ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಇಂದು ಆರೋಪಿಗಳ ವಿರುದ್ಧ ದೋಷಾರೋಪಣೆ ನಿಗಧಿಯಾಗಿದೆ. ಪರಪ್ಪನ ಅಗ್ರಹಾರ ಜೈಲಿನಿಂದ 6 ಆರೋಪಿಗಳು ಮತ್ತು ಜಾಮೀನು ಪಡೆದು ಹೊರಗಿದ್ದ 11 ಆರೋಪಿಗಳನ್ನ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಸಿಟಿ ಸಿವಿಲ್ ಕೋರ್ಟ್ 64ಕ್ಕೆ ಹಾಜರು ಪಡಿಸಲಾಯಿತು. ಈ ವೇಳೆ ಆರೋಪಿಗಳ ವಿರುದ್ಧ ನ್ಯಾಯಾಲಯ ದೋಷಾರೋಪಣೆ ನಿಗಧಿ ಮಾಡಿದೆ.
ನಟ ದರ್ಶನ್ ಆತನ ಸ್ನೇಹಿತೆ ಪವಿತ್ರ ಗೌಡ ಸೇರಿದಂತೆ 17 ಜನರ ವಿರುದ್ಧ ರೇಣುಕಾಸ್ವಾಮಿ ಹತ್ಯೆ ಮಾಡಿರುವ ಆರೋಪವಿದೆ. ಹೀಗಾಗಿ ಎಲ್ಲಾ ಆರೋಪಿಗಳು ಇಂದು ಕೋರ್ಟ್ ಗೆ ಹಾಜರಾದರು. ಆದರೆ 64 CCH ಕೋರ್ಟ್ ಹಾಲ್ ನಲ್ಲಿ ನ್ಯಾಯಾಲಯದ ವಕೀಲರು, ಸಿಬ್ಬಂದಿ ಕಿಕ್ಕಿರಿದು ತುಂಬಿದ್ದರಿಂದ ಆರೋಪಿಗಳನ್ನ ನ್ಯಾಯಾಧೀಶರ ಮುಂದೆ ಹಾಜರು ಪಡೆಸಲೇ ಪೊಲೀಸರು ಹರಸಾಹಸ ಪಟ್ಟರು. ಈ ವೇಳೆ ನ್ಯಾಯಾಧೀಶರು ಪ್ರಕರಣಕ್ಕೆ ಸಂಬಂಧ ಪಡದವರನ್ನ ಹೊರಗೆ ಹೋಗುವಂತೆ ಸೂಚಿಸಿದರೂ ಯಾರು ತೆರಳಲಿಲ್ಲ.
ಕೋರ್ಟ್ ಹಾಲ್ ದಟ್ಟಣೆ ಕಡಿಮೆ ಆಗದ ಹಿನ್ನೆಲೆ ಪ್ರಕರಣ ಮುಂದೂಡುವುದಾಗಿಯೂ ನ್ಯಾಯಾಧೀಶರು ತಿಳಿಸಿದರು. ಆದರೂ ಯಾರು ಹೊರಹೋಗಲಿಲ್ಲ. ಕೊನೆಗೆ ಪೊಲೀಸರು ಹರಸಾಹಸ ಪಟ್ಟು ಆರೋಪಿಗಳನ್ನ ಕೋರ್ಟ್ ಗೆ ಹಾಜರು ಪಡಿಸಿದರು.
ನ್ಯಾಯಾಧೀಶರ ಮುಂದೆ ಎಲ್ಲಾ ಆರೋಪಿಗಳು ಹಾಜರಾದ ನಂತರ ಚಾರ್ಜ್ ಶೀಟ್ ನಲ್ಲಿರುವ ಆರೋಪಗಳ ಬಗ್ಗೆ ತಿಳಿಸಲಾಯ್ತು. ಇದಕ್ಕೆ ದರ್ಶನ್, ಪವಿತ್ರ ಸೇರಿದಂತೆ ಎಲ್ಲಾ ಆರೋಪಿಗಳು ಸುಳ್ಳು ಎಂದು ಆರೋಪ ನಿರಾಕರಿಸಿದರು. ಎಲ್ಲಾ ಆರೋಪಿಗಳ ಉತ್ತರ ದಾಖಲಿಸಿಕೊಂಡ ನ್ಯಾಯಾಧೀಶರು ನ.10 ರಂದು FDT (ಫಿಕ್ಸಿಂಗ್ ಡೇಟ್ ಫಾರ್ ಟ್ರಯಲ್) ನಿಗಧಿ ಪಡಿಸಿ ವಿಚಾರಣೆ ಮುಂದೂಡಲಾಯಿತು.
ಸದ್ಯ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಘಟ್ಟವಾಗಿರುವ ಚಾರ್ಜ್ ಫ್ರೇಮ್ ಅಂದ್ರೆ ದೋಷಾರೋಪ ನಿಗಧಿ ಮುಗಿದಿದೆ. ಕೆಲವೇ ದಿನಗಳಲ್ಲಿ ಪ್ರಕರಣದ ಟ್ರಯಲ್ ಪ್ರಾರಂಭವಾಗಲಿದೆ.

