ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೇಂದ್ರ ಸರ್ಕಾರಕ್ಕೆ, ಖುದ್ದು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದರು. ವಲಸಿಗರಿಗೆ ಆಸರೆಯಾಗಿ ಎಂದು ಕೇಳಿಕೊಂಡರು. ಮೊದಲ ಹಂತದ ಲಾಕ್ಡೌನ್ ಜಾರಿಗೊಳಿಸಿದಾಗ ರಾತ್ರೋರಾತ್ರಿ ದೆಹಲಿಯ ಆನಂದ್ ವಿಹಾರ ರೈಲ್ವೆ ನಿಲ್ದಾಣದ ಎದುರು ಸಾವಿರ ಸಾವಿರ ವಲಸಿಗರು ಬಂದು ಹೇಗೋ ತಮ್ಮತಮ್ಮ ಊರು ಸೇರಿಕೊಂಡುಬಿಡಬಹುದು ಎಂದುಕೊಂಡರು. ನಂತರ ಕೆಲವರು ನಡೆದುಕೊಂಡೇ ಊರ ದಾರಿ ಹಿಡಿದರು. ದಾರಿ ನಡುವೆ ಅವರಿಗಾದ ಹಸಿವು-ನೀರಡಿಕೆ ಘನ ನಾಗರಿಕ ಸಮಾಜಕ್ಕೆ, ವಿಶ್ವಗುರು ಎಂದುಕೊಂಡವರಿಗೆ ಮುಖ್ಯವಾಗಲೇ ಇಲ್ಲ. ಆಗ ಸೋನಿಯಾ ಗಾಂಧಿ ಅಷ್ಟೇಯಲ್ಲ ರಾಹುಲ್ ಗಾಂಧಿ ಕೂಡ ‘ವಲಸಿಗರ ಕಡೆ ಗಮನಕೊಡಿ’ ಎಂದರು. ಸರ್ಕಾರ ಮಾತ್ರ ಸುಮ್ಮನಿತ್ತು.
ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ
ದೆಹಲಿಯ ಆನಂದ್ ವಿಹಾರ ರೈಲ್ವೆ ನಿಲ್ದಾಣದ ಎದುರು ನಡೆದ ಪ್ರಹಸನ ಪಾತ್ರೆಯೊಳಗಣ ಅಗುಳು. ದೇಶದುದ್ದಕ್ಕೂ ಹೆಚ್ಚು ಕಡಿಮೆ ಹೀಗೇ ಆಗಿತ್ತು. ಕಾಲುನಡಿಗೆಯಲ್ಲಿ ಹೋದವರು ಏನಾದರೋ ಯಾವ ಸರ್ಕಾರದ ಬಳಿಯೂ ಲೆಕ್ಕವಿಲ್ಲ. ಉಳಿದುಕೊಂಡವರ ಸಮಸ್ಯೆ ದಿನದಿಂದ ದಿನಕ್ಕೆ ಬೆಳೆಯಿತು. ರಾಜ್ಯ ಸರ್ಕಾರಗಳಿಗೆ ತಲೆನೋವಾಯಿತು. ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರದ ಬೆನ್ನುಬಿದ್ದವು. ಇನ್ನೊಂದೆಡೆ ಸೋನಿಯಾ ಗಾಂಧಿ ಪ್ರಧಾನಿ ಮೋದಿಗೆ ಪತ್ರದ ಮೇಲೆ ಪತ್ರ ಬರೆದರು. ಜನ ಹಸಿವಿನಿಂದ ಸತ್ತ ಮೇಲೆ, ಅವರ ಆಕ್ರಂದನ ಗೆರೆ ದಾಟಿದ ಮೇಲೆ, ರಾಜ್ಯ ಸರ್ಕಾರಗಳು ಒತ್ತಡ ಹೇರಿದ ಮೇಲೆ, ಕಾಂಗ್ರೆಸ್ ಒತ್ತಡವೂ ತೀವ್ರಗೊಳ್ಳತೊಡಗಿದ ಮೇಲೆ ಕಡೆಗೂ ಕೇಂದ್ರ ಸರ್ಕಾರ ವಲಸೆ ಕಾರ್ಮಿಕರ ಕಡೆಗೆ ಕಣ್ಣು ಬಿಟ್ಟಿತು.
ಕಾಂಗ್ರೆಸ್ ಒತ್ತಡ ಹೆಚ್ಚಾಯಿತು, ಅದರಿಂದ ಕೇಂದ್ರ ಸರ್ಕಾರ ಕಣ್ಣು ಬಿಟ್ಟಿತು ಎಂಬುದಕ್ಕೆ ಇತ್ತೀಚೆಗೆ ಬಿಜೆಪಿಯ ಪ್ರಭಾವಿ ನಾಯಕ, ಗೃಹ ಸಚಿವ ಅಮಿತ್ ಶಾ, ಕೇಂದ್ರ ವಾರ್ತಾ ಮತ್ತು ಪ್ರಚಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್, ಶಾಹನವಾಜ್ ಹುಸೇನ್ ರೀತಿಯ ಬಿಜೆಪಿ ವಕ್ತಾರರು ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ಮೇಲೆ ಮಾಡಿದ ವಾಗ್ದಾಳಿಯೇ ಸಾಕ್ಷಿ. ಕಾಂಗ್ರೆಸ್ ಪಕ್ಷ ವಲಸೆ ಕಾರ್ಮಿಕರ ಬಗ್ಗೆ ತೋರಿದ ಕಾಳಜಿ ಮತ್ತು ಆಡಿದ ಮಾತುಗಳು ಬಿಜೆಪಿ ನಾಯಕರ ಕಣ್ಣಿಗೆ ರಾಜಕೀಯದಂತೆ ಕಂಡಿತ್ತು. ವಲಸೆ ಕಾರ್ಮಿಕರ ಸಮಸ್ಯೆ ಹೆಚ್ಚಾದರೆ ಕಾಂಗ್ರೆಸ್ ಮಾತನಾಡುತ್ತದೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮಾತನಾಡುತ್ತಾರೆ ಎನ್ನುವ ಕಾರಣಕ್ಕಾಗಿಯೇ ವಲಸೆ ಕಾರ್ಮಿಕರು ಅವರವರೂರು ತಲುಪಿಕೊಳ್ಳಲು ವಿಶೇಷ ರೈಲು ಬಿಡುಗಡೆ ಮಾಡಲಾಯಿತು. ಅದಕ್ಕಾಗಿ ಲಾಕ್ಡೌನ್ ನಿಯಮಗಳನ್ನೂ ಸಡಿಲಿಸಲಾಯಿತು.
ಕಾಂಗ್ರೆಸ್ ಸಹಾಯ ಹಸ್ತ
ಆದರಿದು ಹಿಡಿ ಅನ್ನ ಅರಸಿ ತನ್ನದಲ್ಲದ ಊರಿಗೆ ಬಂದು ಈಗ ಅನ್ನ-ನೀರಿಲ್ಲದೆ ವಿಲವಿಲ ಒದ್ದಾಡುತ್ತಿದ್ದ ವಲಸೆ ಕಾರ್ಮಿಕರ ಮೂಗಿಗೆ ತುಪ್ಪ ಸವರುವ ಕೆಲಸ ಆಗಿತ್ತು. ಏಕೆಂದರೆ ರೈಲ್ವೆ ಬೋರ್ಡ್ ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣ ದರವನ್ನು ರಾಜ್ಯ ಸರ್ಕಾರಗಳೇ ಭರಿಸಬೇಕು ಎಂದು ತಾಕೀತು ಮಾಡಿತು. ಸಂಪನ್ಮೂಲವಿಲ್ಲದೆ ಸೊರಗಿರುವ ರಾಜ್ಯ ಸರ್ಕಾರಗಳು, ರೈಲ್ವೆ ಇಲಾಖೆಯೇ ಕಳುಹಿಸಿಕೊಡಬೇಕು ಎಂದು ಹೇಳತೊಡಗಿದವು. ಕೇಂದ್ರ ಸರ್ಕಾರ ಕೂಡ ಏನಾದರೊಂದು ಕ್ರಮ ಕೈಗೊಳ್ಳುವ ದೊಡ್ಡ ಮನಸ್ಸು ಮಾಡಲಿಲ್ಲ. ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರಗಳ ಈ ಕಿತ್ತಾಟದಲ್ಲಿ ವಲಸೆ ಕಾರ್ಮಿಕರ ಸಮಸ್ಯೆ ಇನ್ನಷ್ಟು ಬಿಗಡಾಯಿಸಿತು. ಸಮಸ್ಯೆ ಸಂಕೀರ್ಣವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಮತ್ತೆ ವಲಸೆ ಕಾರ್ಮಿಕರ ನೆರವಿಗೆ ಧಾವಿಸಿದೆ. ಅತಂತ್ರ ಸ್ಥಿತಿಯಲ್ಲಿರುವ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಿಕೊಡಲು ಪಕ್ಷದ ವತಿಯಿಂದ ರೈಲ್ವೆ ಪ್ರಯಾಣ ದರ ತುಂಬಿಕೊಡುವುದಾಗಿ ಕಾಂಗ್ರೆಸ್ ಘೋಷಿಸಿದೆ.
ನೆರವು ನೀಡುವಂತೆ ಸೋನಿಯಾ ಸೂಚನೆ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರದೇಶ ಕಾಂಗ್ರೆಸ್ ಘಟಕಗಳಿಗೆ ‘ನಿಮ್ಮ ರಾಜ್ಯದ ವಲಸೆ ಕಾರ್ಮಿಕರು ಎಲ್ಲೇ ಸಿಲುಕಿದ್ದರೂ ಅಥವಾ ನಿಮ್ಮ ರಾಜ್ಯದಲ್ಲಿ ಸಿಲುಕಿರುವ ವಲಸಿಗರು ಅವರೂರಿಗೆ ಹೋಗಲು ಪ್ರಯತ್ನಿಸುತ್ತಿದ್ದರೆ ಅಂಥವರನ್ನು ಗುರುತಿಸಿ ಅವರ ರೈಲ್ವೆ ಪ್ರಯಾಣ ದರವನ್ನು ಪಕ್ಷದ ವತಿಯಿಂದ ಭರಿಸಬೇಕು’ ಎಂದು ಸೂಚನೆ ನೀಡಿದ್ದಾರೆ.
ಜೊತೆಗೆ ವಲಸೆ ಕಾರ್ಮಿಕರ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಕೇಂದ್ರ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ. ‘ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವುದಕ್ಕಾಗಿ ಉಚಿತವಾಗಿ ವಿಮಾನಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ. ಆದರೆ ದುರ್ದಿನಗಳನ್ನು ದೂಡುತ್ತಿರುವ ವಲಸೆ ಕಾರ್ಮಿಕರಿಗೆ ಮಾತ್ರ ಏಕೆ ಉಚಿತ ಪ್ರಯಾಣದ ವ್ಯವಸ್ಥೆ ಕಲ್ಪಿಸಿಲ್ಲ? ಎಂದು ಪ್ರಶ್ನಿಸಿದ್ದಾರೆ. ಕೂಡಲೇ ವಲಸೆ ಕಾರ್ಮಿಕರನ್ನು ರೈಲಿನಲ್ಲಿ ಉಚಿತವಾಗಿ ಊರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಬೇಕುʼ ಎಂದು ತಾಕೀತು ಮಾಡಿದ್ದಾರೆ.
ಕೇಂದ್ರ ಸರ್ಕಾರಕ್ಕೆ ತಿವಿದ ರಾಹುಲ್ ಗಾಂಧಿ
ವಲಸೆ ಕಾರ್ಮಿಕರ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವ ಕೇಂದ್ರ ಸರ್ಕಾರದ ನಡೆಯನ್ನು ಮೊದಲಿಂದಲೂ ತೀಕ್ಷ್ಣವಾಗಿ ವಿರೋಧಿಸಿಕೊಂಡು ಬರುತ್ತಿರುವ ಕಾಂಗ್ರೆಸ್ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ, ‘ರೈಲ್ವೆ ಇಲಾಖೆ ಪಿಎಂ ಕೇರ್ ಖಾತೆಗೆ 151 ಕೋಟಿ ರೂಪಾಯಿಗಳನ್ನು ಕೊಟ್ಟಿದೆ. ಆದರೆ ಬಡ ವಲಸೆ ಕಾರ್ಮಿಕರಿಂದ ಅವರವರೂರಿಗೆ ತೆರಳುವ ಹಣ ಕೇಳುತ್ತಿದೆ. ಕೇಂದ್ರ ಸರ್ಕಾರ ಈ ಒಗಟನ್ನು ಬಿಡಿಸಬೇಕು’ ಎಂದು ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿದ್ದಾರೆ.
ಸುಬ್ರಹ್ಮಣ್ಯ ಸ್ವಾಮಿ ಕೂಡ ಕಿಡಿ
ಬಿಜೆಪಿಯ ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯ ಸ್ವಾಮಿ ಕೂಡ ಕೇಂದ್ರ ಸರ್ಕಾರ ಮತ್ತು ರೈಲ್ವೆ ಇಲಾಖೆ ವಲಸೆ ಕಾರ್ಮಿಕರ ಬಗ್ಗೆ ತಳೆದಿರುವ ಅಮಾನವೀಯ ನಡೆಗೆ ಕಿಡಿಕಾರಿದ್ದಾರೆ. ಹಸಿವಿನಿಂದ ಸಾಯುತ್ತಿರುವ ವಲಸೆ ಕಾರ್ಮಿಕರಿಂದ ಹಣ ಕೇಳುವಷ್ಟು ದುಸ್ಥಿತಿಯಲ್ಲಿದೆಯೇ ಭಾರತ ಸರ್ಕಾರ ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಅಲ್ಲದೆ ಸೊನಿಯಾ ಗಾಂಧಿ ಅವರ ಹೇಳಿಕೆಗೆ ದನಿಗೂಡಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ವಿದೇಶದಲ್ಲಿ ಸಿಲುಕಿದ್ದವರನ್ನು ಉಚಿತವಾಗಿ ಕರೆತರಲು ಸಾಧ್ಯವಾಗುತ್ತದೆ, ಆದರೆ ವಲಸೆ ಕಾರ್ಮಿಕರಿಂದ ಮಾತ್ರ ಏಕೆ ಹಣವನ್ನು ಕೇಳಲಾಗುತ್ತಿದೆ? ಎಂದು ಪ್ರಶ್ನಿಸಿದ್ದಾರೆ.
ಶತಮಾನದ ಇತಿಹಾಸವುಳ್ಳ, ಬಡವರ ಪಕ್ಷ ಎಂದೇ ಕರೆಸಿಕೊಳ್ಳುತ್ತಿದ್ದ ಕಾಂಗ್ರೆಸ್ ಕಡೆಗೂ ಬಹಳ ಅಪರೂಪದ ಹೆಜ್ಜೆ ಇಟ್ಟಿದೆ. ವಲಸೆ ಕಾರ್ಮಿಕರ ರೈಲ್ವೆ ಪ್ರಯಾಣದ ದರವನ್ನು ತುಂಬುವ ಕಾಂಗ್ರೆಸ್ ಪಕ್ಷದ ನಿಲುವಿನಿಂದಾಗಿ ಅತಂತ್ರ ಸ್ಥಿತಿಯಲ್ಲಿದ್ದ ವಲಸೆ ಕಾರ್ಮಿಕರು ಕಿಂಚಿತ್ತಾದರೂ ನಿಟ್ಟುಸಿರು ಬಿಡುವಂತಾಗಿದೆ.