ಕಾನ್ಪುರದ ಕುಖ್ಯಾತ ರೌಡಿ ವಿಕಾಸ್ ದುಬೆ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ನಂತರ, ಅದನ್ನು ಅಸಲಿ ಎನ್‌ಕೌಂಟರ್ ಎಂದು ನಿರೂಪಿಸಲು ಉತ್ತರ ಪ್ರದೇಶ ಪೊಲೀಸ್ ಇಲಾಖೆ ಹೆಣಗಾಡುತ್ತಿದೆ. ಎಂಟು ಪೊಲೀಸರನ್ನು ಭರ್ಭರವಾಗಿ ಹತ್ಯೆಗೈದಿದ್ದ ವಿಕಾಸ್ ದುಬೆ ಎನ್‌ಕೌಂಟರ್ ಕುರಿತಾಗಿ ಸಾಕಷ್ಟು ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅವುಗಳಿಗೆ ಉತ್ತರ ನೀಡಲು ಹೊರಟ ಯುಪಿ ಪೊಲೀಸ್ ಇಲಾಖೆ ತನ್ನ ಹೇಳಿಕೆಗಳಲ್ಲಿ ಎಡವಟ್ಟು ಮಾಡುತ್ತಿದೆ.
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಬಂಧಿಸಲ್ಪಟ್ಟಿದ್ದ ವಿಕಾಸ್ ದುಬೆ ಅಲ್ಲಿನ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಲು ಯತ್ನಿಸಿದ್ದ ಎಂದು ಉತ್ತರ ಪ್ರದೇಶದ ಪೊಲೀಸ್ ಇಲಾಖೆಯ ವಿಶೇಷ ತನಿಖಾ ದಳದ ಅಧಿಕಾರಿಗಳು ಹೇಳಿಕೆ ನೀಡಿದ್ದರು. ಈ ವಿಚಾರವನ್ನು ಸ್ಪಷ್ಟವಾಗಿ ಅಲ್ಲಗೆಳೆದಿರುವ ಮಧ್ಯಪ್ರದೇಶ ಪೊಲೀಸರು, ಅಂತಹ ಯಾವುದೇ ಪ್ರಯತ್ನವನ್ನು ವಿಕಾಸ್ ದುಬೆ ಮಾಡಲಿಲ್ಲ ಎಂದು ಹೇಳಿದ್ದಾರೆ.
ಕಳೆದ ಶನಿವಾರ ಮಧ್ಯಪ್ರದೇಶದ ಉಜ್ಜಯಿನಿಯಿಂದ ದುಬೆಯನ್ನು ಉತ್ತರ ಪ್ರದೇಶದ ಕಾನ್ಪುರಕ್ಕೆ ಕರೆದುಕೊಂಡು ಬರುವಾಗ ವಿಕಾಸ್ ದುಬೆ ಪ್ರಯಾಣಿಸುತ್ತಿದ್ದ ಕಾರು ಅಪಘಾತಗೊಂಡಿತು. ಗಾಯಾಳಾಗಿದ್ದ ಪೊಲೀಸರ ಬಳಿಯಿಂದ 9MM ಪಿಸ್ತೂಲನ್ನು ಕಸಿದುಕೊಂಡು ಪರಾರಿಯಾಗಲು ಯತ್ನಿಸಿದಾಗ ನಡೆದ ಗುಂಡಿನ ದಾಳಿಯಲ್ಲಿ ವಿಕಾಸ್ ದುಬೆ ಮೃತಪಟ್ಟ ಎಂದು ವಿಶೇಷ ತನಿಖಾ ದಳದ ತಂಡ ಹೇಳಿತ್ತು. ಆ ನಂತರ ತಮ್ಮ ವಾದವನ್ನು ಪುರಸ್ಕರಿಸಲು ಮಧ್ಯಪ್ರದೇಶದಲ್ಲಿ ಒಂದು ಪೊಲೀಸ್ ಸ್ಟೇಷನ್‌ನಿಂದ ಇನ್ನೊಂದು ಪೊಲೀಸ್ ಠಾಣೆಗೆ ಬೈಕ್‌ನಲ್ಲಿ ಸಾಗಿಸುವ ಹೊತ್ತಿನಲ್ಲಿ ಪರಾರಿಯಾಗಲು ಯತ್ನಿಸಿದ್ದ ಎಂದೂ ಹೇಳಿದ್ದರು.

ಇನ್ನು ಆಂಗ್ಲ ಪತ್ರಿಕೆ ಟೈಮ್ಸ್ ಆಫ್ ಇಂಡಿಯಾಗೆ ಹೇಳಿಕೆ ನೀಡಿರುವ ಯುಪಿ ವಿಶೇಷ ತನಿಖಾ ದಳದ ಸದಸ್ಯರೊಬ್ಬರು, “ನಮ್ಮ ತಂಡ ಉಜ್ಜಯಿನಿಯ ಒಂದು ಪೊಲೀಸ್ ಠಾಣೆಗೆ ತಲುಪಿದಾಗ, ವಿಕಾಸ್ ದುಬೆಯನ್ನು ಇನ್ನೊಂದು ಠಾಣೆಯಲ್ಲಿ ಇಟ್ಟಿರುವುದು ತಿಳಿಯಿತು. ನಾವು ಕಾಯುತ್ತಾ ಕುಳಿತಿದ್ದೆವು. ಆ ಹೊತ್ತಿಗೆ ಓರ್ವ ಕಾನ್ಸ್ಟೇಬಲ್ ಬೈಕ್ ಏರಿ ವಿಕಾಸ್ ದುಬೆಯನ್ನು ಕರೆತರಲು ಹೊರಟ. ಅವನನ್ನು ವಾಪಾಸ್ ಠಾಣೆಯ ಬಳಿ ಕರೆತಂದಾಗ, ಬೈಕ್‌ನಿಂದ ಇಳಿದು ಪರಾರಿಯಾಗಲು ಯತ್ನಿಸಿದ. ಆ ಹೊತ್ತಿನಲ್ಲಿ ನಾವು ಮತ್ತು ಮಧ್ಯಪ್ರದೇಶ ಪೊಲೀಸರು ಅವನನ್ನು ಮತ್ತೆ ಬಂಧಿಸಿದೆವು. ದುಬೆ ನಮ್ಮನ್ನು ಅವಾಚ್ಯವಾಗಿ ತೆಗಳಲು ಆರಂಭಿಸಿದ,” ಎಂದು ಹೇಳಿದ್ದಾರೆ.
ಆದರೆ, ಈ ವಾದವನ್ನು ಮಧ್ಯಪ್ರದೇಶದ ಪೊಲೀಸರು ಸಂಪೂರ್ಣವಾಗಿ ಅಲ್ಲಗೆಳೆದಿದ್ದಾರೆ. ವಿಕಾಸ್ ದುಬೆಯನ್ನು ಬೈಕ್‌ನಲ್ಲಿ ಸಾಗಿಸುವ ಪ್ರಯತ್ನವನ್ನೇ ನಾವು ಮಾಡಲಿಲ್ಲ. ಇನ್ನೂ ಮಿಗಿಲಾಗಿ ಪರಾರಿಯಾಗುವ ಯಾವುದೇ ಪ್ರಯತ್ನವನ್ನು ವಿಕಾಸ್ ದುಬೆ ಮಾಡಲಿಲ್ಲ ಎಂದು ಅವರು ಹೇಳಿದ್ದಾರೆ.
ಮಧ್ಯಪ್ರದೇಶದ ಶಿವಪುರಿಯಲ್ಲಿಯೂ ವಿಕಾಸ್ ದುಬೆ ಪರಾರಿಯಾಗಲು ಯತ್ನಿಸಿದ್ದ ಕುರಿತು ಹೇಳಿಕೆ ನೀಡಿರುವ ವಿಶೇಷ ತನಿಖಾ ದಳದ ಸದಸ್ಯ “ಕಾರ್ ಟೈರ್ ಅನ್ನು ಪರಿಶೀಲಿಸುತ್ತಿದ್ದ ವೇಳೆ ಅವನು ಕಾರಿನಿಂದ ಇಳಿದು ಓಡಲು ಪ್ರಯತ್ನಿಸಿದ್ದ. ಆದರೆ, ಅವನನ್ನು ಬಂಧಿಸುವಲ್ಲಿ ನಮ್ಮ ತಂಡ ಯಶಸ್ವಿಯಾಯಿತು,” ಎಂದು ಹೇಳಿದ್ದಾರೆ.
ಈ ಹೇಳಿಕೆಯನ್ನು ಕೂಡಾ ಮಧ್ಯಪ್ರದೇಶದ ಶಿವಪುರಿಯ ಪೊಲೀಸ್ ಇನ್ಸ್ಪೆಕ್ಟರ್ ಅಲ್ಲಗೆಳೆದಿದ್ದು, ಯುಪಿ ಪೊಲೀಸರಿಗೆ ಸಾಕಷ್ಟು ಮುಜುಗರ ಉಂಟು ಮಾಡಿದೆ.
ಪೊಲೀಸರು ಎನ್‌ಕೌಂಟರ್ ಮಾಡುತ್ತಾರೆಂದು ಸುಪ್ರಿಂ ಮೊರೆ
ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೈಲುಪಾಲಾಗಿರುವ ಕಾನ್ಪುರ್‌ನ ಭಿಕ್ರು ಪೊಲೀಸ್ ಠಾಣೆಯ ಸಬ್-ಇನ್ಸ್‌ಪೆಕ್ಟರ್ ಕೆ ಕೆ ಶರ್ಮಗೆ ಈಗ ಜೀವ ಭಯ ಉಂಟಾಗಿದೆ. ತನ್ನನ್ನು ಪೊಲೀಸರೇ ಎನ್‌ಕೌಂಟರ್ ಮಾಡುತ್ತಾರೆ ಹಾಗಾಗಿ ತನಗೂ ತನ್ನ ಪತ್ನಿಗೂ ರಕ್ಷಣೆ ನೀಡಬೇಕೆಂದು ಶರ್ಮ ಸುಪ್ರಿಂ ಮೊರೆ ಹೋಗಿದ್ದಾರೆ.
ವಿಕಾಸ್ ದುಬೆಯೊಂದಿಗೆ ನಂಟು ಹೊಂದಿದ್ದ ಕಾರಣಕ್ಕೆ ಹಾಗೂ ಎಂಟು ಜನ ಪೊಲೀಸರು ಹತ್ಯೆಗೀಡಾಗುವುದರಲ್ಲಿ ಇವರ ಕೈವಾಡ ಇದೆ ಎಂದು ಆರೋಪಿಸಿ ವಿಶೇಷ ತನಿಖಾ ದಳವು ಶರ್ಮ ಅವರನ್ನು ಬಂಧಿಸಿತ್ತು.
ಒಟ್ಟಿನಲ್ಲಿ ವಿಕಾಸ್ ದುಬೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಉನ್ನತ ಅಧಿಕಾರಿಗಳು ಹಾಗೂ ರಾಜಕಾರಣಿಗಳನ್ನು ಬದುಕಿಸಲು ವಿಕಾಸ್ ದುಬೆಯನ್ನು ಕೊಲ್ಲಲಾಗಿದೆ ಎಂಬ ವಾದ ದಟ್ಟವಾಗಿ ಕೇಳಿ ಬರುತ್ತಿದೆ. ಇದರೊಂದಿಗೆ ಉತ್ತರ ಪ್ರದೇಶದ ಪೊಲೀಸರು ಮಾಡುತ್ತಿರುವ ಎಡವಟ್ಟುಗಳು ಅವರ ತಪ್ಪುಗಳನ್ನು ಮತ್ತೆ ಮತ್ತೆ ಎತ್ತಿ ತೋರಿಸುತ್ತಿದೆ. ಈ ಎಡವಟ್ಟುಗಳಿಂದಲೇ ಇದೊಂದು ಯೋಜಿತ ಎನ್‌ಕೌಂಟರ್ ಎಂಬ ವಾದಕ್ಕೆ ಮತ್ತಷ್ಟು ಮೇವು ದೊರೆಯುತ್ತಿದೆ.

