ಲಾಕ್ ಡೌನ್ ಪರಿಣಾಮ ದೇಶದ ಮೇಲೆ ವ್ಯತಿರಿಕ್ತವಾಗಿ ಬಿದ್ದಿದೆ. ಆರ್ಥಿಕತೆಯಂತೂ ಪಾತಾಳ ಕಂಡಿದೆ ಅನ್ನೋದು ತಜ್ಞರ ಮಾತು. ವಲಸೆ ಕಾರ್ಮಿಕರು ಸೋತ ಕಾಲುಗಳ ಜೊತೆ ಹೊರಟಿದ್ದಾರೆ. ಮೂರನೇ ಹಂತದ ಲಾಕ್ ಡೌನ್ ಈಗ ಕೊನೆಯ ಹಂತದಲ್ಲಿದೆ. ಅದಾಗಿಯೂ ನಾಲ್ಕನೇ ಹಂತದ ಲಾಕ್ ಡೌನ್ ಹೇರುವ ಎಲ್ಲಾ ಸಾಧ್ಯತೆ ಇದೆ. ಇದಕ್ಕೆ ಪ್ರಧಾನಿ ಮೋದಿಯ ಕೊನೆಯ ಭಾಷಣವೇ ಸಾಕ್ಷಿ. ನಗರ ಮತ್ತು ಹಳ್ಳಿಗಳಿಗೂ ಲಾಕ್ ಡೌನ್ ಎಫೆಕ್ಟ್ ತಟ್ಟಿದೆ. ಇದೀಗಾ ಹೀಗೊಂದು ಸರ್ವೇಯ ಫಲಿತಾಂಶ ಕೂಡ ಹೊರ ಬಿದ್ದಿದೆ. ನಗರ ಪ್ರದೇಶಗಳಲ್ಲಿನ ಶೇ.80ರಷ್ಟು ಜನ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಹೇಳುತ್ತಿದೆ ಈ ಸರ್ವೇ.
ಅಝೀಮ್ ಪ್ರೇಮ್ ಜಿ ವಿಶ್ವವಿದ್ಯಾಲಯ ನಡೆಸಿರುವ ಈ ಸರ್ವೇಯಲ್ಲಿ 12 ರಾಜ್ಯದಿಂದ ಸುಮಾರು 4000 ಕಾರ್ಮಿಕರನ್ನು ಫೋನಿನ ಮೂಲಕ ಸಂಪರ್ಕಿಸಿ ಮಾಹಿತಿ ಕಲೆಹಾಕಲಾಗಿದೆ. ಏಪ್ರಿಲ್ 13ರರಿಂದ ಮೇ 9ರವರೆಗೆ ನಡೆದ ಸರ್ವೇ ಇದಾಗಿದೆ. ಈ ಸರ್ವೇಯಲ್ಲಿ ಉನ್ನತ ಹುದ್ದೆಗಳಿಂದ ಹಿಡಿದು ಸುಮಾರು 25 ಕ್ಷೇತ್ರದ ಜನರನ್ನು ಒಳಪಡಿಸಲಾಗಿದೆ. ಈ ವೇಳೆ ನಗರದ ಶೇ. 80ರಷ್ಟು ಜನ ಈ ಕರೋನಾ ಮತ್ತು ಲಾಕ್ ಡೌನ್ ಕಾರಣದಿಂದಾಗಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂಬ ವರದಿಯನ್ನು ಅಝೀಮ್ ಪ್ರೇಮ್ ಜಿ ವಿಶ್ವವಿದ್ಯಾಲಯ ಹೊರ ಬಿಟ್ಟಿದೆ.
ಈಗಾಗಲೇ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಮೊತ್ತದ ಬೃಹತ್ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಒಟ್ಟು 15 ಹಂತಗಳಲ್ಲಿ ಈ ಪ್ಯಾಕೇಜ್ ಚಾಲ್ತಿಗೆ ಬರಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಹೇಳಿದ್ದಾರೆ. ಒಟ್ಟಿನಲ್ಲಿ ಲಾಕ್ ಡೌನ್ ಜನರ ಬದುಕನ್ನು ಕಿತ್ತು ತಿನ್ನುತ್ತಿದೆ ಅನ್ನೋದರಲ್ಲಿ ಅನುಮಾನವೇ ಇಲ್ಲ. ಅಝೀಮ್ ಪ್ರೇಮ್ ಜಿ ವಿಶ್ವವಿದ್ಯಾಲಯ ನಡೆಸಿದ ಈ ಸರ್ವೇ ದೇಶದ ಸದ್ಯದ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.







