ವಾಯು ಮಾಲಿನ್ಯಕ್ಕೂ ಕೋವಿಡ್ ಸಾವುಗಳಿಗೂ ಸಂಬಂಧವಿದೆಯೇ ಎಂಬ ಪ್ರಶ್ನೆ ಹಿಂದಿನಿಂದಲೂ ಕಾಡುತ್ತಲೇ ಬಂದಿರುವಂತದ್ದು. ಇದೇ ಪ್ರಶ್ನೆಯನ್ನು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ (NGT) ಕೇಳಿದ್ದಕ್ಕೆ ಹೌದು ಎಂಬ ಉತ್ತರ ದೊರೆತಿದೆ. ಅದರಲ್ಲೂ ವಿಶ್ವದಾದ್ಯಂತ ಸುಮಾರು 15 ಶೇಕಡದಷ್ಟು ಕೋವಿಡ್‌ನಿಂದ ಉಂಟಾದ ಸಾವುಗಳಿಗೆ ವಾಯು ಮಾಲಿನ್ಯವೇ ಕಾರಣ ಎಂದು NGTಗೆ ಮಾಹಿತಿ ನೀಡಲಾಗಿದೆ.
NGTಯ ಮುಖ್ಯಸ್ಥ ಜಸ್ಟೀಸ್ ಎ ಕೆ ಗೋಯೆಲ್ ಅವರ ನೇತೃತ್ವದ ಪೀಠಕ್ಕೆ ಮಾಹಿತಿ ನೀಡಿದ, ಹಿರಿಯ ವಕೀಲರಾದ ರಾಜ್ ಪಂಜವಾನಿ ಹಾಗೂ ಶಿಬಾಣಿ ಘೋಷ್ ಅವರಿದ್ದ ಅಮಿಕಸ್ ಕ್ಯೂರಿ ಸಮಿತಿಯು ವಾಯು ಮಾಲಿನ್ಯಕ್ಕೂ ಕೋವಿಡ್ ಸಾವುಗಳಿಗೂ ನೇರ ಸಂಬಂಧವಿದೆ ಎಂದು ಹೇಳಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
“ಇತ್ತೀಚಿನ ಸಂಶೋಧನೆಗಳ ಪ್ರಕಾರ ವಾಯು ಮಾಲಿನ್ಯಕ್ಕೆ ಹೆಚ್ಚಾಗಿ ತೆರೆದುಕೊಳ್ಳುವ ಜನರು ಕೋವಿಡ್ ಸೋಂಕಿಗೆ ತುತ್ತಾದರೆ, ಅದರಿಂದ ಸಾವು ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ. ಜಗತ್ತಿನ 15 ಶೇಕಡಾ ಕೋವಿಡ್ ಸಾವುಗಳಿಗೆ ವಾಯು ಮಾಲಿನ್ಯವೇ ಕಾರಣ,” ಎಂದು ಸಮಿತಿ ಹೇಳಿದೆ.
ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಿರುವ ವಿರುದ್ದ ಕೋರ್ಟ್ ಮೆಟ್ಟಿಲೇರಿದ್ದ ಪಟಾಕಿ ತಯಾರಕರ ಪರವಾಗಿ ವಾದಿಸಿದ ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ, ಕೋವಿಡ್ ಸಾವುಗಳಗೂ ವಾಯು ಮಾಲಿನ್ಯಕ್ಕೂ ಸಂಬಂಧವಿರುವುದರ ಕುರಿತಾಗಿ ಯಾವುದೇ ಸ್ಪಷ್ಟವಾದ ಮಾಹಿತಿಗಳಿಲ್ಲ, ಎಂದು ವಾದಿಸಿದ್ದರು.
ಪರಿಸರ ಸಚಿವಾಲಯದ ಪರವಾಗಿ ಹಾಜರಾಗಿದ್ದ ವಕೀಲ ಬಾಲೆಂದು ಶೇಖರ್ ಅವರು, “ವಾಯು ಮಾಲಿನ್ಯದಿಂದ ಕೋವಿಡ್ ಸಾವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿರುವ ಕುರಿತು ಯಾವುದೇ ನಿಖರ ಮಾಹಿತಿ ನಮ್ಮ ಬಳಿ ಇಲ್ಲ. ಈ ವಿಚಾರದಲ್ಲಿ ಮಾಹಿತಿಯನ್ನು ನೀಡಲು ಕೇಂದ್ರ ಆರೋಗ್ಯ ಮತ್ತು ಭೂ ವಿಜ್ಞಾನ ಇಲಾಖೆಗೆ ಪತ್ರವನ್ನು ಬರೆಯಲಾಗಿದೆ,” ಎಂದು ಹೇಳಿದ್ದಾರೆ.
ಈ ಪ್ರಕರಣದ ಕುರಿತು ನವೆಂಬರ್ 9ರಂದು ತೀರ್ಪು ನIಡಲಾಗುವುದು ಎಂದು ಜಸ್ಟೀಸ್ ಎ ಕೆ ಗೋಯೆಲ್ ತಿಳಿಸಿದ್ದಾರೆ.

ಪಟಾಕಿ ರಹಿತ ದೀಪಾವಳಿ ಆಚರಿಸಲು ದೆಹಲಿ ಸಿಎಂ ಮನವಿ
ದೇಶದಲ್ಲಿ ವಾಯು ಮಾಲಿನ್ಯದಿಂದ ಅತೀ ಹೆಚ್ಚು ಕಂಗೆಟ್ಟಿರುವ ರಾಜ್ಯವೆಂದರೆ ದೆಹಲಿ. ಕಳೆದೆರಡು ವರ್ಷಗಳಿಂದ ದೆಹಲಿಯಲ್ಲಿನ ಗಾಳಿಯ ಗುಣಮಟ್ಟ ಗಣನೀಯವಾಗಿ ಕುಸಿತ ಕಂಡಿದೆ. ಲಾಕ್‌ಡೌನ್ ಸಮಯದಲ್ಲಿ ಸುಧಾರಿಸಿದ್ದ ಗಾಳಿಯ ಗುಣಮಟ್ಟ ಲಾಕ್‌ಡೌನ್ ನಂತರ ಮತ್ತೆ ಹದೆಗೆಟ್ಟಿದೆ. ಈ ಸಂದರ್ಭದಲ್ಲಿ ಈ ಬಾರಿಯ ದೀಪಾವಳಿಯನ್ನು ಪಟಾಕಿ ರಹಿತವಾಗಿ ಆಚರಿಸಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ.
“ಕಳೆದ ವರ್ಷದಂತೆಯೇ ಈ ವರ್ಷವೂ ಪಟಾಕಿ ಆಚರಿಸುವುದನ್ನು ಕಡಿಮೆ ಮಾಡಲು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ. ಈ ಬಾರಿ ದೀಪಾವಳಿಯಂದು ಲಕ್ಷ್ಮಿ ಪೂಜೆಯನ್ನು ಸಂಜೆ 7.39ಕ್ಕೆ ಸರಿಯಾಗಿ ಆರಂಭಿಸಲಾಗುವುದು. ಪ್ರತಿಯೊಬ್ಬರU ತಮ್ಮ ಮನೆಯಲ್ಲಿಯೇ ಕುಳಿತು ಧಾರ್ಮಿಕ ವಿಧಿ ವಿಧಾನಗಳನ್ನು ಆಚರಿಸಬೇಕು. ಹೊರಗೆ ಹೋಗಿ ಪಟಾಕಿ ಹೊಡೆಯುವುದನ್ನು ತ್ಯಜಿಸಬೇಕು,” ಎಂದು ಮನವಿ ಮಾಡಿದ್ದಾರೆ.
ಕೇವಲ ದೆಹಲಿ ಮಾತ್ರವಲ್ಲದೇ ರಾಜಸ್ಥಾನ, ಹರ್ಯಾಣ, ಒಡಿಶಾ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳು ಕೂಡಾ ತಮ್ಮ ತಮ್ಮ ರಾಜ್ಯಗಳಲ್ಲಿ ಕೋವಿಡ್‌ನ ಕಾರಣದಿಂದ ಪಟಾಕಿ ಸಿಡಿಸುವುದನ್ನು ನಿಷೇಧಿಸಲು ಚಿಂತನೆ ನಡೆಸಿವೆ.
ಕರ್ನಾಟಕದಲ್ಲಿಯೂ ಪಟಾಕಿ ಮಾರಾಟಕ್ಕೆ ನಿಯಮಾವಳಿ
ಕೋವಿಡ್ ಸಂಕಷ್ಟದ ನಡುವೆ ದೀಪಾವಳಿ ಹಬ್ಬದ ತಯಾರಿಯಾಗಿ ಪಟಾಕಿ ಮಾರಾಟಕ್ಕೆ ಸರ್ಕಾರ ನಿಯಮಾವಳಿಗಳನ್ನು ರೂಪಿಸಿದೆ. ನವೆಂಬರ್ 1ರಿಂದ 17ರವರೆಗೆ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದ್ದು, ಕೋವಿಡ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.
Also Read: ದೀಪಾವಳಿ ಪಟಾಕಿ ಮಾರಾಟದ ಮೇಲೂ ಕೋವಿಡ್ ಕರಿ ನೆರಳು
ಪಟಾಕಿ ಮಾರಾಟ ಮಾಡಲಿಚ್ಚಿಸುವವರು ಇತರ ವಾಣಿಜ್ಯ ಮತ್ತು ವಸತಿ ಪ್ರದೇಶಗಳಿಂದ ದೂರದಲ್ಲಿ ತಮ್ಮ ಅಂಗಡಿಗಲನ್ನು ಕಟ್ಟಿಕೊಳ್ಳಬೇಕು. ಅಧಿಕೃತ ಮಾರಾಟಗಾರರಿಗೆ ಮಾತ್ರ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗುವುದು. ಪಟಾಕಿ ಮಾರಾಟ ಮಾಡಲು ಬಯಸುವವರು, ಸಂಬಂಧಿತ ಅಧಿಕಾರಿಗಳಿಂದ ಪರವಾನಿಗೆಯನ್ನು ಪಡೆದಿರಬೇಕು ಹಾಗೂ ಆ ಪರವಾನಿಗೆಯನ್ನು ತಮ್ಮ ಅಂಗಡಿಯಲ್ಲಿ ಸಾರ್ವಜನಿಕರಿಗೆ ಕಾಣಿಸುವಂತೆ ಇಡಬೇಕು, ಎಂದು ಸರ್ಕಾರವು ಆದೇಶ ನೀಡಿದೆ.