ಮರ್ಯಾದ ಪುರುಷೋತ್ತಮ ಶ್ರೀರಾಮನ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲು ಮುಹೂರ್ತ ಫಿಕ್ಸ್ ಆಗಿದೆ. ಬರುವ ಆಗಸ್ಟ್ 5ರಂದು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಲಾಗುತ್ತದೆ. ಶಿಲಾನ್ಯಾಸ ಕಾರ್ಯಕ್ರಮಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಆಗಸ್ಟ್ 5ರಂದು ಮಧ್ಯಾಹ್ನ 3 ಗಂಟೆಗೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಅಂದು ಬೆಳಗ್ಗೆ 8 ಗಂಟೆಯಿಂದ ಪೂಜಾ ಕಾರ್ಯಕ್ರಮಗಳು ನಡೆಯಲಿದೆ. ಸಾಮಾಜಿಕ ಅಂತರ ಕಾಪಾಡಿಕೊಂದು ಶಿಲಾನ್ಯಾಸ ಕಾರ್ಯಕ್ರಮ ಮಾಡಲು ಆಯೋಜಕರು ನಿರ್ಧಾರ ಮಾಡಿದ್ದಾರೆ. ಶಿಲನ್ಯಾಸ ಕಾರ್ಯಕ್ರಮಕ್ಕೆ ಕೇವಲ 300 ಜನರಿಗೆ ಆಹ್ವಾನ ನೀಡಲು ಟ್ರಸ್ಟ್ ಸದಸ್ಯರು ನಿರ್ಧಾರ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 5ರ ಬೆಳಗ್ಗೆ 11 ಗಂಟೆಗೆ ಅಯೋಧ್ಯೆ ತಲುಪಲಿದ್ದು, ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಹನುಮಾನ್ ದೇಗುಲಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ. ಆಗಸ್ಟ್ 3 ಮತ್ತು 5 ರಂದು ರಾಮ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕುವುದಕ್ಕೆ ರಾಮಮಂದಿರ ಟ್ರಸ್ಟ್ ದಿನಾಂಕ ನಿಗದಿ ಮಾಡಿ, ಪ್ರಧಾನಿ ಕಚೇರಿಗೆ ಕಳುಹಿಸಲಾಗಿತ್ತು. ಅಂತಿಮವಾಗಿ ಆಗಸ್ಟ್ 5ರಂದು ಕಾರ್ಯಕ್ರಮಕ್ಕೆ ಗ್ರೀನ್ ಸಿಗ್ನಲಗ್ ಸಿಕ್ಕಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಮ ಮಂದಿರ ಚಳವಳಿಯಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಮುಖಂಡರು ಶೀಲನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ.
ಶ್ರೀರಾಮನಿಗೆ ಅವಮಾನ ಆಗಿದ್ದು ಯಾಕೆ..?
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಜೂನ್ 10ರಿಂದ ಆರಂಭವಾಗಲಿದೆ ಎಂದು ಈ ಮೊದಲು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮೂಲಗಳು ಸ್ಪಷ್ಟಪಡಿಸಿದ್ದವು. ರುದ್ರಾಭಿಷೇಕ ಸೇರಿದಂತೆ ಇತರ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ನಂತರ ಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಟ್ರಸ್ಟ್ನ ಅಧ್ಯಕ್ಷ ನೃತ್ಯಗೋಪಾಲ್ ದಾಸ್ ಅವರ ಉತ್ತರಾಧಿಕಾರಿ ಮಹಾಂತ ಕಮಲನಯನ್ ದಾಸ್ ಹೇಳಿದ್ದರು. ಆದರೆ ಅಂದು ಕಾರ್ಯಕ್ರಮ ದಿಢೀರ್ ರದ್ದಾಗಿತ್ತು. ಆ ಬಳಿಕ ಚೀನಾ ಮೇಲೆ ಗೂಬೆ ಕೂರಿಸುವ ಯತ್ನವೂ ನಡೀತು.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಸುಪ್ರೀಂಕೋರ್ಟ್, ಶ್ರೀರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ಒಡೆತನ ವ್ಯಾಜ್ಯದ ಕುರಿತು ನೀಡಿದ ಐತಿಹಾಸಿಕ ತೀರ್ಪಿನ ಬಳಿಕ ರಾಮ ಮಂದಿರ ನಿರ್ಮಿಸುವ ಹೊಣೆಗಾರಿಕೆಯನ್ನು ಟ್ರಸ್ಟ್ ವಹಿಸಲಾಗಿದೆ. ಆ ಬಳಿಕ ಸಮಯ ನಿಗದಿಯಾಗಿತ್ತು. ಅಂದು ಕಾರ್ಯಕ್ರಮ ರದ್ದಾಗಿದ್ದಾದರೂ ಯಾಕೆ ಎನ್ನುವ ಪ್ರಶ್ನೆಗೆ ಉತ್ತರವೇ ದೊರೆಯಲಿಲ್ಲ. ಆದರೆ ಆ ಬಳಿಕ ಜೂನ್ 15ರಂದು ಚೀನಾ ಭಾರತ ಸೈನಿಕರ ಘರ್ಷಣೆಯಲ್ಲಿ ಭಾರತೀಯ 20 ಮಂದಿ ಯೋಧರು ಹುತಾತ್ಮರಾಗಿದ್ದರು. ಆ ಬಳಿಕ ಭೂಮಿ ಪೂಜೆ ಕಾರ್ಯಕ್ರಮದ ಸ್ಪಷ್ಟನೆ ಕೊಟ್ಟಿದ್ದ ಟ್ರಸ್ಟ್, ಶಿಲಾನ್ಯಾಸ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ನಮಗೆ ಮಂದಿರಕ್ಕಿಂತ ದೇಶವೇ ಮುಖ್ಯವಾಗಿದೆ. ಗಡಿಯಲ್ಲಿ ಸದ್ಯದ ಪರಿಸ್ಥಿತಿ ಸರಿಯಾಗಿಲ್ಲ ಹಾಗಾಗಿ ಕಾರ್ಯಕ್ರಮ ಮುಂದೂಡುತ್ತಿದ್ದೇವೆ ಎನ್ನುವ ಹೇಳಿಕೆಗಳು ಹೊರಬಿದ್ದಿದ್ದವು.
ಶ್ರೀರಾಮ, ನಮ್ಮ ಹಾಗೆಯೇ ಭೂಮಿ ಮೇಲೆ ಬದುಕಿ ಬಾಳಿ ಸಾರ್ಥಕ ಜೀವನದ ಜೊತೆಗೆ ಮಾದರಿ ಆಡಳಿತ ನೀಡಿದ ಮಹಾರಾಜ ಎನ್ನುವುದು ಪುರಾಣಗಳಿಂದ ತಿಳಿದು ಬರುವ ಸಂಗತಿ. ಆತನ ಆಳ್ವಿಕೆಯಲ್ಲಿ ಆಡಳಿತ ಅತ್ಯುತ್ತಮವಾಗಿತ್ತು, ಜನರು ಸುಭೀಕ್ಷವಾಗಿ ಜೀವನ ನಡೆಸಲು ಶ್ರೀರಾಮನ ಕಾರಣಕರ್ತನಾಗಿದ್ದ ಎನ್ನುವ ಕಾರಣಕ್ಕೆ ರಾಮರಾಜ್ಯದ ರೀತಿ ಆಡಳಿತ ನೀಡಬೇಕು ಎನ್ನುವ ಘೋಷವಾಕ್ಯ ಚಾಲ್ತಿಯಲ್ಲಿದೆ. ಭಾರತದಲ್ಲಿ ದಶರಥನ ಪುತ್ರನಾಗಿ ಜನಿಸಿದ ಶ್ರೀರಾಮ, ವಿಷ್ಣುವಿನ ಅವತಾರ ಎನ್ನುವುದು ಬಹುಸಂಖ್ಯಾತ ಹಿಂದೂಗಳ ನಂಬಿಕೆ. ಶ್ರೀ ರಾಮನ ದೇವಸ್ಥಾನಗಳನ್ನು ನಿರ್ಮಾಣ ಮಾಡಿ ಹಿಂದೂಗಳು ಪೂಜೆ ಮಾಡುತ್ತಾರೆ. ಏಕಪತ್ನಿ ವ್ರತಸ್ಥನಾದ ಶ್ರೀರಾಮನಂತ ಗಂಡನೇ ಸಿಗಲೆಂದು ಸ್ತ್ರೀ ಸಂಕುಲ ಆರಾಧಿಸುತ್ತದೆ. ಹಲವಾರು ದಶಕಗಳ ಕಾಲ ವಿವಾದದ ಕೇಂದ್ರ ಬಿಂದುವಾಗಿದ್ದ ಅಯೋಧ್ಯೆ ವಿವಾದ ಇತ್ತೀಚಿಗಷ್ಟೇ ಬಗೆಹರಿದಿತ್ತು. ರಾಮ ಜನ್ಮಭೂಮಿ ವಿವಾದ ಸುಪ್ರೀಂಕೋರ್ಟ್‌ನಲ್ಲಿ ಬಗೆಹರಿದಿತ್ತು. ಬಾಬರಿ ಮಸೀದಿ ಇದ್ದ ಪ್ರದೇಶದಲ್ಲಿ ಹಿಂದೂ ದೇವಸ್ಥಾನವಿತ್ತು ಎನ್ನುವ ಅಭಿಪ್ರಾಯಕ್ಕೆ ಬಂದಿತ್ತು.
ಜೂನ್ 10 ರಂದು ಮೊದಲು ಭೂಮಿ ಪೂಜೆಗೆ ದಿನಾಂಕ ನಿಗದಿ ಮಾಡಲಾಗಿತ್ತು. ಆ ಬಳಿಕ ಯಾವುದೇ ಕಾರಣ ಕೊಡದೆ ಕಾರ್ಯಕ್ರಮ ರದ್ದು ಮಾಡಲಾಗಿತ್ತು. ಆ ನಂತರ ಚೀನಾ ಭಾರತ ಗಡಿ ಗಲಾಟೆಗೆ ಕಾರಣ ಎದುರಿಟ್ಟು ಕಾರ್ಯಕ್ರಮ ಮುಂದೂಡಲಾಗಿದೆ ಎಂದಿದ್ದರು. ಆದರೆ ಜೂನ್ 10ರಂದು ಯಾವುದೇ ಗಲಾಟೆ ನಡೆದಿರಲಿಲ್ಲ. ಆದರೂ ಕಾರ್ಯಕ್ರಮ ಮುಂದೂಡಿಕೆಯಾಗಿತ್ತು. ಇದರ ಬಗ್ಗೆ ಯಾರೂ ಉತ್ತರ ಕೊಡುವುದಿಲ್ಲ. ಉತ್ತರ ತುಂಬಾ ಸರಳ. ಅಂದಿನ ಕಾರ್ಯಕ್ರಮ ಸಂಪೂರ್ಣ ಖಾಸಗಿಯಾಗಿತ್ತು. ಕೇವಲ ಟ್ರಸ್ಟ್ ಸೇರಿದಂತೆ ಪ್ರಮುಖರಿಗಷ್ಟೇ ಆಹ್ವಾನ ನೀಡಲಾಗಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಆಹ್ವಾನ ಕೊಟ್ಟಿರಲಿಲ್ಲ.
ಕರೋನಾ ಸಂಧರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಶಿಲನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು ಎಂದು ಊಹೆ ಮಾಡಲಾಗಿತ್ತು. ಆದರೆ ಎಲ್ಲರ ಊಹೆಗಳು ತಲಕೆಳಕಾಗಿ ಕಾರ್ಯಕ್ರಮವೇ ರದ್ದಾಗಿತ್ತು. ಆ ನಂತರ ಅದನ್ನುಮುಚ್ಚಿಡುವ ಪ್ರಯತ್ನವಾಗಿ ಚೀನಾ ಘರ್ಷಣೆಯನ್ನು ಎಳೆದು ತರಲಾಯ್ತು. ಒಟ್ಟಾರೆ, ಜಗತ್ತಿನಲ್ಲಿ ಮರ್ಯಾದಾ ಪುರುಷೋತ್ತಮ ಎಂದು ಪ್ರಸಿದ್ಧಿ ಪಡೆದಿರುವ ಶ್ರೀರಾಮನಿಗೆ ಅವಮಾನ ಮಾಡಿದಂತಾಯ್ತು. ಯಾರಿಗಾಗಿ..? ಯಾಕಾಗಿ..? ಹೀಗೆಲ್ಲಾ ಮಾಡಿದರು ಎನ್ನುವುದನ್ನು ಸ್ವತಃ ಟ್ರಸ್ಟ್‌ನ ಸದಸ್ಯರೇ ಬಹಿರಂಗ ಮಾಡಬೇಕಿದೆ.
ಅಂತಿಮವಾಗಿ ಕರೋನಾ ಬಿಕ್ಕಟ್ಟು ನಡುವೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಕನಸು ನನಸಾಗುವ ಸಮಯ ಸನಿಹವಾಗುತ್ತಿದೆ. ಮಂದಿರ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ದೇಣಿಗೆಯೂ ಸಾಕಷ್ಟು ಪ್ರಮಾಣದಲ್ಲಿ ಹರಿದು ಬಂದಿದೆ. ಕೇವಲ ಲಾಕ್‌ಡೌನ್ ಅವಧಿಯಲ್ಲೇ ಟ್ರಸ್ಟ್‌ನ ಎರಡು ಖಾತೆಗಳಿಗೆ 4 ಕೋಟಿ 60 ಲಕ್ಷ ರೂಪಾಯಿ ಸಂದಾಯವಾಗಿದೆ ಎನ್ನುವ ಮಾಹಿತಿ ಸಿಕ್ಕಿದೆ. ನಿಜ ಜೀವನದಲ್ಲೂ ಸಾಕಷ್ಟ ಅಪಮಾನಕ್ಕೆ ತುತ್ತಾಗಿದ್ದ ಶ್ರೀರಾಮ ಈಗ ಕಲಿಯುಗದಲ್ಲೂ ಅಪಮಾನಕ್ಕೆ ತುತ್ತಾಗುತ್ತಿರುವುದು ವಿಪರ್ಯಾಸವೇ ಸರಿ.










