ಭಾರತೀಯ ಪ್ರಜಾಪ್ರಭುತ್ವದ ಹೆಚ್ಚುಗಾರಿಕೆ ಇರುವುದೇ ಅದು ತನ್ನ ಪ್ರಜೆಗಳಿಗೆ ಒದಗಿಸಿರುವ ವೈಯಕ್ತಿಕ ಸ್ವಾತಂತ್ರ್ಯದಲ್ಲಿ. ಪ್ರೀತಿ, ಮದುವೆ, ಆಹಾರ ಮತ್ತು ಧರ್ಮ ಮನುಷ್ಯನ ಖಾಸಗಿ ಆಯ್ಕೆಗಳು. ಸರಕಾರ ಕಾನೂನು ಕಟ್ಟಳೆಗಳ ಮೂಲಕ ಆಯ್ಕೆಗಳ ಮೇಲೆ ಯಜಮಾನ್ಯ ಸಾಧಿಸ ಹೊರಡುವುದು ಸಂವಿಧಾನದ 21ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ವಯಸ್ಕ ಪುರುಷ ಮಹಿಳೆಯರಿಬ್ಬರಿಗೂ ಸಂವಿಧಾನದ ಈ ಇಪ್ಪಂತ್ತೊಂದನೇ ವಿಧಿ ತನ್ನ ವಿವೇಚನೆಗೆ ಸರಿ ಎನಿಸಿದ, ತನಗೆ ಇಷ್ಟ ಇರುವ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ, ಧರ್ಮವನ್ನು ಅನುಸರಿಸುವ ಹಕ್ಕನ್ನು ನೀಡುತ್ತದೆ. ಈಗ ಬಿ.ಜೆ.ಪಿ ಆಡಳಿತ ಇರುವ ಐದು ರಾಜ್ಯಗಳು ಅಸ್ತಿತ್ವದಲ್ಲೇ ಇಲ್ಲದ ‘ಲವ್ ಜಿಹಾದ್’ ವಿರುದ್ಧ ಕಾನೂನು ರೂಪಿಸುತ್ತೇವೆ ಎನ್ನುತ್ತಾ ಜನರ ಖಾಸಗಿ ಬದುಕಿನಲ್ಲೂ ಹತೋಟಿ ಸಾಧಿಸಲು ,ಆ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳಲು ಮುಂದಾಗಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದೇ ಫೆಬ್ರವರಿಯಲ್ಲಿ ಸಂಸತ್ತಿನಲ್ಲಿ ಕೇರಳದ ಸಂಸದರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಕೇಂದ್ರ ಮಂತ್ರಿ ಕಿಶನ್ ರೆಡ್ಡಿಯವರು “ಲವ್ ಜಿಹಾದ್ ಎಂಬ ಪದವನ್ನು ಈಗಿರುವ ಕಾನೂನುಗಳ ಪ್ರಕಾರ ವ್ಯಾಖ್ಯಾನಿಸಲಾಗುವುದಿಲ್ಲ, ಮತ್ತು ಕೇಂದ್ರದ ತನಿಖಾ ತಂಡಗಳು ಇದುವರೆಗೆ ಇಂತಹ ಪ್ರಕರಣವನ್ನು ವರದಿ ಮಾಡಿಲ್ಲ. ಆದರೆ ಎರಡು ಅಂತರ್ಧರ್ಮೀಯ ವಿವಾಹಗಳ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ಮಾಡಿದೆ” ಎಂಬ ಹೇಳಿಕೆ ಕೊಟ್ಟಿದ್ದರು. ಆದರೆ ಬಿಜೆಪಿ ಆಡಳಿತ ಇರುವ ರಾಜ್ಯಗಳು ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ತನ್ನದೇ ಸರಕಾರ ನೀಡಿದ ಹೇಳಿಕೆಗೆ ತದ್ವಿರುದ್ಧ ಕಾನೂನನ್ನು ಜಾರಿಗೆ ತರಲು ಹೊರಟಿದೆ.
Also Read: ಲವ್ ಜಿಹಾದ್ ತಡೆಗೆ ಕಾನೂನು ಜಾರಿ; ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಒಮ್ಮತದ ನಿರ್ಧಾರ
ಸಂವಿಧಾನ ತಜ್ಞರ ಪ್ರಕಾರ ‘ಲವ್ ಜಿಹಾದ್’ ಅನ್ನುವುದು ಬಲಪಂಥೀಯ ಮೂಲಭೂತವಾದದ ಒಂದು ದೊಡ್ಡ ಪಿತೂರಿ. ಕಳೆದ ಕೆಲವು ವರ್ಷಗಳಿಂದ ಸತತವಾಗಿ ಒಂದು ಸಮುದಾಯದ ಯುವಕರನ್ನು ಸಾಮೂಹಿಕವಾಗಿ ಮುಖ್ಯವಾಹಿನಿಯಿಂದ ದೂರ ಇಡುವ, ಧಾರ್ಮಿಕ ಅಸ್ಮಿತೆಯ ಕಾರಣವನ್ನಿಟ್ಟುಕೊಂಡು ಅನುಮಾನಿಸುವ, ದೂರಿಕರಿಸುವ, ವಿನಾಕಾರಣ ಅಪರಾಧಿ ನಿಲ್ಲಿಸುವ ಪ್ರಕ್ರಿಯೆಯೊಂದು ಚಾಲ್ತಿಯಲ್ಲಿದೆ. ಅದರ ಮುಂದುವರಿದ ಭಾಗವೇ ಅಸ್ತಿತ್ವದಲ್ಲಿ ಇಲ್ಲದ ಈ ‘ಲವ್ ಜಿಹಾದ್’.
Also Read: ಕಾಲ್ಪನಿಕ ಲವ್ ಜಿಹಾದ್ ಮೂಲಕ ಯಶಸ್ವಿ ಅಪಪ್ರಚಾರ ನಡೆಸುತ್ತಿರುವ ಸಂಘ ಪರಿವಾರ
ಸಾಮರಸ್ಯ ಬಯಸುವ ಬಹುಸಂಖ್ಯಾತರಲ್ಲಿ ಭಯವನ್ನೂ ಅಭದ್ರತೆಯನ್ನೂ ಹುಟ್ಟು ಹಾಕಿ, ಆ ಮೂಲಕ ಸಮಾಜವನ್ನು ಧ್ರುವೀಕರಿಸುವ, ಅಲ್ಪಸಂಖ್ಯಾತರಲ್ಲಿ ಒಂದು ತಪ್ಪಿತಸ್ಥ ಭಾವ ಸದಾ ನೆಲೆ ನಿಲ್ಲುವಂತೆ ಮಾಡುವ ಷಡ್ಯಂತ್ರ ಇದರ ಹಿಂದಿದೆ.
ಅಂತರ್‌ಧರ್ಮೀಯ ವಿವಾಹವನ್ನು ‘ಲವ್ ಜಿಹಾದ್’ ಎಂಬ ಪರಿಕಲ್ಪನೆಯಡಿ ಪ್ರಚುರ ಪಡಿಸಿ ಅದಕ್ಕೊಂದು ರಾಜಕೀಯ, ಭಾವನಾತ್ಮಕ ಆಯಾಮ ನೀಡುವ ಬಿಜೆಪಿಯ ಕ್ರಮವೇ ಸಂವಿಧಾನ ಬಾಹಿರ. ಅದು ಸಂವಿಧಾನದ 14, 21ಮತ್ತು 25ನೇ ವಿಧಿಗಳ ಮೂಲತತ್ವಕ್ಕೆ ವಿರುದ್ಧವಾಗಿದೆ. ಕೇರಳದ ಹಾದಿಯಾ/ಅಖಿಲಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ “ಸ್ವತಂತ್ರ ವ್ಯಕ್ತಿಯೊಬ್ಬನ ಸಂಗಾತಿಯನ್ನು ನಿರ್ಧರಿಸುವಲ್ಲಿ ಸಮಾಜಕ್ಕೆ, ಸರಕಾರಕ್ಕೆ ಯಾವ ಹಕ್ಕೂ ಇಲ್ಲ” ಎಂದು ಸ್ಪಷ್ಟವಾಗಿ ತೀರ್ಪು ನೀಡಿದೆ.
‘ಲವ್ ಜಿಹಾದ್’ ವಿರುದ್ಧ ಕಾನೂನು ತರುತ್ತೇವೆ ಎಂದು ಮೊದಲು ಘೋಷಣೆ ಮಾಡಿದ್ದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು. “ಮತಾಂತರದ ಏಕ ಮಾತ್ರ ಉದ್ದೇಶದಿಂದ ಮದುವೆಯಾಗುವುದು ಊರ್ಜಿತವಲ್ಲ” ಎಂಬ ಅಲಹಾಬಾದ್ ಹೈಕೋರ್ಟಿನ ಆದೇಶದ ಆಧಾರದ ಮೇಲೆ ಅಲ್ಲಿನ ಮುಖ್ಯಮಂತ್ರಿ ಬಹಿರಂಗ ಸಮಾವೇಶ ಒಂದರಲ್ಲಿ ‘ರಾಮ್ ನಾಮ್ ಸತ್ಯ್ ಹೈ’ ಎಂಬಂತೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿಕೆ ನೀಡಿದ್ದರು. ಆದರೆ ಅಲಹಾಬಾದ್ ಹೈ ಕೋರ್ಟಿನ ಈ ತೀರ್ಪು, ಧರ್ಮದ ಹಂಗಿಲ್ಲದೆ ಮದುವೆಯಾಗುವ ಅವಕಾಶ ನೀಡಿದ ವಿಶೇಷ ವಿವಾಹ ಅಧಿನಿಯಮ1954 (special marriage act 1954)ರ ಉಲ್ಲಂಘನೆಯಾಗುತ್ತದೆ. ಮೇಲಾಗಿ ಇಂಡಿಯನ್ ಪಿನಲ್ ಕೋಡ್ ಬಲವಂತದ, ಆಮಿಷದ ಮತಾಂತರಕ್ಕೆ ಶಿಕ್ಷೆಯನ್ನೂ ವಿಧಿಸುತ್ತದೆ. ಕುಚೋದ್ಯ ಎಂದರೆ ‘ಲವ್ ಜಿಹಾದ್’ ಕಾನೂನಿಗೆ ನಾಂದಿ ಹಾಡಿದ ಅಲಹಾಬಾದ್ ಹೈಕೋರ್ಟಿನ ಈ ತೀರ್ಪು ಬಂದಿರುವುದು ಮುಸ್ಲಿಂ ಮಹಿಳೆಯೊಬ್ಬರು ಹಿಂದು ಪುರುಷನನ್ನು ಮದುವೆಯಾಗುವುದಕ್ಕಾಗಿ ಹಿಂದೂ ಧರ್ಮಕ್ಕೆ ಮತಾಂತರವಾಗಿ, ರಕ್ಷಣೆ ಬೇಕು ಎಂದು ಕೋರ್ಟಿಗೆ ಮೊರೆ ಹೋದ ಕಾರಣದಿಂದ.
Also Read: ಅಸ್ತಿತ್ವದಲ್ಲೇ ಇಲ್ಲದ ಲವ್ ಜಿಹಾದ್ ವಿರುದ್ದ ಕಾನೂನು ರೂಪಿಸಲು ಮುಂದಾದ ಯೋಗಿ
ಮದುವೆಯೊಂದು ಮತಾಂತರದ ಉದ್ದೇಶದಿಂದಷ್ಟೇ ನಡೆಯುತ್ತದೆ ಎಂದು ಹೇಗೆ ಮತ್ತು ಯಾರು ತೀರ್ಮಾನಿಸುವುದು? ಉತ್ತರಾಖಂಡ್ ಸರಕಾರದ 2018ರ ‘ಮತಾಂತರ ನಿಷೇಧ’ ಕಾನೂನಿನ ಸೆಕ್ಷನ್ 8ರ ಪ್ರಕಾರ ಯಾವುದೇ ಮತಾಂತರ ಪ್ರಕ್ರಿಯೆ ನಡೆಯುವ ಒಂದು ತಿಂಗಳ ಮುಂಚೆ ಇಡೀ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು. ಮತ್ತು ಜಿಲ್ಲಾಧಿಕಾರಿ ಪೊಲೀಸರ ಮೂಲಕ ಮತಾಂತರದ ಉದ್ದೇಶ, ಗುರಿ ಮತ್ತು ಕಾರಣವನ್ನು ತಿಳಿದುಕೊಳ್ಳಬೇಕು. ಆದರೆ ಮತಾಂತರವಾದ ವ್ಯಕ್ತಿ ಮತ್ತೊಮ್ಮೆ ಮೂಲಧರ್ಮಕ್ಕೆ ಮರಳಬೇಕು ಅಂತಿದ್ದರೆ ಮುಂಚಿತವಾಗಿ ತಿಳಿಸಬೇಕು ಅಂತಿಲ್ಲ. ಜಸ್ಟಿಸ್ ದೀಪಕ್ ಗುಪ್ತಾ ಮತ್ತು ರಾಜೀವ್ ಶರ್ಮಾ ಈ ಕಾನೂನಿನ ಬಗ್ಗೆ ತೀರ್ಪು ನೀಡುತ್ತಾ” ಈ ಕಾನೂನಿನ ಮೊದಲ ಭಾಗ ವ್ಯಕ್ತಿಯ ‘ಖಾಸಗಿತನದ’ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಎರಡನೆಯ ಭಾಗ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ’ ಎಂದಿದ್ದರು.
Also Read: ಗೋಹತ್ಯೆ ಹಾಗೂ ಲವ್ ಜಿಹಾದ್ ನಿಷೇಧಕ್ಕೆ ಕಾನೂನು ರೂಪಿಸಲಿರುವ ಕರ್ನಾಟಕ ಸರ್ಕಾರ
ಈಗ ಐದು ರಾಜ್ಯಗಳು ತರಲಿಚ್ಛಿಸಿರುವ ಕಾನೂನು ಸುಪ್ರೀಂ ಕೋರ್ಟಿನ ಹಾದಿಯಾ ತೀರ್ಪನ್ನು ಉಲ್ಲಂಘಿಸುತ್ತದೆ. ಕಾನೂನಿನ ಪರಿಭಾಷೆಯನ್ನು ಪಕ್ಕಕ್ಕಿಟ್ಟು ಮಾತಾಡುವುದಾದರೂ, ಪ್ರಸ್ತಾವಿತ ಕಾಯ್ದೆ ಮಹಿಳೆಯ ಆಯ್ಕೆಯ ಹಕ್ಕನ್ನು ಕಸಿದುಕೊಂಡು ಸಮ ಸಮಾಜದ ನಿರ್ಮಾಣದ ಕನಸಿಗೆ ಅಡ್ಡಗಾಲು ಇಡುವಂತಿದೆ. ಈಗಾಗಲೇ ವರದಕ್ಷಿಣೆ, ಹೆಣ್ಣು ಭ್ರೂಣ ಹತ್ಯೆ, ಬಲವಂತದ ವೇಶ್ಯಾವಾಟಿಕೆ, ಹತ್ಯಾಚಾರಗಳಿಂದ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಮಹಿಳಾ ಸಮಾಜದ ಮೇಲೆ ಪುರುಷಾಧಿಪತ್ಯ ಮತ್ತಷ್ಟು ಹೆಚ್ಚಲು, ಆ ಮೂಲಕ ಬಲವಂತದ ಮದುವೆ, ಮರ್ಯಾದಾ ಹತ್ಯೆಯಂತಹ ಪ್ರಕರಣಗಳು ಜಾಸ್ತಿಯಾಗಲು ಈ ಕಾನೂನು ರಹದಾರಿಯಾಗುವುದರಲ್ಲಿ ಸಂಶಯವಿಲ್ಲ.
Also Read: ಲವ್ ಜಿಹಾದ್ ಹೆಸರಿನಲ್ಲಿ ಮಹಿಳೆಯ ಸ್ವಾತಂತ್ರ್ಯ ನಿರಾಕರಿಸುವ ಷಡ್ಯಂತ್ರ್ಯ -AILAJ