ಜಗತ್ತಿನಾದ್ಯಾಂತ ಭೀಕರವಾಗಿ ಹರಡುತ್ತಿರುವ ಕರೋನಾ ಸೋಂಕಿಗೆ ಇನ್ನೂ ಔಷಧಿಯನ್ನು ಕಂಡು ಹಿಡಿಯಲಾಗದ್ದರಿಂದ ಸೋಂಕಿನ ಪ್ರಭಾವವನ್ನು ಸಂಪೂರ್ಣವಾಗಿ ತಡೆಯಲು ಇನ್ನೂ ಸಾಧ್ಯವಾಗಿಲ್ಲ. ರಾಜ್ಯದಲ್ಲಿ ಕರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಸೋಂಕಿಗೆ ಒಳಗಾದವರ ಸಂಖ್ಯೆ ವೃಧ್ಧಿಸುತ್ತಲೇ ಇದೆ.
ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೇ 11ರ ಸಂಜೆ ಐದು ಗಂಟೆಗೆ ಹೊರಡಿಸಿದ ಕರೋನಾ ಸೋಂಕಿನ ಅಂಕಿ ಅಂಶದ ಪ್ರಕಾರ ಕಳೆದ 24 ಗಂಟೆಗಳಲ್ಲಿ 14 ಹೊಸ ಕರೋನಾ ಪ್ರಕರಣಗಳು ದಾಖಲಾಗಿವೆ. ಒಟ್ಟು ಕರೋನಾ ಸೋಂಕಿತರ ಸಂಖ್ಯೆ 862 ಕ್ಕೇರಿದೆ. ಇದುವರೆಗೂ ರಾಜ್ಯದಲ್ಲಿ 426 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.

ರಾಜ್ಯದಲ್ಲಿ ಸಕ್ರಿಯವಾಗಿರುವ 404 ಪ್ರಕರಣಗಳಲ್ಲಿ 395 ಮಂದಿ ಕರೋನಾ ಸೋಂಕಿತರಿಗೆ ಗೊತ್ತುಪಡಿಸಿದ ಸಾಮಾನ್ಯ ವಾರ್ಡುಗಲಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿರುವ 09 ಮಂದಿಯನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ. ರಾಜ್ಯದಲ್ಲಿ ಕರೋನಾ ಸೋಂಕಿನಿಂದಾಗಿ 31 ಮಂದಿ ಅಸುನೀಗಿದ್ದಾರೆಂದು ಇಲಾಖೆ ಪತ್ರಿಕಾ ಪ್ರಕಟನೆಯಲ್ಲಿ ಹೇಳಿದೆ.
ಕಳೆದ 24 ಗಂಟೆಯಲ್ಲಿ ಪತ್ತೆಯಾಗಿರುವ 14 ಪ್ರಕರಣದಲ್ಲಿ ದಾವಣಗೆರೆಯಲ್ಲಿ 3 ಪ್ರಕರಣಗಳು ದಾಖಲೆಯಾಗಿದೆ. ಬೆಂಗಳೂರು ನಗರ, ,ಬೀದರ್ ಮತ್ತು ಬಾಗಲಕೋಟೆಯಲ್ಲಿ ತಲಾ ಎರಡು ಪ್ರಕರಣಗಳು ಪತ್ತೆಯಾಗಿದ್ದು, ಮಂಡ್ಯ, ಹಾಸನ, ಹಾವೇರಿ, ಕಲಬುರಗಿ ಹಾಗೂ ವಿಜಯಪುರದಲ್ಲಿ ತಲಾ ಒಂದೊಂದು ಪ್ರಕರಣ ಕಂಡು ಬಂದಿದೆ.