ಕರೋನಾ ಲಾಕ್ ಡೌನ್ ನಿಂದ ಸಂಕಷ್ಟಕ್ಕೀಡಾದ ವಲಸೆ ಕಾರ್ಮಿಕರನ್ನ 15 ದಿನದ ಒಳಗಾಗಿ ಅವರ ತವರಿಗೆ ತಲುಪಿಸುವ ಆದೇಶವನ್ನ ಸುಪ್ರೀಂ ಕೋರ್ಟ್ ಮತ್ತೆ ಪುನರುಚ್ಛರಿಸಿದೆ. ವಲಸೆ ಕಾರ್ಮಿಕರ ಬವಣೆಯನ್ನ ಕಂಡು ಸ್ವಯಂ ಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿದ್ದ ಸುಪ್ರೀಂ ಕೋರ್ಟ್ ಕಳೆದ ಜೂನ್ 9 ರಂದೇ ತನ್ನ ಆದೇಶವನ್ನ ನೀಡಿತ್ತು, ಅದರಂತೆ ಕೇಂದ್ರ, ಕೇಂದ್ರಾಡಳಿತ ಪ್ರದೇಶ ಹಾಗೂ ರಾಜ್ಯ ಸರಕಾರಗಳು ವಲಸೆ ಕಾರ್ಮಿಕರ ಪ್ರಯಾಣಕ್ಕೆ ಸೂಕ್ರ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿತ್ತು. ಇದೀಗ ಮತ್ತೆ ಅದೇ ಆದೇಶವನ್ನ ಪುನರುಚ್ಛರಿಸಿರುವ ಜಸ್ಟಿಸ್ ಅಶೋಕ್ ಭೂಷಣ್, ಎಸ್‌ಕೆ ಕೌಲ್ ಹಾಗೂ ಎಂಆರ್ ಶಾ ಅವರಿದ್ದ ತ್ರಿಸದಸ್ಯ ಪೀಠವು, ಹದಿನೈದು ದಿನಗಳ ಒಳಗಾಗಿ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಮತ್ತೆ ಸರಕಾರಗಳಿಗೆ ಸೂಚಿಸಿವೆ.
ನ್ಯಾಯಾಲಯ ನೀಡಿರುವ ಸೂಚನೆ ಬಳಿಕವೂ ಅದೆಷ್ಟೋ ವಲಸೆ ಕಾರ್ಮಿಕರಿಗೆ ಪ್ರಯಾಣ ವ್ಯವಸ್ಥೆ ಆಗಿಲ್ಲ ಅಂತಾ ಸುಪ್ರೀಂ ಕೋರ್ಟ್ ನ ಗಮನಸೆಳೆದ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು, ನ್ಯಾಯಾಲಯದ ಆದೇಶ ಪಾಲನೆ ಆಗುತ್ತಿಲ್ಲ ಎಂದು ದೂರಿದ್ದಾರೆ. ಇದಕ್ಕೆ ಪೂರಕವಾಗಿ ತ್ರಿಸದಸ್ಯ ಪೀಠವು ಜೂನ್ 9 ರಂದು ನ್ಯಾಯಾಲಯವು ನೀಡಿದ ಆದೇಶವು ಸ್ಪಷ್ಟವಾಗಿದೆ ಅಂತಾ ತಿಳಿಸಿದೆ.
ಕಳೆದ ಬಾರಿಯ ಆದೇಶದಲ್ಲಿಯೇ ವಲಸೆ ಕಾರ್ಮಿಕರ ಅನುಕೂಲಕ್ಕಾಗಿ 24 ಗಂಟೆಯೊಳಗಾಗಿ ರೈಲು ಒದಗಿಸುವಂತೆ ಭಾರತ ಸರಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸೂಚಿಸಿತ್ತು. ಇದೀಗ ಮತ್ತೆ ಕೇಂದ್ರ ಹಾಗೂ ಎಲ್ಲಾ ರಾಜ್ಯ ಸರಕಾರಗಳಿಗೂ ಅದೇ ಆದೇಶವನ್ನ ನೀಡಿರುವ ಸುಪ್ರೀಂ ಕೋರ್ಟ್, ಆದಷ್ಟು ಶೀಘ್ರವಾಗಿ ಎಲ್ಲಾ ವಲಸೆ ಕಾರ್ಮಿಕರನ್ನ ಗುರುತಿಸಿ, ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದೆ. ವಿಶೇಷವಾಗಿ ತವರು ರಾಜ್ಯಗಳಿಗೆ ಹೊರಟ ವಲಸೆ ಕಾರ್ಮಿಕರಿಗೆ ಸ್ಥಳೀಯ ಪೊಲೀಸ್ ಠಾಣೆ ಅಥವಾ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ನೋಂದಣಿ ವ್ಯವಸ್ಥೆಯನ್ನ ಕಲ್ಪಿಸಿ ಕೊಡಬೇಕು. ಈ ಕುರಿತ ಮಾಹಿತಿಯನ್ನ ಸ್ಥಳೀಯ ಪತ್ರಿಕೆ, ಟಿವಿಗಳ ಮೂಲಕ ವಲಸೆ ಕಾರ್ಮಿಕರನ್ನ ತಲುಪುವಂತಾಗಬೇಕು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ದೇಶದಲ್ಲಿ ವಲಸೆ ಕಾರ್ಮಿಕರ ಸಂಕಷ್ಟವನ್ನ ಕಂಡ ಸುಪ್ರೀಂ ಕೋರ್ಟ್ ಕಳೆದ ಮೇ ತಿಂಗಳ 26 ರಂದು ಸ್ವಯಂ ಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡು ವಲಸೆ ಕಾರ್ಮಿಕರ ಬಿಕ್ಕಟ್ಟಿನಲ್ಲಿ ಕೇಂದ್ರ ಸರಕಾರದ ವೈಫಲ್ಯ ಹಾಗೂ ಅಸಮರ್ಪಕ ವ್ಯವಸ್ಥೆ ಬಗ್ಗೆ ಬೆಳಕು ಚೆಲ್ಲಿತ್ತು.