ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳನ್ನು ಬಂಧಿಸಲು ಸಾಕ್ಷ್ಯ ಎನ್ನಲಾದ ಪತ್ರಗಳನ್ನು ಇಸ್ರೇಲಿನ ಸೈಬರ್ ಸ್ಪೈವೇರ್ ಮೊಬೈಲು, ಕಂಪ್ಯೂಟರುಗಳಲ್ಲಿ ಇರಿಸಿರುವ ಸಂಶಯ ಮೂಡುತ್ತಿದೆ. ಪತ್ರಕರ್ತರು, ದಲಿತ ಮುಖಂಡರು, ಮಾನವ ಹಕ್ಕು ಹೋರಾಟಗಾರರ ಮೊಬೈಲುಗಳ ಗೂಢಚಾರಣೆ ಮಾಡಲಾಗಿದೆ ಎಂದು ಫೇಸ್ ಬುಕ್ ಆಡಳಿತ ಹೇಳಿದೆ.
ವಾಟ್ಸಪ್ ಮೂಲಕ ಸ್ಪೈವೇರ್ ಸಂದೇಶ ಕಳುಹಿಸಿ ದೇಶ ವಿದೇಶಗಳ 1,400 ಮಂದಿಯ ಮಾಹಿತಿಗಳನ್ನು ಸರಕಾರದ ಪರವಾಗಿ ಸಂಗ್ರಹಿಸಲಾಗಿದೆ ಎಂದು ಫೇಸ್ ಬುಕ್ ಅಮೆರಿಕಾದ ಕ್ಯಾಲಿಫೋರ್ನಿಯ ನ್ಯಾಯಾಲಯದಲ್ಲಿ ದಾವೆ ಹೂಡಿದೆ. ಇಸ್ರೇಲ್ ದೇಶದ NSO GROUP TECHNOLOGIES LIMITED ಮತ್ತದರ ಮಾತೃ ಸಂಸ್ಥೆ Q CYBER TECHNOLOGIES LIMITED ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಪ್ರಕರಣ ದಾಖಲಾಗುವುದರೊಂದಿಗೆ ಫೇಸ್ ಬುಕ್ ಕಂಪೆನಿಗೆ ಸೇರಿದ ವಾಟ್ಸಪ್ ಸೋಶಿಯಲ್ ಮಿಡಿಯಾ ಅಪ್ಲಿಕೇಶನ್ ಬಳಕೆ ಮಾಡುವ ನೂರಕ್ಕೂ ಹೆಚ್ಚು ಮಂದಿ ಪತ್ರಕರ್ತರು, ದಲಿತ ಮುಖಂಡರು, ಮಾನವ ಹಕ್ಕು ಹೋರಾಟಗಾರರ ಬಗ್ಗೆ ಗೂಢಚರ್ಯೆ ನಡೆಸಲಾಗಿತ್ತು ಎಂಬುದನ್ನು ಫೇಸ್ ಬುಕ್ ಖಚಿತ ಪಡಿಸಿದೆ. ಈ ಪಟ್ಟಿಯಲ್ಲಿ ಭಾರತದವರೂ ಸೇರಿದ್ದಾರೆ. ಈ ಮಧ್ಯೆ, ಸೈಬರ್ ಗೂಢಚರ್ಯೆ ಬಗ್ಗೆ ಮಾಹಿತಿ ನೀಡುವಂತೆ ಕೇಂದ್ರ ಸರಕಾರದ ಮಾಹಿತಿ ತಂತ್ರಜ್ಞಾನ ಇಲಾಖೆ ವಾಟ್ಸಪ್ ಕಂಪೆನಿಗೆ ಪತ್ರ ಬರೆದಿದೆ ಎಂದು ಸರಕಾರದ ಹಿರಿಯ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.
ಎನ್ಎಸ್ಓ ಗ್ರೂಪ್ ಸಿದ್ಧಪಡಿಸಿದ ಪೆಗಾಸಸ್ ಎಂಬ ಹೆಸರಿನ ಸ್ಪೈವೇರ್ ಉಪಯೋಗಿಸಿ ವಿಶ್ವದ ಹಲವು ದೇಶಗಳ ಸರಕಾರಗಳು ತಮ್ಮ ವಿರೋಧಿಗಳು, ರಾಯಭಾರಿಗಳು, ಹಿರಿಯ ಅಧಿಕಾರಿಗಳು, ಪತ್ರಕರ್ತರ ವಿರುದ್ಧ ಗೂಡಚರ್ಯೆ ನಡೆಸಲಾಗುತ್ತಿರುವುದು ಇದೀಗ ಇನ್ನಷ್ಟು ಖಚಿತವಾಗುತ್ತಿದೆ. ಭಾರತದ ಕೆಲವು ಮಂದಿ ಪತ್ರಕರ್ತರು, ನಾಗರಿಕ ಹಕ್ಕುಗಳ ಹೋರಾಟಗಾರರು ಈ ಸೈಬರ್ ಗೂಢಚರ್ಯೆಯ ಬಲಿಪಶುಗಳು ಆಗಿದ್ದಾರೆ. ಅವರ ಹೆಸರು ಮತ್ತು ನಂಬರುಗಳನ್ನು ಬಹಿರಂಗ ಪಡಿಸಲಾಗುವುದಿಲ್ಲ ಎಂದು ವಾಟ್ಸಪ್ ವಕ್ತಾರರು ಭಾರತದ ಮಾಧ್ಯಮ ಸಂಸ್ಥೆಗೆ ಖಚಿತ ಪಡಿಸಿದ್ದಾರೆ.
Pegasus ಎಂಬ ಹೆಸರಿನಲ್ಲಿ ಕರೆಯಲಾಗುವ ಸ್ಪೈವೇರ್ ಗ್ರಾಹಕನಿಗೆ ಗೊತ್ತಿಲ್ಲದೆ ತಮ್ಮ ಸ್ಮಾರ್ಟ್ ಫೋನುಗಳಲ್ಲಿ Install ಆಗುತ್ತದೆ. ಆದ ನಂತರ ಗೂಢಚರ್ಯೆ ನಡೆಸುವ ಸಂಸ್ಥೆಯು ಆ ಮೊಬೈಲ್ ಫೋನಿನಲ್ಲಿ ಇರುವ ಪಾಸ್ ವರ್ಡ್, ಕಾಂಟಾಕ್ಟ್, ಕ್ಯಾಲೆಂಡರ್ ಇವೆಂಟ್, ಟೆಕ್ಸ್ಟ್ ಸಂದೇಶ ಇತ್ಯಾದಿ ಎಲ್ಲ ಖಾಸಗಿ ಮಾಹಿತಿ ಪಡೆಯುತ್ತದೆ. ಮಾತ್ರವಲ್ಲದೆ, ಮೊಬೈಲಿನ ಕ್ಯಾಮರಾ ಮತ್ತು ಮೈಕ್ರೋಫೋನ್ ಬಳಸಿ ಇನ್ನಿತರ ಮಾಹಿತಿಯನ್ನು ಕೂಡ ಸಂಗ್ರಹಿಸಬಹುದಾಗಿದೆ. ಒಂದು ಆಕರ್ಷಕವಾದ ಟೆಕ್ಸ್ಟ್ ಸಂದೇಶದ ಮೂಲಕ ಈ ಸ್ಪೈ ವೇರ್ ಕಳುಹಿಸಲಾಗುತ್ತದೆ. ಸಂದೇಶವನ್ನು ಓಪನ್ ಮಾಡಿದಾಗ ಅದು ಮೊಬೈಲಿನಲ್ಲಿ ಸೇರಿಕೊಳ್ಳುತ್ತದೆ.
ಮೊಬೈಲ್ ಸಂದೇಶಗಳು ಗ್ರಾಹಕರು ಅದನ್ನುಓಪನ್ ಮಾಡುವಂತಹ ವಿಚಾರಗಳನ್ನು ಹೊಂದಿರುತ್ತವೆ ಎನ್ನುತ್ತಾರೆ ವಿದೇಶಗಳ ಮಾನವ ಹಕ್ಕುಗಳ ಹೋರಾಟಗಾರರು. ಯುಎಇಯಲ್ಲಿ ಚಿತ್ರಹಿಂಸೆಯ ರಹಸ್ಯಗಳು ಎಂಬ ಸಂದೇಶಗಳನ್ನು ಕಳುಹಿಸಲಾಗಿತ್ತು ಎನ್ನುತ್ತಾರೆ ಯುಎಇಯ ಮಾನಹಕ್ಕುಗಳ ಹೋರಾಟಗಾರ ಮೊಹಮ್ಮದ್ ಮನ್ಸೂರ್. ಯುಎಇ, ಪೆಗಾಸಸ್ ಸ್ಪೈ ವೇರ್ ಖರೀದಿಸಿದ ಮೇಲೆ ಮನ್ಸೂರ್ ಅವರನ್ನು ಬಲಿಹಾಕಿತ್ತು. ಇದೀಗ ಮನ್ಸೂರು ಹತ್ತು ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.
ವಿಶ್ವದಲ್ಲೇ ಮೆಕ್ಸಿಕೊ ದೇಶದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಸರಕಾರಿ ವ್ಯವಸ್ಥೆ ಈ ಇಸ್ರೇಲಿ ಸೈಬರ್ ಗೂಢಚರ್ಯೆ ಕೃತ್ಯ ನಡೆದಿತ್ತು. ಅಲ್ಲಿನ ಸರಕಾರ 2016-17ರಿಂದ ಅಂದಾಜು 220 ಕೋಟಿ ರೂಪಾಯಿ ವೆಚ್ಚ ಮಾಡಿ 500ಕ್ಕೂ ಹೆಚ್ಚು ಮಂದಿಯ ಫೋನ್ ಗೂಢಚರ್ಯೆ ನಡೆಸಿತ್ತು. ಮೆಕ್ಸಿಕೊದ ಕಾರ್ಯಕರ್ತ ಲೂಯಿಸ್ ಫರ್ನಾಂಡೊ ಪ್ರಕಾರ ಮೊಬೈಲ್ ಸಂಪೂರ್ಣ ಪೆಗಾಸಸ್ ನಿಯಂತ್ರಣದಲ್ಲಿ ಇರುತ್ತದೆ ಮತ್ತು ನೀವು ಟೈಪ್ ಮಾಡುವ ಎಲ್ಲ ಅಕ್ಷರಗಳನ್ನು ಕ್ಯಾಮರಾ ರೆಕಾರ್ಡ್ ಮಾಡುತ್ತದೆ.
ಭಿಮಕೋರೆಗಾಂವ್ ಪ್ರಕರಣದಲ್ಲಿ ಕಂಪ್ಯೂಟರುಗಳಲ್ಲಿ ಇದೇ ಪೆಗಾಸಸ್ ಉಪಯೋಗಿಸಿ ಸರಕಾರಿ ಏಜೆನ್ಸಿಗಳು ಸಾಕ್ಷ್ಯ ಎಂದು ಹೇಳಲಾದ ದಾಖಲೆ ಪ್ಲಾಂಟ್ ಮಾಡಿರಬಹುದು ಎಂಬ ಸಂಶಯವನ್ನು ನಾಗಪುರದ ವಕೀಲ ನಿಹಾಲ್ ಸಿಂಗ್ ಸಂಶಯ ವ್ಯಕ್ತಪಡಿಸಿದ್ದಾರೆ. ಬಹುತೇಕ ಎಲ್ಲ ಆರೋಪಿಗಳಲ್ಲಿ ಒಂದೇ ರೀತಿಯ ದಾಖಲೆ ಪತ್ತೆ ಆಗಿತ್ತು. ಕಳೆದ ಮೇ ತಿಂಗಳಲ್ಲಿ ಈ ರೀತಿಯ ಗೂಢಚರ್ಯೆ ನಡೆಯುತ್ತಿರುವ ಸಂಶಯ ವ್ಯಕ್ತವಾದಾಗ ವಾಟ್ಸಪ್ ತನ್ನ ಭಾರತದ ಗ್ರಾಹಕರಿಗೆ ಮಾಹಿತಿ ನೀಡಿತ್ತು. ಅದರಲ್ಲಿ ವಕೀಲರು, ಪತ್ರಕರ್ತರು, ದಲಿತ ಹೋರಾಟಗಾರರು, ಉಪನ್ಯಾಸಕರು ಪ್ರಮುಖರಾಗಿದ್ದರು.
ನಿಖರವಾದ ತನಿಖೆ ನಡೆಸಿದಾಗ ಇಸ್ರೇಲಿನ ಎನ್ಎಸ್ಓ ಗ್ರೂಪ್ ಸಿದ್ಧಪಡಿಸಿದ ಪೆಗಾಸಸ್ ಎಂಬ ಹೆಸರಿನ ಸ್ಪೈವೇರ್ ಉಪಯೋಗಿಸಿರುವುದು ಖಚಿತ ಆಗಿತ್ತು. ಕಾನೂನು ಹೋರಾಟ ನಡೆಸುವುದಾಗಿ ಪ್ರಕಟಿಸಿದ್ದ ವಾಟ್ಸಪ್ ಒಡೆತನದ ಫೇಸ್ ಬುಕ್ ಕಂಪೆನಿ, ಅಕ್ಟೋಬರ್ 29ರಂದು ಕ್ಯಾಲಿಫೋರ್ನಿಯದ ನ್ಯಾಯಾಲಯದಲ್ಲಿ ದಾವೆ ಹೂಡಿದೆ.
ಇದೇ ಮೊದಲ ಬಾರಿಗೆ ಸೋಶಿಯಲ್ ಮಿಡಿಯಾ ಕಂಪೆನಿಯೊಂದು ಸ್ಪೈವೇರ್ ಕಂಪೆನಿ ವಿರುದ್ಧ ಕಾನೂನು ದಾವೆ ಹೂಡಿರುವ ಪ್ರಕರಣ ಇದಾಗಿದೆ. ವಾಟ್ಸಪ್ ಸಂದೇಶವು end to end encrypted ಆಗಿರುತ್ತದೆ. ಅದರರ್ಥ, ಸಂದೇಶ ಕಳುಹಿಸಿದವರು ಮತ್ತು ಸಂದೇಶ ಸ್ವೀಕರಿಸಿದವರು ಮಾತ್ರ ಆ ಸಂದೇಶವನ್ನು ನೋಡಬಹುದಾಗಿದೆ. ವಾಟ್ಸಪ್ ಸಿಬ್ಬಂದಿ ಕೂಡ ನೋಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳಲು ನ್ಯಾಯಾಲಯದ ಮೊರೆ ಹೋಗುವುದು ಕಂಪೆನಿಗೆ ಅನಿವಾರ್ಯ ಆಗಿತ್ತು.
ಸೈಬರ್ ಸೂಢಚರ್ಯೆ ಮತ್ತು ಪೆಗಾಸಸ್ ಬಗ್ಗೆ ಈ ಹಿಂದೆಯೇ ಹಲವು ಮಂದಿ ಹಕ್ಕುಗಳ ಪರವಾದ ಕಾರ್ಯಕರ್ತರು, ಪತ್ರಕರ್ತರು, ವಿಶ್ವದ ಮಾಧ್ಯಮಗಳು ಬೆಳಕು ಚೆಲ್ಲಿದ್ದವು. ಆರಂಭದಲ್ಲಿ ಪೆಗಾಸಸ್ ಸಿದ್ಧಪಡಿಸಿದ ಎನ್ಎಸ್ಓ ಗ್ರೂಪ್ ತನ್ನ ಪಾತ್ರವೇನು ಇಲ್ಲ ಎಂದು ಹೇಳಿದ್ದರೂ, ಇದೀಗ ಪ್ರಕರಣ ದಾಖಲಾದ ಅನಂತರ ನ್ಯಾಯಲಯದಲ್ಲಿ ಕಠಿಣ ಹೋರಾಟಕ್ಕೆ ಸಿದ್ಧರಾಗಿದ್ದೇವೆ ಎಂದು ಹೇಳಿದೆ. ನಮ್ಮ ತಂತ್ರಜ್ಞಾನಗಳನ್ನು ಪತ್ರಕರ್ತರು ಮತ್ತು ಹಕ್ಕು ಹೋರಾಟಗಾರರ ವಿರುದ್ಧ ಬಳಕೆಗಾಗಿ ಅಭಿವೃದ್ಧಿ ಮಾಡಿರುವುದಲ್ಲ, ಸಾವಿರಾರು ಜನರ ಜೀವನ ರಕ್ಷಣೆಗಾಗಿ ಮಾಡಲಾಗಿದೆ ಎಂದು ಎನ್ಎಸ್ಓ ಗ್ರೂಪ್ ಹೇಳಿದೆ.
ಭಯೋತ್ಪಾದಕರು, ಡ್ರಗ್ ಸಾಗಾಟಗಾರರು ಮತ್ತು ಉಗ್ರಗಾಮಿಗಳನ್ನು ಮಟ್ಟ ಹಾಕಲು ಪೊಲೀಸರು ಮತ್ತು ಗೂಢಚರ್ಯೆ ಅಧಿಕಾರಿಗಳು ಈ ತಂತ್ರಜ್ಞಾನ ಬಳಕೆ ಆಗುತ್ತದ್ದರೂ, ಇದೇ ಸರಕಾರಿ ಏಜೆನ್ಸಿಗಳು ಅದನ್ನು ಹೋರಾಟಗಾರರು ಮತ್ತು ಪತ್ರಕರ್ತರ ವಿರುದ್ಧ ಬಳಸುತ್ತಿದ್ದಾಗ ಕಂಪೆನಿ ಕಣ್ಣು ಮುಚ್ಚಿ ಯಾಕೆ ಕುಳಿತಿತ್ತು ಎಂದು ಪ್ರಶ್ನಿಸಲಾಗುತ್ತಿದೆ.
ಕಳೆದ ವರ್ಷದ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಫ್ರಿಲಾನ್ಸ್ ವರದಿಗಾರ ಜಮಾಲ್ ಖಶೋಗ್ಗಿ ಕೊಲೆಗೂ ಮುನ್ನ ಸೌದಿ ಅರೆಬಿಯ ದೇಶವು ಪೆಗಾಸಸ್ ಸ್ಪೈವೇರ್ ಮೂಲಕವೇ ಅವರ ಚಲನವಲನಗಳ ಮೇಲೆ ಕಣ್ಣಿಟ್ಟಿತ್ತು. ವಿಶ್ವದ ಹಲವೆಡೆ ಈ ಸೈಬರ್ ಗೂಢಚರ್ಯೆ ನಡೆದಿದ್ದು, ಭಾರತದಂತಹ ಸ್ವತಂತ್ರ ರಾಷ್ಟ್ರದಲ್ಲಿ ಕೂಡ ಸರ್ಕಾರಿ ವ್ಯವಸ್ಥೆಯು ಇಂತಹ ದೇಶದ್ರೋಹಿ ಕೃತ್ಯಗಳಿಗೆ ಕೈ ಹಾಕಿರುವುದು ಆತಂಕಕಾರಿ ವಿದ್ಯಮಾನವಾಗಿದೆ.