ರಾಜ್ಯ ಸರ್ಕಾರ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮಂಗಳವಾರ ರಾತ್ರಿ 8 ರಿಂದಲೇ ಜಾರಿಯಾಗುವಂತೆ ಲಾಕ್ಡೌನ್ ಘೋಷಣೆ ಮಾಡಿದೆ. ಜುಲೈ 22 ರ ಬೆಳಗ್ಗೆ 5 ಗಂಟೆ ತನಕ ಅಂದರೆ 7 ದಿನಗಳ ಕಾಲ ಈ ಎರಡು ಜಿಲ್ಲೆಗಳಲ್ಲಿ ಲಾಕ್ಡೌನ್ ಜಾರಿಯಲ್ಲಿರಲಿದೆ. ಅದಕ್ಕಾಗಿ ರಾಜ್ಯ ಸರ್ಕಾರ ಮಾರ್ಗಸೂಚಿಯನ್ನೂ ಪ್ರಕಟ ಮಾಡಿದೆ. ಈ 2 ಜಿಲ್ಲೆಗಳ ಜೊತೆಗೆ ದಕ್ಷಿಣ ಕನ್ನಡ ಹಾಗೂ ಧಾರವಾಡ ಜಿಲ್ಲೆಗಳಲ್ಲೂ ಲಾಕ್ಡೌನ್ ಇರಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರುಗಳಾದ ಕೋಟಾ ಶ್ರೀನಿವಾಸ ಪೂಜಾರಿ ಹಾಗೂ ಜಗದೀಶ್ ಶೆಟ್ಟರ್ ಘೋಷಣೆ ಮಾಡಿದ್ದಾರೆ.
ಇನ್ನು ಕಲಬುರಗಿ ಜಿಲ್ಲೆಯಲ್ಲಿ ಗ್ರಾಮಗಳನ್ನು ಹೊರತುಪಡಿಸಿ, ಪಟ್ಟಣ, ನಗರ, ಪಾಲಿಕೆ ವ್ಯಾಪ್ತಿಯಲ್ಲಿ ಲಾಕ್ಡೌನ್ ಮಾಡಲು ನಿರ್ಧಾರ ಮಾಡಲಾಗಿದೆ. ಶಿವಮೊಗ್ಗದಲ್ಲಿ ಭಾಗಶಃ ಲಾಕ್ಡೌನ್ ಮಾಡಲು ಅಲ್ಲಿನ ಜಿಲ್ಲಾಡಳಿತ ನಿರ್ಧಾರ ಮಾಡಿದೆ. ಇನ್ನುಳಿದಂತೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳು ಅಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಚರ್ಚೆ ನಡೆಸಿ, ಅಂತಿಮ ನಿರ್ಧಾರ ಮಾಡುವಂತೆ ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಏನಿರುತ್ತೆ?
ಆಸ್ಪತ್ರೆ, ಆರೋಗ್ಯ ಸೇವೆಗಳು ಲಭ್ಯ, ಬ್ಯಾಂಕ್, ಎಟಿಎಂ, ಪೆಟ್ರೋಲ್ ಬಂಕ್ ಕಾರ್ಯ ನಿರ್ವಹಿಸಲಿವೆ. ಹೋಟೆಲ್ಗಳಲ್ಲಿ ಪಾರ್ಸಲ್ಗೆ ಅವಕಾಶ ಕೊಡಲಾಗಿದೆ. ಕೃಷಿ, ತೋಟಗಾರಿಕೆ ಚಟುವಟಿಕೆಗಳಿಗೆ ಅವಕಾಶವಿದೆ.
ಪಡಿತರ ಅಂಗಡಿ, ದಿನಸಿ ಅಂಗಡಿಗಳಿಗೂ ಅವಕಾಶವಿದೆ. ಆಹಾರ ಸಂಸ್ಕರಣೆ, ಆಹಾರ ಸಂಬಂಧಿ ಕೈಗಾರಿಕೆಗಳು ಕೆಲಸ ಮಾಡಬಹುದು. ದೂರ ಸಂಪರ್ಕ, ಅಂತರ್ಜಾಲ ಸೇವೆ, ವಿದ್ಯುತ್ ಉತ್ಪಾದನೆ, ವಿತರಣಾ ಘಟಕಗಳಿಗೆ ಅವಕಾಶ ಕೊಡಲಾಗಿದೆ. ಶೀತಲೀಕರಣ ಘಟಕ, ಉಗ್ರಾಣ ಸೇವೆ ಚಾಲ್ತಿಯಲ್ಲಿರಲು ಮಾರ್ಗಸೂಚಿಯಲ್ಲಿ ಅವಕಾಶವಿದೆ. ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡದಲ್ಲೂ ಶೇಕಡ 50 ರಷ್ಟು ಸಿಬ್ಬಂದಿಯನ್ನು ಬಳಸಿಕೊಂಡು ಕೆಲಸ ಮಾಡಲು ಅವಕಾಶವಿದೆ. ಟ್ರಕ್, ಸರಕು ಸಾಗಣೆ ವಾಹನಗಳ ಸಂಚಾರ ಅಬಾಧಿತವಾಗಿರಲಿದೆ.
ಲಾಕ್ಡೌನ್ ಸಮಯದಲ್ಲಿ ಏನೇನು ಇರಲ್ಲ..?
ಲಾಕ್ಡೌನ್ ಅವಧಿಯಲ್ಲಿ ಬಹು ಪ್ರಮುಖ ಸಂಚಾರ ಸಾಧನವಾದ KSRTC, BMTC ಬಸ್ಗಳು ಸಂಚರಿಸುವುದಿಲ್ಲ. ವಿಮಾನ, ರೈಲು, ಮೆಟ್ರೋ ಸಂಚಾರ ಕೂಡ ಇರುವುದಿಲ್ಲ. ಟ್ಯಾಕ್ಸಿ, ಕ್ಯಾಬ್ಗಳ ಸಂಚಾರವೂ ಇರುವುದಿಲ್ಲ. ಶಾಲಾ, ಕಾಲೇಜು, ತರಬೇತಿ ಸಂಸ್ಥೆಗಳು ತೆರೆಯುವಂತಿಲ್ಲ. ವಾಣಿಜ್ಯ, ಖಾಸಗಿ ಸಂಸ್ಥೆಗಳು ಮುಚ್ಚಬೇಕು. ಇನ್ನೂ ಥಿಯೇಟರ್, ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಬಾರ್, ವೈನ್ ಶಾಪ್ಗಳಿಗೂ ಅವಕಾಶ ನಿರಾಕರಣೆ. ಜಿಮ್, ಕ್ರೀಡಾಂಗಣ, ಈಜುಕೊಳ, ಉದ್ಯಾನವನ, ರಂಗಮಂದಿರ ಚಟುವಟಿಕೆಗೆ ಬ್ರೇಕ್ ಬೀದ್ದಿದೆ.
ಸಾಮಾಜಿಕ, ರಾಜಕೀಯ ಸಮಾರಂಭ ಮಾಡುವಂತಿಲ್ಲ. ಗುಂಪುಗೂಡುವಿಕೆ ಸಂಪೂರ್ಣ ನಿಷೇಧವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಪಾನ್, ಗುಟ್ಕಾ ಸೇವನೆ ಕೂಡ ನಿಷೇಧ. ಮದುವೆ ಸಮಾರಂಭಗಳಿಗೆ 50 ಜನರ ಮಿತಿ ಹಾಗೂ ಅಂತ್ಯಸಂಸ್ಕಾರಕ್ಕೆ 20 ಜನರ ಮಿತಿ ಹೇರಲಾಗಿದೆ. ಖಾಸಗಿ ಕಂಪೆನಿಗಳ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ (Work from Home) ಮಾಡಲು ಆದ್ಯತೆ ನೀಡುವಂತೆ ಸೂಚಿಸಲಾಗಿದೆ.
ಕರೋನಾ ಕಾಲದಲ್ಲಿ ನಿಲ್ಲದ ಗೊಂದಲ..!?
ಕರೋನಾ ಶುರುವಾದ ಕಾಲದಿಂದಲೂ ಗೊಂದಲಗಳ ಸರಮಾಲೆಯೇ ಶುರುವಾಗಿದೆ. ಸರ್ಕಾರ ಒಂದು ಬಾರಿ ಹೀಗೆ ಎಂದರೆ ಇನ್ನೊಂದು ಬಾರಿ ಹೀಗಲ್ಲ ಎನ್ನುತ್ತಿದೆ. ಲಾಕ್ಡೌನ್ ಮಾಡುವುದರಿಂದ ಕರೋನಾ ನಿಯಂತ್ರಣ ಮಾಡಲು ಸಾಧ್ಯವಿಲ್ಲ, ಯಾವುದೇ ಕಾರಣಕ್ಕೂ ಲಾಕ್ಡೌನ್ ಮಾಡುವುದಿಲ್ಲ ಎನ್ನುತ್ತಿದ್ದ ಸರ್ಕಾರ ಹಾಗೂ ಸಚಿವರು ಅಂತಿಮವಾಗಿ ಲಾಕ್ಡೌನ್ ಮೊರೆ ಹೋಗಿದ್ದಾರೆ. ಆದರೆ ಕಳೆದ ಬಾರಿಗಿಂತಲೂ ಈ ಬಾರಿ ಲಾಕ್ಡೌನ್ ಕಠಿಣವಾಗಿ ಇರಲಿದೆ ಎಂದಿದ್ದ ಸರ್ಕಾರ ಮತ್ತೆ ಯಥಾಸ್ಥಿತಿ ಎನ್ನುವಂತೆ ಜನರನ್ನು ಬೀದಿಗೆ ಕರೆದುಕೊಂಡುವ ಬರುವ ಹುನ್ನಾರ ಮಾಡಿದಂತೆ ಇದೆ ಮಾರ್ಗಸೂಚಿಯ ನಿಯಮಗಳು.
ದಿನಸಿ ಅಂಗಡಿಗಳನ್ನು ಓಪನ್ ಮಾಡ್ತಾರೆ ಜನರು ಖರೀದಿ ಮಾಡಲು ರಸ್ತೆಯಲ್ಲಿ ಬರುವಂತಿಲ್ಲ. ಸರ್ಕಾರದ ಎಲ್ಲಾ ಕಚೇರಿಗಳು ಶೇಕಡ 50 ರಷ್ಟು ಸಿಬ್ಬಂದಿ ಬಳಸಿ ಕೆಲಸ ಮಾಡಲು ಅವಕಾಶವಿದೆ ಆದರೆ ಜನರು ರಸ್ತೆಗೆ ಇಳಿಯುವಂತಿಲ್ಲ. ಹೋಟೆಲ್ಗಳು ತೆರೆದು ಅಡುಗೆ ಮಾಡಿಕೊಂಡು ಪಾರ್ಸೆಲ್ ಕೊಡಬಹುದು. ಆದರೆ ಊಟವನ್ನು ಕೊಳ್ಳುವುದಕ್ಕಾಗಿ ಜನರು ರಸ್ತೆಗೆ ಬರುವಂತಿಲ್ಲ. ಪೆಟ್ರೋಲ್ ಬಂಕ್ ಓಪನ್ ಇರುತ್ತೆ, ಜನರು ಗಾಡಿಗೆ ಪೆಟ್ರೋಲ್ ಹಾಕಿಸಲು ರಸ್ತೆಗೆ ಬರುವಂತಿಲ್ಲ. ಜನರು ರಸ್ತೆಗೆ ಬರುವಂತಿಲ್ಲ ಎಂದ ಮೇಲೆ ಇಷ್ಟೆಲ್ಲಾ ಚಟುವಟಿಕೆಗಳನ್ನು ತೆರೆದಿರುವುದು ಯಾರಿಗಾಗಿ..? ಎನ್ನುವ ಪ್ರಶ್ನೆ ಮೂಡಿದೆ.
ಇನ್ನೂ ರಸ್ತೆಗೆ ಬರುವ ಜನರನ್ನು ಕಳೆದ ಬಾರಿಯಂತೆ ಪೊಲೀಸರು ನಿಗಾ ವಹಿಸುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಯಾಕಂದ್ರೆ ಈ ಬಾರಿ ಪಾಸ್ ನೀಡುವ ಬಗ್ಗೆ ಇನ್ನೂ ಕೂಡ ಯಾವುದೇ ನಿರ್ಧಾರವಾಗಿಲ್ಲ. ಯಾಕಂದ್ರೆ ಈಗಾಗಲೇ ಗೃಹ ಇಲಾಖೆ ಕರೋನಾ ಸೋಂಕಿನಿಂದ ಬಳಲಿ ಬೆಂಡಾಗಿ ಹೋಗಿದೆ. ಸರ್ಕಾರ ಕಠಿಣ ಲಾಕ್ಡೌನ್ಗೆ ಬೇಕಿರುವ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಂಡರೆ ಲಾಕ್ಡೌನ್ ಮಾಡಿದ್ದಕ್ಕೂ ಒಂದು ಅರ್ಥ ಸಿಗಲಿದೆ. ಇಲ್ಲದಿದ್ದರೆ ಹಾವು ಸಾಯಲಿಲ್ಲ, ಕೋಲು ಮುರಿಯಲಿಲ್ಲ ಎನ್ನುವಂತಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಬಿಎಂಟಿಸಿ ಸೇವೆಯಲ್ಲಿ ವ್ಯತ್ಯಯ
ಬುಧವಾರ ಬೆಳಗ್ಗೆಯಿಂದ 21 ರವರೆಗೆ ಬಿಎಂಟಿಸಿ ಬಸ್ಗಳ ಸೇವೆ ಇರುವುದಿಲ್ಲ ಬಿಎಂಟಿಸಿ ನೋಟಿಸ್ ಹೊರಡಿಸಿದೆ. ಸರ್ಕಾರಿ ಅಧಿಕಾರಿಗಳು,ವೈದ್ಯಕೀಯ ಸಿಬ್ಬಂದಿ,ತುರ್ತು ನಾಗರಿಕ ಸೇವೆಯ ಸಿಬ್ಬಂದಿ,ಪತ್ರಕರ್ತರಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಿ 134 ಬಸ್ ಗಳ ಸೇವೆ ಮಾತ್ರ ಲಭ್ಯವಾಗಿರಲಿದೆ. ಇನ್ನು ಪರೀಕ್ಷೆ ಬರೆಯುವವರು ಹಾಲ್ ಟಿಕೆಟ್ ತರಬೇಕು ಎಂದು ಬಿಎಂಟಿಸಿ ತಿಳಿಸಿದೆ.