ಇಡೀ ಸಮಾಜ ತಾರತಮ್ಯದಿಂದ ಕೂಡಿದೆ. ಸರ್ಕಾರವೂ ತಾರತಮ್ಯವನ್ನೇ ಮೂಲ ಮಂತ್ರವಾಗಿಸಿಕೊಂಡಿದೆ. ಅದರಲ್ಲೂ ಉಳ್ಳವರು ಮತ್ತು ಇಲ್ಲದವರ ನಡುವಿನ ಹಾಗೂ ದುಡಿಯುವವರು ಮತ್ತು ದುಡಿಸಿಕೊಳ್ಳುವವರ ನಡುವಿನ ತಾರತಮ್ಯ ಬಹಳ ದೊಡ್ಡದು. ವಿಶೇಷ ಎಂದರೆ ಈ ‘ದುಡಿಸಿಕೊಳ್ಳುವವರ’ ಪೈಕಿ ಸರ್ಕಾರವೂ ಕೂಡ ಇದೆ.
ಉದಾಹರಣೆಗೆ ‘ಅಗತ್ಯ ಸೇವೆಗಳು’ ಎಂಬ ಪಟ್ಟಿ ನೋಡಿ. ಪೊಲೀಸರು, ವೈದ್ಯರು, ದಾದಿಗಳು, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಔಷಧಿ ಕಾರ್ಖಾನೆಗಳು ಆಹಾರ ಸಂಸ್ಕರಣಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ಹಾಲು, ತರಕಾರಿ ಮಾರುವವರು, ಪೇಪರ್ ಹಾಕುವವರು ಇತ್ಯಾದಿ ಇತ್ಯಾದಿ. ಈ ಪೈಕಿ ವೈದ್ಯರು ಮತ್ತು ಪೊಲೀಸ್ ಅಧಿಕಾರಿಗಳನ್ನು (ಪೇದೆಗಳಲ್ಲ) ಬಿಟ್ಟು ಉಳಿದವರೆಲ್ಲಾ ಕಷ್ಟಪಟ್ಟು ದುಡಿಯುವವರು, ಕಡಿಮೆ ಸಂಬಳಕ್ಕೆ ದುಡಿಯುವವರು, ನಿಗದಿತ ಸಮಯಕ್ಕಿಂತ ಹೆಚ್ಚು ಅವಧಿ ಕೆಲಸ ಮಾಡುವವರು.

ಈ ಒಂದೊಂದು ಕೆಲಸದ ಬಗ್ಗೆಯೂ ನೂರೆಂಟು ಸಮಸ್ಯೆಗಳಿವೆ. ಒಟ್ಟಾರೆಯಾಗಿ ಹೇಳುವುದಾದರೆ ಇವರ ಪೈಕಿ ಪೊಲೀಸರನ್ನು ಹೊರತುಪಡಿಸಿ ಬಹುತೇಕರು ಅರೆ ಸರಕಾರಿ, ಗುತ್ತಿಗೆ ಅಥವಾ ತಾತ್ಕಾಲಿಕವಾಗಿ ನೇಮಕಗೊಂಡವರಾಗಿರುತ್ತಾರೆ. ಉದ್ಯೋಗ ಭದ್ರತೆ, ಕನಿಷ್ಠ ವೇತನ, ಪಿಂಚಣಿ ಇತರೆ ಸೌಲಭ್ಯಗಳ್ಯಾವುವು ಇರುವುದಿಲ್ಲ. ಆದರೂ ಅಪಾಯ ಬಂದಾಗ ದುಡಿಯಲೇಬೇಕೆಂದು ತಾಖೀತು ಮಾಡಲಾಗುತ್ತದೆ. ಇನ್ನೊಂದೆಡೆ ಕರೋನಾದಂತಹ ಕಡುಕಷ್ಟ ಬಂದಿದ್ದರೂ ಕೈತುಂಬಾ ಸಂಬಳ ಪಡೆಯುವ ನೌಕರರ ವೇತನ ಕಡಿಮೆ ಮಾಡಲು ಸರ್ಕಾರಗಳು ಹಿಂದೇಟು ಹಾಕುತ್ತವೆ.
ಸದ್ಯ ಇನ್ನೊಂದು ಬೆಳವಣಿಗೆ ಆಗುತ್ತಿದೆ. ಲಾಕ್ಡೌನ್ ಕಾರಣಕ್ಕೆ ಕೈಯಲ್ಲಿ ಕೆಲಸ ಮತ್ತು ಕಾಸು ಎರಡೂ ಇಲ್ಲದೆ ವಲಸೆ ಕಾರ್ಮಿಕರು ಅತಾರ್ಥ್ ದುಡಿಯುವ ವರ್ಗ ಅವರವರ ಊರು ಸೇರಿಕೊಳ್ಳುತ್ತಿದೆ. ಇನ್ನೊಂದೆಡೆ ಅವರೆಲ್ಲಾ ಊರಿಗೆ ಹೋಗಿಬಿಟ್ಟರೆ ನಗರಗಳಲ್ಲಿ ಕಷ್ಟಪಟ್ಟು ದುಡಿಯುವವರು ಇಲ್ಲದಂತಾಗಿ ಸಮಸ್ಯೆ ಸೃಷಿಯಾಗುತ್ತದೆಂದು ‘ದುಡಿಸಿಕೊಳ್ಳುವ ವರ್ಗ’ ಪರಿತಪಿಸುತ್ತಿದೆ. ವಲಸೆ ಕಾರ್ಮಿಕರನ್ನು ನಗರಗಳಲ್ಲೇ ಉಳಿಸಿಕೊಳ್ಳುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ. ಸರ್ಕಾರಗಳು ಕೂಡ ‘ಸಾರ್ವಜನಿಕ ಸಿಂಪತಿ’ ಗಿಟ್ಟಿಸಿಕೊಳ್ಳಲು ವಲಸಿಗರನ್ನು ಊರಿಗೆ ಕಳುಹಿಸುವ ಮತ್ತು ದುಡಿಸಿಕೊಳ್ಳುವ ವರ್ಗದ ಲಾಭಿಗೆ ಮಣಿದು ಎಷ್ಟು ಸಾಧ್ಯವೋ ಅಷ್ಟು ವಲಸಿಗರು ಹೋಗುವುದನ್ನು ತಡೆಯುವ ದ್ವಿಮುಖ ನೀತಿ ಅನುಸರಿಸುತ್ತಿದೆ.
ವಲಸಿಗರನ್ನು ಕಳುಹಿಸಿಕೊಡಲಾಗುತ್ತಿದೆಯಲ್ಲಾ, ದ್ವಿಮುಖ ನೀತಿ ಯಾವುದು ಎಂಬ ಪ್ರಶ್ನೆ ಹುಟ್ಟಬಹುದು, ಸರ್ಕಾರಕ್ಕೆ ಇದು ಗೊತ್ತಿಲ್ಲದ ವಿಷಯವೇನೂ ಹಾಗಿರಲಿಲ್ಲ. ಅಥವಾ ಅಂದಾಜು ಮಾಡಲಾಗದ ಸಂಗತಿಯಾಗಿರಲಿಲ್ಲ. ಮೊದಲ ಹಂತದ ಲಾಕ್ಡೌನ್ ಘೋಷಣೆ ಮಾಡಿದಾಗಲೇ ವಲಸಿಗರನ್ನು ಕಳುಹಿಸಿಕೊಡಬಹುದಿತ್ತು. ಸ್ವಲ್ಪ ದಿನ ಬಿಟ್ಟಾದರೂ ಕಳುಹಿಸಬಹುದಾಗಿತ್ತು. ಕಡೆಪಕ್ಷ ಈಗಾಲಾದರೂ ಇನ್ನಷ್ಟು ರೈಲುಗಳ ವ್ಯವಸ್ಥೆ ಮಾಡಬಹುದಿತ್ತು. ಇವೆಲ್ಲವನ್ನು ಮಾಡದಿರಲು ಕಾರಣ ದುಡಿಸಿಕೊಳ್ಳುವವರ ದುರ್ದೃಷ್ಠಿ.
ಬಹುಶಃ ಕ್ರೂರ ಮನಸ್ಥಿತಿಯ ಸರ್ಕಾರಗಳಿಗೆ ಮತ್ತು ದುರ್ಬುದ್ದಿಯ ದುಡಿಸಿಕೊಳ್ಳುವ ವರ್ಗಕ್ಕೇ ಈಗ ದುರ್ದಿನಗಳು ಬರುವಂತಾಗಿದೆ. ವಲಸೆ ಕಾರ್ಮಿಕರು ಅವರವರ ಊರು ಸೇರಿಕೊಳ್ಳುತ್ತಿರುವುದರಿಂದ ಮುಂದೆ ನಗರ ಜೀವನ ನರಕಸ್ವರೂಪಿ ಆಗಲಿದೆ. ವಲಸೆ ಕಾರ್ಮಿಕರು ಮತ್ತೆ ನಗರಕ್ಕೆ ಬರುವುದಿಲ್ಲ, ಅಂಥ ಪರಿಸ್ಥಿತಿಯನ್ನು ಸರ್ಕಾರಗಳು ಸೃಷ್ಟಿಸಿಲ್ಲ, ಅವರಲ್ಲಿ ಭರವಸೆ ಮೂಡಿಸಿಲ್ಲ ಎಂಬ ಅಭಿಪ್ರಾಯವನ್ನು ಹಲವು ತಜ್ಞರು ವ್ಯಕ್ತಪಡಿಸಿದ್ದಾರೆ. ವಲಸೆ ಕಾರ್ಮಿಕರ ವಿಷಯದಲ್ಲಿ ಕೇಂದ್ರ ಸರ್ಕಾರ ತಪ್ಪಾಗಿ, ಅಮಾನುಷವಾಗಿ ನಡೆದುಕೊಂಡಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಇಂಡಿಯನ್ ಪಬ್ಲಿಕ್ ಹೆಲ್ತ್ ಅಸೋಸಿಯೇಷನ್, ಇಂಡಿಯನ್ ಅಸೋಸಿಯೇಷನ್ ಅಂಡ್ ಸೋಷಿಯಲ್ ಮೆಡಿಸಿನ್ ಮತ್ತು ಇಂಡಿಯನ್ ಅಸೋಸಿಯೇಷನ್ ಆಫ್ ಎಪಿಡೆಮಿಯಾಲಜಿಸ್ಟ್ ಪತ್ರ ಬರೆದಿವೆ.
ಅಷ್ಟೆಲ್ಲಾ ಏಕೆ ಪ್ರಖ್ಯಾತ ರೇಟಿಂಗ್ ಏಜೆನ್ಸಿ CRISIL, ವಲಸೆ ಕಾರ್ಮಿಕರು ನಗರಗಳಿಗೆ ವಿಮುಖವಾಗಿರುವುದರಿಂದ ದೇಶದ ಜಿಡಿಪಿಗೆ ಶೇಕಡಾ 5ರಷ್ಟು ಹೊಡೆತ ಬೀಳಲಿದೆ ಎಂದು ಅಭಿಪ್ರಾಯಪಟ್ಟಿದೆ. ಇದರಿಂದ ಕೇಂದ್ರ ಸರ್ಕಾರ ಅಕ್ಷರಶಃ ಕಂಗಾಲಾಗಿದೆ. ಏಕೆಂದರೆ ವಲಸೆ ಕಾರ್ಮಿಕರು ಮತ್ತೆ ನಗರಗಳತ್ತ ಮುಖಮಾಡದಿದ್ದರೆ ಅತಿದೊಡ್ಡ ಹೊಡೆತ ಬೀಳುವುದು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಹಾಗೂ ಮೂಲಸೌಕರ್ಯ ಕ್ಷೇತ್ರಕ್ಕೆ. ಒಟ್ಟಾರೆ ವಲಸೆ ಕಾರ್ಮಿಕರ ಪೈಕಿ ಶೇಕಡಾ 30ರಷ್ಟು ಕಟ್ಟಡ ಕಾರ್ಮಿಕರು.
ಈ 30ರಷ್ಟು ಕಾರ್ಮಿಕರ ಪೈಕಿ ಒಂದಷ್ಟು ಜನ ಜೀವನದ ಅನಿವಾರ್ಯತೆಯಿಂದ ವಾಪಸ್ ಆಗಲೂ ಬಹುದು. ಆದರೂ ಎಷ್ಟು ಪ್ರಮಾಣದಲ್ಲಿ ವಾಪಸ್ ಆಗುತ್ತಾರೆ ಎಂಬುದನ್ನು ಕಾದುನೋಡಬೇಕು. ಅದರ ಮೇಲೆ ಮುಂದೆ ಖಾಸಗಿಯಾದ, ಹಣದ ಹರಿವನ್ನು ಹೆಚ್ಚುಗೊಳಿಸುವ ರಿಯಲ್ ಎಸ್ಟೇಟ್ ಉದ್ಯಮ ಮತ್ತು ಸರ್ಕಾರದ ಮೂಲಸೌಕರ್ಯಗಳ ಅಭಿವೃದ್ಧಿ ಕೆಲಸಗಳು ಯಾವ ಗತಿಯಲ್ಲಿ ಸಾಗುತ್ತವೆ ಎಂಬುದು ನಿರ್ಧಾರವಾಗುತ್ತದೆ. ಈಗಲಾದರೂ ವಲಸೆ ಕಾರ್ಮಿಕರಿಗೆ ಕೆಲಸ ಎಷ್ಟು ಅನಿವಾರ್ಯವೋ ದುಡಿಸಿಕೊಳ್ಳುವವರಿಗೆ, ಸರ್ಕಾರಗಳಿಗೂ ವಲಸೆ ಕಾರ್ಮಿಕರು ಅಷ್ಟೇ ಅನಿವಾರ್ಯ ಎಂಬುದನ್ನು ಅರಿಯಬೇಕಿದೆ.










