ಲಾಕ್‌ಡೌನ್‌ನಿಂದ ತೀವ್ರ ಸಂಕಷ್ಟಕ್ಕೊಳಗಾಗಿರುವ ರೈತರು, ನೇಕಾರರು, ಟ್ಯಾಕ್ಸಿ ಚಾಲಕರು ಹಾಗೂ ಕ್ಷೌರಿಕರನ್ನು ಗಮನದಲ್ಲಿಟ್ಟುಕೊಂಡು ವಿಶೇಷ ಅನುದಾನವನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಕಳೆದ ಒಂದುವರೆ ತಿಂಗಳಿಂದ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ರೈತರು, ಹೂ-ಹಣ್ಣು ಬೆಳೆಗಾರರು, ನೇಕಾರರು, ಅಗಸರು, ಕ್ಷೌರಿಕರು, ಟ್ಯಾಕ್ಸಿ ಚಾಲಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಷ್ಟದಲ್ಲಿರುವ ಪ್ರಜೆಗಳಿಗೆ ಸರ್ಕಾರ ಯಾವತ್ತೂ ಬೆಂಬಲ ನೀಡುತ್ತದೆ. ಹಾಗಾಗಿ 1610 ಕೋಟಿ ರುಪಾಯಿಗಳ ವಿಶೇಷ ಪ್ಯಾಕೇಜ್‌ನ್ನು ರಾಜ್ಯ ಸರ್ಕಾರ ಘೋಷಿಸಿದೆ.
ಈ ಅನುದಾನದ ಮೂಲಕ ಹೂ ಬೆಳೆಗಾರರಿಗೆ ಪ್ರತಿ ಎಕರೆಗೆ 25,000 ರುಪಾಯಿಗಳಂತೆ ಪರಿಹಾರವನ್ನು ನೀಡಲಾಗುತ್ತದೆ. ಸುಮಾರು 60,000 ಅಗಸರು, 2,36,000ಕ್ಕೂ ಹೆಚ್ಚು ಕ್ಷೌರಿಕರು ಲಾಕ್‌ಡೌನ್ ಸಂಧರ್ಭದಲ್ಲಿ ಕಸುಬು ಕಳೆದುಕೊಂಡಿರುವುದರಿಂದ ಅವರಿಗೆ ಒಂದು ಬಾರಿಗೆ 5,000 ರುಪಾಯಿಗಳ ಸಹಾಯಧನವನ್ನು ನೀಡಲಾಗುವುದು.
ರಾಜ್ಯದಲ್ಲಿರುವ ಸುಮಾರು 7.75 ಲಕ್ಷ ಆಟೋ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ 5000 ರುಪಾಯಿಗಳ ನೆರವು ನೀಡುವುದಾಗಿ ಅನುದಾನದಲ್ಲಿ ಘೋಷಿಸಿದೆ. ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಿದ್ಯುತ್ ಬಿಲ್ ಮನ್ನಾ ಮಾಡಲಾಗಿದೆ. ಬೃಹತ್ ಕೈಗಾರಿಕೆಗಳು ವಿದ್ಯುತ್ ಬಿಲ್ ಪಾವತಿ ಮಾಡಲಾಗದಿದ್ದರೆ ದಂಡ ವಿಧಿಸಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
![](https://pratidhvani.in/wp-content/uploads/2021/02/pratidhvani_2020_04_e241e77c_4e48_4c8a_8518_5c7e48e673cc_Stay_Home_2-49.jpg)
ನೇಕಾರರಿಗೆ ನೆರವಾಗಲು 109 ಕೋಟಿಯ ಸಾಲಮನ್ನಾ ಯೋಜನೆ ಈಗಾಗಲೇ ಘೋಷಿಸಿದ್ದು ಕಳೆದ ವರ್ಷ 20 ಕೋಟಿ ರುಪಾಯಿಗಳನ್ನು ಬಿಡುಗಡೆಗೊಳಿಸಲಾಗಿತ್ತು. ಉಳಿದ 89 ಕೋಟಿಗಳನ್ನು ಈ ಬಾರಿ ಬಿಡುಗಡೆಗೊಳಿಸಲಾಗುತ್ತದೆ. ಅಲ್ಲದೆ, ಪ್ರತಿ ವರ್ಷವೂ 54,000 ಕೈ ಮಗ್ಗ ನೇಕಾರರಿಗೆ 2,000 ರುಪಾಯಿಗಳನ್ನು ಅವರ ಖಾತೆಗಳಿಗೆ ಹಾಕಲಾಗುತ್ತಿದೆ. ಕಟ್ಟಡ ಕಾರ್ಮಿಕರಿಗೆ ಕೊಡುತ್ತಿದ್ದ 2,000 ರುಪಾಯಿಗಳಿಗೆ ಇನ್ನೂ 3,000 ರುಪಾಯಿಗಳನ್ನು ಸೇರಿಸಿ ಒಟ್ಟು 5,000 ರುಪಾಯಿಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ ಅನುದಾನವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ವಾಗತಿಸಿ ಅಭಿನಂದನೆ ಸಲ್ಲಿಸಿದ್ದಾರೆ.