ಇಡೀ ದೇಶವೇ ಲಾಕ್‌ಡೌನ್ ಸಂಕಷ್ಟದಲ್ಲಿರುವಾಗ ಪ್ರಧಾನಿ ಮೋದಿ ಗರೀಬ್ ಕಲ್ಯಾಣ್ ಯೋಜನೆ ಅಭಿಯಾನ ಆರಂಭಿಸಿದ್ದಾರೆ. ಕರೋನಾ ಸಂಕಷ್ಟದಲ್ಲಿ ಸಿಲುಕಿ ಒದ್ದಾಡುತ್ತಿರುವ ವಲಸೆ ಕಾರ್ಮಿಕರ ನೆರವಿಗೆ ನಿಂತಿರುವ ಪ್ರಧಾನಿ ನರೇಂದ್ರ ಮೋದಿ ಉದ್ಯೋಗ ಸೃಷ್ಟಿಗೆ ಮುಂದಾಗಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಗರೀಬ್ ಕಲ್ಯಾಣ್ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ಕರೋನಾ ಸಂಕಷ್ಟದಲ್ಲಿ 50 ಸಾವಿರ ಕೋಟಿ ರೂಪಾಯಿ ನಿಗದಿ ಮಾಡಿದ್ದು, ವಲಸೆ ಕಾರ್ಮಿಕರಿಗಾಗಿ ಉದ್ಯೋಗ ಸೃಷ್ಟಿಸಲು ಯೋಜನೆ ರೂಪಿಸಲಾಗಿದೆ. ಹಲವು ರಾಜ್ಯಗಳಿಂದ ಸ್ವಂತ ರಾಜ್ಯಗಳಿಗೆ ವಾಪಸ್ ಆಗಿರುವ ಲಕ್ಷಾಂತರ ವಲಸೆ ಕಾರ್ಮಿಕರಿಗೆ ಇದು ಅನುಕೂಲ ಆಗಲಿದೆ. ಕೇಂದ್ರ ಸರ್ಕಾರವೇ ಸ್ವತಃ ಉದ್ಯೋಗ ಸೃಷ್ಟಿಸಿ 125 ದಿನಗಳ ಕಾಲ ಕೂಲಿ ಕೆಲಸ ಕೊಡಲು ಮುಂದಾಗಿದೆ.

ಭಾರತದ 6 ರಾಜ್ಯಗಳ 116 ಜಿಲ್ಲೆಗಲ್ಲಿ ಈ ಯೋಜನೆ ಜಾರಿಯಾಗ್ತಿದೆ. ಬಿಹಾರದ ಖಗಾರಿಯಾ ಜಿಲ್ಲೆಯ ತೆಲಿಹಾರ್ ಗ್ರಾಮದಿಂದ ಯೋಜನೆ ಚಾಲನೆ ಸಿಕ್ಕಿದೆ. ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್, ಒಡಿಶಾ ರಾಜ್ಯಗಳಲ್ಲಿ ಮಾತ್ರ ಈ ಯೋಜನೆ ಜಾರಿ ಮಾಡಲಾಗ್ತಿದೆ. ಪ್ರಧಾನಿ ನರೇಂದ್ರ ಮೋದಿ ವಲಸೆ ಕಾರ್ಮಿಕರಿಗಾಗಿ ಗರೀಬ್ ಕಲ್ಯಾಣ್ ಯೋಜನೆಯನ್ನು ಉದ್ಘಾಟನೆ ಜೊತೆಗೆ ವಲಸೆ ಕಾರ್ಮಿಕರ ಜೊತೆಗೆ ಸಂವಾದ ಕೂಡ ನಡೆಸಿದರು. ಗ್ರಾಮೀಣಾಭಿವೃದ್ಧಿ ಸಚಿವ ನರೇಂದ್ರ ಸಿಂಗ್ ತೋಮರ್ ಹಾಗೂ ಬಿಹಾರ ಸಿಎಂ ನಿತೀಶ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಗ್ರಾಮೀಣ ಭಾಗದ ಜನರ ಜೀವನಕ್ಕೆ ನೆರವಾಗಲು ಈ ಯೋಜನೆ ಜಾರಿ ಮಾಡಲಾಗ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 125 ದಿನ ಕೆಲಸ ಮಾಡಿದ ವಲಸೆ ಕಾರ್ಮಿಕನಿಗೆ 25,250 ರೂಪಾಯಿ ಹಣವನ್ನು ವೇತನದ ರೂಪದಲ್ಲಿ ಕೊಡಲಾಗುತ್ತದೆ.
ಗರೀಬ್ ಕಲ್ಯಾಣ್ ಯೋಜನೆಯ ಉದ್ದೇಶವೇನು..?
ಕರೋನಾ ಲಾಕ್‌ಡೌನ್ ವೇಳೆ ಲಕ್ಷಾಂತರ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಹುಟ್ಟೂರುಗಳಿಗೆ ತೆರಳಲಾಗದೆ ಸಂಕಷ್ಟ ಅನುಭವಿಸಿದ್ದರು. ಕೂಲಿಯೂ ಇಲ್ಲದೆ, ಸಂಬಳವೂ ಸಿಗದೆ ಹಿಂಸೆ ಅನುಭವಿಸಿದ್ದರು. ಆ ಬಳಿಕ ಶ್ರಮಿಕ್ ರೈಲು ಓಡಿಸಿದ ರೈಲ್ವೆ ಇಲಾಖೆ ವಲಸೆ ಕಾರ್ಮಿಕರನ್ನು ತಮ್ಮ ಹುಟ್ಟೂರುಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಕರ್ನಾಟಕ ಸೇರಿದಂತೆ ದೇಶದ ಇತರೆ ಭಾಗಗಳಿಂದ ಹುಟ್ಟೂರುಗಳಿಗೆ ಹೊರಟಿದ್ದರು. ಬೇರೆ ಬೇರೆ ರಾಜ್ಯಗಳಿಂದ ತವರು ರಾಜ್ಯಕ್ಕೆ ವಾಪಸ್ ಆಗಿದ್ದ ಕಾರ್ಮಿಕರಿಗೆ ಕೇಂದ್ರದ 12 ಸಚಿವಾಲಯಗಳ 25 ಇಲಾಖೆಗಳಡಿ ಬರುವ ಯೋಜನೆಯಲ್ಲಿ 125 ದಿನಗಳ ಕಾಲ ಕೆಲಸ ಕೊಡಲಾಗುತ್ತದೆ. ಆ ಕೆಲಸಕ್ಕೆ ವೇತನವಾಗಿ 25,250 ಸಾವಿರ ಕೊಡುವ ಮೂಲಕ ಕೆಲಸವಿಲ್ಲದೆ ಸಂಕಷ್ಟ ಸಿಲುಕಿದ್ದ ಕಾರ್ಮಿಕರ ಕುಟುಂಬಗಳಿಗೆ ನೆರವಾಗಲು ಮುಂದಾಗಿದ್ದಾರೆ.
ವಲಸೆ ಕಾರ್ಮಿಕರಿಗೆ ಎಲ್ಲೆಲ್ಲಿ ಕೆಲಸ ಸಿಗುತ್ತದೆ..?
ಸಮುದಾಯ ನೈರ್ಮಲ್ಯ ಮತ್ತು ಪರಿಸರ ಇಲಾಖೆ, ಗ್ರಾಮ ಪಂಚಾಯಿತಿ ಭವನ, ರಾಷ್ಟ್ರೀಯ ಹೆದ್ದಾರಿ, ನೀರಿನ ಸಂರಕ್ಷಣೆ ಮತ್ತು ನೀರು ಕೊಯ್ಲು ಕಾರ್ಯಕ್ರಮ, ತೆರೆದ ಬಾವಿಗಳ ನಿರ್ಮಾಣ, ಸಸಿ ನೆಡುವ ಕಾರ್ಯಕ್ರಮ, ತೋಟಗಾರಿಕೆ ಕೆಲಸ, ಅಂಗನವಾಡಿ ಕೇಂದ್ರ, ಗ್ರಾಮೀಣ ಆವಾಸ್ ಯೋಜನೆ, ಗ್ರಾಮೀಣ ರಸ್ತೆ ಮತ್ತು ಗಡಿ ರಸ್ತೆ, ರೈಲ್ವೆ ಇಲಾಖೆ, ಕೃಷಿ ವಿಜ್ಞಾನ, ಖನಿಜ ಸಂಪನ್ಮೂಲ, ಪಶು ಸಂಗೋಪನೆ, ಕೋಳಿ ಸಾಕಣೆ, ಎರೆಹುಳು ಸಾಕಣೆ, ಮಿಶ್ರಗೊಬ್ಬರ, ಟೆಲಿಕಾಂ, ಕೃಷಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಕೆಲಸ, ಗಣಿ, ಕುಡಿಯುವ ನೀರು, ಪೆಟ್ರೋಲಿಯಂ, ನೈಸರ್ಗಿಕ ಅನಿಲ ಇಲಾಖೆಯಲ್ಲೂ ಕೆಲಸ ಲಭ್ಯವಾಗಲಿದೆ ಎನ್ನಲಾಗಿದೆ.
ವಲಸೆ ಕಾರ್ಮಿಕರನ್ನು ಹೇಗೆ ಆಯ್ಕೆ ಮಾಡುತ್ತಾರೆ..?
ಶ್ರಮಿಕ್ ರೈಲಿನ ಸವಲತ್ತು ಪಡೆದು ಹುಟ್ಟೂರಿಗೆ ವಾಪಸ್ ಬಂದ ಕಾರ್ಮಿಕರು, ವಿವಿಧ ರಾಜ್ಯ ಸರ್ಕಾರಗಳಿಂದ ಅನುಮತಿ ಪಡೆದವರು, ಹೊರ ರಾಜ್ಯಗಳ ಕಾರ್ಮಿಕ ಪಟ್ಟಿಯಲ್ಲಿ ಕೆಲಸ ಮಾಡಿದವರು, ರಸ್ತೆ ಮಾರ್ಗದ ಮೂಲಕ ಕಾಲ್ನಡಿಗೆಯಲ್ಲಿ ಬಂದು ರಾಜ್ಯ ಗಡಿಯಲ್ಲಿ ನೋಂದಣಿ ಮಾಡಿಸಿಕೊಂಡು ಹುಟ್ಟೂರಿಗೆ ಬಂದವರು. ಆಯಾ ರಾಜ್ಯಗಳ ಜಿಲ್ಲಾಧಿಕಾರಿಗಳ ಪಟ್ಟಿಯಲ್ಲಿ ಇದ್ದವರಿಗೆ ಈ ಯೋಜನೆಯ ಲಾಭ ಸಿಗಲಿದೆ. ಆದರೆ ಈ ಗರೀಬ್ ಕಲ್ಯಾಣ್ ಯೋಜನೆ ಕೇವಲ ಉತ್ತರ ಭಾರತದ ರಾಜ್ಯಗಳು ಮಾತ್ರ. ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ರಾಜಸ್ಥಾನ, ಜಾರ್ಖಂಡ್, ಓಡಿಶಾ ರಾಜ್ಯಗಳ ವಲಸೆ ಕಾರ್ಮಿಕರನ್ನು ಗುರಿಯಾಗಿಸಿ ಯೋಜನೆ ರೂಪಿಸಲಾಗಿದೆ.
ದಕ್ಷಿಣ ಭಾರತ ಪ್ರಧಾನಿ ಮೋದಿ ಲೆಕ್ಕಕ್ಕೇ ಸಿಗುವುದಿಲ್ಲವೇ..?
ಪ್ರಧಾನಿ ನರೇಂದ್ರ ಮೋದಿ ಗರೀಬ್ ಕಲ್ಯಾಣ್ ಯೋಜನೆಯನ್ನು ಉತ್ತರ ಭಾರತದ 6 ರಾಜ್ಯಗಳಿಗೆ ಮಾತ್ರ ಸೀಮಿತ ಮಾಡಿದ್ದಾರೆ. ಅದರಲ್ಲೂ 116 ಜಿಲ್ಲೆಗಳ ವಲಸೆ ಕಾರ್ಮಿಕರಿಗೆ ಮಾತ್ರ ಈ ಯೋಜನೆಯ ಲಾಭ ಸಿಗಲಿದೆ. ಆದ್ರೆ ಇಲ್ಲಿ ಎದುರಾಗುವ ಪ್ರಶ್ನೆ ಎಂದರೆ, ಕೇವಲ ಉತ್ತರ ಭಾರತದಲ್ಲಿ ಮಾತ್ರ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ..? ದಕ್ಷಿಣ ಭಾರತದಲ್ಲಿ ವಲಸೆ ಕಾರ್ಮಿಕರೇ ಇಲ್ಲವೇ..? ಕೇಂದ್ರ ಸರ್ಕಾರದಿಂದ ಪದೇ ಪದೇ ಯಾಕೆ ಈ ತಾರತಮ್ಯ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ. ಬಹುತೇಕ ಉತ್ತರ ಭಾರತದವರೇ ಪ್ರಧಾನಿ ಸೇರಿದಂತೆ ಪ್ರಮುಖ ಖಾತೆಗಳನ್ನು ಹೊಂದುತ್ತಾರೆ. ಉತ್ತರ ಭಾರತಕ್ಕೆ ಬಹುತೇಕ ಯೋಜನೆಗಳು ಸೇರುತ್ತವೆ. ದಕ್ಷಿಣ ಭಾರತವನ್ನು ಯಾವಾಗಲೂ ಮಲತಾಯಿ ಮಗುವಂತೆ ನೋಡುತ್ತಾರೆ ಎನ್ನುವ ಆರೋಪ ಎಲ್ಲಾ ಸರ್ಕಾರದ ಅವಧಿಯಲ್ಲೂ ಕೇಳಿ ಬರುತ್ತದೆ. ಇದೀಗ ಮೋದಿ ಕೂಡ ಅದನ್ನೇ ಮಾಡಿದ್ದಾರೆ.
ಬಿಜೆಪಿಯನ್ನು ಭರ್ಜರಿಯಾಗಿ ಗೆಲ್ಲಿಸಿರುವ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳ ಕೆಲವು ಜಿಲ್ಲೆಗಳನ್ನು ಆಯ್ಕೆ ಮಾಡುವ ಮೂಲಕ ಎಲ್ಲಾ ರಾಜ್ಯಗಳಿಗೂ ನ್ಯಾಯ ಒದಗಿಸುವ ಕೆಲಸ ಮಾಡಬಹುದಿತ್ತು. ಆದರೆ ಕೇವಲ ಉತ್ತರ ಭಾರತಕ್ಕೆ ಮಾತ್ರ ಸೀಮಿತ ಮಾಡಿದ್ದು ಜನರ ಭಾವನೆಗಳಿಗೆ ಧಕ್ಕೆ ತಂದಂತಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ರಾಜ್ಯಗಳಿಗೂ ವಿಸ್ತರಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರಾಯಚೂರು, ಯಾದಗಿರಿ, ಕೊಪ್ಪಳ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕ, ಹೈದ್ರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಪ್ರಾಂತ್ಯಗಳಲ್ಲಿ ಜನರು ಗುಳೆ ಹೋಗುತ್ತಾರೆ. ಇತ್ತ ಮಂಡ್ಯ, ಹಾಸನ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಾವಿರಾರು ಜನರು ಮುಂಬೈ ನಗರದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಇಲ್ಲಿಯ ಜನರೂ ಬೇರೆ ರಾಜ್ಯಗಳಿಗೆ ಹೋಗಿ ದುಡಿಯುತ್ತಿದ್ದರು. ಅವರ ಜೀವನವೂ ಇದೀಗ ದುಸ್ತರವಾಗಿದೆ. ಅವರ ನೆರವಿಗೂ ಮೋದಿ ನಿಲ್ಲಬೇಕಿತ್ತು ಅಲ್ಲವೇ..? ಎಲ್ಲಾ ರಾಜ್ಯಗಳಲ್ಲೂ ವಲಸೆ ಕಾರ್ಮಿಕರು ಹೆಚ್ಚಾಗಿರುವ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿದ್ದರೂ ಆಗುತ್ತಿತ್ತು. ಆದರೆ ಉತ್ತರ ಭಾರತ ಪ್ರೇಮ ಪ್ರಧಾನಿ ಕಣ್ಣನ್ನು ಕುರುಡಾಗಿಸಿದೆಯೇ..? ಎಂದು ಪ್ರಶ್ನೆ ಮಾಡುವಂತಾಗಿದೆ.










