ರಾಜ್ಯದಲ್ಲಿ ಮುಂಗಾರು ಮಳೆ ಶುರುವಾದ ಬಳಿಕ ರೈತರು ಜಮೀನು ಹಸನು ಮಾಡುತ್ತಾ ಬಿತ್ತನೆ ಮಾಡಲು ಶುರು ಮಾಡುತ್ತಾರೆ. ರಸಗೊಬ್ಬರ ಹಾಕಿ ಬಿತ್ತನೆ ಕಾರ್ಯ ಮುಗಿಸಿದ ಬಳಿಕ ಪೈರು ಬಂದು ಮಳೆ ಹೆಚ್ಚಾಗುತ್ತಿದ್ದ ಹಾಗೆ ಯೂರಿಯಾ ಅವಶ್ಯಕತೆ ಎದುರಾಗುತ್ತದೆ. ವರ್ಷ ಪೂರ್ತಿ ನಮ್ಮ ಬಳಿ ಸಾಕಷ್ಟು ದಾಸ್ತಾನು ಇದೆ ಎಂದು ಹೇಳಿಕೊಂಡು ಬರುವ ಮಂತ್ರಿ ಮಹೋದಯರು ರಸಗೊಬ್ಬರ (ಯೂರಿಯಾ) ಅಭಾವ ಸೃಷ್ಟಿಯಾಗುತ್ತಿದ್ದ ಹಾಗೆ ಮೌನಕ್ಕೆ ಶರಣಾಗುತ್ತಾರೆ. ಇದನ್ನು ನೋಡಿದಾಗ ಯೂರಿಯಾವನ್ನು ಅಕ್ರಮವಾಗಿ ದಾಸ್ತಾನು ಮಾಡಿ ಅಭಾವ ಸೃಷ್ಟಿಸಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡಲು ಸರ್ಕಾರವೇ ಸಾಥ್ ನಿಡುತ್ತಿದೆಯಾ ಎನ್ನುವ ಅನುಮಾನ ಹುಟ್ಟಿಕೊಂಡಿದೆ.
ಶುಕ್ರವಾರ ಯೂರಿಯಾ ಸಿಗದ ಕಾರಣಕ್ಕಾಗಿ ಆಕ್ರೋಶಗೊಂಡ ರೈತ ಸಮುದಾಯ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ ವಿಜಯಪುರ ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯನ್ನು ಕೆಲಕಾಲ ಬಂದ್ ಮಾಡಲಾಗಿತ್ತು. ಗದಗ ಜಿಲ್ಲೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಪ್ರತಿಭಟನೆ ಮಾಡಿದ ರೈತರು, ಸಮರ್ಪಕವಾಗಿ ಯೂರಿಯಾ ಗೊಬ್ಬರ ವಿತರಣೆ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ರು. ಕಳೆದ ಹಲವು ದಿನಗಳಿಂದ ಯೂರಿಯಾ ಗೊಬ್ಬರ ಸಮರ್ಪಕವಾಗಿ ಸಿಗುತ್ತಿಲ್ಲಾ, ನಾವು ಬೆಳೆದೆ ಫಸಲು ಸೂಕ್ತ ಇಳುವರಿ ಬಾರದೆ ನಷ್ಟ ಅನುಭವಿಸುವ ಭೀತಿ ಎದುರಾಗಿದೆ ಎಂದಯ ಅನ್ನದಾತರು ತಿಳಿಸಿದರು. ಸಮರ್ಪಕವಾಗಿ ಯೂರಿಯಾ ವಿತರಣೆ ಮಾಡದಿದ್ದರೆ ಬೃಹತ್ ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬೆಳಗಾವಿ ಜಿಲ್ಲೆಯಲ್ಲೂ ರೈತರಿಗೆ ಯೂರಿಯಾ ಸಿಗದೆ ಕಂಗಾಲಾಗಿದ್ದಾರೆ. ರಾಮದುರ್ಗ ತಾಲೂಕಿನಲ್ಲಿ ರೈತರು ಪರದಾಡುತ್ತಿದ್ದು, ಓರ್ವ ರೈತನಿಗೆ ಕೇವಲ ಒಂದೇ ಚೀಲ ಗೊಬ್ಬರ ಎನ್ನುವ ಕಾನೂನು ಮಾಡಿಕೊಂಡಿದ್ದಾರೆ. ಎರಡು ಎಕರೆ ಬಿತ್ತನೆಗೆ 3 ಚೀಲ ಯೂರಿಯಾ ಬೇಕು ಎಂದರೂ ಸಿಗುತ್ತಿಲ್ಲ. ಜೋಳ, ಸೂರ್ಯಕಾಂತಿ, ಹತ್ತಿ ಬಿತ್ತನೆಗೆ ಯೂರಿಯಾ ಅತ್ಯವಶ್ಯಕವಾಗಿದ್ದು ಗೊಬ್ಬರ ಸಿಗದೆ ಪರಿತಪಿಸುವಂತಾಗಿದೆ. ರಾಯಚೂರಿನಲ್ಲೂ ಯೂರಿಯಾ ಸಿಗದೆ ರೈತರು ಪರದಾಟ ನಡೆಸಿದ್ದಾರೆ. ರಾಯಚೂರಿನಲ್ಲಿ ಮತ್ತೊಂದು ರೀತಿಯ ಕಾನೂನು ಮಾಡಿಕೊಂಡಿದ್ದು, 1 ಚೀಲ ಯೂರಿಯಾ ಕೊಡಬೇಕು ಎಂದರೆ 4 ಚೀಲ ಕಾಂಪ್ಲೆಕ್ಸ್ ಗೊಬ್ಬರ ಖರೀದಿ ಮಾಡಬೇಕು ಎನ್ನಲಾಗಿದೆ. ಅದೂ ಅಲ್ಲದೆ ಅವಶ್ಯಕತೆ ಇಲ್ಲದಿದ್ದರೂ ಕಾಂಪ್ಲೆಕ್ಸ್ ಗೊಬ್ಬರಕ್ಕೆ ದುಪ್ಪಟ್ಟು ಹಣ ಕೊಟ್ಟು ಖರೀದಿ ಮಾಡಬೇಕಿರುವುದು ಜನರನ್ನು ಆಕ್ರೋಶಗೊಳ್ಳುವಂತೆ ಮಾಡಿದೆ.
ಧಾರವಾಡ ಜಿಲ್ಲೆಯಲ್ಲಿ ಯೂರಿಯಾಗೆ ರೈತರು ಪರದಾಟ ಮಾಡಿದ್ದಾರೆ. ಯಾವ ಅಂಗಡಿಗೆ ಹೋದರೂ ಯೂರಿಯಾ ಸಿಗುತ್ತಿಲ್ಲ. ಯೂರಿಯಾ ಹಾಕದೆ ಬೆಳೆ ಬೆಳೆಯೋಕೆ ಆಗಲ್ಲ. ಯಾವುದೇ ಗೊಬ್ಬರದ ಅಂಗಡಿಗೆ ಹೋದ್ರೂ ಖಾಲಿ ಎನ್ನುತ್ತಾರೆ. ಖಾಸಗಿ ಗೊಬ್ಬರ ಅಂಗಡಿಗಳಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ರೈತರ ಬೇಡಿಕೆಯನ್ನೇ ಬಂಡವಾಳ ಮಾಡಿಕೊಂಡು ಜನರನ್ನು ಅಂಗಡಿ ಮಾಲೀಕರು ಸುಲಿಗೆ ಮಾಡುತ್ತಿದ್ದಾರೆ ಎನ್ನಲಾಗಿದೆ. 1 ತಿಂಗಳಿಂದ ಯೂರಿಯಾಗೆ ರೈತರು ಪರದಾಟ ಮಾಡುವಂತಾಗಿದೆ. ಒಳ್ಳೆ ಮಳೆಯಾಗಿದೆ, ಬೆಳೆದು ನಿಂತ ಬೆಳೆಗೆ ಯೂರಿಯಾ ಸಿಗುತ್ತಿಲ್ಲ. ಜೋಳ, ಹತ್ತಿ, ಸೋಯಾಬಿನ್‌ಗೆ ಯೂರಿಯಾ ಬೇಕೇ ಬೇಕು ಎಂದು ರೈತರು ಆಗ್ರಹ ಮಾಡಿದ್ದಾರೆ.
ಬಾಗಲಕೋಟೆಯಲ್ಲಿ ಯೂರಿಯಾ ಇದ್ದರೂ ಕೃತಕ ಅಭಾವ ಸೃಷ್ಟಿ ಮಾಡಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇಡಿಕೆಗೆಗಿಂತ ಹೆಚ್ಚು ಯೂರಿಯಾ ಶೇಖರಣೆ ಇದ್ದರೂ ರೈತರಿಗೆ ಸಿಗ್ತಿಲ್ಲ. ವಿಧಿಯಿಲ್ಲದೆ ದುಪ್ಪಟ್ಟು ಹಣಕ್ಕೆ ಯೂರಿಯಾ ಖರೀದಿ ಮಾಡುತ್ತಿದ್ದೇವೆ ಎಂದಿದ್ದಾರೆ. ಬೇರೆ ಗೊಬ್ಬರ ಖರೀದಿಸಿದರೆ ಮಾತ್ರ ಯೂರಿಯಾ ಕೊಡುತ್ತೇವೆ ಎನ್ನುವ ಸಬೂಬು ಹೇಳುತ್ತಾರೆ. ಬಾಗಲಕೋಟೆ ಜಿಲ್ಲೆಯಲ್ಲಿ 29,950 ಮೆಟ್ರಿಕ್ ಟನ್ ಗೊಬ್ಬರದ ಬೇಡಿಕೆಯಿದೆ. ಈಗಾಗಲೇ 37,559 ಮೆಟ್ರಿಕ್ ಟನ್ ಗೊಬ್ಬರ ಪೂರೈಕೆ ಮಾಡಲಾಗಿದೆ. ಆದರೆ ರೈತರಿಂದ ಸುಲಿಗೆ ಮಾಡುವ ಉದ್ದೇಶದಿಂದ ಕೃತಕ ಅಭಾವ ಸೃಷ್ಟಿ ಮಾಡಲಾಗುತ್ತಿದೆ ಎಂದಿದ್ದಾರೆ.

ಚೀನಾದಿಂದ ಬರಬೇಕಿದ್ದ ಯೂರಿಯಾ ತುಂಬಿದ ಹಡಗು ಭಾರೀ ಮಳೆಯಿಂದ ಬರುವುದು ವಿಳಂಬವಾಗಿದೆ. ಹಾಗಾಗಿ ಯೂರಿಯಾ ರಾಜ್ಯಕ್ಕೆ ತಲುಪುವುದು ತಡವಾಗಿದೆ ಎನ್ನಲಾಗಿದೆ. ಚೀನಾದ ಹಡಗಿನ ಮೂಲಕ ಬರಬೇಕಿದ್ದ 45 ಸಾವಿರ ಟನ್ ಯೂರಿಯಾ ಮಂಗಳೂರು ಬಂದರಿಗೆ ಬರಲಿದೆ ಎಂದಿದ್ದರು ಕೃಷಿ ಇಲಾಖೆ ಆಯುಕ್ತ ಬ್ರಿಜೇಶ್ ಕುಮಾರ್ ದೀಕ್ಷಿತ್. ಆಗಸ್ಟ್ 20ರಂದು ಯೂರಿಯಾ ಲಾರಿಗಳಿಗೆ ಲೋಡಿಂಗ್ ನಡೆಯಲಿದೆ ಎಂದಿದ್ದರು. ಆ ಬಳಿಕ ರೈತರ ಸಮಸ್ಯೆ ಬಗೆಹರಿಯಲಿದೆ ಎಂದಿದ್ದರು. ಆದರೂ ಸಮಸ್ಯೆ ಬಗೆಹರಿದಂತೆ ಕಾಣುತ್ತಿಲ್ಲ. ಇದರ ಜೊತೆಗೆ ರೈತರಿಗೆ ಬಿತ್ತನೆ ಬೀಜಗಳು ಕೊರಿಯರ್‌ನಲ್ಲಿ ಬರುವುದಕ್ಕೆ ಶುರುವಾಗಿದೆ.
ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಕುಂದನಹಳ್ಳಿ ಗ್ರಾಮದ ಕೋಳಿ ಫಾರ್ಮ್ ನಲ್ಲಿ ಯೂರಿಯಾ ಅಕ್ರಮ ದಾಸ್ತಾನು ಮಾಡಲಾಗಿತ್ತು. ಕೃಷಿ ಇಲಾಖೆ ಅಧಿಕಾರಿಗಳ ದಾಳಿ ನಡೆಸಿ ಕೇರಳ ಮೂಲದ ಆರೋಪಿಗಳ ಬಂಧನ ಮಾಡಿದ್ದಾರೆ. ಕುಂದನಹಳ್ಳಿ ಗ್ರಾಮದ ಜಮೀನಿನ ಕೋಳಿ ಫಾರ್ಮ್‍ನಲ್ಲಿ ಕೇರಳ ಮೂಲದ ವ್ಯಕ್ತಿಗಳು ಅಕ್ರಮವಾಗಿ ಯೂರಿಯಾ ಸಂಗ್ರಹಿಸಿದ್ದರು. ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಯೂರಿಯಾ ವಶಕ್ಕೆ ಪಡೆದಿದ್ದಾರೆ. ವಿವಿಧ ಕಂಪನಿಗಳ ಸುಮಾರು 35 ಟನ್ ಯೂರಿಯಾವನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿತ್ತು. ಕೃತಕ ಅಭಾವ ಸೃಷ್ಠಿಸಿ, ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಅಕ್ರಮ ದಾಸ್ತಾನು ಮಾಡಲಾಗಿದೆ ಎನ್ನುವುದು ಗೊತ್ತಾಗಿದೆ.

ರಸಗೊಬ್ಬರ ನಿಯಂತ್ರಣ ಕಾಯ್ದೆ 1985 ರ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಬೇಕು ಎನ್ನುವುದು ನಿಯಮ. ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚು ಬೆಲೆಗೆ ಗೊಬ್ಬರ ಮಾರಾಟ ಮಾಡಿದರೆ, ಕೃಷಿ ಇಲಾಖೆ ಸಿಬ್ಬಂದಿ ಹಾಗೂ ತಹಶೀಲ್ದಾರ್‌ಗಳು ಜಂಟಿ ಕಾರ್ಯಾಚರಣೆ ನಡೆಸಿ ಕ್ರಮಕೈಗೊಳ್ಳಬೇಕು ಎನ್ನುವ ನಿಯಮವಿದೆ. ಆದರೆ ಅಧಿಕಾರಿಗಳು ಅಂಗಡಿ ಮಾಲೀಕರ ಜೊತೆ ಸೇರಿಕೊಂಡು ಎಲ್ಲದಕ್ಕೂ ಸಾಥ್ ನೀಡುತ್ತಿದ್ದಾರಾ ಎನ್ನುವ ಅನುಮಾನ ಮೂಡುತ್ತಿದೆ. ಎಲ್ಲಾ ಜಿಲ್ಲೆಗಳಲ್ಲೂ ಅಧಿಕಾರಿಗಳು ಮುಂಗಾರು ಮಳೆ ಶುರುವಾದ ಕೂಡಲೇ ಜಿಲ್ಲೆಗಳ ಗೊಬ್ಬರದ ಅಂಗಡಿಗಳ ಮೇಲೆ ದಾಳಿ ಮಾಡಿ ದಾಸ್ತಾನು ಹಾಗೂ ದಿನ ದಿನದ ವ್ಯಾಪಾರವನ್ನು ಸಿಸ್ಟಂಗೆ ಅಪ್ ಡೇಟ್ ಮಾಡಬೇಕು ಎನ್ನುವ ನಿಯಮ ಮಾಡಿದರೆ ರಸಗೊಬ್ಬರ ಅಭಾವ ತಪ್ಪಬಹುದು. ಇಲ್ಲದಿದ್ದರೆ ಪ್ರತಿವರ್ಷವೂ ಯೂರಿಯಾ ಕೊರತೆ ಎದುರಾಗುತ್ತದೆ.