ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಅಚಲವಾಗಿ ನಿಂತಿರುವ ರೈತರು, ʼಕಾನೂನು ವಾಪ್ಸಿʼ ಆದರೆ ಮಾತ್ರ ನಮ್ಮ ʼಘರ್ ವಾಪ್ಸಿʼ ಆಗುವುದೆಂದು ಸರ್ಕಾರಕ್ಕೆ ತಿಳಿಸಿದ್ದಾರೆ.
ಸರ್ಕಾರದೊಂದಿಗೆ ನಡೆದ ಹಲವು ಸುತ್ತಿನ ಮಾತುಕತೆ ಬಳಿಕವೂ ರೈತರ ಸಮಸ್ಯೆಗಳಿಗೆ ಒಂದು ಒಮ್ಮತದ ತೀರ್ಮಾನ ಕೈಗೊಳ್ಳಲು ಸಾಧ್ಯವಾಗದ್ದರಿಂದ ಶುಕ್ರವಾರ ಎಂಟನೇ ಸುತ್ತಿನ ಮಾತುಕತೆ ನಡೆದಿದೆ. ಈ ಮಾತುಕತೆಯೂ ತಾರ್ಕಿಕ ಅಂತ್ಯಕ್ಕೆ ಬರುವ ಲಕ್ಷಣಗಳು ತೋರುತ್ತಿಲ್ಲ.
ಕೃಷಿ ಕಾನೂನುಗಳನ್ನು ಹಿಂಪಡೆದೇ ತೀರಬೇಕೆಂದು ಒತ್ತಾಯಿಸಿ ಕುಳಿತಿರುವ ರೈತರೊಡನೆ, ಸರ್ಕಾರ ರಾಷ್ಟ್ರೀಯ ಹಿತಾಸಕ್ತಿ ಗಮನದಲ್ಲಿಟ್ಟುಕೊಳ್ಳುವಂತೆ ಸಲಹೆ ನೀಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ದೇಶದ ವಿವಿಧ ರಾಜ್ಯಗಳ ಬಹುತೇಕ ರೈತರು ಕೃಷಿ ಸುಧಾರಣಾ ಕಾನೂನುಗಳನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸಿದ್ದಾರೆ. ನೀವು ರಾಷ್ಟ್ರೀಯ ಹಿತಾಸಕ್ತಿ ಗಮನದಲ್ಲಿಟ್ಟು ಪ್ರತಿಭಟನೆಯಿಂದ ಹಿಂದೆ ಸರಿಯುವಂತೆ ಮಾತುಕತೆಯಲ್ಲಿ ಭಾಗವಹಿಸಿದ 41 ರೈತ ಪ್ರತಿನಿಧಿಗಳಿಗೆ ಸರ್ಕಾರ ಹೇಳಿದೆ.
ಆದರೆ, ತಮ್ಮ ಬೇಡಿಕೆಗಳಿಂದ ಹಿಂದೆ ಸರಿಯಲು ರೈತರು ಒಪ್ಪಿಲ್ಲ. ಹಾಗೂ ವಿವಾದಾತ್ಮಕ ಕಾನೂನುಗಳನ್ನು ಹಿಂಪಡೆಯಲು ಸರ್ಕಾರವೂ ಒಪ್ಪದ ಕಾರಣ ಮುಂದಿನ ಮಾತುಕತೆಯನ್ನು ಜನವರಿ 15 ಕ್ಕೆ ಮುಂದೂಡಲಾಗಿದೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ, ವಾಣಿಜ್ಯ ಮತ್ತು ಆಹಾರ ಸಚಿವ ಪಿಯೂಷ್ ಗೋಯಲ್ ಮತ್ತು ರಾಜ್ಯ ವಾಣಿಜ್ಯ ಸಚಿವ ಹಾಗೂ ಪಂಜಾಬ್ ಸಂಸದರೂ ಆಗಿರುವ ಸೋಮ್ ಪ್ರಕಾಶ್ ಅವರು ದೆಹಲಿಯ ವಿಜ್ಞಾನ ಭವನದಲ್ಲಿ ರೈತ ಒಕ್ಕೂಟಗಳೊಂದಿಗೆ ಮಾತುಕತೆ ನಡೆಸಿದ್ದಾರೆ.
ಆರಂಭದಲ್ಲಿ, ತೋಮರ್ ಕಾನೂನುಗಳ ಕುರಿತು ಚರ್ಚಿಸಲು ರೈತ ಸಂಘಟನೆಗಳಿಗೆ ಮನವಿ ಮಾಡಿದರೆ, ಹೊಸ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂಬ ಬೇಡಿಕೆಯನ್ನು ರೈತ ಮುಖಂಡರು ಪುನರುಚ್ಚರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ, ಕೃಷಿ ಸಚಿವರು ಕೃಷಿ ಸುಧಾರಣಾ ಕಾನೂನು ಇಡೀ ದೇಶದ ರೈತರ ಹಿತಾಸಕ್ತಿಯನ್ನು ಕಾಪಾಡುವ ಬಗ್ಗೆ ಒತ್ತಿ ಹೇಳಿದ್ದಾರೆ. ಆದರೆ, ಈ ಕಾನೂನುಗಳು ಬಂಡವಾಳಶಾಹಿಗಳ ಪರವಿದೆ ಹಾಗೂ ಮಂಡಿ ಮತ್ತು ಕನಿಷ್ಟ ಬೆಂಬಲ ಬೆಲೆಗೆ ವಿರುದ್ಧವಾಗಿದೆ ಎಂದು ವಾದಿಸುವ ರೈತರು ತಮ್ಮ ವಾದದ ಮೇಲೆ ಗಟ್ಟಿಯಾಗಿ ನಿಂತಿದ್ದಾರೆ.
ನಾವು ಘರ್ ವಾಪ್ಸಿ (ಮನೆಗೆ ಮರಳುವುದು) ಮಾಡುವುದು, ನೀವು ʼಕಾನೂನು ವಾಪ್ಸಿʼ (ಕಾನೂನು ಹಿಂಪಡೆಯುವುದು) ಮಾಡಿದರೆ ಮಾತ್ರ ಎಂದು ಸರ್ಕಾರವನ್ನು ರೈತರು ಎಚ್ಚರಿಸಿದ್ದಾರೆ.
“ತಾತ್ತ್ವಿಕವಾಗಿ, ವಿವಿಧ ಸುಪ್ರೀಂ ಕೋರ್ಟ್ ಆದೇಶಗಳು ಕೃಷಿಯನ್ನು ರಾಜ್ಯ ವಿಷಯವೆಂದು ಘೋಷಿಸಿರುವುದರಿಂದ ಕೇಂದ್ರವು ಕೃಷಿ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬಾರದು. ಇಷ್ಟು ದಿನಗಳಿಂದ ಮಾತುಕತೆ ನಡೆಯುತ್ತಿರುವುದರಿಂದ ನೀವು (ಸರ್ಕಾರ) ಸಮಸ್ಯೆಯನ್ನು ಪರಿಹರಿಸಲು ಬಯಸುವುದಿಲ್ಲ ಎಂದು ತೋರುತ್ತದೆ. ದಯವಿಟ್ಟು ನಮಗೆ ಸ್ಪಷ್ಟ ಉತ್ತರವನ್ನು ನೀಡಿ ನಾವು ಹೋಗುತ್ತೇವೆ. ಎಲ್ಲರ ಸಮಯವನ್ನು ಏಕೆ ವ್ಯರ್ಥಮಾಡುತ್ತೇವೆ ” ಎಂದು ಮತ್ತೊಬ್ಬ ರೈತ ಮುಖಂಡರು ಸಭೆಯಲ್ಲಿ ಹೇಳಿದ್ದಾರೆ.
ಆದರೆ ಯಾವುದೇ ಕಾರಣಕ್ಕೂ ಕಾನೂನುಗಳನ್ನು ಹಿಂಪಡೆಯುವುದಿಲ್ಲವೆಂದು ಸರ್ಕಾರ ಹೇಳಿದೆ. ಊಟದ ವಿರಾಮವನ್ನೂ ಪಡೆಯಲು ನಿರಾಕರಿಸಿದ ರೈತ ಮುಖಂಡರು ಸಭೆ ನಡೆದ ಸಭಾಂಗಣದಲ್ಲೇ ಕುಳಿತು ತಮ್‌ಮ ಅಸಮಾಧಾನವನ್ನು ಪ್ರಕಟಿಸಿದ್ದಾರೆ.
ಚರ್ಚೆ ಬಳಿಕ ಸಭಾಂಗಣದಿಂದ ಹೊರಬಂದ ರೈತ ಮುಖಂಡರು, ʼನಾವು ಒಂದೋ ಗೆಲ್ಲುತ್ತೇವೆ ಅಥವಾ ಸಾಯುತ್ತೇವೆ, ಆದರೆ ಹಿಂದಿರುಗುವ ಪ್ರಶ್ನೆಯೇ ಇಲ್ಲʼ ಎಂದು ಹೇಳಿದ್ದಾರೆ.