ಕರೋನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ಇಂದು ವಿಶ್ವಾದ್ಯಂತ ದೊಡ್ಡ ಹೋರಾಟವೇ ನಡೆಯುತ್ತಿದೆ. ನಿತ್ಯ ಟಿವಿಗಳಲ್ಲಿ ಇದನ್ನು ಮಹಾಮಾರಿ, ಭೀಕರ ಎಂದೆಲ್ಲ ಬಣ್ಣಿಸುತ್ತಿರುವುದರಿಂದ ಜನರ ಆತಂಕ ಮತ್ತಷ್ಟು ಹೆಚ್ಚಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸೋಂಕಿತರ ಸಂಖ್ಯೆ ದೇಶಾದ್ಯಂತ ದಿನೇ ದಿನೇ ಹೆಚ್ಚಾಗುತ್ತಿದೆ. ಕಳೆದ ಮಾರ್ಚ್ 22 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶಾದ್ಯಂತ ದಿಢೀರ್ ಲಾಕ್ ಡೌನ್ ಘೋಷಿಸಿದರು. ಇದರಿಂದ ಲಕ್ಷಾಂತರ ಜನ ಬಡವರು ಮತ್ತು ವಲಸೆ ಕಾರ್ಮಿಕರು ಸಂಕಷ್ಟಕ್ಕೀಡಾದರು. ನಂತರ ಲಾಕ್ ಡೌನ್ ತೆರವುಗೊಳಿಸಲಾಯಿತು. ನಂತರ ಅಂತರ ಜಿಲ್ಲಾ ಮತ್ತು ರಾಜ್ಯಗಳಲ್ಲಿ ಸಂಚರಿಸದಂತೆ ನಿರ್ಬಂಧವನ್ನೂ ಹೇರಲಾಯಿತು. ಕೊನೆಗೆ ಎಲ್ಲೆಡೆ ಲಾಕ್ ಡೌನ್ ತೆಗೆದು ಹಾಕಲಾಯಿತು.
ನಮ್ಮ ರಾಜ್ಯದಲ್ಲಿ ಅತ್ಯಂತ ಹೆಚ್ಚು ಕರೋನಾ ಪ್ರಕರಣಗಳು ಈಗಲೂ ವರದಿ ಆಗುತ್ತಿರುವುದು ರಾಜಧಾನಿ ಬೆಂಗಳೂರಿನಿಂದ. ಈಗಲೂ ನಿತ್ಯ 1,500 ರಿಂದ 2,000 ದಷ್ಟು ಪಾಸಿಟಿವ್ ಪ್ರಕರಣಗಳು ವರದಿ ಆಗುತ್ತಿವೆ. ರಾಜಧಾನಿಯಲ್ಲಿ ಕರೋನಾ ಸೋಂಕು ಹೆಚ್ಚಾಗುತಿದ್ದಂತೆ ಲಾಕ್ ಡೌನ್ ಮಾಡಲು ಜನತೆಯ ಒತ್ತಾಯ ಇದ್ದರೂ ಸರ್ಕಾರ ಲಾಕ್ ಡೌನ್ ಮಾಡಲೇ ಇಲ್ಲ. ರಾಜ್ಯ ಸರ್ಕಾರ ಕಳೆದ ವಾರ ಬೆಂಗಳೂರಿನಲ್ಲಿ ಒಂದು ವಾರದ ಸಂಪೂರ್ಣ ಲಾಕ್ ಡೌನ್ ಘೋಷಿಸಿದ್ದು ಇದಕ್ಕೆ ತಜ್ಞರ ಸಲಹೆ ಕಾರಣ ಎಂದೂ ಷರಾ ಹಾಕಿತ್ತು. ಅದು ಬುಧವಾರ ಬೆಳಿಗ್ಗೆ ಮುಕ್ತಾಯವಾಗಿದೆ. ಕರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಜ್ಞರ ಸಲಹೆಯಂತೆ ಲಾಕ್ ಡೌನ್ ನ್ನು ಇನ್ನೂ ಒಂದು ವಾರ ಮುಂದುವರಿಸುವುದು ಸೂಕ್ತವಾಗಿತ್ತು.
ಮುಖ್ಯಮಂತ್ರಿ ಬಿ ಯಸ್ ಯಡಿಯೂರಪ್ಪ ಅವರು ಯಾವುದೇ ಕಾರಣಕ್ಕೂ ಬುಧವಾರದಿಂದ ಲಾಕ್ ಡೌನ್ ಮುಂದುವರಿಸುವುದಿಲ್ಲ ಎಂದು ಖಡಕ್ ಆಗಿ ಹೇಳಿಬಿಟ್ಟಿದ್ದಾರೆ. ಅಷ್ಟೇ ಅಲ್ಲ ರಾಜ್ಯದ ಯಾವ ಜಿಲ್ಲೆಯಲ್ಲೂ ಲಾಕ್ ಡೌನ್ ಮಾಡೋದಿಲ್ಲ ಎಂದು ಘೋಷಿಸಿದ್ದಾರೆ. ಮೂರು ದಿನದ ಹಿಂದೆ ಮುಖ್ಯ ಮಂತ್ರಿಗಳು ಲಾಕ್ ಡೌನ್ ಮಾಡುವುದಿಲ್ಲ ಎಂದು ಹೇಳಿದ ಬೆನ್ನಲ್ಲೇ ಸಚಿವ ಸಂಪುಟದ ಮಂತ್ರಿಗಳು ಅದೇ ದಾಟಿಯಲ್ಲಿ ಲಾಕ್ ಡೌನ್ ಪರಿಹಾರವಲ್ಲ, ಲಾಕ್ ಡೌನ್ ಮಾಡುವುದಿಲ್ಲ ಎಂದು ಹೇಳುತಿದ್ದಾರೆ. ಕೇವಲ 3-4 ದಿನಗಳ ಹಿಂದೆ ಇದೇ ಮಂತ್ರಿಗಳು ಲಾಕ್ ಡೌನ್ ಮುಂದುವರೆಸುವ ಬಗ್ಗೆಯೂ ಮಾತಾಡಿದ್ದುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಬೆಂಗಳೂರಿನಲ್ಲಿ ಲಾಕ್ ಡೌನ್ ಮುಂದುವರೆಸಬೇಕೆಂದು ಪ್ರತಿಪಾದಿಸಿದುದಕ್ಕೆ ಬಿಬಿಎಂಪಿ ಅಯುಕ್ತ ಬಿ ಹೆಚ್ ಅನಿಲ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ಹಿಂದಿದ್ದ ಆಯುಕ್ತ ಮಂಜುನಾಥ್ ಪ್ರಸಾದ್ ಅವರನ್ನೇ ತಂದು ಅಲ್ಲಿ ಕೂರಿಸಲಾಗಿದೆ. ಇಷ್ಟಕ್ಕೂ ಬೆಂಗಳೂರಿನಲ್ಲಿ ಲಾಕ್ ಡೌನ್ ಮಾಡುವುದಿಲ್ಲ ಎಂದು ಯಡಿಯೂರಪ್ಪ ಹಠ ಹಿಡಿದಿರುವುದು ಏಕೆ ಗೊತ್ತಾ? ಈಗಾಗಲೇ ಕೊರೋನ ಭೀತಿಯಿಂದಾಗಿ ಲಕ್ಷಾಂತರ ಮಂದಿ ತಮ್ಮ ತವರಿಗೆ ಹೊರಟು ಹೋಗಿದ್ದಾರೆ. ವ್ಯಾಪಾರ ವಹಿವಾಟು ನೆಲಕಚ್ಚಿದೆ. ಮನೆಗಳು, ಅಂಗಡಿಗಳ ಮುಂದೆ ಟು ಲೆಟ್ ಬೋರ್ಡು ಹೆಚ್ಚು ಹೆಚ್ಚು ಕಂಡು ಬರುತ್ತಿದೆ. ರಾಜ್ಯ ಸರ್ಕಾರ ನಡೆಸಲು ಒಂದು ತಿಂಗಳಿಗೆ ಬರೋಬ್ಬರಿ 6,500 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣ ಬೇಕಾಗಿದೆ. ಇದರಲ್ಲಿ ರಾಜ್ಯ ಸರ್ಕಾರದ ಸಾಲದ ಕಂತು, ಸಾಲದ ಬಡ್ಡಿ ಏನೂ ಸೇರಿಲ್ಲ. ಇದು ಬರೇ ಮಂತ್ರಿಗಳ , ಸರ್ಕಾರಿ ನೌಕರರ ಸಂಬಳ ಮತ್ತು ಕಟ್ಟಡ ನಿರ್ವಹಣೆಗೆ ಮಾತ್ರ ಸಾಕಾಗುತ್ತದೆ. ರಾಜ್ಯ ಸರ್ಕಾರಕ್ಕೆ ತೆರಿಗೆ ಮೂಲಕ ಬರುವ ಒಟ್ಟು ಆದಾಯದಲ್ಲಿ ಬೆಂಗಳೂರಿನ ಪಾಲು ಶೇಕಡಾ 60 ರಷ್ಟಿದೆ. ಸರ್ಕಾರಕ್ಕೆ ವಿವಿಧ ತೆರಿಗೆಗಳ ಮೂಲಕ ಹರಿದು ಬರುತ್ತಿದ್ದ ಹಣ ಈಗ ಬರುತ್ತಿಲ್ಲ. ಹಾಗಾಗಿ ಯಡಿಯೂರಪ್ಪ ಲಾಕ್ ಡೌನ್ ಮಾಡುವುದಿಲ್ಲ ಎಂದೇ ಘೋಷಿಸಿಬಿಟಿದ್ದಾರೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದರಿಂದಾಗಿ ಜನರ ಆರೋಗ್ಯ ರಿಸ್ಕ್ ಅಪರಿಮಿತವಾಗಿದೆ. ಸೋಂಕನ್ನು ತಡೆಗಟ್ಟಬೇಕಾದರೆ ಮೊದಲು ಸೋಂಕು ಹರಡುವಿಕೆಯನ್ನು ತಡೆಗಟ್ಟಬೇಕಿದೆ. ಅಂತರ ರಾಜ್ಯ ಮತ್ತು ಅಂತರ ಜಿಲ್ಲೆಗಳ ಗಡಿಗಳಲ್ಲಿ ಜನರ ಸರಾಗ ಓಡಾಟಕ್ಕೆ ನಿರ್ಬಂದ ಹೇರಬೇಕಾಗಿದೆ. ಹೊರಗಿನಿಂದ ಬರುವವರ ಕೈಗೆ ಕಡ್ಡಾಯ ಕ್ವಾರಂಟೈನ್ ಸೀಲ್ ಹಾಕಬೇಕಿದೆ. ನಿತ್ಯ ಓಡಾಡುವವರಿಗೆ ಪಾಸ್ ನೀಡಬೇಕಾಗಿದೆ. ಗೂಡ್ಸ್ ವಾಹನಗಳು ಮತ್ತು ಅದರೊಳಗಿರುವವರಿಗೆ ಪಾಸ್ ನೀಡಬೇಕಾಗಿದೆ. ಇಂದು ಎಲ್ಲ ಜಿಲ್ಲೆಗಳಲ್ಲೂ ಕೊರೋನ ಸೋಂಕು ಹೆಚ್ಚಾಗುತ್ತಿರುವುದು ಹೊರಗಿನಿಂದ ಬಂದವರಿಂದಾಗಿ ಮಾತ್ರ ಎಂದು ನಾವು ಮರೆಯಬಾರದು. ಆದರೆ ಸರ್ಕಾರ ಈ ದಿಸೆಯಲ್ಲಿ ಯೋಚನೆಯನ್ನೇ ಮಾಡುತ್ತಿಲ್ಲ . ಜತೆಗೇ ಲಾಕ್ ಡೌನ್ ಮಾಡೋದಿಲ್ಲ ಎಂದೂ ಹೇಳುತ್ತಿದೆ. ನಮ್ಮ ನೆರೆಯ ಕೇರಳ ರಾಜ್ಯವೂ ಕೂಡ ತಮ್ಮ ಅಂತರರಾಜ್ಯ ಗಡಿಗಳನ್ನು ಬಂದ್ ಮಾಡಿ ಸೋಂಕು ಹರಡುವುದನ್ನು ತಡೆಗಟ್ಟಿದೆ. ಈ ವಿಧಾನವನ್ನು ರಾಜ್ಯವೂ ಅನುಸರಿಸಬೇಕು. ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಭಾಗಗಳಲ್ಲೂ ಕಂಟೇನ್ಮೆಂಟ್ ಝೋನ್ ಗಳ ಸಂಖ್ಯೆ ಜಾಸ್ತಿಯೇ ಆಗುತ್ತಿದೆ. ಮಂಗಳವಾರ ಸಂಜೆ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಿದ ಯಡಿಯೂರಪ್ಪ ತಮ್ಮ ನೀರಸ ಭಾಷಣದಲ್ಲಿ ಸೋಂಕು ತಡೆಗೆ 5 ಸೂತ್ರ ಕೊಟ್ಟಿದ್ದಾರೆ. ಇದರಲ್ಲಿ ಹೊಸತೇನೂ ಇಲ್ಲ ಮೊದಲಿನಿಂದ ಕೇಂದ್ರ ಸರ್ಕಾರದ ಅರೋಗ್ಯ ಇಲಾಖೆ ನೀಡಿದ ಸೂಚನೆಗಳೇ ಇವು.
ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಯಡಿಯೂರಪ್ಪ ಅವರ ಮಾತಿನಲ್ಲೇ ಸ್ಪಷ್ಟವಾಗಿದೆ. ಕನಿಷ್ಟ ಪಕ್ಷ 15 ದಿನ ಸತತವಾಗಿ ಲಾಕ್ ಡೌನ್ ಮಾಡಿದರೆ ಮಾತ್ರ ಕರೋನ ಸೋಂಕು ಹರಡುವ ಸರಪಳಿಯನ್ನು ತುಂಡರಿಸಬಹುದೆಂದು ತಜ್ಞರ ಅಭಿಮತವಾಗಿದೆ. ಈಗಾಗಲೇ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದ್ದರೂ ಜನರ ಓಡಾಟ ಮಾತ್ರ ನಿಂತಿಲ್ಲ. ಸರ್ಕಾರದಿಂದ ಪೆಟ್ರೋಲ್ ದರ ಏರಿಸಿಟ್ಟಿದ್ದರೂ ಜನರ ಓಡಾಟಕ್ಕೆ ಕಡಿವಾಣ ಬಿದ್ದಿಲ್ಲ. ಕೇಂದ್ರ ಆರೋಗ್ಯ ಇಲಾಖೆಯ ಕಾರ್ಯದರ್ಶಿಯವರು ಇಂದು ಹೊರಡಿಸಿದ ಸುತ್ತೋಲೆ ಪ್ರಕಾರ ಕವಾಟವುಳ್ಳ N95 ಮುಖ ಗವಸಿನಿಂದ ಕೊರೋನ ಸೋಂಕು ತಡೆ ಸಾದ್ಯವಾಗದು ಮತ್ತು ಎಲ್ಲರೂ ಹತ್ತಿ ಬಟ್ಟೆಯ ಮಾಸ್ಕ್ ಧರಿಸುವ ಮೂಲಕ ಸೋಂಕು ತಡೆಗಟ್ಟಲು ಸೂಚಿಸಿದ್ದಾರೆ. ಈ ನಡುವೆ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆಯಿಂದಾಗಿ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಸಿಗದೆ ರೋಗಿಗಳು ಸಾವನ್ನಪ್ಪುತ್ತಿರುವ ವರದಿಗಳು ಬರುತ್ತಿವೆ. ಆದರೆ ದೆಹಲಿಯಲ್ಲಿ ಕೋವಿಡ್ ಸೋಂಕಿತರಿಗಾಗಿ ಮೀಸಲಿರಿಸಿದ್ದ ಬೆಡ್ ಗಳಲ್ಲಿ ಶೇಕಡಾ 70 ಖಾಲಿ ಇವೆ ಎಂಬ ವರದಿ ಬಂದಿದೆ.
ಈ ನಡುವೆ ಕರೋನಾ ಸೋಂಕಿಗೆ ಸದ್ಯ ಕೆಲವೆಡೆಗಳಲ್ಲಿ ಬಳಸುತ್ತಿರುವ ರೆಮ್ಡೆಸಿವಿರ್ ಲಸಿಕೆ ಕಾಳಸಂತೆಯಲ್ಲಿ 30-40 ಸಾವಿರ ರೂಪಾಯಿಗಳಿಗೆ ಮಾರಾಟ ಆಗುತ್ತಿರುವ ಸುದ್ದಿ ಬಂದಿದೆ. ಫೈಜರ್, ಮೊಡೆರ್ನಾ, ಆಕ್ಸ್ಫರ್ಡ್ ಅಸ್ಟ್ರಾ ಜೆನೆಕಾ ಮುಂತಾದ ಪ್ರಮುಖ ಸಂಶೋಧಾನಾಲಯಗಳು ಕರೋನಾ ಲಸಿಕೆ ಕಂಡು ಹಿಡಿದಿದ್ದು ಟ್ರಯಲ್ ಅಂತಿಮ ಹಂತದಲ್ಲಿದೆ. ಬಹುತೇಕ ದೇಶಗಳಲ್ಲಿ ಲಸಿಕೆ ಕಂಡು ಹಿಡಿಯಲಾಗುತ್ತಿದೆ. ಬಹುಶಃ ಸೆಪ್ಟೆಂಬರ್ ತಿಂಗಳಿನಲ್ಲಿ ಕರೋನ ನಿರೋಧಿಸುವ ಲಸಿಕೆ ಮಾರುಕಟ್ಟೆಗೆ ಬರಬಹುದು. ಆಗ ಈಗಿರುವ ಸಾರ್ಸ್, ಹೆಚ್1ಎನ್1, ಡೆಂಗ್ಯು ರೀತಿಯಲ್ಲೇ ಕರೋನಾ ಕೂಡ ಒಂದು ಖಾಯಿಲೆಯಾಗಿ ಉಳಿದುಕೊಳ್ಳಬಹುದು. ಅಲ್ಲಿಯವರೆಗೆ ರಾಜ್ಯ ಸರ್ಕಾರ ಜನಹಿತ ಕಾಪಾಡಲೇಬೇಕಿದೆ.