ಕರೋನಾ ವೈರಸ್ ಪ್ರಪಂಚದಾದ್ಯಂತ ಜನರ ಜೀವನವನ್ನು ದುಸ್ತರವಾಗಿಸಿದೆ. ಭಾರತದಲ್ಲಂತೂ, ಲಾಕ್‌ಡೌನ್‌ನಿಂದಾಗಿ ಮಧ್ಯಮ ವರ್ಗದ ಹಾಗೂ ಕೆಳ ವರ್ಗದ (ಆರ್ಥಿಕತೆಯ ಆಧಾರದಲ್ಲಿ) ಜನರ ಜೀವನವಂತೂ ವಿವರಿಸಲಾಗದಷ್ಟು ಜರ್ಜರಿತವಾಗಿದೆ. ಈ ಲಾಕ್‌ಡೌನ್‌ನಲ್ಲಿ ಅತ್ಯಂತ ಹೆಚ್ಚು ತೊಂದರೆಗೆ ಒಳಗಾದವರು ಎಂದರೆ ಅದು ವಲಸಿಗ ಕಾರ್ಮಿಕರು. ಪರ ರಾಜ್ಯಗಳಿಂದ ಉದ್ಯೋಗ ಅರಸಿ ಬೆಂಗಳೂರಿನಂತಹ ಮಹಾನಗರಗಳಿಗೆ ವಲಸೆ ಬಂದು ವಾಸಿಸುತ್ತಿದ್ದ ಕಾರ್ಮಿಕರ ಪರಿಸ್ಥಿತಿ ತೀರಾ ಹದೆಗೆಟ್ಟಿದೆ.
ಕರ್ನಾಟಕದಲ್ಲೂ ಕೂಡಾ ವಲಸೆ ಕಾರ್ಮಿಕರು ತಮ್ಮ ಊರಿಗೆ ವಾಪಾಸ್ ಹೋಗಲು ಪರಿತಪಿಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಅವರಿಗೆ ಇಲ್ಲೇ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಡುವ ಆಶ್ವಾಸನೆಯನ್ನು ನೀಡಿದ್ದಾರೆ. ಕೇಂದ್ರಕ್ಕೆ ಪತ್ರವನ್ನು ಬರೆದು, ರಾಜ್ಯದಿಂದ ಹೊರಡುವ ವಿಶೇಷ ʼಶ್ರಮಿಕ್ʼ ರೈಲುಗಳನ್ನು ರದ್ದುಗಳಿಸುವಂತೆ ಕೂಡಾ ಕೋರಿಕೊಂಡಿದ್ದಾರೆ. ಈ ವಿಷಯದ ಕುರಿತಂತೆ ಹಲವು ಪರ ಮತ್ತು ವಿರೋಧ ವಾದಗಳು ವ್ಯಕ್ತವಾಗಿದ್ದು ಕಾರ್ಮಿಕರ ಹಕ್ಕುಗಳನ್ನು ಕಸಿಯುವಂತಹ ಕೆಲಸವನ್ನು ಮಾಡಲಾಗುತ್ತಿದೆ ಎಂಬ ಅಪವಾದವೂ ಸರ್ಕಾರದ ವಿರುದ್ದ ಕೇಳಿ ಬರುತ್ತಿದೆ.

ಅಷ್ಟಕ್ಕೂ ಯಾವ ಕಾರಣಕ್ಕಾಗಿ ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮಿಗಳು ಹಾಗೂ ಬಿಲ್ಡರ್‌ಗಳು ವಲಸೆ ಕಾರ್ಮಿಕರ ವಿಷಯದಲ್ಲಿ ಸರ್ಕಾರದ ಮೇಲೆ ಯಾಕಿಷ್ಟು ಒತ್ತಡ ಹೇರುವ ಪ್ರಯತ್ನ ನಡೆಸುತ್ತಿವೆ? ವಲಸೆ ಕಾರ್ಮಿಕರು ವಾಪಾಸ್ ಮರಳಿದರೆ ಬಿಲ್ಡರ್‌ಗಳಿಗೆ ಆಗುವಂತಹ ನಷ್ಟವಾದರೂ ಎಷ್ಟು? ದಕ್ಷಿಣ ಭಾರತದ ಕಾರ್ಮಿಕರನ್ನು ಬಳಸಿ ಬಾಕಿ ಉಳಿದಿರುವ ಕಟ್ಟಡ ನಿರ್ಮಾಣ ಕಾರ್ಯವನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬಹುದೇ? ಅಷ್ಟಕ್ಕೂ ಉತ್ತರ ಭಾರತದ ಕಾರ್ಮಿಕರಿಗೆ ಇಷ್ಟೊಂದು ಬೇಡಿಕೆ ಏಕಿದೆ? ಎಂಬ ಪ್ರಶ್ನೆಗಳಿಗೆ ಉತ್ತರವನ್ನು ಪಡೆಯುವ ಯತ್ನ ಇಲ್ಲಿದೆ.
ಎಲ್ಲದಕ್ಕಿಂತಲೂ ಮೊದಲಾಗಿ ಕಾರ್ಮಿಕರು ಇಲ್ಲಿಂದ ಏಕೆ ಹೊರಡಲು ತವಕಿಸುತ್ತಿದ್ದಾರೆ ಎಂದು ತಿಳಿಯಲು ಪ್ರಯತ್ನಿಸಿದರೆ, ಸಿಗುವ ಉತ್ತರ ಏನೆಂದರೆ, ಭಯ! ಹೌದು, ಕರೋನಾ ಎಂಬ ಮಹಾಮಾರಿ ನಮಗೂ ಎಲ್ಲಿ ವಕ್ಕರಿಸಿ ಬಿಡುತ್ತದೋ ಎನ್ನುವ ಭಯಕ್ಕಿಂತ ನಾವೆಲ್ಲಿ ಇಲ್ಲಿನ ಜನರ ಶಾಪಕ್ಕೆ ಗುರಿಯಾಗುತ್ತೇವೋ ಎಂಬ ಭಯ ಹೆಚ್ಚಾಗಿದೆ. ಈ ಭಯಕ್ಕೆ ಮಾಧ್ಯಮದವರ ಕೊಡುಗೆಯೂ ಅಪಾರವಿದೆ.
ತಬ್ಲೀಘಿ ಘಟನೆಯ ನಂತರ ಮೊದಲಿಗೆ ತಬ್ಲೀಘಿ ವೈರಸ್, ನಂತರ ʼನಂಜನಗೂಡು ವೈರಸ್ʼ, ದಾವಣಗೆರೆಯ ನರ್ಸ್ ಒಬ್ಬರಿಂದ ಹಲವರಿಗೆ ಸೋಂಕು ಹರಡಿದ ಬಳಿಕ ʼನರ್ಸ್ ನಂಜುʼ ಎಂದು ತಾಸುಗಟ್ಟಲೆ ಬೊಬ್ಬಿರಿದ ಕನ್ನಡದ ಹಲವು ಮಾಧ್ಯಮಗಳು, ಕಳೆದ ಬಾರಿ ಬಿಹಾರ ಮೂಲದ ವ್ಯಕ್ತಿಯೊಬ್ಬನಿಗೆ ಸೋಂಕು ತಗುಲಿದೆ ಎಂದಾಗ ʼಬಿಹಾರಿ ವೈರಸ್ʼ ಎಂದು ಕೋವಿಡ್-19 ಅನ್ನು ಮರುನಾಮಕರಣ ಮಾಡಿದ್ದರು. ಇದಾದ ನಂತರ ಎಲ್ಲೇ ಉತ್ತರ ಭಾರತ ಮೂಲದ ವಲಸೆ ಕಾರ್ಮಿಕರು ಮುಂದೆ ಸಿಕ್ಕರೂ, ಜನರು ನೋಡುವ ದೃಷ್ಟಕೋನವೇ ಬದಲಾಗಿ ಹೋಯಿತು. ಈ ಭಯ ಬೆಂಗಳೂರಿನಲ್ಲಿ ವಲಸಿಗ ಕಾರ್ಮಿಕರನ್ನು ಕಾಡಲು ಶುರವಾದದ್ದು ಕೂಡಾ ಅಭಧ್ರತೆಯ ಭಾವನೆ ಹುಟ್ಟಲು ಮುಖ್ಯ ಕಾರಣ ಎಂಬುವ ಅಂಶವನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ.
ಸರ್ಕಾರದ ಮೇಲೇಕಿದೆ ಇಷ್ಟು ಒತ್ತಡ?
ಇನ್ನು ಬಿಲ್ಡರ್‌ಗಳ ಕಷ್ಟವನ್ನು ಕೂಡಾ ಇಲ್ಲಿ ಅರ್ಥ ಮಾಡಿಕೊಳ್ಳಬೇಕಾಗಿದೆ. ಯಾರೇ ಆದರೂ, ತಾವು ತೊಡಗಿಸಿರುವ ಕೋಟ್ಯಾಂತರ ರೂಪಾಯಿ ಬಂಡವಾಳವನ್ನು ಸುಮ್ಮನೆ ಬಿಟ್ಟುಕೊಡಲು ತಯಾರಿಲ್ಲ. ಅದೂ ಕೂಡಾ ಆರ್ಥಿಕತೆ ಪಾತಾಳಕ್ಕೆ ಇಳಿದಿರುವಾಗ, ಯಾವುದೇ ರೀತಿಯ income ಇಲ್ಲದಿರುವ ಇಂತಹ ಪರಿಸ್ಥಿತಿಯಲ್ಲಿ ಬಂಡವಾಳವನ್ನು ಸುಖಾಸುಮ್ಮನೆ ಕಳೆದುಕೊಳ್ಳಲು ಇಷ್ಟಪಡುವುದಕ್ಕೆ ಸಾಧ್ಯವೇ ಇಲ್ಲ. ಇದು ಮಾನವ ಸಹಜ ಗುಣ.
ಇನ್ನು ಹಲವು ರಾಜಕಾರಣಿಗಳು ಕೂಡಾ ಈ ಬಿಲ್ಡರ್‌ಗಳ ಸಾಲಿಗೆ ಬಂದು ನಿಲ್ಲುತ್ತಾರೆ. ಸಿಎಂ ಮೇಲೆ ಇವರ ಒತ್ತಡವನ್ನು ಕೂಡಾ ಅಲ್ಲಗೆಳೆಯುವಂತಿಲ್ಲ. ಆದರೆ, ಅದರೊಂದಿಗೆ ಇತರ ಕಾರಣಗಳು ಕೂಡ ವಲಸೆ ಕಾರ್ಮಿಕರನ್ನು ವಾಪಾಸ್ ಕಳಿಸುವ ಯೋಜನೆಗೆ ವಿರುದ್ದವಾಗಿ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡುತ್ತಿದೆ. ಇನ್ನು ದಕ್ಷಿಣ ಭಾರತದವರಿಗಿಂತ ಅತ್ಯಂತ ವೇಗವಾಗಿ ಮತ್ತು ಸ್ಥಿರವಾಗಿ ಕಟ್ಟಡ ನಿರ್ಮಾಣ ಕೆಲಸ ಮಾಡುವ ಕಲೆ ಉತ್ತರ ಭಾರತದ ಕಾರ್ಮಿಕರಿಗೆ ಇದೆ ಎಂಬುದನ್ನು ಸ್ವತಃ ಬಿಲ್ಡರ್‌ಗಳೇ ಹೇಳುತ್ತಾರೆ.

ಪ್ರತಿಯೊಂದು ರಾಜ್ಯದ ಕಾರ್ಮಿಕರಲ್ಲೂ, ಅವರದೇ ಆದ ಒಂದು ವಿಶೇಷತೆಯಿದೆ. ಒರಿಸ್ಸಾ ಮೂಲದವರು ಎತ್ತರದ ಕಟ್ಟಡಗಳ ಮೇಲೆ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದರೆ, ಮಾರ್ಬಲ್ ಮತ್ತು ಟೈಲ್ಸ್‌ಗಳನ್ನು ಹಾಸುವಲ್ಲಿ ಬಿಹಾರ ಮತ್ತು ಮಧ್ಯಪ್ರದೇಶದ ಕಾರ್ಮಿಕರು ನಿಪುಣರು. ಮಹಾರಾಷ್ಟ್ರ ಮತ್ತು ರಾಜಸ್ಥಾನದ ಕಾರ್ಮಿಕರು ಉತ್ತಮ ಬಡಗಿಗಳು, ಹಾಗೆಯೇ ಸತಾರ ಮತ್ತು ಸಾಂಗ್ಲಿಯವರು ಬಣ್ಣ ಹಚ್ಚುವಲ್ಲಿ ನಿಪುಣರು, ಎಂದು ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕೆಲಸಗಾರರ ಕಲ್ಯಾಣ ಮಂಡಳಿಯ ಮಾಜಿ ಬೋರ್ಡ್ ಸದಸ್ಯರಾದ ಮೋಹನ್ ರಾವ್ ಅವರು ʼಪ್ರತಿಧ್ವನಿʼಗೆ ಮಾಹಿತಿ ನೀಡಿದ್ದಾರೆ.
ಇವರು ಹೇಳುವ ಪ್ರಕಾರ, ಬಹಳಷ್ಟು ಜನ ವಲಸೆ ಕಾರ್ಮಿಕರಿಗೆ ಅವರ ತವರೂರಿಗಿಂತಲೂ ಹೆಚ್ಚಿನ ಸೌಲಭ್ಯ ಇಲ್ಲಿ ಸಿಗುತ್ತಿದೆ. ತಮ್ಮ ಊರಲ್ಲಿ ಕೆಲಸವಿಲ್ಲವೆಂದು ಇಲ್ಲಿ ಬಂದು ದುಡಿಯುತ್ತಿದ್ದವರು, ಮತ್ತೆ ವಾಪಾಸ್ ಅಲ್ಲಿ ಹೋಗಿ ಏನು ಮಾಡುತ್ತಾರೆ? ಅಲ್ಲಿ ಅವರಿಗೆ ಯಾವ ಕೆಲಸ ಸಿಗುತ್ತದೆ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಲಾಕ್‌ಡೌನ್ ಆಗಿರುವ ಸಂದರ್ಭದಲ್ಲಿ ಬಹಳಷ್ಟು ಜನ ಬಿಲ್ಡರ್‌ಗಳು ತಮ್ಮಲ್ಲಿರುವ ವಲಸೆ ಕಾರ್ಮಿಕರಿಗೆ ಊಟ ವಸತಿಯ ಜೊತೆಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೇನೆಂದರೆ, ಕೇವಲ ಬೆಂಗಳುರು ನಗರವೊಂದರಲ್ಲೇ, ಶೇಕಡಾ 90ರಷ್ಟು ಕಟ್ಟಡ ಕಾರ್ಮಿಕರು ವಲಸಿಗರು. ಉತ್ತರ ಕರ್ನಾಟಕ ಭಾಗದಿಂದ ಅಥವಾ ಉತ್ತರ ಭಾರತದಿಂದ ಇಲ್ಲಿ ಬಂದು ನೆಲೆಸಿರುವಂತಹ ಕಾರ್ಮಿಕರೇ ಬಹುಪಾಲು ಸಂಖ್ಯೆಯಲ್ಲಿದ್ದಾರೆ. ಬಹಳಷ್ಟು ಜನರು ಇಲ್ಲಿಗೆ ಸಹಾಯಕರಾಗಿ ಕೆಲಸಕ್ಕೆ ಸೇರಿ ಈಗ ಈ ಉದ್ಯಮದ ಬಹು ಮುಖ್ಯ ಸ್ಥಂಬಗಳಾಗಿದ್ದಾರೆ.
“ವಲಸೆ ಕಾರ್ಮಿಕರು ಒಂದು ವೇಳೆ ರಾಜ್ಯವನ್ನು ತೊರೆದು ಹೋದಲ್ಲಿ ಆಗುವ ನಷ್ಟವನ್ನು ಅಂದಾಜಿಸಲು ಕೂಡಾ ಸಾಧ್ಯವಿಲ್ಲ. ಮುಂದಿನ ಮೂರು ನಾಲ್ಕು ವರ್ಷಗಳ ಮಾತು ಬಿಡಿ, ಈ ವರ್ಷದ ಯೋಜನೆಗಳ ಗತಿಯೇನು?” ಎಂದು ಹೇಳುತ್ತಾರೆ ಬಿಲ್ಡರ್ಸ್ ಅಸೋಸಿಯೇಶನ್ ಇಂಡಿಯಾ (ಬೆಂಗಳೂರು ಕೇಂದ್ರ) ಇದರ ಛೇರ್‌ಮನ್ ಆಗಿರುವ ಜಿ ಎಂ ರವೀಂದ್ರ.
ನಾವು ಕೂಡಾ ನಮ್ಮ ಕಾರ್ಮಿಕರ ಕುರಿತು ಕಾಳಜಿ ವಹಿಸಿದ್ದೇವೆ. ರಾಜಕಾರಣಿಗಳು ಮತ್ತು ಇತರರು ಆಹಾರ ಕಿಟ್ ಕೊಟ್ಟು ಪ್ರಚಾರ ಗಿಟ್ಟಿಸಿಕೊಳ್ಳುತ್ತಾರೆ. ಆದರೆ, ನಾವು ಪ್ರಚಾರದ ಆಸೆಗೆ ಬೀಳದೇ, ಎಲ್ಲಾ ರೀತಿಯ ಸೌಕರ್ಯಗಳನ್ನು ಮಾಡಿಕೊಟ್ಟಿದ್ದೇವೆ. ಇನ್ನು ಮುಂದೆಯೂ ಕೊಡುತ್ತೇವೆ. ಸರ್ಕಾರ ಈಗ ನಮ್ಮ ಸಹಾಯಕ್ಕೆ ನಿಲ್ಲಬೇಕಿದೆ. ವಲಸೆ ಕಾರ್ಮಿಕರು ರಾಜ್ಯ ತೊರೆಯದಂತೆ ಮಾಡಬೇಕಿದೆ, ಎಂಬುದು ರವೀಂದ್ರ ಅವರ ಆಗ್ರಹ.
ಈಗಾಗಲೇ ಬಿಲ್ಡರ್ಸ್‌ಗಳ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಅದರಂತೆ ಮುಖ್ಯಮಂತ್ರಿಗಳು ಕೂಡಾ ವಲಸಿಗರ ಕಾರ್ಮಿಕರು ಕರ್ನಾಟಕ ತೊರೆಯದಂತೆ ಮನವಿ ಮಾಡಿಕೊಂಡಿದ್ದಾರೆ. ಆದರೂ, ವಲಸಿಗ ಕಾರ್ಮಿಕರು ನಾವು ಹೋಗಲೇ ಬೇಕು ಎಂದು ಹಠ ಹಿಡಿದಲ್ಲಿ ಯಾರೂ ಏನೂ ಮಾಡಲು ಆಗಲ್ಲ ಬಿಡಿ. ಆದರೆ, ಅವರು ಇಲ್ಲಿಯೇ ಉಳಿಯಲು ಒಪ್ಪಿಕೊಂಡರೆ, ಅವರ ಅನ್ನದಾತರು ಅಂದರೆ, ಬಿಲ್ಡರ್‌ಗಳು ಕಾರ್ಮಿಕರ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ನಿಜವಾಗಿಯೂ ತುತ್ತು ಅನ್ನ ಅರಸಿ ಬಂದವರ ಹಕ್ಕುಗಳ ದಮನವಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.
 
			
 
                                 
                                 
                                
