ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿದೆ. ನಾಯಕತ್ವ ಬದಲಾವಣೆ ಎನ್ನುವುದೆಲ್ಲ ಮಾಧ್ಯಮ ಸೃಷ್ಟಿ, ಯಡಿಯೂರಪ್ಪ ಅವರೇ ಮುಂದಿನ ಎರಡೂವರೆ ವರ್ಷಕ್ಕೂ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಶಿವಮೊಗ್ಗದಲ್ಲಿ ನಡೆದ ರಾಜ್ಯ ಬಿಜೆಪಿ ಪ್ರಮುಖರ ಸಭೆ ಈವರೆಗಿನ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಯತ್ನ ನಡೆಸಿತ್ತು.
ಆದರೆ, ಒಳಗೆ ಹೆಗ್ಗಣ ಬಿಟ್ಟು ಮೇಲೆ ಕುಳಿ ಮುಚ್ಚುವ ತಿಪ್ಪೇಸಾರಿಸುವ ಯತ್ನಗಳು ಅವು ಎಂಬುದು ಬಯಲಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಶಿವಮೊಗ್ಗ ಸಭೆ ಮುಗಿದ ಎರಡು ದಿನದಲ್ಲೇ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಬಜೆಟ್ ಪೂರ್ವಭಾವಿ ಸಮಾಲೋಚನೆಯ ಭಾಗವಾಗಿ ಶಾಸಕರೊಂದಿಗೆ ನಡೆಸಿದ ಸಭೆಯಲ್ಲಿ ಸಿಎಂ ಮತ್ತು ಸಿಎಂ ಪುತ್ರರ ಕುಟುಂಬ ರಾಜಕಾರಣದ ವಿರುದ್ಧ ಆಕ್ರೋಶ ಸ್ಫೋಟಗೊಂಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸೋಮವಾರ ಬೆಂಗಳೂರಿನಲ್ಲಿ ನಡೆದ ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಮತ್ತು ಕರಾವಳಿ ಕರ್ನಾಟಕ ಭಾಗದ ಸಭೆಯಲ್ಲಿ ಈ ಆಕ್ರೋಶ ಭುಗಿಲೆದ್ದಿದ್ದು, ಮುಖ್ಯವಾಗಿ ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ ನಾವು ಸಿಎಂ ಪುತ್ರ ವಿಜಯೇಂದ್ರ ಅವರ ಮನೆ ಬಾಗಿಲಿಗೆ ಅಲೆಯಬೇಕು. ಸ್ವತಃ ಸಿಎಂ ಅನುಮೋದನೆ ನೀಡಿ, ಸಹಿ ಹಾಕಿದರೂ ಅವರ ಪುತ್ರರ ಅನುಮತಿ ಇಲ್ಲದೇ ಹೋದರೆ ಆ ಕಡತಗಳು ಮೂಲೆ ಗುಂಪಾಗುತ್ತಿವೆ. ಶಾಸಕರಾಗಿ ನಾವು ಸಿಎಂ ಅವರನ್ನು ಭೇಟಿಯಾಗಿ ನಮ್ಮ ನಮ್ಮ ಕ್ಷೇತ್ರಗಳ ಕೆಲಸಕಾರ್ಯಗಳ ಬಗ್ಗೆ ಚರ್ಚಿಸುವುದೋ ಅಥವಾ ಅವರ ಮಗನ ಮುಂದೆ ಅಂಗಾಲಾಚುವುದೋ ಎಂದು ಶಾಸಕರು ಸಿಎಂ ಯಡಿಯೂರಪ್ಪ ಅವರನ್ನೇ ನೇರವಾಗಿ ಪ್ರಶ್ನಿಸಿದ್ದಾರೆ.
ಅದರಲ್ಲೂ, ಮುಖ್ಯವಾಗಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿದ ಆರಂಭದಿಂದಲೇ ಯಡಿಯೂರಪ್ಪ ಪಾಲಿನ ಅಸಲೀ ಪ್ರತಿಪಕ್ಷದಂತೆ ಇರುವ ಬಿಜೆಪಿ ಹಿರಿಯ ನಾಯಕರಾದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಉಮೇಶ್ ಕತ್ತಿ ಅವರು ನೇರವಾಗಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರ ಹೆಸರು ಪ್ರಸ್ತಾಪಿಸಿಯೇ ದಾಳಿ ನಡೆಸಿದರು. “ನಾನು ಶಾಸಕನಾಗಿ, ಸಿಎಂ ಆದ ನಿಮ್ಮ ಬಳಿ ನನ್ನ ಕ್ಷೇತ್ರದ ಕುರಿತು ಮಾತನಾಡಬೇಕೆ ವಿನಃ ನಿಮ್ಮ ಮಗ ವಿಜಯೇಂದ್ರ ಬಳಿಯಲ್ಲ. ಅವರ ಬಳಿ ನಾನೇಕೆ ಮಾತನಾಡಬೇಕು? ಎಲ್ಲ ವಿಚಾರಗಳಿಗೂ ನಿಮ್ಮ ಮಗನ ಮಾತೇ ಅಂತಿಮವಾಗುವುದಾದರೆ ಹಲವು ದಶಕಗಳಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಪಾಡೇನು” ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.

ನಿಮ್ಮ ಕುಟುಂಬದ ಹಸ್ತಕ್ಷೇಪದಿಂದಾಗಿ ನನ್ನ ಕ್ಷೇತ್ರದಲ್ಲಿ ಯಾವುದೇ ಕೆಲಸ ನಡೆಯುತ್ತಿಲ್ಲ. ನಾನು ಅಭಿವೃದ್ಧಿ ಕಾರ್ಯಗಳಿಗೆ ಸಬಂಧಿಸಿದಂತೆ ನೀಡಿದ ಹತ್ತಾರು ಮನವಿ ಪತ್ರಗಳಿಗೆ ನೀವು ಸಹಿ ಮಾಡಿದ್ದೀರಿ. ಆದರೆ, ಅವು ಕಡತದಲ್ಲಿಯೇ ಉಳಿದಿವೆ, ವಿನಃ ಪ್ರಗತಿಕಂಡಿಲ್ಲ. ಇದಕ್ಕೆ ನಿಮ್ಮ ಪುತ್ರರೇ ಕಾರಣ. ಅವರು ನನ್ನ ಮೇಲಿನ ಕೋಪಕ್ಕೆ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ತಡೆಹಿಡಿಯುತ್ತಿದ್ದಾರೆ. ನೀವು ಕೂಡ ಹಲವು ಬಾರಿ ನಿಮ್ಮ ಪುತ್ರರ ಜೊತೆ ಮಾತನಾಡುವಂತೆ ಹೇಳಿದ್ದೀರಿ. ಆದರೆ, ನಾನು ಶಾಸಕರನಾಗಿ ನಿಮ್ಮ ಬಳಿ ಮಾತನಾಡುತ್ತೇನೆ. ನಿಮ್ಮ ಪುತ್ರರ ಬಳಿ ಯಾಕೆ ಮಾತನಾಡಬೇಕು ಎಂದು ಯತ್ನಾಳ ಆಕ್ರೋಶದಿಂದ ಕೇಳಿದರು. ಯತ್ನಾಳ್ ಅವರ ಈ ನೇರಾನೇರಾ ಆಕ್ರೋಶ ಸಿಎಂ ಯಡಿಯೂರಪ್ಪ ಅವರನ್ನು ಕೆರಳಿಸಿತು.
ಆ ವೇಳೆ, ಸಿಎಂ ಯಡಿಯೂರಪ್ಪ, “ನಮ್ಮ ಎಲ್ಲಾ ಸಚಿವರು, ಉಸ್ತುವಾರಿ ಸಚಿವರಿಗೆ ಶಾಸಕರೊಂದಿಗೆ ಚರ್ಚಿಸಿ ಯೋಜನೆಗಳನ್ನು ಅಂತಿಮಗೊಳಿಸಲು ಸೂಚಿಸುವೆ. ನಿಮಗೆ ಆಗಲೂ ಸಮಾಧಾನವಾಗದೇ ಇದ್ದರೆ, ನೀವು ನೇರವಾಗಿ ನನ್ನನ್ನು ಕೃಷ್ಣಾ ಅಥವಾ ಕಾವೇರಿಯಲ್ಲಿ ಭೇಟಿಮಾಡಬಹುದು. ಅಲ್ಲಿ ನಿಮ್ಮನ್ನು ಯಾರೂ ತಡೆಯುವುದಿಲ್ಲ. ಅದು ಬಿಟ್ಟು ನೀವು ಬೆಂಗಳೂರಿನಲ್ಲಿ ಒಂದು, ವಿಜಯಪುರದಲ್ಲಿ ಒಂದು ಹೇಳಿಕೆ ಕೊಡುತ್ತಿರುವುದು ಸರಿಯಲ್ಲ. ಅಂತಹ ವರ್ತನೆ ಪಕ್ಷ ಮತ್ತು ಸರ್ಕಾರಕ್ಕೆ ಹಾನಿಮಾಡುತ್ತದೆ” ಎಂದರು. ಆದರೆ, ಯಡಿಯೂರಪ್ಪ ಅವರ ಆ ಮಾತಿಗೆ ತಿರುಗೇಟು ನೀಡಿದ ಯತ್ನಾಳ್, “ಪಕ್ಷಕ್ಕೆ ಹಾನಿ ಯಾರಿಂದ ಆಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ನಮ್ಮ ಬಾಯಿ ಮುಚ್ಚಿಸುವುದು ಬೇಡ. ನಮ್ಮ ಅಭಿಪ್ರಾಯ ಹೇಳಿಕೊಳ್ಳಲು ಇದೊಂದೇ ವೇದಿಕೆ” ಎಂದರು. ಆ ವೇಳೆ ಸಭೆಯಲ್ಲಿದ್ದ ಮತ್ತೊಬ್ಬ ಹಿರಿಯ ನಾಯಕ ಹಾಗೂ ಶಾಸಕ ಉಮೇಶ್ ಕತ್ತಿ, ಸಿಎಂ ಪುತ್ರರ ಆಡಳಿತ ಹಸ್ತಕ್ಷೇಪ ಮತ್ತು ಶಾಸಕರ ಕ್ಷೇತ್ರಗಳ ಅಭಿವೃದ್ಧಿಯ ಮೇಲೆ ಅದು ಬೀರುತ್ತಿರುವ ಪರಿಣಾಮಗಳನ್ನು ವಿವರಿಸಿದರು ಎಂದು ವರದಿಗಳು ಹೇಳಿವೆ.

ಉತ್ತರ ಕರ್ನಾಟಕದ ಇಬ್ಬರು ಹಿರಿಯ ಬಿಜೆಪಿ ನಾಯಕರು ಹೀಗೆ ಸಿಎಂ ಮತ್ತು ಅವರ ಪುತ್ರರ ವಿರುದ್ಧ ಶಾಸಕರ ಸಭೆಯಲ್ಲಿ ನೇರ ವಾಗ್ದಾಳಿ ನಡೆಸುತ್ತಿರುವ ನಡುವೆಯೇ, ಶಾಸಕರ ಅತೃಪ್ತಿಯ ಬಗ್ಗೆ ಪ್ರಸ್ತಾಪಿಸಿದ ಸರ್ಕಾರದ ಮುಖ್ಯ ಸಚೇತಕ ಸುನೀಲ್ ಕುಮಾರ್, “ನಮ್ಮದೇ ಸರ್ಕಾರವಿದ್ದರೂ ನಮ್ಮ ಕ್ಷೇತ್ರಗಳಲ್ಲಿ ಯಾವ ಕೆಲಸವೂ ನಡೆಯುತ್ತಿಲ್ಲ. ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧಿಕಾರಿಗಳು ಕೂಡ ಶಾಸಕರಿಗೆ ಸ್ಪಂದಿಸುತ್ತಿಲ್ಲ. ಆ ಕಾರಣಕ್ಕಾಗಿಯೇ ನಾನು ಈ ಹಿಂದೆ ಪಕ್ಷದ ಅಧ್ಯಕ್ಷರಿಗೆ ಪತ್ರ ಬರೆದಿದ್ದೆ” ಎಂದು ತಮ್ಮ ಹಿಂದಿನ ಪತ್ರ ಚಳವಳಿಯ ಹಿಂದಿನ ಕಾರಣ ಬಿಚ್ಚಿಟ್ಟರು.
ಅಲ್ಲದೆ, ”ಇದು ನನ್ನ ಒಬ್ಬನ ಅಭಿಪ್ರಾಯವೇನಲ್ಲ. ಇಲ್ಲಿರುವ ಬಹುತೇಕ ಎಲ್ಲಾ ಶಾಸಕರ ಅಭಿಪ್ರಾಯವೂ ಇದೇ ಆಗಿದೆ. ಕರಾವಳಿ ಭಾಗವಂತೂ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ನಾವೇನೂ ಅನುದಾನ ಕೇಳಲ್ಲ. ಬದಲಾಗಿ ಕನಿಷ್ಟ ನಮ್ಮ ಭಾಗದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲೂ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಅದು ಡೀಮ್ಡ್ ಫಾರೆಸ್ಟ್ ಇರಬಹುದು, ಪ್ರತ್ಯೇಕ ಮರಳು ನೀತಿ ಇರಬಹುದು, ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಸಮಸ್ಯೆಗಳಿರಬಹುದು, ನಿತ್ಯ ಜನಸಾಮಾನ್ಯರ ಬದುಕಿಗೆ ಸಂಬಂಧಿಸಿದ ಇಂತಹ ವಿಷಯಗಳಲ್ಲೂ ನಮ್ಮ ಅಹವಾಲನ್ನು ಕೇಳುವವರಿಲ್ಲ” ಎಂದು ಸುನೀಲ್ ಕುಮಾರ್ ಎಲ್ಲಾ ಶಾಸಕರ ಪರವಾಗಿ ಮುಖ್ಯಮಂತ್ರಿಗಳ ವಿರುದ್ದ ತೀವ್ರ ಅಸಮಾಧಾನ ಹೊರಹಾಕಿದರು.
ಸೋಮವಾರದ ಈ ಸಭೆಯ ಬೆಳವಣಿಗೆ, ಶಾಸಕರ ಕ್ಷೇತ್ರಗಳಿಗೆ ಅನುದಾನ ಕೊರತೆ, ಅಭಿವೃದ್ದಿ ಹಿನ್ನಡೆ, ಅಧಿಕಾರಿಗಳ ಸ್ಪಂದನೆ, ತಮಗೆ ಬೇಕಾದ ಅಧಿಕಾರಿಗಳನ್ನು ಕ್ಷೇತ್ರಗಳಿಗೆ ಹಾಕಿಕೊಡುತ್ತಿಲ್ಲ ಎಂಬ ವಿಷಯಗಳಿಗೆ ಮಾತ್ರ ಸೀಮಿತವಾದಂತೆ ಮೇಲ್ನೋಟಕ್ಕೆ ಕಂಡುಬಂದರೂ, ವಾಸ್ತವವಾಗಿ ಈ ಆಕ್ರೋಶ, ವಾಗ್ವಾದದ ಹಿಂದಿನ ಅಸಲೀ ಕಾರಣ ಬೇರೆಯೇ ಇತ್ತು. ಶಿವಮೊಗ್ಗದಲ್ಲಿ ನಡೆದ ಪ್ರಮುಖರ ಸಭೆಯಲ್ಲಿ ದೆಹಲಿಯಿಂದ ಆಗಮಿಸಿದ್ದ ನಾಯಕರ ಎದುರು ಎಲ್ಲರೂ ಕೈಕೈ ಮಿಲಾಯಿಸಿ, ಪಕ್ಷದಲ್ಲಿ ಎಲ್ಲಾ ಸರಿಯಾಗಿದೆ. ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂಬ ಚಿತ್ರಣ ನೀಡಿದ್ದು ಸಹಜವಾಗೇ ಯಡಿಯೂರಪ್ಪ ವಿರೋಧಿ ಬಣದಲ್ಲಿ ತೀವ್ರ ಇರಿಸುಮುರಿಸಿಗೆ ಕಾರಣವಾಗಿದೆ. ಮುಖ್ಯಮಂತ್ರಿಗಳಿಗಿಂತ ಅವರ ಪುತ್ರ ವಿಜಯೇಂದ್ರ ಅವರ ಮುಂದೆ ಪಕ್ಷಕ್ಕಾಗಿ ದಶಕಗಳ ಕಾಲ ದುಡಿದವರು, ಸಚಿವರಾಗಿ, ಶಾಸಕರಾಗಿ ನಾಲ್ಕಾರು ಅವಧಿ ಕೆಲಸ ಮಾಡಿದವರು ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಇರುವಾಗ, ನಾವು ನಾಲ್ಕು ಜನ ನಾಯಕರ ಖುಷಿಗಾಗಿ ಎಲ್ಲವನ್ನೂ ನುಂಗಿಕೊಂಡು ಹೋಗಬೇಕೆ ಎಂಬ ಪ್ರಶ್ನೆ ಭುಗಿಲೆದ್ದಿದೆ.
ಅಂತಹ ಆಕ್ರೋಶದ ಮೊದಲ ಬಹಿರಂಗ ಪ್ರದರ್ಶನ ಸೋಮವಾರದ ಈ ಸಭೆಯಲ್ಲಿ ಆಗಿದೆ. ಮಂಗಳವಾರ ಕೂಡ ಸಿಎಂ ಕರೆದಿರುವ ಹಳೇ ಮೈಸೂರು ಮತ್ತು ಮಲೆನಾಡು ಭಾಗದ 16 ಜಿಲ್ಲೆಗಳ ಶಾಸಕರ ಸಭೆಯಲ್ಲಿ ಇದು ಪುನರಾವರ್ತನೆಯಾಗುವ ಸಂಭವ ಹೆಚ್ಚಿದೆ ಎನ್ನಲಾಗಿದೆ.
ಒಟ್ಟಾರೆ, ಎಲ್ಲವೂ ಸರಿ ಇದೆ ಎಂದು ಬಿಂಬಿಸಲು ಯತ್ನಿಸುತ್ತಿರುವ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಮತ್ತೆ ಧುತ್ತನೇ ಬೇಗುದಿಯ ಜ್ವಾಲಾಮುಖಿ ಸ್ಫೋಟಿಸಿದೆ. ಅದರಲ್ಲೂ ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ವಿರುದ್ಧ ಆಡಳಿತ ಹಸ್ತಕ್ಷೇಪದ ಕುರಿತು ಇದೇ ಮೊದಲ ಬಾರಿಗೆ ಸಾಮೂಹಿಕ ಆಕ್ರೋಶ ವ್ಯಕ್ತವಾಗಿದೆ. ಸಿಎಂ ಯಡಿಯೂರಪ್ಪ ಮತ್ತು ಅವರ ಬೆಂಬಲಿಗ ಬಣ ಈ ಬಿಕ್ಕಟ್ಟನ್ನು ಹೇಗೆ ನಿಭಾಯಿಸಲಿದೆ ಎಂಬುದನ್ನು ಕಾದುನೋಡಬೇಕಿದೆ!