ಕರೋನಾ ಸೋಂಕಿನಿಂದ ಇಡೀ ಪ್ರಪಂಚವೇ ತತ್ತರಿಸಿ ಹೋಗಿದೆ. ಭಾರತದಲ್ಲೂ ಸೋಂಕು ಅರ್ಧ ಲಕ್ಷ ಗಡಿಯನ್ನು ದಾಟಿಕೊಂಡು ಶರವೇಗದಲ್ಲಿ ಮುನ್ನುಗ್ಗುತ್ತಿದೆ. ಈ ವೇಳೆಯಲ್ಲಿ ಸೋಂಕು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಲಾಕ್ಡೌನ್ ಕ್ರಮದಿಂದ ಜನರಿಗೆ ಉಪಯೋಗವಾಯ್ತೋ ಇಲ್ಲವೋ ಗೊತ್ತಾಗ್ತಿಲ್ಲ. ಯಾಕಂದ್ರೆ ಲಾಕ್ಡೌನ್ ಇದ್ದರೂ ದಿನಕ್ಕೆ ಎರಡರಿಂದ ಮೂರು ಸಾವಿರ ಜನರಿಗೆ ಸೋಂಕು ಹರಡುತ್ತಲೇ ಇದೆ. 40 ದಿನಗಳ ಕಾಲ ಕಟ್ಟುನಿಟ್ಟಿನ ಲಾಕ್ಡೌನ್ ಇದ್ದಾಗಲೂ ಜನರ ಸಂಪರ್ಕ ಹೇಗೆ ಸಾಧ್ಯವಾಯ್ತು ಎಂದು ಪ್ರಶ್ನೆ ಕೇಳುವ ಸಮಯ ಬರುತ್ತಿದೆ. ಲಾಕ್ಡೌನ್ನಿಂದ ಸ್ವಲ್ಪವೂ ಅನುಕೂಲ ಆಗಿಲ್ಲ ಎಂದು ಹೇಳಲು ಆಗದಿದ್ದರೂ ಭಾಗಶಃ ಪ್ರಯೋಜನವಾಗಿದೆ ಎಂದು ನೇರವಾಗಿಯೇ ಹೇಳಬಹುದು. ಆದರೆ ಲಾಕ್ಡೌನ್ ಸಂಧರ್ಭದಲ್ಲಿ ಅನ್ನಕ್ಕೆ ಸಂಕಷ್ಟ ಎದುರಾಗಿ ಉತ್ತರ ಪ್ರದೇಶದಲ್ಲಿ ತಾಯಿ ಸೇರಿ ಮೂವರು ಮಕ್ಕಳು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ನಿಮ್ಮ ʼಪ್ರತಿಧ್ವನಿʼ ಕೂಡ ವರದಿ ಮಾಡಿತ್ತು. ಆದರೂ ಸರ್ಕಾರಗಳು ಘಟನೆಗಳಿಂದ ಬುದ್ಧಿ ಕಲಿಯುವ ಕೆಲಸ ಮಾಡುತ್ತಿಲ್ಲ. ವಲಸೆ ಕಾರ್ಮಿಕರು, ಬಡವರ ಬಗ್ಗೆ ಕಾಳಜಿಯೂ ಇಲ್ಲದಂತೆ ನಡೆದುಕೊಳ್ಳುತ್ತಿವೆ. ಇದಕ್ಕೆ ಮಹಾರಾಷ್ಟ್ರದಲ್ಲಿ ಇಂದು ನಡೆದಿರುವ ಘಟನೆಯೇ ಸಾಕ್ಷಿ.

ಮಹಾರಾಷ್ಟ್ರದ ಔರಂಗಬಾದ್ ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದೆ. ಗೂಡ್ಸ್ ರೈಲು ಹರಿದು ಬರೋಬ್ಬರಿ ಬಡ ಕುಟುಂಬಗಳ 16 ಜನ ಮಸಣ ಸೇರಿದ್ದಾರೆ. ಮಧ್ಯಪ್ರದೇಶ ಮೂಲದ ವಲಸೆ ಕಾರ್ಮಿಕರು ಮಹಾರಾಷ್ಟ್ರ ಹಲವು ಕಡೆ ಬದುಕು ಕಟ್ಟಿಕೊಂಡಿದ್ದರು. ಲಾಕ್ಡೌನ್ ಮೂರನೇ ಬಾರಿಗೆ ವಿಸ್ತರಣೆ ಆಗಿದ್ದು, ಮೇ 17ರ ತನಕ ಹೋಟೆಲ್ ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸೇರಿದಂತೆ ದಿನಗೂಲಿ ಕಾರ್ಮಿಕರ ಬದುಕು ಚೇತರಿಕೆ ಕಾಣುವ ಲಕ್ಷಣ ಕಾಣಿಸುತ್ತಿಲ್ಲ. ಊಟಕ್ಕೂ ಪರದಾಡುವ ಸ್ಥಿತಿ ಜೊತೆ ಮಹಾರಾಷ್ಟ್ರದಲ್ಲಿ ಸೋಂಕು ಮಿತಿ ಮೀರಿ ಹೋಗುತ್ತಿರುವ ಕಾರಣಕ್ಕೆ ಜನರು ಕಾಲ್ನಡಿಯಲ್ಲೇ ಮಧ್ಯಪ್ರದೇಶದತ್ತ ಹೊರಟಿದ್ದರು. ಕೇಂದ್ರ ಸರ್ಕಾರ ವಲಸೆ ಕಾರ್ಮಿಕರನ್ನು ತಡೆಯುವ ಕೆಲಸ ಮಾಡಬಾರದು, ಅವರು ಹುಟ್ಟೂರುಗಳಿಗೆ ತೆರಳಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದ ಬಳಿಕವೂ ಎರಡು ರಾಜ್ಯಗಳ ನಡುವಿನ ಸಮನ್ವಯದ ಕೊರತೆಯಿಂದ ರೈಲು ವ್ಯವಸ್ಥೆ ಮಾಡಿಲ್ಲ. ಹಾಗಾಗಿ ಗುಂಪು ಗುಂಪಾಗಿ ಮಧ್ಯಪ್ರದೇಶದತ್ತ ಸಾಗುತ್ತಿದ್ದ ಜನರು ಔರಂಗಾಬಾದ್ ಬಳಿ ರೈಲ್ವೆ ಟ್ರ್ಯಾಕ್ ಹತ್ರ ಮಲಗಿದ್ರು ಎನ್ನಲಾಗಿದೆ. ಜಲ್ನಾದಿಂದ ಔರಂಗಾಬಾದ್ ಕಡೆಗೆ ತೆರಳುತ್ತಿದ್ದ ಗೂಡ್ಸ್ ರೈಲು ಕರ್ಮಡ್ ಪೊಲೀಸ್ ಠಾಣೆ ಸರಹದ್ದಿನಲ್ಲಿ ಸುಸ್ತಾಗಿ ಮಲಗಿದ್ದವರ ಮೇಲೆ ಬೆಳಗ್ಗೆ 6.30ರ ಸಮಯಕ್ಕೆ ಹರಿದಿದೆ. 16 ಮಂದಿ ಕಾರ್ಮಿಕರು ರೈಲು ಹಳಿ ಮೇಲೆಯೇ ಪ್ರಾಣಬಿಟ್ಟಿದ್ದಾರೆ.
ಬೆಂಗಳೂರಿನಿಂದ ರಾಯಚೂರಿಗೆ ಕಾಲ್ನಡಿಯಲ್ಲಿ ಸಾಗುತ್ತಿದ್ದ ಮಹಿಳೆ ಬಳ್ಳಾರಿಯಲ್ಲಿ ಸಾವನ್ನಪ್ಪಿದ್ದರು. ಈ ಬಗ್ಗೆಯೂ ಸರ್ಕಾರದ ಗಮನ ಸೆಳೆಯಲಾಗಿತ್ತು. ದೆಹಲಿಯಲ್ಲಿ ವಲಸೆ ಕಾರ್ಮಿಕನ ಸಾವಿನ ಬಗ್ಗೆ ವಿಶ್ವ ಮಾನವ ಹಕ್ಕುಗಳ ಅಧ್ಯಕ್ಷೆ ಖಂಡನೆ ವ್ಯಕ್ತಪಡಿಸಿದಾಗಲೇ ಕರ್ನಾಟಕ ಸರ್ಕಾರವನ್ನು ನಿಮ್ಮ ʼಪ್ರತಿಧ್ವನಿʼ ಎಚ್ಚರಿಸಿತ್ತು. ಆದರೆ ಕರ್ನಾಟಕ ಸರ್ಕಾರ ಕಿವಿ ಮೇಲೆ ಹಾಕಿಕೊಳ್ಳುವ ಕೆಲಸ ಮಾಡಲಿಲ್ಲ. ಇದೀಗ ಬಿಹಾರಿ ಕಾರ್ಮಿಕರ ವಿಚಾರದಲ್ಲೂ ಕರ್ನಾಟಕ ಸರ್ಕಾರ ಎಡವಟ್ಟು ಮಾಡುತ್ತಿದೆ. ಸಾಮಾಜಿಕ ಅಂತರವನ್ನೇ ಕಾಯ್ದುಕೊಳ್ಳದ ಕೂಲಿ ಕಾರ್ಮಿಕರು ಗುಂಪು ಗುಂಪಾಗಿ ವಾಸ ಮಾಡುತ್ತಿದ್ದಾರೆ. ಇವರಿಂದ ಈಗಾಗಲೇ ಮಂಗಮ್ಮನ ಪಾಳ್ಯ ಸೇರಿದಂತೆ ಬೆಂಗಳೂರಿನ ಹಲವು ಕಡೆ ಸೋಂಕು ಹರಡಿದೆ. ಈ ಕಾರ್ಮಿಕರು ಇದೀಗ ಬಿಹಾರಕ್ಕೆ ತೆರಳಲು ಸಜ್ಜಾಗಿದ್ದರೂ ವಾಪಸ್ ಕಳುಹಿಸುವ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಸರ್ಕಾರದ ಈ ನಿರ್ಧಾರದ ಹಿಂದೆ ಬಿಲ್ಡರ್ ಗಳ ಲಾಬಿ ಕೆಲಸ ಮಾಡಿದೆ ಎನ್ನುವುದು ಸ್ವಪಷ್ಟವಾಗಿದೆ. ಯಾಕೆಂದರೆ ಬಿಲ್ಡರ್ ಗಳ ಜೊತೆಗೆ ಸಿಎಂ ಸಭೆ ಮಾಡಿದ ಬಳಿಕ ಈ ನಿರ್ಧಾರ ಹೊರಬಿದ್ದಿದೆ. ಆದರೆ ಸರ್ಕಾರ ಹೇಳುತ್ತಿರುವುದು ಬಿಹಾರ ಸರ್ಕಾರ ವಾಪಸ್ ಕರೆಸಿಕೊಳ್ಳಲು ನಿರ್ಧಾರ ಮಾಡಿ ಪತ್ರ ಕಳುಹಿಸಿಲ್ಲ ಎನ್ನುವುದು. ಒಂದು ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಸಂವಹನ ನಡೆಸುವುದು ಅಷ್ಟೊಂದು ಕಷ್ಟವೇ ಎನ್ನುವ ಪ್ರಶ್ನೆ ಜನಸಾಮಾನ್ಯನಲ್ಲಿ ಮೂಡುತ್ತಿದೆ.
ಇದೀಗ ಕಾರ್ಮಿಕ ಆಕ್ರೋಶ ಕಟ್ಟೆಯೊಡೆಯುತ್ತಿದ್ದಂತೆ ಬಿಹಾರಕ್ಕೆ ತೆರಳಲು ಕಾರ್ಮಿಕರಿಂದ ಅರ್ಜಿ ಪಡೆದುಕೊಳ್ಳಲಾಗ್ತಿದೆ. ಕೋಲಾರ ಮಾಲೂರು ತಾಲೂಕು ಕಚೇರಿ, ತೋಟಗಾರಿಕಾ ಇಲಾಖೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆರ್ಜಿ ಸಲ್ಲಿಸಲು ಬಂದಿರುವ ನೂರಾರು ಕಾರ್ಮಿಕರು ತಮ್ಮ ರಾಜ್ಯಕ್ಕೆ ಹೋಗಲು ಅರ್ಜಿ ಸಲ್ಲಿಸ್ತಿದ್ದಾರೆ. ಮಾಲೂರಿನಿಂದ ವಿಶೇಷ ರೈಲು ಹೊರಡಲಿದ್ದು, ಬಿಹಾರಿ ಕಾರ್ಮಿಕರನ್ನ ಪೊಲೀಸರು ಮಾಲೂರಿಗೆ ಕರೆದೊಯ್ದಿದ್ದಾರೆ. ಚಾಮರಾಜಪೇಟೆಯಿಂದ ಬಿಎಂಟಿಸಿ ಬಸ್ಗಳಲ್ಲಿ ಮೂಲಕ ರೈಲ್ವೆ ನಿಲ್ದಾಣ ತಲುಪಲಿರುವ 1200 ಜನರನ್ನು ಇಂದು ಬಿಹಾರಕ್ಕೆ ಕಳುಹಿಸಿ ಕೊಡಲಾಗ್ತಿದೆ. ʼಸೇವಾಸಿಂಧುʼ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಒಂದು ವೇಳೆ ಸರ್ಕಾರ ಕಾರ್ಮಿಕರಿಗೆ ವ್ಯವಸ್ಥೆ ಮಾಡಿಕೊಡದೆ ಇದ್ದಿದ್ದರೆ, ಬಿಹಾರ ಕಾರ್ಮಿಕರೂ ಮಹಾರಾಷ್ಟ್ರ ಕಾರ್ಮಿಕರಂತೆ ಕಾಲ್ನಡಿಗೆಯಲ್ಲೇ ಸಾಗುತ್ತಿದ್ದರು. ಇದರಲ್ಲಿ ಯಾವುದೇ ಅನುಮಾನವಿಲ್ಲ. ಮಹಾರಾಷ್ಟ್ರ ಘಟನೆ ಸಂಭವಿಸಿದ ಬಳಿಕವೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದೆ.
ಮಹಾರಾಷ್ಟ್ರ ಘಟನೆ ಬಗ್ಗೆ ಮಹಾರಾಷ್ಟ್ರ ಅಧಿಕಾರಿಗಳು ತನಿಖೆ ನಡೆಸ್ತಿದ್ದಾರೆ. ಔರಂಗಬಾದ್ ರೈಲು ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮೂಲಕ ಸಂತಾಪ ತಿಳಿಸಿರುವ ಪ್ರಧಾನಿ ಮೋದಿ ಈ ಘಟನೆಯಿಂದ ತುಂಬಾ ಆಘಾತವಾಗಿದೆ. ರೈಲ್ವೆ ಸಚಿವರ ಜೊತೆ ಮಾತನಾಡಿದ್ದೇನೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲಾಗ್ತಿದೆ ಅಂತ ತಿಳಿಸಿದ್ದಾರೆ. ಸತ್ತ ಕೂಲಿ ಕಾರ್ಮಿಕರು ಬಡವರು. ಸರ್ಕಾರದ ವಿರುದ್ಧ ಹೋರಾಟ ಮಾಡಿ ಸಾರಿಗೆ ವ್ಯವಸ್ಥೆ ಕಲ್ಪಿಸಲು ಒತ್ತಡ ಹೇರುವ ತಾಕತ್ತು ಇದ್ದಿದ್ದರೆ ನಡೆದುಕೊಂಡು ಹೋಗುತ್ತಿದ್ದರೇ? ಇದೀಗ ಸರ್ಕಾರ ಸಂತಾಪ ಸೂಚಿಸಿದರೂ ಹೋದವರ ಪ್ರಾಣ ಮತ್ತೆ ಬರುತ್ತದೆಯೇ..? 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ, ಇದರಿಂದ ಸತ್ತವರ ಪ್ರಾಣವನ್ನು ಕೊಂಡುಕೊಳ್ಳಬಹುದೇ..? ಖಂಡಿತ ಇಲ್ಲ. ಜನರು ಬದುಕಿದ್ದಾಗ ಟ್ರೈನ್ ವ್ಯವಸ್ಥೆ ಮಾಡಿದ್ದರೆ ಇವರು ಯಾರೂ ಸಾಯುತ್ತಿರಲಿಲ್ಲ ಎನ್ನುವುದನ್ನು ನಮ್ಮ ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕಿದೆ. ಮಹಾರಾಷ್ಟ್ರ ಸರ್ಕಾರ ರೈಲಿನ ವ್ಯವಸ್ಥೆ ಮಾಡಲಿಲ್ಲವೋ..? ಅಥವಾ ಶ್ರಮಿಕ್ ರೈಲಿಗಾಗಿ ಮನವಿ ಮಾಡಿದ್ದರೂ ರೈಲ್ವೆ ಇಲಾಖೆ ವ್ಯವಸ್ಥೆ ಮಾಡಿರಲಿಲ್ಲವೋ..? ಅಥವಾ ಈ ಕೂಲಿ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯದ ಬಗ್ಗೆ ಅರಿವು ಇಲ್ಲದೆ ನಡೆದುಕೊಂಡು ಹೋಗುತ್ತಿದ್ದರೋ ಎನ್ನುವ ಬಗ್ಗೆಯೂ ಸಮಗ್ರ ತನಿಖೆ ಮಾಡಿ ತಪ್ಪಿಸ್ಥರು ಮುಂದಿನ ದಿನಗಳಲ್ಲಿ ತಪ್ಪು ಮಾಡದಂತೆ ಶಿಕ್ಷೆ ಕೊಡಬೇಕಿದೆ.










