ದೇಶಾದ್ಯಂತ ವಿಧಿಸಿರುವ ಲಾಕ್ ಡೌನ್ ನಿಂದಾಗಿ ಕೋಟ್ಯಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲೂ ರೆಡ್ ಝೋನ್ ಎಂದು ಗುರುತು ಮಾಡಿರುವ ಪ್ರದೇಶಗಳಲ್ಲಂತೂ ಪರಿಸ್ಥಿತಿ ಕಠಿಣವಾಗಿದೆ. ಇಲ್ಲಿ ಸಿಲುಕಿಕೊಂಡಿರುವ ಲಕ್ಷಾಂತರ ಕಾರ್ಮಿಕರು ಸೂಕ್ತ ಪಡಿತರ , ಉಳಿಯಲು ಸರಿಯಾದ ವ್ಯವಸ್ಥೆ ಇಲ್ಲದೆ ಪರದಾಡುತಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯಾದಿಯಾಗಿ ಕಾರ್ಮಿಕ ಸಚಿವರು ಎಲ್ಲರೂ ಕಾರ್ಮಿಕರ ವೇತನ ಕಡಿತಗೊಳಿಸಬೇಡಿ ಎಂದು ಕೈಗಾರಿಕೋದ್ಯಮಿಗಳಿಗೆ , ಉದ್ಯೋಗದಾತರಿಗೆ ಕರೆ ಕೊಟ್ಟಿದ್ದಾರೆ. ಆದರೆ ಪ್ರಧಾನ ಮಂತ್ರಿಗಳ ಮಾತನ್ನು ಬಹುತೇಕ ಯಾವ ಉದ್ಯಮಿಯೂ ಪಾಲಿಸುತ್ತಿಲ್ಲ ಎಂದು ತಿಳಿದು ಬಂದಿದೆ.
ವಲಸೆ ಕಾರ್ಮಿಕರ ಪರ ದುಡಿಯುವ ʼಸ್ಟ್ರಾಂಡೆಡ್ ವರ್ಕರ್ಸ್ ಆಕ್ಷನ್ ನೆಟ್‌ವರ್ಕ್‘ ಎಂಬ 73 ಸ್ವಯಂ ಸೇವಕರನ್ನು ಒಳಗೊಂಡಿರುವ ಸಂಸ್ಥೆಯ ವರದಿ ಪ್ರಕಾರ, ಸುಮಾರು ಶೇಕಡಾ 78 ಕಾರ್ಮಿಕರಿಗೆ ಯಾವುದೇ ವೇತನ ಸಂದಾಯವಾಗಿಲ್ಲ. ಕರೋನಾ ವೈರಸ್ ಸೋಂಕನ್ನು ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ನಡುವೆ ಸಿಕ್ಕಿಬಿದ್ದಿರುವ ಈ 10,929 ವಲಸೆ ಕಾರ್ಮಿಕರ ಗುಂಪಿನಲ್ಲಿ, ಕೇವಲ 6% ಜನರು ಮಾತ್ರ ಏಪ್ರಿಲ್ 26 ರವರೆಗೆ ತಮ್ಮ ಪೂರ್ಣ ವೇತನವನ್ನು ಪಡೆದಿದ್ದಾರೆ ಎಂದು ಸಂಸ್ಥೆಯ ಅಧ್ಯಯನ ವರದಿ ಹೇಳಿದೆ.
ಈ ವರದಿಯ ಪ್ರಕಾರ ಸ್ವಯಂ ಉದ್ಯೋಗದಲ್ಲಿರುವ ಬಡವರು ,ಬೀದಿ ಬದಿ ವ್ಯಾಪಾರಿಗಳು ಮತ್ತು ರಿಕ್ಷಾ ಎಳೆಯುವವರಂತಹ ವೃತ್ತಿಯಲ್ಲಿ ಇರುವ ಶೇಕಡಾ 99 ರಷ್ಟು ಜನರು ಲಾಕ್ ಡೌನ್‌ನ ಮೊದಲ 32 ದಿನಗಳಲ್ಲಿ ಯಾವುದೇ ಹಣವನ್ನು ಗಳಿಸಿಲ್ಲ. ಈ ಸ್ವಯಂಸೇವಾ ಸಂಸ್ಥೆಯು ಸಂಪರ್ಕಿಸಿದ 16,863 ಕಾರ್ಮಿಕರಲ್ಲಿ ಸುಮಾರು 59% ಜನರು ಕಾರ್ಖಾನೆ ಮತ್ತು ನಿರ್ಮಾಣ ರಂಗದ ದಿನಗೂಲಿ ಕಾರ್ಮಿಕರಾಗಿದ್ದಾರೆ. ಅವರಲ್ಲಿ ಶೇಕಡಾ 11 ರಷ್ಟು ಜನರು ದೈನಂದಿನ ವೇತನ ಪಡೆಯುವ ಚಾಲಕರು ಮತ್ತು ಗೃಹ ಕಾರ್ಮಿಕರು ಮತ್ತು 16% ಕಾರ್ಮಿಕರು ಅಸಂಘಟಿತ ವಲಯದ ವಿವಿಧ ಸಂಸ್ಥೆಗಳಲ್ಲಿ ಸ್ವಯಂ ಉದ್ಯೋಗಿಗಳಾಗಿದ್ದಾರೆ.

ಕಳೆದ ಏಪ್ರಿಲ್ 14 ರ ತನಕ ಸ್ವಯಂ ಸೇವಾ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ 87% ಕ್ಕಿಂತ ಹೆಚ್ಚು ಕಾರ್ಮಿಕರಿಗೆ ಅವರ ಉದ್ಯೋಗದಾತರು ವೇತನ ನೀಡಿಲ್ಲ, ಆದರೆ ಸುಮಾರು 13% ಜನರಿಗೆ ಅಲ್ಪ ಸಂಬಳ ನೀಡಲಾಗಿದೆ. ಏಪ್ರಿಲ್ 26 ರ ತನಕ ಅವರಲ್ಲಿ ಸುಮಾರು ಶೇಕಡಾ 6% ಜನರು ತಮ್ಮ ಪೂರ್ಣ ವೇತನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 16% ಜನರಿಗೆ ಅವರ ತಿಂಗಳ ಸಂಬಳದ ಒಂದು ಭಾಗವನ್ನಷ್ಟೆ ನೀಡಲಾಗಿದೆ. ಸಂಸ್ಥೆ ನಡೆಸಿದ ವಿಶ್ಲೇಷಣೆಯ ಪ್ರಕಾರ ವಲಸೆ ಕಾರ್ಮಿಕರ ಸರಾಸರಿ ದಿನನಿತ್ಯದ ಆದಾಯ 380ರೂಪಾಯಿಗಳಾಗಿದೆ.
ಈ ಸಂಖ್ಯೆಗಳು ತೀರಾ ಕಡಿಮೆ ಇದ್ದರೂ, ಲಾಕ್‌ಡೌನ್ ಮುಗಿದ ನಂತರ ಈಗಾಗಲೇ ಪಡೆದಿರುವ ಹೆಚ್ಚುವರಿ ಮುಂಗಡ ಹಣವನ್ನು ಸದರಿ ಕಾರ್ಮಿಕರ ಸಂಬಳದಿಂದ ಕಡಿತಗೊಳಿಸಲಾಗುವುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದು ಅವರ ತೊಂದರೆ ಮತ್ತಷ್ಟು ಹೆಚ್ಚಗಲಿದೆ ಎಂದು ಎಂದು ಸಮೀಕ್ಷಾ ವರದಿ ತಿಳಿಸಿದೆ. ಮತ್ತೊಂದೆಡೆ, ಕಾರ್ಖಾನೆ ಮತ್ತು ಕಟ್ಟಡ ನಿರ್ಮಾಣ ಕಾರ್ಮಿಕರಲ್ಲಿ ಹೆಚ್ಚಿನವರು ಹಿಂದಿನ ತಿಂಗಳುಗಳಿಂದ ತಮ್ಮ ವೇತನವನ್ನು ಪಡೆದಿಲ್ಲ ಎಂದು ಹೇಳಿದ್ದಾರೆ. ಅವುಗಳಲ್ಲಿ ಹಲವರು ನಗರ ಕೇಂದ್ರಗಳಲ್ಲಿ ಒತ್ತಾಯದಿಂದ ಇದ್ದಾರೆ.. ಅವರಿಗೆ ಸೂಕ್ತ ಉಳಿದುಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಅವರು ತಮ್ಮ ಗ್ರಾಮಗಳಿಗೆ ವಲಸೆ ಹೋದರೆ ಈಗಾಗಲೇ ದುಡಿದಿರುವ ಹಣವನ್ನು ಪುನಃ ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಅಂಬ ಅಂಜಿಕೆಯಲ್ಲಿದ್ದಾರೆ. ಏಕೆಂದರೆ ಅವರ ದುಡಿಮೆಯ ಹಣವನ್ನು ಉದ್ಯೋಗದಾತರೇ ಬಾಕಿ ಇರಿಸಿಕೊಂಡಿದ್ದಾರೆ.
ಲಾಕ್ ಡೌನ್ ಘೋಷಣೆಯಯಾದ ನಂತರ ಅದರ ಗಂಭೀರತೆ ವಲಸೆ ಕಾರ್ಮಿಕರಿಗೆ ಅರಿವಾಗಿರಲಿಲ್ಲ. ಅದರೆ ಯಾವಾಗ ತಮ್ಮ ಕೆಲಸದ ಸ್ಥಳಗಳಿಂದ ಹೊರಟು ಬಸ್ ಅಥವಾ ರೈಲು ಗಳನ್ನು ಹಿಡಿಯಲು ಸಮೀಪದ ನಗರಗಳಿಗೆ ಹೋದರೋ ಅಲ್ಲಿಯೇ ಅವರ ಪರಿಸ್ಥಿತಿ ಇನ್ನಷ್ಟು ಗಂಭಿರವಾಯಿತು ಎಂದು ಸಮೀಕ್ಷೆ ತಿಳಿಸಿದೆ. ಮಾರ್ಚ್ ೨೫ ರ ನಂತರ ಅವರಿಗೆ ಲಾಕ್ ಡೌನ್ ನ ಸ್ಪಷ್ಟ ಚಿತ್ರಣ ಅರಿವಾಯಿತು. ಶುಕ್ರವಾರ ಮದ್ಯಾಹ್ನ ಕೇಂದ್ರ ರೈಲ್ವೇ ಸಚಿವಾಲಯವು ಕೊರೋನ ಸೋಂಕು ಪಸರಿಸುವುದನ್ನು ತಡೆಗಟ್ಟಲು ವಲಸೆ ಕಾರ್ಮಿಕರಿಗೆ ಹಾಗೂ ಇತರರು ತಮ್ಮ ಸ್ವಂತ ಸ್ಥಳಕ್ಕೆ ತೆರಳಲು ವಿಶೇಷ ರೈಲುಗಳನ್ನು ಓಡಿಸಲಾಗುವುದೆಂದು ಹೇಳಿತು. ಇದಕ್ಕಾಗಿ ಕೊರೋನ ಸೋಂಕು ಹರಡುವುದನ್ನು ತಡೆಗಟ್ಟಲೆಂದೇ ರೈಲಿನಲ್ಲಿ ಪ್ರಯಾಣಿಸುವಾಗ ಅನುಸರಿಸಬೇಕಾದ ನಿಯಮಗಳ ಬಗ್ಗೆ ಸುತ್ತೋಲೆಯನ್ನು ಪ್ರಕಟಿಸಿತು. ಈ ನಿಯಮಾವಳಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ರೈಲ್ವೇ ಇಲಾಖೆಯ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆಯನ್ನೂ ನೀಡಲಾಗಿದೆ.
ಏಪ್ರಿಲ್ 15 ರಂದು ನಡೆಸಿದ 11,000 ವಲಸೆ ಕಾರ್ಮಿಕರ ಪ್ರತ್ಯೇಕ ಸಮೀಕ್ಷೆಯಲ್ಲಿ, ಸ್ಟ್ರಾಂಡೆಡ್ ವರ್ಕರ್ಸ್ ಆಕ್ಷನ್ ನೆಟ್‌ವರ್ಕ್ ಸಂಸ್ಥೆಯು ವಲಸೆ ಕಾರ್ಮಿಕರಲ್ಲಿ ಅರ್ಧದಷ್ಟು ಕಾರ್ಮಿಕರು ಕಡಿಮೆ ಪಡಿತರ ದಾಸ್ತಾನು ಹೊಂದಿರುವುದನ್ನು ಕಂಡುಹಿಡಿದಿದೆ, ಶೇಕಡಾ ೫೦ ಕ್ಕೂ ಅಧಿಕ ಕಾರ್ಮಿಕರಲ್ಲಿ ಪಡಿತರ ದಾಸ್ತಾನು ಕೇವಲ ಒಂದು ದಿನಕ್ಕೆ ಆಗುವಷ್ಟು ಮಾತ್ರ ಇತ್ತು. ಇದರಿಂದಾಗಿ ಕಾರ್ಮಿಕರ ಪರಿಸ್ಥಿತಿ ಎಷ್ಟು ಕೆಟ್ಟದಾಗಿತ್ತು ಎಂದು ಸ್ಪಷ್ಟವವಾಗುತ್ತದೆ. ಇದೇ ಅವಧಿಯಲ್ಲಿ 89% ರಷ್ಟು ಉದ್ಯೋಗದಾತರು ಕಾರ್ಮಿಕರಿಗೆ ನೀಡಬೇಕಾದ ಸಂಬಳವನ್ನೂ ನೀಡಿಲ್ಲ ವರದಿ ತಿಳಿಸಿದೆ.

ಕರೋನ ವೈರಸ್ ಸೋಂಕು ತಡೆಗಟ್ಟಲು ಮೇ 17 ರಂದು ರಾಷ್ಟ್ರವ್ಯಾಪಿ ಲಾಕ್ಡೌನ್ ಅನ್ನು ವಿಸ್ತರಿಸಲು ಕೇಂದ್ರ ಸರ್ಕಾರವು ಶುಕ್ರವಾರ ನಿರ್ಧರಿಸಿದೆ. ಈ ಅವಧಿಯಲ್ಲಿ, ಗೊತ್ತುಪಡಿಸಿದ ಕಿತ್ತಳೆ ಮತ್ತು ಹಸಿರು ವಲಯಗಳಲ್ಲಿ ಸೀಮಿತ ಆರ್ಥಿಕ ಚಟುವಟಿಕೆಗಳನ್ನು ಅನುಮತಿಸಲಾಗುವುದು ಎಂದೂ ಅದು ಹೇಳಿದೆ. ಆರೋಗ್ಯ ಸಚಿವಾಲಯ ಶನಿವಾರ ಬೆಳಿಗ್ಗೆ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯ ಪ್ರಕಾರ, ಭಾರತದಲ್ಲಿ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ 37,336 ಕ್ಕೆ ಏರಿದೆ. ಕೋವಿಡ್ -19 ದೇಶದಲ್ಲಿ ಒಟ್ಟು 1,218 ಜನರನ್ನು ಬಲಿ ತೆಗೆದುಕೊಂಡಿದೆ.
ಒಟ್ಟಿನಲ್ಲಿ ಈ ಸಮೀಕ್ಷಾ ವರದಿ ಕೇಂದ್ರ ಸರ್ಕಾರದ ಕಾರ್ಯ ವೈಖರಿಯನ್ನೇ ಪ್ರಶ್ನಿಸುವಂತಿದೆ. ಏಕೆಂದರೆ ಸರ್ಕಾರವು ಸಲೀಸಾಗಿ ಆದೇಶಗಳನ್ನೂ ಸೂಚನೆಗಳನ್ನೂ ನೀಡುತ್ತದೆ. ನೊಂದ , ದುರ್ಬಲ ವರ್ಗದವರೂ ಸರ್ಕಾರದ ಆದೇಶಗಳಿಂದ ಸಮಾಧಾನ ಪಡುತ್ತಾರೆ. ಆದರೆ ಕೆಲ ದಿನಗಳ ನಂತರವಷ್ಟೇ ಸರ್ಕಾರದ ಆದೇಶಗಳು ಪಾಲನೆ ಆಗದಿರುವುದು ಬೆಳಕಿಗೆ ಬರುತ್ತದೆ. ಅಷ್ಟರಲ್ಲಿ ಬಡ ವರ್ಗದವರು ಆತ್ಮ ಹತ್ಯೆ ಮಾಡಿಕೊಂಡ ಸುದ್ದಿ ಬಂದರೂ ಆಶ್ಚರ್ಯವಿಲ್ಲ.