ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರು ಸಂಸತ್ತಿನಲ್ಲಿ ಮಂಡಿಸಿರುವ ಆರ್ಥಿಕ ವರದಿಯೊಂದರ ಪ್ರಕಾರ 2019-20 ನೇ ಸಾಲಿನಲ್ಲಿ ಕೃಷಿ ಕ್ಷೇತ್ರದ ಮೌಲ್ಯ ವರ್ಧನೆಯ ಪ್ರಮಾಣ ಶೇಕಡಾ 16.5. ಇದು 2014-15ರಲ್ಲಿದ್ದ 18.2ಕ್ಕಿಂತ 1.7ಶೇಕಡಾ ಕಡಿಮೆ. ಸರಕಾರಿ ದಾಖಲೆಗಳ ಪ್ರಕಾರ ಹೇಳುವುದಾದರೆ ಈ ಕುಸಿತಕ್ಕೆ ಮುಖ್ಯ ಕಾರಣ ಬೆಳೆಗಳಿಂದ ಬರುತ್ತಿದ್ದ ಮೌಲ್ಯ ವರ್ಧನೆಯು 2014-15ರಲ್ಲಿ ಶೇಕಡಾ 11.2ರಷ್ಟಿದ್ದುದು 2017-18ರ ವೇಳೆಗೆ ಶೇಕಡಾ ಹತ್ತಕ್ಕೆ ಕುಸಿದದ್ದು. ಅಂದರೆ ಸರಕಾರದ ತಿಳಿಗೇಡಿತನದ ನೀತಿ ನಿಯಮಗಳಿಂದ ಕೃಷಿ ವಲಯ ಈಗಾಗಲೇ ಹಿನ್ನಡೆ ಅನುಭವಿಸುತ್ತಿದೆ. ಹಾಗಾಗಿಯೇ ಸರಕಾರ ಹೊಸದಾಗಿ ತರಲಿಚ್ಛಿಸಿರುವ ಮೂರು ಕಾನೂನುಗಳ ವಿರುದ್ಧ ಇಡೀ ದೇಶದ ರೈತ ಸಮೂಹ ಇಷ್ಟು ತೀವ್ರವಾಗಿ ಸಿಡಿದೆದ್ದದ್ದು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಳೆದ ಏಳು ದಿನಗಳಿಂದ ಕೃಷಿ ಕಾನೂನು ವಿರೋಧಿ ಹೋರಾಟ ನಡೆಯುತ್ತಿದೆ. ರೈತ ವಿರೋಧಿ ಕಾನೂನು ಹಿಂದೆಗೆಯುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ರೈತ ಮುಖಂಡರು ಘೋಷಿಸಿದ್ದಾರೆ. ಈ ಮಧ್ಯೆ ಗೃಹ ಸಚಿವ ಅಮಿತ್ ಶಾ ಸರಕಾರ ನಿಗದಿ ಪಡಿಸಿರುವ ಸ್ಥಳದಲ್ಲೇ ಪ್ರತಿಭಟನೆ ಮಾಡುವಂತೆ ಮನವಿ ಮಾಡಿದ್ದಾರೆ. ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಕೂಡ ಕೇಂದ್ರ ಗೃಹ ಸಚಿವರ ಮನವಿಗೆ ಸ್ಪಂದಿಸುವಂತೆ ಕೇಳಿಕೊಂಡಿದ್ದಾರೆ. ಆದರೆ ರೈತ ಮುಖಂಡರು ಅಮಿತ್ ಶಾ ಮತ್ತು ಅಮರಿಂದರ್ ಸಿಂಗ್ ಅವರ ಮನವಿಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದು ಸರಕಾರ ಯಾವುದೇ ಷರತ್ತುಗಳನ್ನು ವಿಧಿಸದೆ ಮಾತಕತೆಗೆ ಕರೆದರೆ ಮಾತ್ರ ಮಾತಕತೆಗೆ ಬರುತ್ತೇವೆ ಅಂದಿದ್ದಾರೆ.
“ಓಪನ್ ಜೈಲಿನಂತಿರುವ ಬುರಾರಿ ಪಾರ್ಕ್(ಸರಕಾರ ನಿಗದಿಪಡಿಸಿದ ಪ್ರತಿಭಟನಾ ಸ್ಥಳ)ಗೆ ನಾವು ಪ್ರತಿಭಟನೆಗಾಗಿ ಹೋಗುವುದಿಲ್ಲವೆಂದು ನಿರ್ಧರಿಸಿದ್ದೇವೆ. ದೆಹಲಿ ಪೊಲೀಸರು ಉತ್ತರಾಖಂಡದ ರೈತ ಮುಖಂಡರಿಗೆ ಜಂತರ್‌ಮಂತರ್‌ಗೆ ಕರೆದೊಯ್ಯುವ ಭರವಸೆ ನೀಡಿ ಬುರಾರಿ ಪಾರ್ಕ್‌ನಲ್ಲಿ ಬಂಧಿಸಿರುವ ಉದಾಹರಣೆ ಈಗಾಗಲೇ ನಮ್ಮ ಕಣ್ಣ ಮುಂದಿದೆ” ಎಂದು ‘ಭಾರತೀಯ ಕಿಸಾನ್ ಯೂನಿಯನ್’ನ ಅಧ್ಯಕ್ಷ ಸುರ್ಜಿತ್ ಫುಲ್ ಹೇಳಿದ್ದಾರೆ.
Also Read: ಕೈಯಲ್ಲಿ ಬೆಣ್ಣೆ, ಬಗಲಲ್ಲಿ ದೊಣ್ಣೆ; ಇದು ರೈತರ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವು
ಕಳೆದ ಎಪ್ಪತ್ತು ವರ್ಷಗಳಲ್ಲಿ ಇದು ಅತ್ಯಂತ ಚಳಿಯ ವರ್ಷವಾಗಿದ್ದು, ದೆಹಲಿಯ ಗಡಿಯಾಗಿರುವ ಟಿಕ್ರಿಯಲ್ಲಿ ಭಾನುವಾರ ರಾತ್ರಿ ಲುಧಿಯಾನದ ರೈತ ಗಜ್ಜನ್ ಸಿಂಗ್ ಎಂಬವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ವಿಪರೀತ ಚಳಿಯಿಂದ ಅವರ ಆರೋಗ್ಯ ಬಿಗಡಾಯಿಸಿತು ಎಂದು ವರದಿಗಳು ತಿಳಿಸಿವೆ. ಈ ಮಧ್ಯೆ ಶಾಹಿನ್ ಭಾಗ್‌ನ ಕೆಲ ಮಹಿಳೆಯರೂ ರೈತ ಚಳವಳಿಗೆ ಬೆಂಬಲ ಸೂಚಿಸಿದ್ದಾರೆ. ಜಲಫಿರಂಗಿ, ಅಶ್ರುವಾಯು ದಾಳಿಗೆ ತಮ್ಮನ್ನು ತಾವು ಒಡ್ಡಿಕೊಂಡಿರುವ ತಮ್ಮ ಪ್ರತಿಭಟನೆಗೆ ಸರಕಾರ ಜಗ್ಗದೇ ಇರುವುದನ್ನು ಮನಗಂಡು ದೆಹಲಿಯ ಐದು ಗಡಿಗಳಾದ ಸೋನಿಪತ್, ರೋಹ್ಟಕ್, ಜೈಪುರ್, ಗಾಜಿಯಾಬಾದ್- ಹಾಪುರ್ ಮತ್ತು ಮಥುರಾಗಳನ್ನು ಬ್ಲಾಕ್ ಮಾಡುವುದಾಗಿ ಘೋಷಿಸಿದ್ದಾರೆ.
ಕಳೆದ ಮೂರು ತಿಂಗಳುಗಳಿಂದ ರೈತ ಸಂಘಗಳು ಸರಕಾರ ತರಲಿಚ್ಛಿಸಿರುವ ಕಾನೂನಿನ ವಿರುದ್ಧದ ನಿಲುವುಗಳನ್ನು ಹೊಂದಿದೆ. ರೈತರ ಪ್ರಕಾರ ಹೊಸ ಕಾನೂನು ಅವರನ್ನು ಕಾರ್ಪೋರೆಟ್ ಕಂಪೆನಿಗಳ ಅಡಿಯಾಳಾಗಿಸುತ್ತವೆ ಮತ್ತು ಬೆಳೆಗಳನ್ನು ಖಾಸಗಿ ಕಂಪೆನಿಗಳ ಮೂಲಕ ವ್ಯಾಪಾರ ಮಾಡಿದರೆ ಕನಿಷ್ಠ ಖಾತರಿ ಬೆಲೆ ದೊರೆಯುವ ಯಾವ ಭರವಸೆಯೂ ಇಲ್ಲ.
Also Read: ಪ್ರಧಾನಿ ಮೋದಿಯ ರೈತ ವಿರೋಧಿ ನಿಲುವು ಮೂರ್ಖತನವೋ? ಉದ್ಧಟತನವೋ?
ಇಡೀ ದೇಶ ಅನ್ನದಾತನ ಅಳಲಿಗೆ ಕಿವಿಯಾಗಿ ಬೆಂಬಲಕ್ಕೆ ನಿಂತಿದ್ದರೆ, ಬೃಹತ್ ಕಂಪೆನಿಗಳ ತಾಳಕ್ಕೆ ಕುಣಿಯುತ್ತಿರುವ ಸರಕಾರ ಮಾತ್ರ ರೈತರ ಹೋರಾಟವನ್ನು ಬಲವಂತವಾಗಿ ಹತ್ತಿಕ್ಕುವ ದಮನಕಾರಿ ನೀತಿ ಅನುಸರಿಸುತ್ತಿದೆ.
ದೇಶದ ವಿವಿಧ ಮೂಲಗಳಿಂದ ದೆಹಲಿಯತ್ತ ಹೊರಟಿದ್ದ ಪ್ರತಿಭಟನಾಕಾರರು ಮೊದಲು ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಮೊದಲು ಒಪ್ಪಿಗೆ ನೀಡಿದ್ದ ಪೊಲೀಸರು ನಂತರ ಕೊರೋನಾದ ಕಾರಣ ನೀಡಿ ಅನುಮತಿ ಹಿಂಪಡೆದುಕೊಂಡಿದ್ದರು. ಅಲ್ಲದೆ ರೈತರು ದೆಹಲಿ ಪ್ರವೇಶಿಸದಂತೆ ಗಡಿಯಲ್ಲೇ ತಡೆದಿದ್ದರು. ಧೃತಿಗೆಡದ ರೈತರು ತಾವಿದಲ್ಲಿಂದಲೇ ಪ್ರತಿಭಟನೆ ಮುಂದುವರೆಸಿದರು.
Also Read: ತಮ್ಮನ್ನು ಹಿಂಸಿಸಿದ ಪೊಲೀಸರಿಗೇ ಆಹಾರ, ನೀರು ನೀಡಿದ ಪ್ರತಿಭಟನಾನಿರತ ರೈತರು
ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಯ ಮೇಲೆ ಸರಕಾರದ ನಿರ್ದೇಶನದಂತೆ ಪೊಲೀಸ್ ಧಾಳಿ ನಡೆದಿದ್ದು, ಇಡೀ ಹೋರಾಟವನ್ನು ಹತ್ತಿಕ್ಕಲು ಸರಕಾರ ಹಿಡಿದ ದಾರಿ ಅಕ್ಷಮ್ಯ. ಹರ್ಯಾಣ, ಪಂಜಾಬ್, ರಾಜಸ್ಥಾನ ಮತ್ತಿತರ ರಾಜ್ಯಗಳ ರೈತರು ರಾಜಧಾನಿಗೆ ಬರದಂತೆ ತಡೆಯಲು ಸರಕಾರ ಹೆದ್ದಾರಿಗಳನ್ನೇ ಅಗೆಯಿಸಿತು. ಬಹುಶಃ ಸ್ವತಂತ್ರ ಭಾರತದ ಇತಿಹಾಸದಲ್ಲಿ ಪ್ರಭುತ್ವ ತನ್ನ ಪ್ರಜೆಗಳ ಪ್ರತಿಭಟಿಸುವ ಮೂಲಭೂತ ಹಕ್ಕನ್ನು ತಡೆಯಲು ಈ ರೀತಿಯ ದಾರ್ಷ್ಟ್ಯದ ಕ್ರಮವನ್ನು ಅನುಸರಿಸಿದ್ದು ಇದೇ ಮೊದಲ ಬಾರಿ. ರೈತರ ಮೇಲೆ ಜಲಫಿರಂಗಿ ಪ್ರಯೋಗಿಸಿ ಅದನ್ನು ತಡೆಯಲು ಪ್ರಯತ್ನಿಸಿದ ಯುವಕನ ಮೇಲೆ ‘ಆತ್ಮಹತ್ಯಾ ಯತ್ನ’ ಪ್ರಕರಣ ದಾಖಲಿಸಿದ್ದು ಸರಕಾರದ ನಿರ್ಲಜ್ಜತನಕ್ಕೆ ಮತ್ತೊಂದು ಸಾಕ್ಷಿ.
ಇಡೀ ರೈತ ಸಮುದಾಯ ಆಡಳಿತ ಪಕ್ಷದ, ಅಧಿಕಾರ ವರ್ಗದ ಆತ್ಮಸಾಕ್ಷಿಗೆ ಸವಾಲೆಸೆಯುವಂತೆ ತಮ್ಮನ್ನು ಹಿಂಸಿಸಿದ ಪೊಲೀಸ್ ಮತ್ತು ರಕ್ಷಣಾ ಪಡೆಗಳ ಸಿಬ್ಬಂದಿಗೆ ನೀರು ಆಹಾರ ನೀಡಿ ಮಾನವೀಯತೆ ಮೆರೆದದ್ದು, ಧರ್ಮಗಳ ಎಲ್ಲೆಗಳನ್ನು ಮೀರಿ ಪರಸ್ಪರ ಸಹಕಾರ ನೀಡುತ್ತಿರುವುದು ವ್ಯಾಪಕ ಶ್ಲಾಘನೆಗೆ ಒಳಗಾಗಿದೆ.
Also Read: ರೈತ ಪ್ರತಿಭಟನೆ ಸುತ್ತ ಸುಳ್ಳು ಮಾಹಿತಿ ಬಿತ್ತರಿಸಿದ ಬಿಜೆಪಿ ಐಟಿ ಸೆಲ್
ರೈತರು ತಮ್ಮ ಯಾವ ಬೆದರಿಕೆಗಳಿಗೂ ಜಗ್ಗದೇ ಇದ್ದಾಗ ಹತಾಶ ಸರಕಾರ ತಾನು ಮೊದಲಿನಿಂದಲೂ ಅನುಸರಿಸಿಕೊಂಡು ಬಂದಿರುವ ಒಡೆದು ಆಳುವ ನೀತಿಯನ್ನು ಇಲ್ಲೂ ಪ್ರಯೋಗಿಸಿತು. ಚಳಿ ಗಾಳಿಯ ಹೊಡೆತವನ್ನು ಮೀರಿ ಪ್ರತಿಭಟನೆಗಾಗಿ ಸೇರಿರುವ ಇಡೀ ರೈತ ಸಮುದಾಯದ ಮೇಲೆ ‘ಭಯೋತ್ಪಾದನೆ’ಯ ಆರೋಪ ಹೊರಿಸಿತು.
ದೇಶದ ಗಡಿಗಳನ್ನು ರಕ್ಷಿಸುವಲ್ಲಿ, ದೇಶದೊಳಗಿನ ವಿಪತ್ತಿನ ಸಂದರ್ಭದಲ್ಲಿನ ಹೋರಾಟದಲ್ಲಿ ಮೊದಲ ಸಾಲಿನಲ್ಲಿ ನಿಲ್ಲುವ ಪಂಜಾಬಿಗರನ್ನು ಮತ್ತು ಹರ್ಯಾಣಿಗರನ್ನು ಕೇವಲ ತಮ್ಮ ಹಕ್ಕಿಗಾಗಿ ಹೋರಾಡಿದರು ಎನ್ನುವ ಕಾರಣಕ್ಕಾಗಿ ಖಾಲಿಸ್ತಾನಿಗಳು ಎಂದು ಬಿಂಬಿಸುವ ಪ್ರಯತ್ನವನ್ನೂ ಬಿಜೆಪಿ ಮತ್ತದರ ಐಟಿ ಸೆಲ್ ಮಾಡಿತು. ಈ ಮೂಲಕ ತನ್ನ ಅಜೆಂಡಾಗಳನ್ನು ಒಪ್ಪದಿರುವವರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಕೆಟ್ಟ ಅಭ್ಯಾಸವನ್ನು ಮತ್ತೊಮ್ಮೆ ದೇಶದ ಮುಂದಿರಿಸಿತು.
Also Read: ʼರೈತರನ್ನು ಭಯೋತ್ಪಾದಕರಂತೆ ಕಾಣಬೇಡಿʼ; ಬಿಜೆಪಿಯೇತರ ನಾಯಕರ ಆಗ್ರಹ
ಭಾರತದ ಆರ್ಥಿಕ ಅಭಿವೃದ್ಧಿಯಲ್ಲಿ ಕೃಷಿಯ ಪಾಲು ಗಣನೀಯ, ಉದ್ಯೋಗ ಸೃಷ್ಟಿಯಲ್ಲಿ ಶೇಕಡಾ 60ಕ್ಕಿಂತಲೂ ಹೆಚ್ಚಿನ ಪಾಲನ್ನು ಕೃಷಿ ಕ್ಷೇತ್ರ ಒದಗಿಸುತ್ತಿದೆ. ಕರೋನಾದ ಸಂಕಷ್ಟ ಕಾಲದಲ್ಲಿ ಉಳಿದ ಎಲ್ಲಾ ವಲಯಗಳು ನಷ್ಟ ಅನುಭವಿಸಿದರೂ ಒಂದಿಷ್ಟು ಚೇತರಿಕೆ ಕಂಡುಬಂದದ್ದು ಕೃಷಿಯಲ್ಲಿ ಮಾತ್ರ ಎಂಬುವುದನ್ನು ಸರಕಾರ ಮರೆಯದಿರಲಿ. ಕಾರು ಹೊಂದಿರುವವ, ವಾಚು ಧರಿಸಿರುವವ ರೈತನೇ ಅಲ್ಲ ಎಂದು ನಿರ್ಧರಿಸುವ ಮುನ್ನ ರೈತನ ಬೆನ್ನು ಮೂಳೆ ಗಟ್ಟಿಯಿದ್ದರಷ್ಟೇ ದೇಶದ ಬೆನ್ನುಮೂಳೆ ನೇರವಾಗಿರುತ್ತದೆ ಎಂಬ ಅರಿವು ಸರಕಾರಕ್ಕೂ, ಸರಕಾರದ ಸಲಹೆಗಾರರಿಗೂ ಬೇಗ ಆಗಲಿ.