ಜಗತ್ತಿನ ದೊಡ್ಡಣ್ಣ ಅಮೆರಿಕದಲ್ಲಿ ನಿಯಂತ್ರಣಕ್ಕೆ ಸಿಗದಂತೆ ಸಾಂಕ್ರಾಮಿಕ ಸೋಂಕು ಕೋವಿಡ್ 19 ಹರಡುತ್ತಿದೆ. ಸ್ವತಃ ವಿಶ್ವಕ್ಕೆಲ್ಲಾ ಸಹಾಯ ಮಾಡುವ ದೈತ್ಯ ರಾಷ್ಟ್ರ ಅಮೆರಿಕ ಯಾರಾದರೂ ಸಹಾಯ ಮಾಡುವರೆ ಎನ್ನುವ ಆಸೆ ಕಣ್ಣುಗಳಿಂದ ಕಾಯುತ್ತಿದೆ. ಆದರೆ ವಿಶ್ವದ ಯಾವುದೇ ದೇಶವೂ ಸಹಾಯ ಮಾಡಲು ಸಾಧ್ಯವಾಗ್ತಿಲ್ಲ. ಇದಕ್ಕೆ ಕಾರಣ ಇಲ್ಲೀವರೆಗೂ ಯಾವುದೇ ರಾಷ್ಟ್ರದಲ್ಲಿ ಲಸಿಕೆ ಅಥವಾ ಔಷಧಿ ಪತ್ತೆಯಾಗಿಲ್ಲ. ಇನ್ನೂ ಅಮೆರಿಕಕ್ಕೆ ಯಾವುದೇ ರಾಷ್ಟ್ರವೂ ಸಹಾಯ ಮಾಡಲಾರದ ಸಮಸ್ಯೆಯಲ್ಲಿ ವಿಶ್ವದ ದೊಡ್ಡಣ್ಣ ಸಿಲುಕಿಕೊಂಡಿದ್ದಾನೆ.
ಅಮೆರಿಕದಲ್ಲಿ ಇಲ್ಲೀವರೆಗೂ 37,71,101 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ ಈಗಾಗಲೇ 1,42,080 ಜನರು ಸೋಂಕಿನ ವಿರುದ್ಧ ಹೋರಾಡಲು ಶಕ್ತರಾಗದೆ ಸಾವಿನ ಪಯಣ ನಡೆಸಿದ್ದಾರೆ. ಇನ್ನುಳಿದ 17,41,626 ಜನರು ಸೋಂಕಿನ ವಿರುದ್ಧ ಹೋರಾಟ ನಡೆಸಿ ಚೇತರಿಸಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಅಮೆರಿಕದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಅಮೆರಿಕ ಪ್ರಮುಖ ನಗರ ನ್ಯೂಯಾರ್ಕ್ ಸಾವಿನಿಂದ ಕಂಗಾಲಾಗಿದೆ. ಇಲ್ಲೀವರೆಗೂ ಒಟ್ಟು 4,32,412 ಜನರು ಸೋಂಕಿಗೆ ತುತ್ತಾಗಿದ್ದರೆ, ಅದರಲ್ಲಿ 32,535 ಜನರ ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟೊಂದು ಪ್ರಮಾಣದಲ್ಲಿ ಸಾವನ್ನಪ್ಪಿದ ಜನರ ಅಂತ್ಯಕ್ರಿಯೆ ಮಾಡುವುದು ಅಲ್ಲಿ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಅದೇ ಕಾರಣಕ್ಕೆ ಇದೀಗ ಉಪಾಯ ಒಂದನ್ನು ಹುಡುಕೊಂಡಿದ್ದು, ಬೆಂಗಳೂರಿನಲ್ಲೇ ಅದೇ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ.
ನ್ಯೂಯಾರ್ಕ್‌ನಲ್ಲಿ ನೂರಾರು ಶವಗಳನ್ನು ಅಂತ್ಯಸಂಸ್ಕಾರ ಮಾಡಲು ಸಾಧ್ಯವಾಗದೆ ಫ್ರೀಜರ್ ಹೊಂದಿರುವ ಟ್ರಕ್‌ಗಳ ಮೊರೆ ಹೋಗಲಾಗಿದೆ. ಇದೇ ರೀತಿ ಇದೀಗ ಉಳಿದ ನಗರಗಳಲ್ಲೂ ಕೂಡ ಫ್ರೀಜರ್ ಸೌಲಭ್ಯ ಹೊಂದಿರುವ ಟ್ರಕ್‌ಗಳಲ್ಲಿ ಶವವನ್ನು ಸಂರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ. ಕೋವಿಡ್ 19 ನಿಂದ ಮೃತಪಟ್ಟ ಜನರ ಸಂಸ್ಕಾರಕ್ಕೆ ಸಮಸ್ಯೆ ತಲೆದೋರಿದೆ. ನ್ಯೂಯಾರ್ಕ್ ಮಾಡಿರುವಂತೆಯೇ ಅನುಷ್ಠಾನ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ಅಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ. ಟೆಕ್ಸಾಸ್ ಹಾಗೂ ಅರಿಝೋನಾದಲ್ಲೂ ಅದೇ ಮಾದರಿ ಅನುಸರಿಸಲಾಗ್ತಿದೆ. ಟೆಕ್ಸಾಸ್ನಲ್ಲಿ ಒಂದು ದಿನಕ್ಕೆ 129 ಮಂದಿ ಕರೋನಾಗೆ ಬಲಿಯಾಗಿದ್ದಾರೆ.
ಟ್ರಕ್‌ನಲ್ಲಿ ಶವಗಳನ್ನು ಸಂಗ್ರಹ ಮಾಡುತ್ತಿರುವುದು ಸಹಿಸಿಕೊಳ್ಳಲು ಅಸಾಧ್ಯ ಆದರೂ ಹೀಗೆ ಮಾಡುವುದು ಅನಿವಾರ್ಯ ಎಂದಿದ್ದಾರೆ ಸ್ಯಾನ್ ಆಂಟೋನಿಯೊ ಮೇಯರ್ ರೋನ್ ನಿರೆನ್ಬರ್ಗ್. ಸ್ಯಾನ್ ಆಂಟೋನಿಯೊ ಹಾಗೂ ಕಾರ್ಪಸ್ ಕ್ರಿಸ್ಟಿ ನಗರದಲ್ಲಿ ಟ್ರಕ್‌ಗಳಲ್ಲಿ ಶವವನ್ನು ಸಂಗ್ರಹ ಮಾಡುತ್ತಿರುವ ಬಗ್ಗೆ ಕ್ರಿಸ್ಟಸ್ ಸಂತ ರೋಸ್ ಹೆಲ್ತ್ ಸಿಸ್ಟಂನ ಚೀಫ್ ಮೆಡಿಕಲ್ ಆಫೀಸ್ ಮಾತನಾಡಿದ್ದು, ನಮ್ಮಲ್ಲಿ ಶವಗಾರಗಳು ಸಂಪೂರ್ಣ ಭರ್ತಿಯಾಗಿವೆ. ಅಂತ್ಯಕ್ರಿಯೆ ನೆರವೇರಿಸಲು ಸಾಧ್ಯವಾಗ್ತಿಲ್ಲ. ತಾತ್ಕಾಲಿಕವಾಗಿ ರೆಫ್ರಿಜರೇಟರ್ ಟ್ರಕ್ಗಳನ್ನು ಬಳಸುತ್ತಿದ್ದೇವೆ. ಸದ್ಯಕ್ಕೆ 14 ರೆಫ್ರಿಜರೇಟರ್ ಟ್ರಕ್‌ಗಳಲ್ಲಿ 294 ದೇಗಳನ್ನು ರಕ್ಷಣೆ ಮಾಡಲಾಗಿದೆ ಎಂದಿದ್ದಾರೆ.
ಇದು ಅಮೆರಿಕದ ಸಂಕಷ್ಟ ಎಂದು ನಾವು ನಿಟ್ಟುಸಿರು ಬಿಡುವಂತಿಲ್ಲ. ಯಾಕೆಂದರೆ ನಮ್ಮ ಭಾರತ ಅದರಲ್ಲೂ ನಮ್ಮ ಬೆಂಗಳೂರಿನಲ್ಲಿ ಸಮಸ್ಯೆಗಳ ಸರಮಾಲೆ ತಲೆದೋರಿದೆ. ಅಂತ್ಯ ಸಂಸ್ಕಾರ ಮಾಡಲು ಸಾಧಯವಾಗದೆ ಸರತಿ ಸಾಲಿನಲ್ಲಿ ಶವಗಳು ನಿಲ್ಲುವಂತಾಗಿದೆ. ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ಇರುವ ವಿದ್ಯುತ್ ಚಿತಾಗಾರ ಬಳಿ ಶವಗಳು ಸಾಲಿನಲ್ಲಿ ನಿಂತಿದ್ದವು. ಕರೋನಾದಿಂದ ಮೃತಪಟ್ಟವರು ಹಾಗೂ ಸಹಜ ಸಾವಿನಿಂದ ಮೃತಪಟ್ಟವರ ಕುಟುಂಬಸ್ಥರು ಅಂತ್ಯ ಸಂಸ್ಕಾರಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲು ದುಸ್ಥಿತಿ ಎದುರಾಗಿದೆ. ಮೂರ್ನಾಲ್ಕು ಮೃತದೇಹಗಳನ್ನ ಇಟ್ಟುಕೊಂಡು ಕಾಯುವ ಪರಿಸ್ಥಿತಿ ಎದುರಾಗಿದೆ.
ಬೆಂಗಳೂರಿನ ಬನಶಂಕರಿ ವಿದ್ಯುತ್ ಚಿತಾಗಾರದಲ್ಲೂ ಇದೇ ಪರಿಸ್ಥಿತಿ, ಅಂತ್ಯಕ್ರಿಯೆಗಾಗಿ ಜನರು ಶವಗಳ ಜೊತೆ ಕಾದು ಕುಳಿತಿರುವ ದೃಶ್ಯ ಸಾಮಾನ್ಯವಾಗಿತ್ತು. ಇಲ್ಲೂ ಕೂಡ ಕರೋನಾದಿಂದ ಮೃತಪಟ್ಟವರು ಹಾಗೂ ಸಹಜ ಸಾವಿನಿಂದ ಮೃತರಾದವರ ಕುಟುಂಬಗಳು ಕಾಯುತ್ತಿದ್ದಾರೆ. ಬೆಂಗಳೂರಿನಲ್ಲಿ ಕರೋನಾದಿಂದ ಮೃತರಾಗುತ್ತಿರುವ ಸಂಖ್ಯೆ ಏರಿಕೆಯಾಗಿರುವ ಕಾರಣ ಅಂತ್ಯಕ್ರಿಯೆ ಸಮಸ್ಯೆ ತಲೆದೋರಿದೆ ಎನ್ನಲಾಗ್ತಿದೆ. ಪ್ರತಿ ಚಿತಾಗಾರಕ್ಕೂ 7 ರಿಂದ 10 ಶವಗಳ ರವಾನೆಗೆ ಬಿಬಿಎಂಪಿ ವ್ಯವಸ್ಥೆ ಮಾಡಿದೆ. ಒಂದು ಮೃತ ದೇಹ ಸುಡುವ ಪ್ರಕ್ರಿಯೆಗೆ ಕನಿಷ್ಠ 1 ಗಂಟೆ ಹಾಗೂ ಗರಿಷ್ಠ 2 ಗಂಟೆ ಸಮಯಬೇಕಾಗುತ್ತದೆ.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಶವ ಸಂಸ್ಕಾರ ತಡವಾಗುತ್ತಿರುವುದು ಆರೋಗ್ಯ ಅಧಿಕಾರಿಗಳನ್ನೂ ಕಂಗಾಲಾಗುವಂತೆ ಮಾಡಿದೆ. ಕರೋನಾದಿಂದ ಸಾವನ್ನಪ್ಪಿದವರ ಅಂತ್ಯಕ್ರಿಯೆ ಆರೋಗ್ಯ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಬೇಕಿದೆ. ಸರತಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾಯುವುದಕ್ಕೆ ಆರೋಗ್ಯಾಧಿಕಾರಿಗಳಿಗೂ ಹೆಚ್ಚು ಸಮಯ ಸ್ಮಶಾನದಲ್ಲೇ ಕಳೆಯುವಂತಾಗಿದೆ. ಬೆಂಗಳೂರಿನ ಬನಶಂಕರಿ, ಸುಂಕದಕಟ್ಟೆ, ಕಲ್ಲಹಳ್ಳಿ, ಹೆಬ್ಬಾಳ, ಕೂಡ್ಲು ಚಿತಾಗಾರದಲ್ಲೂ ಅಂತ್ಯಸಂಸ್ಕಾರಕ್ಕೆ ಅವಕಾಶವಿದೆ. ಕೋವಿಡ್ 19 ನಿಂದ ಮೃತಪಟ್ಟರೆ ಚಿತಾಗಾರ ಎಂಟ್ರಿಯಲ್ಲಿ ಪಿಪಿಇ ಕಿಟ್ ಧರಿಸಿದರೆ ಮುಖ ನೋಡಲು ಕೊನೆ ಅವಕಾಶ ಕಲ್ಪಿಸಲಾಗುತ್ತದೆ. ಪಿಪಿಇ ಕಿಟ್ ಧರಿಸದಿದ್ದರೆ ಮುಖ ನೋಡಲು ಅವಕಾಶವಿಲ್ಲ. ಆದರೆ ಶವ ಸಂಸ್ಕಾರ ಅಮೆರಿಕದಂತೆಯೇ ಕರ್ನಾಟಕದಲ್ಲೂ ಸಂಕಷ್ಟ ಎದುರಾಗಿದೆ.
ಈಗಾಗಲೇ ಸೋಂಕಿತರ ವಿಚಾರದಲ್ಲಿ ಅಸಡ್ಡೆ ಮಾಡಿಕೊಂಡು ಇಕ್ಕಟ್ಟಿಗೆ ಸಿಲುಕಿರುವ ಬಿ ಎಸ್ ಯಡಿಯೂರಪ್ಪ ಸರ್ಕಾರ, ಚಿಕಿತ್ಸೆ ಕೊಡಲಾಗದೆ ಪರದಾಡುತ್ತಿದೆ. ಲಾಕ್‌ಡೌನ್ ಜಾರಿ ಮಾಡುತ್ತೇವೆ ಎಂದು ಬೇಕಾಬಿಟ್ಟಿ ಓಡಾಟಕ್ಕೆ ಬ್ರೇಕ್ ಹಾಕಲು ಸಾಧ್ಯವಾಗದೆ ಪರಿತಪಿಸುತ್ತಿದೆ.