ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ಟಿಕ್ರಿಯಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಊಟದ ವ್ಯವಸ್ಥೆ ಅಬಾಧಿತವಾಗಿ ನಡೆಯುತ್ತಿದೆ. ಇದನ್ನು ಪಂಜಾಬಿನಿಂದ ಬಂದವರಷ್ಟೇ ನೆರವಿನ ಹಸ್ತ ಚಾಚುತ್ತಿಲ್ಲ. ಉತ್ತರ ಪ್ರದೇಶದ ಘೋರಖ್‌ಪುರದಿಂದ ಮಹಿಳೆಯರ ಗುಂಪು, ಇಡೀ ದಿನ ಚಪಾತಿ ಹಾಗೂ ಇತರ ಆಹಾರ ಖಾದ್ಯಗಳನ್ನು ಸಿದ್ಧಪಡಿಸುತ್ತಾ, ಹೋರಾಟಗಾರರಿಗೆ ಬಡಿಸುತ್ತಿದ್ದಾರೆ. ದಣಿವರಿಯದೇ ರೈತರಿಗೆ ಎಲ್ಲ ಹೊತ್ತಿನಲ್ಲೂ ಊಟ ಲಭ್ಯವಾಗುವಂತೆ ನೋಡಿಕೊಳ್ಳುತ್ತಿದ್ದಾರೆ.
ಕಳೆದ ಎರಡು ದಿನಗಳಿಂದ ಬಿಡದೇ ಸುರಿಯುತ್ತಿರುವ ಮಳೆಯಲ್ಲಿಯೂ ರೈತರಿಗೆ ಹಲವರು ನೆರವಿನ ಹಸ್ತ ಚಾಚುತ್ತಿರುವ ಕಾರಣ ಅನ್ನದಾತರು ಒಂದಿಷ್ಟು ಕದಲದೇ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಹೀಗಿದ್ದರೂ ಕೊರೆಯುವ ಚಳಿ ಮತ್ತು ಮಳೆಯಿಂದಾಗಿ ಪ್ರತಿಭಟನಾ ನಿರತ ರೈತರಿಗೆ ವಿವಿಧ ರೀತಿಯ ಸಮಸ್ಯೆಗಳು ಎದುರಾಗುತ್ತಿದ್ದು, ಖಾಲ್ಸಾ ಏಡ್ ಸಂಸ್ಥೆ ಎಲ್ಲ ರೀತಿಯ ನೆರವು ನೀಡುವ ಮೂಲಕ ಹೋರಾಟಕ್ಕೆ ಬಲ ತುಂಬಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದೆಹಲಿಯ ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ಈ ಸಂಸ್ಥೆಯು 2 ಮಾಲ್‌ಗಳನ್ನು ನಿರ್ಮಿಸಿದ್ದು, ದೈನಂದಿನ ಬಳಕೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಉಚಿತವಾಗಿ ಪಡೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ದೆಹಲಿಯಲ್ಲಿ ರೈತರ ಹೋರಾಟ ಶುರುವಿನಿಂದ ಇಂದಿನವರೆಗೂ ಊಟ, ಬಟ್ಟೆ, ಆಶ್ರಯ, ಆರೋಗ್ಯ ಚಿಕಿತ್ಸೆ ಸೇರಿದಂತೆ ಎಲ್ಲಾ ರೀತಿಯಲ್ಲಿ ಹೋರಾಟವನ್ನು ಪೂರೈಸುತ್ತಿದೆ. ಖಾಲ್ಸಾದ ಸೇವಾ ಚಟುವಟಿಕೆಗಳಿಗೆ ವಿವಿಧ ದೇಶಗಳಿಂದ ಬೆಂಬಲ ಲಭ್ಯವಾಗಿದೆ.
ಖಾಲ್ಸಾ ಏಡ್ ಅಂತರಾಷ್ಟ್ರೀಯ ಸರ್ಕಾರೇತರ ಸಂಸ್ಥೆಯಾಗಿದ್ದು, 1999ರಲ್ಲಿ ರವೀಂದರ್ ಸಿಂಗ್ ಎಂಬುವವರು ಈ ಸಂಸ್ಥೆಯನ್ನು ಸ್ಥಾಪಿಸಿದರು. ರಾಷ್ಟ್ರೀಯ ವಿಪ್ಪತ್ತು ಸಂದರ್ಭಗಳಲ್ಲಿ ಪರಿಹಾರ ಕಾರ್ಯಗಳನ್ನು ನಡೆಸುತ್ತಾ ಬಂದಿದೆ.


ಮಯನ್ಮಾರ್, ಯಮೆನ್, ಗ್ರೀಸ್, ಗಲ್ಫ್ ರಾಷ್ಟ್ರಗಳು ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಸೇವಾ ಕಾರ್ಯಗಳನ್ನು ನಡೆಸಿದೆ. ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದಿದ್ದ ರೊಹಿಂಗ್ಯಾ ನಿರಾಶ್ರಿತರ ಪರವಾಗಿ ಕೆಲಸ ಮಾಡಿದೆ. 2018ರ ಕೇರಳ ಪ್ರವಾಸ ಸಂದರ್ಭದಲ್ಲಿ ಈ ಸಂಸ್ಥೆಯು ಪ್ರತಿದಿನ 15 ಸಾವಿರ ಜನರಿಗೆ ಊಟದ ವ್ಯವಸ್ಥೆಯನ್ನು ಒದಗಿಸಿತ್ತು.
ಸದ್ಯದ ರೈತರ ಹೋರಾಟವನ್ನು ಹಲವು ಮಾಧ್ಯಮಗಳು ದಿಕ್ಕು ತಪ್ಪಿಸುವ ಯತ್ನ ಮಾಡುತ್ತಿವೆ. ಹೀಗಿರುವಾಗ ಇಂದಿನ ರೈತರ ಹೋರಾಟದ ಕೂಗನ್ನು ಜನರಿಗೆ ತಲುಪಿಸುವ ಜವಾಬ್ದಾರಿ “ಮಾಸ್ ಮೀಡಿಯಾ ಫೌಂಡೇಷನ್” ಹೊತ್ತಿದೆ. ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್ʼ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ ಸಿದ್ಧಪಡಿಸಲಾಗಿದೆ.