ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯು ಗುರುವಾರ ಷೇರು ವಹಿವಾಟಿನ ಅವಧಿಯಲ್ಲಿ ಐತಿಹಾಸಿಕ ದಾಖಲೆಯೊಂದನ್ನು ಮಾಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಮಾರುಕಟ್ಟೆ ಬಂಡವಾಳವು 10 ಲಕ್ಷ ಕೋಟಿ ರುಪಾಯಿಗಳನ್ನು ಮುಟ್ಟಿದೆ. ಈ ಬೃಹತ್ ಮಾರುಕಟ್ಟೆ ಮೌಲ್ಯವನ್ನು ಪಡೆದ ಭಾರತದ ಮೊದಲ ಕಂಪನಿಯೆಂಬ ಹೆಗ್ಗಳಿಕೆಗೆ ರಿಲಯನ್ಸ್ ಇಂಡಸ್ಟ್ರೀಸ್ ಪಾತ್ರವಾಗಿದೆ.
ಗುರುವಾರ (ನವೆಂಬರ್ 28) ದಿನದ ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಸರ್ವಕಾಲಿಕ ಗರಿಷ್ಠ ಮಟ್ಟವಾದ 1581.25 ರುಪಾಯಿ ಮುಟ್ಟಿದಾಗ ಕಂಪನಿಯ ಮಾರುಕಟ್ಟೆ ಮೌಲ್ಯವು 10 ಲಕ್ಷ ಕೋಟಿಯನ್ನು ಮುಟ್ಟಿತು. ಈ ಹಿಂದೆಯು ರಿಲಯನ್ಸ್ ಇಂಡಸ್ಟ್ರೀಸ್ 100 ಬಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದ ಮೊದಲ ಕಂಪನಿಯೆಂಬ ಹೆಗ್ಗಳಿಕೆ ಪಡೆದಿತ್ತು. ಪ್ರಸ್ತುತ ಡಾಲರ್ ಲೆಕ್ಕದಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯವು 140 ಬಿಲಿಯನ್ ಡಾಲರ್ ಗಳಾಗಿದೆ.
ಧೀರೂಭಾಯ್ ಅಂಬಾನಿ ಸ್ಥಾಪಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಷೇರುಪೇಟೆಯಲ್ಲಿ ಲಿಸ್ಟಾಗಿ 42 ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಕಂಪನಿಯು ಸಾವಿರಾರು ಷೇರುದಾರರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಿದೆ. ಈ ಅಂಕಿಅಂಶಗಳನ್ನು ಗಮನಿಸಿ- 42 ವರ್ಷಗಳ ಹಿಂದೆ ಐಪಿಒ (ಇನಿಷಿಯಲ್ ಪಬ್ಲಿಕ್ ಆಫರ್) ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಷೇರುಗಳಲ್ಲಿ 10,000 ರುಪಾಯಿ ಹೂಡಿಕೆ ಮಾಡಿದ್ದರೆ ಅದರ ಮೌಲ್ಯವೀಗ 2.10 ಕೋಟಿ ರುಪಾಯಿಳಾಗಿದೆ. ಅಂದರೆ, ಈ 42 ವರ್ಷಗಳಲ್ಲಿ ಕಂಪನಿಯು ತನ್ನ ಷೇರುದಾರರಿಗೆ 2,100 ಪಟ್ಟು ಲಾಭ ತಂದುಕೊಟ್ಟಿದೆ. ವಿಶೇಷ ಎಂದರೆ ಕಳೆದ ಆರು ವರ್ಷಗಳಲ್ಲಿ ಕಂಪನಿಯು ಭಾರಿ ಪ್ರಮಾಣದ ಲಾಭ ತಂದುಕೊಟ್ಟಿದೆ. 1977ರಲ್ಲಿ ಹೂಡಿಕೆ ಮಾಡಿದ್ದ 10,000 ರುಪಾಯಿ 2013ರಲ್ಲಿ 78 ಲಕ್ಷ ರುಪಾಯಿಗಳಾಗಿದ್ದರೆ, 2017ರಲ್ಲಿ ಇದು 1,00,00,000 (ಒಂದು ಕೋಟಿ) ರುಪಾಯಿಗಳಾಗಿತ್ತು. ಎರಡೇ ವರ್ಷದಲ್ಲಿ ಇದು 2.10 ಕೋಟಿಗೆ ಏರಿದೆ.
ಒಂದು ಹಂತದಲ್ಲಿ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಟಾಟಾ ಸಮೂಹದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಅಗ್ರಸ್ಥಾನದಲ್ಲಿತ್ತು. ನಂತರದ ಸ್ಥಾನದಲ್ಲಿ ರಿಲಯನ್ಸ್ ಇತ್ತು. ಆದರೆ, ಕಳೆದ ಮೂರು ವರ್ಷಗಳಿಂದ ರಿಲಯನ್ಸ್ ಷೇರು ತ್ವರಿತವಾಗಿ ಏರುಹಾದಿಯಲ್ಲಿ ಸಾಗುತ್ತಿದೆ. ಪ್ರತಿ ತ್ರೈಮಾಸಿಕದಲ್ಲೂ ಸರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟುತ್ತಿದೆ. ರಿಲಯನ್ಸ್ ಜಿಯೋ ಮಾರುಕಟ್ಟೆಯಲ್ಲಿ ಅಗ್ರಸ್ಥಾನ ಪಡೆಯುತ್ತವತ್ತ ಸಾಗಿರುವ ಹಿನ್ನೆಲೆಯಲ್ಲಿ ಷೇರಿನ ಮೌಲ್ಯ ತ್ವರಿತವಾಗಿ ವೃದ್ಧಿಸುತ್ತಿದೆ. 9 ಲಕ್ಷ ಕೋಟಿಯಿಂದ ದಿಂದ 10 ಲಕ್ಷ ಕೋಟಿ ಮಾರುಕಟ್ಟೆ ಮೌಲ್ಯ ವೃದ್ಧಿಯಾಗಿದ್ದು ಕೇವಲ 25 ಷೇರು ವಹಿವಾಟು ದಿನಗಳಲ್ಲಿ.
ಪ್ರಸ್ತುತ ರಿಲಯನ್ಸ್ ಕಂಪನಿಯ ಮಾರುಕಟ್ಟೆ ಮೌಲ್ಯ ಎಷ್ಟು ಬೃಹತ್ತಾಗಿದೆ ಎಂದರೆ ನಿಫ್ಟಿ-50 ಯಲ್ಲಿನ 19 ಬೃಹತ್ ಕಂಪನಿಗಳ ಮಾರುಕಟ್ಟೆ ಮೌಲ್ಯಕ್ಕೆ ಸಮನಾಗಿದೆ. ಸಾರ್ವಜನಿಕ ವಲಯದ 37 ಕಂಪನಿಗಳು ಮತ್ತು ಬ್ಯಾಂಕುಗಳ ಮಾರುಕಟ್ಟೆ ಮೌಲ್ಯಕ್ಕೆ ಅಥವಾ ನಿಫ್ಟಿ 250 ಪಟ್ಟಿಯಲ್ಲಿರುವ ಎಲ್ಲಾ ಕಂಪನಿಗಳ ಮಾರುಕಟ್ಟೆ ಮೌಲ್ಯವು ರಿಲಯನ್ಸ್ ಮಾರುಕಟ್ಟೆ ಮೌಲ್ಯಕ್ಕೆ ಸಮನಾಗಿದೆ.
ಏನಿದು ಮಾರುಕಟ್ಟೆ ಬಂಡವಾಳ? ಕಂಪನಿಯ ಒಟ್ಟು ಷೇರುಗಳು ಮತ್ತು ಷೇರು ಮಾರುಕಟ್ಟೆಯಲ್ಲಿನ ಕಂಪನಿಯ ಷೇರಿನ ದರವು ಮಾರುಕಟ್ಟೆ ಬಂಡವಾಳವಾಗಿದೆ. ಮಾರುಕಟ್ಟೆ ಬಂಡವಾಳ ಯಾವತ್ತೂ ಸ್ಥಿರವಾಗಿರುವುದಿಲ್ಲ. ಷೇರುದರದ ಏರಿಳಿತಕ್ಕೆ ಅನುಗುಣವಾಗಿ ಏರಿಳಿಯುತ್ತದೆ.
ತ್ವರಿತವಾಗಿ 10 ಲಕ್ಷ ಕೋಟಿ ಮಾರುಕಟ್ಟೆ ಬಂಡವಾಳ ಮೌಲ್ಯ ಪಡೆದಿರುವ ರಿಲಯನ್ಸ್ ಕಂಪನಿಯಿಂದ ಅತಿ ಹೆಚ್ಚು ಲಾಭ ಪಡೆದವರು ಮುಖೇಶ್ ಅಂಬಾನಿ. ಅವರು ಕಂಪನಿಯಲ್ಲಿ ಶೇ.50.5ರಷ್ಟು ಷೇರು ಹೊಂದಿದ್ದಾರೆ. ಉಳಿದಂತೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶೇ.23.7 ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರು ಶೇ.17.37ರಷ್ಟು ಷೇರುಗಳನ್ನು ಹೊಂದಿದ್ದಾರೆ. ಶೇ.8.9ರಷ್ಟು ಷೇರುಗಳನ್ನು ಸಣ್ಣ ಹೂಡಿಕೆದಾರರು ಹೊಂದಿದ್ದಾರೆ. ಇನ್ಸುರೆನ್ಸ್ ಕಂಪನಿಗಳು, ಮ್ಯುಚುವಲ್ ಫಂಡ್ ಮತ್ತಿತರ ಸಾಂಸ್ಥಿಕ ಹೂಡಿಕೆದಾರರು ಉಳಿದ ಷೇರುಗಳನ್ನು ಹೊಂದಿದ್ದಾರೆ.
ಪ್ರಸ್ತುತ ಮುಖೇಶ್ ಅಂಬಾನಿ ದೇಶದ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ರಿಲಯನ್ಸ್ ಕಂಪನಿಯಲ್ಲಿ ಶೇ.50.5ರಷ್ಟು ಪಾಲು ಹೊಂದಿರುವುದರಿಂದ ಅವರ ಸಂಪತ್ತು 5 ಲಕ್ಷ ಕೋಟಿಗಳಷ್ಟಾಗಿದೆ. ಖಾಸಗಿ ವಲಯದಲ್ಲಿ ಅತಿ ಹೆಚ್ಚು ಲಾಭಗಳಿಸುತ್ತಿರುವ ಮತ್ತು ಲಾಭಗಳಿಕೆಯಲ್ಲಿ ಸ್ಥಿರತೆ ಕಾಯ್ದುಕೊಂಡಿರುವ ಸಂಸ್ಥೆ ರಿಲಯನ್ಸ್. ಹೀಗಾಗಿ ಎಲ್ಐಸಿ ಸೇರಿದಂತೆ ದೇಶದಲ್ಲಿರುವ ಬಹುತೇಕ ಇನ್ಸುರೆನ್ಸ್ ಕಂಪನಿಗಳು ಮತ್ತು ಮ್ಯುಚುವಲ್ ಫಂಡ್ ಗಳು ರಿಯಲನ್ಸ್ ಷೇರುಗಳಲ್ಲಿ ಹೂಡಿಕೆ ಮಾಡಿವೆ.
ರಿಲಯನ್ಸ್ ತೈಲ ಸಂಸ್ಕರಣೆ ಮಾರುಕಟ್ಟೆಯಿಂದ ತನ್ನ ವಹಿವಾಟನ್ನು ಟೆಲಿಕಾಂ, ರಿಟೇಲ್ ಮತ್ತಿರರ ವಲಯಕ್ಕೆ ವಿಸ್ತರಿಸಿದೆ. ಟೆಲಿಕಾಂ ಮತ್ತು ರಿಟೇಲ್ ನಲ್ಲಿ ಲಾಭದ ಪ್ರಮಾಣ ವೃದ್ಧಿಸುತ್ತಿದ್ದು, ಬರುವ ಇವುಗಳನ್ನು ಮಾತೃಕಂಪನಿಯಿಂದ ಪ್ರತ್ಯೇಕಗೊಳಿಸಿ ಷೇರುಪೇಟೆಯಲ್ಲಿ ಲಿಸ್ಟ್ ಮಾಡುವ ನಿರೀಕ್ಷೆ ಇದೆ. ಇದರಿಂದ ಹಾಲಿ ರಿಲಯನ್ಸ್ ಷೇರುದಾರರಿಗೆ ಹೆಚ್ಚಿನ ಲಾಭವಾಗಲಿದೆ. ಸೌದಿಯ ಬೃಹತ್ ಕಂಪನಿ ಆರಾಮ್ಕೊ ರಿಲಯನ್ಸ್ ನ ತೈಲ ಮತ್ತು ರಾಸಯನಿಕ ವಿಭಾಗದಲ್ಲಿ ಶೇ.20ರಷ್ಟು ಷೇರು ಖರೀದಿಸಲು ಒಡಂಬಡಿಕೆ ಮಾಡಿಕೊಂಡಿದೆ. ಜಾಗತಿಕ ಬ್ರೋಕರೇಜ್ ಕಂಪನಿ ಮಾರ್ಗನ್ ಸ್ಟ್ಯಾನ್ಲಿ ರಿಲಯನ್ಸ್ ಷೇರು 2000 ರುಪಾಯಿ ಮುಟ್ಟುತ್ತದೆಂಬ ಮುನ್ನಂದಾಜು ಮಾಡಿದೆ. ದೇಶೀಯ ಬ್ರೋಕರೇಜ್ ಕಂಪನಿಗಳು ಸಹ 1600-2000 ರುಪಾಯಿಗೆ ಏರುತ್ತದೆಂದು ಅಂದಾಜಿಸಿವೆ.
ರಿಲಯನ್ಸ್ ಕಂಪನಿಯಲ್ಲಿ ಹೂಡಿಕೆ ಮಾಡಬಹುದೇ?
ದೀರ್ಘಕಾಲದ ಹೂಡಿಕೆ ಮಾಡುವವರಿಗೆ ರಿಲಯನ್ಸ್ ಹೆಚ್ಚು ಸೂಕ್ತವಾಗಿದೆ. ಅಲ್ಪಕಾಲದ ಹೂಡಿಕೆ ಅಷ್ಟು ಸುರಕ್ಷಿತವಲ್ಲ. ಮಾರುಕಟ್ಟೆ ಸೂಚ್ಯಂಕಗಳು ಗರಿಷ್ಠ ಮಟ್ಟಮುಟ್ಟಿವೆ. ಆದರೆ, ರುಪಾಯಿ ಕುಸಿತದ ಹಾದಿಯಲ್ಲಿದೆ. ಚೀನಾ ಮತ್ತು ಅಮೆರಿಕದ ವ್ಯಾಪಾರ ಸಮರ ಮತ್ತೆ ಭುಗಿಲೆದ್ದರೆ ಷೇರುಪೇಟೆ ತ್ವರಿತ ಕುಸಿಯುತ್ತದೆ. ಜಾಗತಿಕ ರಾಜಕೀಯ ಪರಿಸ್ಥಿತಿಯ ಜತೆಗೆ ದೇಶೀಯ ರಾಜಕೀಯ ಬದಲಾವಣೆಗಳು ಷೇರುಪೇಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಹೀಗಾಗಿ ಷೇರುದರ ಕುಸಿಯಲೂ ಬಹುದು. ಆದರೆ, ದೀರ್ಘಕಾಲದ ಹೂಡಿಕೆ ಹೆಚ್ಚು ಸುರಕ್ಷಿತವಾಗಿದೆ.