ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಂಡಿಯೂರಿದೆ. ಹಾಗಾಗಿಯೇ ರೈತರಿಗೆ ಕೇಂದ್ರ ಸರ್ಕಾರ ಕೆಲವು ಪ್ರಸ್ತಾವನೆಗಳ ಕರಡು ತಯಾರಿಸಿ ಕಳಿಸಿಕೊಟ್ಟಿದೆ. ಕೃಷಿ ಕಾಯ್ದೆ ಕುರಿತು ರೈತರಿಗಿರುವ ಆತಂಕಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಸದ್ಯದ ಕನಿಷ್ಟ ಬೆಂಬಲ ಬೆಲೆ ವ್ಯವಸ್ಥೆ ಮುಂದುವರಿಸುತ್ತೇವೆ. ಇದರ ಜತೆಗೆ ರೈತ ಸಮುದಾಯಕ್ಕೆ ಹಲವು ಪ್ರಸ್ತಾವನೆ ಮತ್ತು ಭರವಸೆಗಳನ್ನು ನೀಡುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂಂದಿಗೆ ನಡೆದ ಮಾತುಕತೆ ವಿಫಲವಾದ ಬೆನ್ನಲ್ಲೇ ಕಳುಹಿಸಿದ ಸರ್ಕಾರದ ಈ ಪ್ರಸ್ತಾವನೆಯನ್ನು ಪ್ರತಿಭಟನಾನಿರತ ರೈತರೀಗ ತಿರಸ್ಕರಿಸಿದ್ದಾರೆ. ಏನೇನೋ ಸಾಬೂಬು ನೀಡಿ ನಮ್ಮ ಬೇಡಿಕೆಗಳಿಂದ ಪರಾರಿಯಾಗಬೇಡಿ ಎಂದು ರೈತರು ಕೇಂದ್ರ ಸರ್ಕಾರದ ಭರವಸೆ ಮತ್ತು ಪ್ರಸ್ತಾವನೆ ಕರಡನ್ನು ನಿರಾಕರಿಸಿದ್ದಾರೆ. ರೈತ ವಿರೋಧಿ ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂಪಡೆಯುವುದೊಂದೇ ದಾರಿ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕೇಂದ್ರ ಜಾರಿಗೊಳಿಸಿರುವ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂಬುದೇ ನಮ್ಮ ಮೊದಲ ಬೇಡಿಕೆ. ಈಗ ಕೇಂದ್ರ ಸರ್ಕಾರ ಕಳುಹಿಸಿರುವ ಲಿಖಿತ ಭರವಸೆ ಮೇಲೆ ಚರ್ಚೆ ಮಾಡಿದ್ದೇವೆ. ನಮಗೆ ಈ ರೀತಿಯ ಭರವಸೆಗಳು ಬೇಡ. ಕೇಂದ್ರ ನಮ್ಮ ಬೇಡಿಕೆ ಈಡೇರಿಸುವತನಕ ರಾಷ್ಟ್ರ ರಾಜಧಾನಿ ಗಡಿಯಲ್ಲಿ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ್ದೇವೆ ಎಂದು ಕ್ರಾಂತಿಕಾರಿ ಕಿಸಾನ್ ಯೂನಿಯನ್ ಅಧ್ಯಕ್ಷ ದರ್ಶನ್ ಪಾಲ್ ತಿಳಿಸಿದ್ದಾರೆ.
ಕೃಷಿ ಕಾನೂನುಗಳ ವಿರುದ್ಧದ ನಮ್ಮ ಹೋರಾಟ ಮುಂದುವರೆಯಲಿದೆ. ಡಿ.12ರಂದು ದೆಹಲಿ-ಜೈಪುರ ಹೆದ್ದಾರಿ ಬಂದ್ ಮಾಡುತ್ತೇವೆ. ಡಿ.14 ರಂದು ಬಿಜೆಪಿ ಕಚೇರಿಗಳಿಗೆ ಮುತ್ತಿಗೆ ಹಾಕಲಿದ್ದೇವೆ. ಕೇಂದ್ರದ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯಲಿವೆ. ದೇಶದ ಇತರ ಭಾಗಗಳ ರೈತರನ್ನು ದೆಹಲಿಗೆ ಬರುವಂತೆ ಕರೆ ನೀಡುತ್ತೇವೆ ಎಂದರು.
ಇತ್ತೀಚೆಗೆ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ನಡೆದ ಮಾತುಕತೆ ವಿಫಲವಾದ ನಂತರ ರೈತ ಮುಖಂಡರು 6ನೇ ಸುತ್ತಿನ ಮಾತುಕತೆಯಲ್ಲಿ ಭಾಗಿಯಾಗಲು ನಿರಾಕರಿಸಿದರು. ಆದ್ದರಿಂದಲೇ ಕೇಂದ್ರ ಸರ್ಕಾರ ವಿಧೇಯಕಕ್ಕೆ ತಿದ್ದುಪಡಿ ಮಾಡಿದ ಕರಡು ಪ್ರಸ್ತಾವನೆಯನ್ನು ರೈತ ಮುಖಂಡರಿಗೆ ಕಳುಹಿಸಿತ್ತು. ಆದರೆ, ರೈತರು ಕರಡು ಪ್ರಸ್ತಾವನೆ ತಿರಸ್ಕರಿಸಿ ತಮ್ಮ ಮೂಲ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರದ ಕರಡು ಪ್ರಸ್ತಾವನೆಗಳು ಹೀಗಿತ್ತು?
*ಎಂಎಸ್ ಪಿ ವ್ಯವಸ್ಥೆ ಹೀಗೆ ಮುಂದುವರೆಯಲಿದೆ ಎಂದು ಲಿಖಿತ ಭರವಸೆ ನೀಡಿದ್ದ ಕೇಂದ್ರ
*ನಿಯಂತ್ರಿತ ಮಂಡಿಗಳ ಹೊರತಾಗಿ ಖಾಸಗಿ ವ್ಯಾಪಾರಸ್ಥರಿಗೆ ಟ್ರೇಡಿಂಗ್ ನೋಂದಣಿ ಮಾಡಲು ರಾಜ್ಯ ಸರ್ಕಾರಕ್ಕೆ ಅವಕಾಶ
*ಖಾಸಗಿ ಸಂಸ್ಥೆಗಳು ನೋಂದಣಿ ಮಾಡಿಕೊಂಡ ಮಂಡಿಗಳಲ್ಲಿ ಎಪಿಎಂಸಿಗಳಿಗೆ ಅನ್ವಯ ಆಗುವಂತೆ ಸೆಸ್/ಶುಲ್ಕ ವಿಧಿಸಲು ರಾಜ್ಯ ಸರ್ಕಾರಕ್ಕೆ ಅವಕಾಶ
*ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಿವಿಲ್ ನ್ಯಾಯಾಗಳ ಮೊರೆ ಹೋಗಲು ರೈತರಿಗೆ ಆಯ್ಕೆ
*ಗುತ್ತಿಗೆ ನೀಡಿರುವ ಕೃಷಿ ಭೂಮಿಯಲ್ಲಿ ನಿರ್ಮಾಣ ಮಾಡಿರುವ ಯಾವುದೇ ಕಟ್ಟಡ ನಿರ್ಮಾಣದ ಮೇಲೆ ಸಾಲ ನೀಡಲ್ಲ
*ಗುತ್ತಿಗೆ ಅವಧಿ ಮುಕ್ತಾಯಗೊಂಡ ನಂತರ ಗುತ್ತಿಗೆಗೆ ಪಡೆದಿದ್ದವರು ಕಟ್ಟಡವನ್ನು ಅತಿಕ್ರಮಣ ಮಾಡುವ ಆಗಿಲ್ಲ
*ಭೋಗ್ಯ, ಅಡಮಾನ ಅಥವಾ ಕೃಷಿ ಭೂಮಿ ಮಾರಾಟಕ್ಕೆ ನಿರ್ಬಂಧ ವಿಧಿಸುವುದು
*ಸ್ಪಾನ್ಸರ್ಗಳು ಕೃಷಿ ಭೂಮಿ ಮೇಲಿನ ಒಡೆತನ ಕಸಿದುಕೊಳ್ಳುವುದಕ್ಕೆ ನಿರ್ಬಂಧ
*ಭೂಮಿಯ ಸ್ವರೂಪ ಬದಲಾವಣೆ ಮಾಡುವುದಕ್ಕೆ ನಿರ್ಬಂಧ ವಿಧಿಸುವುವ ಮೊದಲಾದ ಭರವಸೆ