ಆಗಮನಕ್ಕೆ ಅವಕಾಶ ನೀಡುವುದಾಗಲೀ ಅಷ್ಟು ಸುಲಭದ ಮಾತಲ್ಲ. ಆದರೂ ಕೇಂದ್ರ ಸರಕಾರ ಸಮುದ್ರ ಮಾರ್ಗದಲ್ಲಿ ಸಿಕ್ಕಿಹಾಕಿಕೊಂಡವರನ್ನು ಕರೆಸಿಕೊಳ್ಳುವ ಪ್ರಯತ್ನ ನಡೆಸುತ್ತಿದೆ.
ಇನ್ನು ದೇಶದಲ್ಲಿರುವ ಹಡಗುಗಳ ಮಾಲಿಕರು, ಸಿಬ್ಬಂದಿಗಳು ಹಾಗೂ ಸಂತ್ರಸ್ತರ ಕುಟುಂಬಿಕರು ಪ್ರಧಾನ ಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ. ಎಪ್ರಿಲ್ 14 ರಂದು ಕೊನೆಗೊಳ್ಳುವ ಲಾಕ್‌ಡೌನ್ ನಂತರ ಭಾರತೀಯ ಮೀನುಗಾರರನ್ನ, ನೌಕಾ ಸಿಬ್ಬಂದಿಗಳನ್ನು ವಾಪಾಸ್ ಬರುವಂತಾಗಲು ಅವಕಾಶ ನೀಡಬೇಕೆಂದು ಕೋರಿದ್ದಾರೆ. ಇದೆಲ್ಲಕ್ಕೆ ನಾಳೆ ಬೆಳಿಗ್ಗೆ 10 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ನರೇಂದ್ರ ಮೋದಿ ಯಾವ ರೀತಿ ಉತ್ತರ ಕೊಡುತ್ತಾರೆ ಅನ್ನೋದು ಕಾದು ನೋಡಬೇಕಿದೆ.