ಇತ್ತೀಚೆಗೆ ಸುದ್ದಿ ಮಾಡುವ ಪತ್ರಕರ್ತರು ಹೆಚ್ಚೆಚ್ಚು ‘ಸದ್ದು’ ಮಾಡುತ್ತಿದ್ದಾರೆ ಮತ್ತು ಸ್ವತಃ ಸುದ್ದಿಯಾಗುತ್ತಿದ್ದಾರೆ. ಉದಾಹರಣೆಗೆ ಅರ್ನಾಬ್ ಗೋಸ್ವಾಮಿ, ಹೆಚ್.ಆರ್. ರಂಗನಾಥ್ ವಿಷಯದಲ್ಲಿ ಎಷ್ಟೇ ತಕರಾರಿರಬಹುದು, ಇಬ್ಬರಲ್ಲೂ ‘ಸೌಂಡ್’ ಅಂಡ್ ‘ಸಬ್‌ಸ್ಟಾನ್ಸ್’ ಎರಡೂ ಇದೆ ಎನ್ನುವುದು ನಿರ್ವಿವಾದ. ಈ ಬಗ್ಗೆ ಕನ್ನಡದ ಧೀಮಂತ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಬಹಳ ಹಿಂದೆಯೇ ಹೇಳಿದ್ದಾರೆ. ಆದರೆ ‘ಸಬ್‌ಸ್ಟಾನ್ಸ್’ ಇರದೆ ‘ಸೌಂಡ್’ ಮಾತ್ರವೇ ಇರುವವರು ರಂಗನಾಥ್ ಭಾರದ್ವಾಜ್ ರೀತಿ ಆಗುತ್ತಾರೆ.
ಡಾ. ಮನಮೋಹನ್ ಸಿಂಗ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್ ಅವರಂಥವರನ್ನು ಸಂದರ್ಶಿಸುವುದು ಪತ್ರಕರ್ತನಾದವನಿಗೆ ಸವಾಲಿನ ಕೆಲಸ. ಸಂದರ್ಶಿಸುವುದಕ್ಕಿಂತ ಅವರನ್ನು ಸಂಪರ್ಕಿಸುವುದೇ ದೊಡ್ಡ ಸಾಹಸ. ಅಂಥದ್ದರಲ್ಲಿ ರಂಗನಾಥ್ ಭಾರದ್ವಾಜ್‌ಗೆ ‘ಟಿವಿ 9’ನಲ್ಲಿ ಇರುವ ಕಾರಣಕ್ಕೆ ಅಂಥದೊಂದು ಅವಕಾಶ ಹುಡುಕಿಕೊಂಡು ಬಂದಿತ್ತು. ಆದರವರು ನಗೆಪಾಟಿಲಿಗೆ ಈಡಾಗಿದ್ದಾರೆ.
ಪರ್ತಕರ್ತನಾದವನಿಗೆ ಯಾರಿಗೆ, ಯಾವ ಸಂದರ್ಭದಲ್ಲಿ, ಹೇಗೆ ಪ್ರಶ್ನೆ ಕೇಳಬೇಕು? ಯಾರಿಂದ ಹೇಗೆ ಬಾಯಿ ಬಿಡಿಸಬೇಕು ಎಂಬ ಬುದ್ದಿವಂತಿಕೆ ಇರಬೇಕು. ದೇವೇಗೌಡರಂತಹವರ ಜೊತೆ ಮಾತನಾಡುವಾಗ ಧೈರ್ಯವೂ ಬೇಕು. ಸಿದ್ದರಾಮಯ್ಯ ಅವರಂಥವರಿಗೆ ಬೇರೆಯದೇ ರೀತಿಯಲ್ಲಿ ಪ್ರಶ್ನೆ ಕೇಳಬೇಕು. ಪ್ರಶ್ನೆಗಳನ್ನು ರೂಪಿಸುವುದು ಕೂಡ ಒಂದು ಕಲೆ. ಅದಕ್ಕೆ ‘ಸೌಂಡ್’ ಅಂಡ್ ‘ಸಬ್‌ಸ್ಟಾನ್ಸ್’ ಎರಡೂ ಇರಬೇಕು. ರಂಗನಾಥ್ ಭಾರದ್ವಾಜ್ ಬಳಿ ‘ಸೌಂಡ್’ ಇದೆ, ‘ಸಬ್‌ಸ್ಟಾನ್ಸ್’ ಇಲ್ಲ. ಹಾಗಾಗಿ ರಾಹುಲ್ ಗಾಂಧಿ ಅವರಂತಹ ರಾಷ್ಟ್ರೀಯ ನಾಯಕರನ್ನು ಸಂದರ್ಶಿಸುವ ಅವಕಾಶ ಸಿಕ್ಕಾಗ ಇಂಗು ತಿಂದ ಮಂಗನಂತಾಗಿದ್ದಾರೆ.
ರಂಗನಾಥ್ ಭಾರದ್ವಾಜ್‌ಗೆ ಪರ್ತಕರ್ತನ ಯಾವೊಂದು ಲಕ್ಷಣವಿಲ್ಲ ಎನ್ನುವುದು ಅವರು ರಾಹುಲ್ ಗಾಂಧಿ ಜೊತೆ ನಡೆಸಿದ ಪ್ರತಿಮಾತಿನಲ್ಲೂ ಧ್ವನಿಸುತ್ತಿತ್ತು. ನಾನು ಕರೋನಾ ಬಗ್ಗೆ, ಕೇಂದ್ರ ಸರ್ಕಾರದ ಬಗ್ಗೆ, ದೇಶದ ಆರ್ಥಿಕ ಸ್ಥಿತಿಗತಿ ಬಗ್ಗೆ ಮಾತನಾಡಲು ಇಚ್ಛಿಸುವುದಿಲ್ಲ ಎನ್ನುತ್ತಾರೆ. ಇವು ಈ ಹೊತ್ತಿನಲ್ಲಿ ಮಾತನಾಡುವ ವಿಷಯಗಳಲ್ಲವೇ? ರಾಹುಲ್ ಗಾಂಧಿ ಬಗ್ಗೆ, ರಾಜ್ಯ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಬಗ್ಗೆ ಮಾತನಾಡುತ್ತೇನೆ ಎನ್ನುತ್ತಾರೆ. ಕರೋನಾ, ಕೇಂದ್ರ ಸರ್ಕಾರ, ದೇಶದ ಆರ್ಥಿಕ ಸ್ಥಿತಿಗತಿಗಿಂತ ರಾಹುಲ್ ಗಾಂಧಿ, ರಾಜ್ಯ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಸ್ಥಿತಿಗತಿಗಳ ಬಗ್ಗೆ ಚರ್ಚಿಸುವುದು ಸದ್ಯದ ತುರ್ತು ವಿಷಯಗಳಾಗಿದ್ದವೇ? ಹೋಗಲಿ, ರಾಹುಲ್ ಗಾಂಧಿ, ರಾಜ್ಯ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಬಗ್ಗೆಯಾದರೂ ಪ್ರಶ್ನೆ ಕೇಳಿದರಾ? ಅದೂ ಇಲ್ಲ. ‘ನೀವು ಗಟ್ಸ್ ತೋರಿಸಬೇಕು’ ಎಂಬ ಬಿಟ್ಟಿ ಸಲಹೆ ನೀಡಿದರು. ಪತ್ರಕರ್ತನ ಕೆಲಸ ಪ್ರಶ್ನೆ ಕೇಳುವುದೋ ಅಥವಾ ಸಲಹೆ ನೀಡುವುದೋ?
ರಂಗನಾಥ್ ಭಾರದ್ವಾಜ್‌ಗೆ ದುರುದ್ದೇಶ ಇತ್ತು. ಸಿಕ್ಕ ಅವಕಾಶವನ್ನು ಬಳಸಿಕೊಂಡು ರಾಜ್ಯ ಕಾಂಗ್ರೆಸ್ ವಿರುದ್ಧ ದೂರು ನೀಡಲು ಮುಂದಾಗಿದ್ದರು. ಎಂದಿನಂತೆ ಮೊದಲು ಹೊಗಳಿ ನಂತರ ತಮ್ಮ ಉದ್ದೇಶ ಈಡೇರಿಸಿಕೊಳ್ಳುತ್ತಿದ್ದರು ಎಂಬೆಲ್ಲಾ ಚರ್ಚೆ ಆಗುತ್ತಿದೆ. ಆದರೆ ರಂಗನಾಥ್ ಭಾರದ್ವಾಜ್ ತೋರಿದ ‘ಗಟ್ಸ್’ ಗುಟ್ಟು ಬೇರೆ ಇದೆ. ಅದನ್ನು ಪತ್ರಕರ್ತರ ಭಾಷೆಯಲ್ಲಿ ‘ಡೀಲ್’ ಎನ್ನಬಹುದು. ‘ಡೀಲ್’ ಬಗ್ಗೆ ‘ಪ್ರತಿಧ್ವನಿ’ ಬಳಿ ಖಚಿತವಾದ ಮತ್ತು ನಿಖರವಾದ ಮಾಹಿತಿಗಳಿವೆ.
ಡೀಲ್ ಆಗಿದ್ದು ಹೀಗೆ. ರಾಹುಲ್ ಗಾಂಧಿ ಅವರು ಪ್ರಾದೇಶಿಕ ಪತ್ರಕರ್ತರ ಜೊತೆ ಸಂವಾದ ನಡೆಸಲು ಮುಂದಾದಾಗ ಎಐಸಿಸಿ ಮಾಧ್ಯಮ ವಿಭಾಗ ಯಾವ್ಯಾವ ರಾಜ್ಯಗಳಿಂದ ಯಾವ್ಯಾವ ಪರ್ತಕರ್ತರಿಗೆ ಅವಕಾಶ ಕೊಡಬೇಕೆಂದು ಪಟ್ಟಿ ಮಾಡಲು ಹೊರಟಿತು. ಪ್ರದೇಶ ಕಾಂಗ್ರೆಸ್ ಸಮಿತಿಗಳ ಮಾಧ್ಯಮ ವಿಭಾಗಕ್ಕೆ ಹೆಸರು ಸೂಚಿಸುವಂತೆ ಕೇಳಿತು. ಸದ್ಯದ ಕೆಪಿಸಿಸಿಯ ಮಾಧ್ಯಮ ವಿಭಾಗ ಡಿ.ಕೆ. ಶಿವಕುಮಾರ್ ಕೇಳದೆ ಮುಂದಡಿ ಇಡುವ ಮಾತೇ ಇಲ್ಲ. ವಿಷಯ ಡಿ.ಕೆ. ಶಿವಕುಮಾರ್ ಬಳಿ ಹೋಯಿತು. ಡಿ.ಕೆ. ಶಿವಕುಮಾರ್ ಎಲ್ಲರನ್ನೂ ಬಿಟ್ಟು ರಂಗನಾಥ್ ಭಾರದ್ವಾಜ್ ಹೆಸರು ನೀಡುವಂತೆ ಸೂಚಿಸಿದರು. ಜೊತೆಗೆ ರಾಹುಲ್ ಗಾಂಧಿ ಅವರ ಬಳಿ ತಮ್ಮ ಪರವಾಗಿ ಮಾತನಾಡಬೇಕೆಂದು ರಂಗನಾಥ್ ಭಾರದ್ವಾಜ್‌ಗೂ ಹೇಳಿದರು.
ಇದರಿಂದಾಗಿಯೇ ರಾಹುಲ್ ಗಾಂಧಿ ಬಳಿ ಮಾತನಾಡುವಾಗ ರಂಗನಾಥ್ ಭಾರದ್ವಾಜ್ ಅಷ್ಟೆಲ್ಲಾ ಪೀಠಿಕೆ ಹಾಕಿದ್ದು. ಬೆಂಗಳೂರಿನಿಂದ ಪಾದಯಾತ್ರೆ ಆಗಿದ್ದು ಯಾವಾಗ? ಮತ್ತದರ ರೂವಾರಿ ಯಾರು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದ್ದರೂ ‘2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡೆಸಿದ ಪಾದಯಾತ್ರೆಯೇ ಕಾರಣ’ ಎಂದು ಹೇಳಿದ್ದು. ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದವರು ಆರ್.ವಿ. ದೇಶಪಾಂಡೆ. ಆದರೂ ಬ್ರಾಹ್ಮಣರಾದ ಆರ್.ವಿ. ದೇಶಪಾಂಡೆ ಅವರನ್ನು ಬಿಟ್ಟು ಡಿ.ಕೆ. ಶಿವಕುಮಾರ್‌ಗೆ ಶ್ರೇಯ ತಂದುಕೊಡಲು ಹೊರಟಿದ್ದು. ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಕಾರ್ಯಕರ್ತರಲ್ಲಿ ಹುರುಪು ಬಂದಿದೆ ಎಂದು ಸರ್ಟಿಫಿಕೆಟ್ ಕೊಟ್ಟಿದ್ದು. ಡಿ.ಕೆ. ಶಿವಕುಮಾರ್ ಹಳ್ಳಿ ಹಳ್ಳಿಗೆ ಹೋಗಿ ರೈತ ಬೆಳೆದ ತರಕಾರಿ ಖರೀದಿಸಿ ಮುಂದಾಗಿ ಕ್ರಾಂತಿ ಮಾಡಲೊರಟಿದ್ದಾರೆ ಎಂದಿದ್ದು. ಡಿ.ಕೆ. ಶಿವಕುಮಾರ್ ಬರೆದುಕೊಟ್ಟಿದ್ದ ಸ್ಕ್ರಿಪ್ಟ್ ಅನ್ನು ಒಪ್ಪಿಸಿದ ರಂಗನಾಥ್ ಭಾರದ್ವಾಜ್ ಕಡೆಗೆ ಪತ್ರಕರ್ತ ಆಗಿ ಪ್ರಶ್ನೆ ಕೇಳುವುದನ್ನೇ ಮರೆತರು.
ಡಿಕೆಶಿ ದಾಳಕ್ಕೆ ಆರ್‌ಬಿ ಬಲಿ!
ರಾಹುಲ್ ಗಾಂಧಿ ಅವರಿಗೆ ಡಿ.ಕೆ. ಶಿವಕುಮಾರ್ ಬಗ್ಗೆ ಮೊದಲಿನಿಂದಲೂ ಅಷ್ಟಕ್ಕಷ್ಟೆ. ಅದೇ ಕಾರಣಕ್ಕೆ ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗುವುದು ತಡವಾಯಿತು. ರಾಹುಲ್ ಗಾಂಧಿ ಆಪ್ತರಾಗಿದ್ದ ಜ್ಯೋತಿರಾಧಿತ್ಯಾ ಸಿಂಧ್ಯ ಕಾಂಗ್ರೆಸ್ ಬೆನ್ನಿಗೆ ಚೂರಿ ಇರಿಯದಿದ್ದರೆ ಬಹುಶಃ ಡಿ.ಕೆ. ಶಿವಕುಮಾರ್ ಹಾದಿ ಸುಗಮವಾಗುತ್ತಿರಲಿಲ್ಲ. ಈಗ ಉಳಿದ ಕೆಪಿಸಿಸಿ ಅಧ್ಯಕ್ಷರಿಗೆ ಹೋಲಿಸಿಕೊಂಡರೆ ಡಿ.ಕೆ. ಶಿವಕುಮಾರ್ ಅಗ್ರೆಸೀವ್ ಆಗಿ ಕೆಲಸ ಮಾಡುತ್ತಿದ್ದಾರೆ. ವಲಸಿಗರ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ ಎನ್ನುವ ಕಾರಣಕ್ಕೆ ಸೋನಿಯಾ ಗಾಂಧಿ ಮತ್ತು ಅವರ ಆಪ್ತರು ಡಿ.ಕೆ. ಶಿವಕುಮಾರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫೋನ್ ಮಾಡಿ ಮಾತನಾಡಿದ್ದಾರೆ. ರಾಹುಲ್ ಗಾಂಧಿ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನುವ ಕೊರಗು ಡಿ.ಕೆ. ಶಿವಕುಮಾರ್ ಅವರದು. ಸೋನಿಯಾ ಗಾಂಧಿ ಅವರ ಅವಧಿ ಯಾವಾಗ ಮುಗಿಯುತ್ತದೆಯೋ ಗೊತ್ತಿಲ್ಲ. ಬಳಿಕ ರಾಹುಲ್ ಗಾಂಧಿ ಅವರೇ ಎಐಸಿಸಿ ನೇತೃತ್ವ ವಹಿಸಿಕೊಳ್ಳುವುದು ಶತಸಿದ್ದ ಎಂಬುದು ಡಿ.ಕೆ. ಶಿವಕುಮಾರ್‌ಗೆ ಚೆನ್ನಾಗಿ ಗೊತ್ತಿದೆ. ಆದುದರಿಂದಲೇ ಪರ್ತಕರ್ತರೊಬ್ಬರ ಮೂಲಕ ನೇರವಾಗಿ ರಾಹುಲ್ ಗಾಂಧಿ ಮನಗೆಲ್ಲುವ ಪ್ರಯತ್ನ ಮಾಡಿದ್ದರು. ಡಿ.ಕೆ. ಶಿವಕುಮಾರ್ ದಾಳಕ್ಕೆ ಸಿಕ್ಕ ರಂಗನಾಥ್ ಭಾರದ್ವಾಜ್ ತಮ್ಮ ‘ಗಟ್ಸ್’ ಎಂಥದ್ದು ಎನ್ನುವುದನ್ನು ಬಹಿರಂಗಗೊಳಿಸಿ ಬೆತ್ತಲಾದರು.