ಒಂದು ಕಡೆ ಲಾಕ್ ಡೌನ್ ನಿಂದಾಗಿ ಕೂಲಿ ಇಲ್ಲದೆ ಬದುಕು ನಡೆಸುವುದು ಕಷ್ಟವೆಂದು ಬೆಂಗಳೂರು ತೊರೆದು ದೂರದ ಸಿಂಧನೂರಿಗೆ ನಡೆದುಕೊಂಡು ಹೊರಟ್ಟಿದ್ದ ಗಂಗಮ್ಮ ಅನ್ನ-ನೀರು ಕಾಣದೆ ಹಾದಿಯ ಹೆಣವಾದ ಸುದ್ದಿ ಬಂದಿದೆ. ಮತ್ತೊಂದೆಡೆ ಇಂತಹ ವಲಸಿಗ ಕೂಲಿಕಾರ್ಮಿಕರಿಗೆ ಸರ್ಕಾರ ಮಾಸಾಶನ ನೀಡಬೇಕು ಎಂಬ ಕೋರಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿರುವ ದೇಶದ ಸರ್ವೋಚ್ಛ ನ್ಯಾಯಾಲಯ, ಅಂಥವರಿಗೆಲ್ಲಾ ಸರ್ಕಾರ ಊಟೋಪಚಾರದ ವ್ಯವಸ್ಥೆ ಮಾಡಿರುವಾಗ ಪ್ರತ್ಯೇಕವಾಗಿ ಹಣಕಾಸಿನ ನೆರವಿನ ಅಗತ್ಯವಿಲ್ಲ ಎಂದಿದೆ!
ಲಾಕ್ ಡೌನ್ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡು ಬೀದಿಪಾಲಾಗಿರುವ ದಿನಗೂಲಿ ವಲಸೆ ಕಾರ್ಮಿಕರಿಗೆ ಕೂಡಲೇ ದಿನಗೂಲಿ ಭತ್ಯೆ ನೀಡಬೇಕು ಎಂದು ಕೋರಿ ಸಾಮಾಜಿಕ ಹೋರಾಟಗಾರ ಹರ್ಷ ಮಂದರ್ ಹಾಗೂ ಅಂಜಲಿ ಭಾರದ್ವಾಜ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್ಎ ಬೊಬ್ಡೆ ನೇತೃತ್ವದ ಮೂವರು ನ್ಯಾಯಾಧೀಶರ ಪೀಠ, ನಿರಾಶ್ರಿತರ ಶಿಬಿರಗಳಲ್ಲಿ ವಲಸೆ ಕಾರ್ಮಿಕರು ಊಟೋಪಚಾರ ಪಡೆಯುತ್ತಿರುವುದರಿಂದ ಅವರಿಗೆ ದಿನಗೂಲಿಯಾಗಿ ಹಣವನ್ನು ನೀಡುವ ಅಗತ್ಯವಿಲ್ಲ ಎಂದು ಹೇಳಿದೆ.
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್, ದೇಶಾದ್ಯಂತ ಸುಮಾರು ನಾಲ್ಕು ಲಕ್ಷ ವಲಸೆ ಕಾರ್ಮಿಕರು ನಿರಾಶ್ರಿತರ ಶಿಬಿರಗಳಲ್ಲಿದ್ದಾರೆ. ಇದು ಸಾಮಾಜಿಕ ಅಂತರದ ಕಟು ವ್ಯಂಗ್ಯ. ತಮ್ಮ ಕಕ್ಷಿದಾರರ ಸಮೀಕ್ಷೆಯ ಪ್ರಕಾರ ಶೇ.40ರಷ್ಟು ವಲಸೆ ಕಾರ್ಮಿಕರು ಈಗಲೂ ನಗರಗಳ ತಮ್ಮ ಮನೆಗಳಲ್ಲೇ ವಾಸವಿದ್ದು, ವಾಪಸ್ ತಮ್ಮ ಊರುಗಳಿಗೆ ಮರುವಲಸೆ ಹೋಗಿಲ್ಲ. ಅಂಥವರಿಗೆ ಒಂದು ಹೊತ್ತಿನ ಊಟಕ್ಕೂ ಈಗ ಕೈಯಲ್ಲಿ ಕಾಸಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ನ್ಯಾಯಪೀಠದ ಮನವರಿಕೆಗೆ ಯತ್ನಿಸಿದರು.
ಆದರೆ, ವಲಸೆ ಕಾರ್ಮಿಕರಿಗೆ ನಿರಾಶ್ರಿತರ ಶಿಬಿರಗಳಲ್ಲಿ ಊಟೋಪಚಾರದ ವ್ಯವಸ್ಥೆ ಮಾಡಿರುವುದರಿಂದ ಅವರಿಗೆ ಪ್ರತ್ಯೇಕವಾಗಿ ಹಣ ನೀಡುವ ಅಗತ್ಯವಿಲ್ಲ ಎಂಬ ಕೇಂದ್ರ ಸರ್ಕಾರದ ಪ್ರಮಾಣಪತ್ರವನ್ನು ಉಲ್ಲೇಖಿಸಿ, ಅವರಿಗೆ ಶಿಬಿರದಲ್ಲಿ ಆಹಾರ ಬೇಕಿದೆ ಅಷ್ಟೇ ಅಲ್ಲವೇ ಎಂದು ಸಿಜೆಐ ಪ್ರಶ್ನಿಸಿದರು. ಆ ವೇಳೆ, ಭೂಷಣ್, ಅವರಿಗೆ ಆಹಾರವಷ್ಟೇ ಅಲ್ಲದೆ, ನಡುವೆ ಸಿಕ್ಕಿಹಾಕಿಕೊಂಡಿರುವ ತಮ್ಮ ಮನೆಮಂದಿಯನ್ನು ಊರಿಗೆ ತಲುಪಿಸಲು ಹಣದ ಅಗತ್ಯವೂ ಇದೆ ಎಂದು ಕೋರಿದರು.
ಈ ನಡುವೆ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸರ್ಕಾರ ವಲಸೆ ಕಾರ್ಮಿಕರ ಸಮಸ್ಯೆಗಳನ್ನು ಕೇಳಲು ಪ್ರತ್ಯೇಕ ಕಾಲ್ ಸೆಂಟರ್ ಗಳನ್ನೂ ಸ್ಥಾಪಿಸಿದೆ ಎಂಬ ವಿವರವನ್ನೂ ಪೀಠದ ಮುಂದೆ ಮಂಡಿಸಿದರು.
ಆದರೆ, ಭೂಷಣ್ ಅವರು ಶಿಬಿರದಲ್ಲಿ ಕಾರ್ಮಿಕರಿಗೆ ನೀಡುತ್ತಿರುವ ಆಹಾರದ ಗುಣಮಟ್ಟ ಕೂಡ ಸರಿಯಿಲ್ಲ ಎಂದಾಗ, ಆಹಾರದ ಗುಣಮಟ್ಟದ ವಿಷಯದಲ್ಲಿ ನಾವು ತಜ್ಞರಲ್ಲ. ವಾಸ್ತವವಾಗಿ ಅಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಯದೇ ಆ ಬಗ್ಗೆ ಮಧ್ಯಪ್ರವೇಶಿಸಲು ಬಯಸುವುದಿಲ್ಲ. ಹೆಚ್ಚೆಂದರೆ ಅಲ್ಲಿನ ಜನರ ಸಮಸ್ಯೆ ಆಲಿಸಲು ಪ್ರತ್ಯೇಕ ಹೆಲ್ಪ್ ಲೈನ್ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಸೂಚಿಸುತ್ತೇವೆ ಎಂದು ಸಿಜೆಐ ಪ್ರತಿಕ್ರಿಯಿಸಿದರು.
ಆ ಹಂತದಲ್ಲಿ ಮಧ್ಯಪ್ರವೇಶಿಸಿದ ಸಾಲಿಸಿಟರ್ ಜನರಲ್, ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೇವಲ ಊಹಾಪೋಹದ ಮೇಲೆ ನಿಂತಿದೆ ವಿನಃ ಯಾವುದೇ ವಾಸ್ತವಾಂಶಗಳಿಲ್ಲ ಎಂದು ಪೀಠದ ಗಮನ ಸೆಳೆದರು. ಆ ಬಳಿಕ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಸಲ್ಲಿಸಿರುವ ಪ್ರಮಾಣಪತ್ರವನ್ನು ಓದಲು ವಕೀಲ ಭೂಷಣ್ ಅವರಿಗೆ ಕಾಲಾವಕಾಶ ನೀಡುವುದಾಗಿ ಹೇಳಿದ ಪೀಠ, ಏಪ್ರಿಲ್ 13ಕ್ಕೆ ವಿಚಾರಣೆಯನ್ನು ಮುಂದೂಡಿತು!