ರಾಜ್ಯ ಬಿಜೆಪಿಯಲ್ಲಿದ್ದ ಒಳ ಬೇಗುದಿ ಲಾಕ್ಡೌನ್ ಮುಗಿಯುತ್ತಿದ್ದಂತೆ ಕರೋನಾ ವಿಷಯ ಸ್ವಲ್ಪ ಬದಿಗೆ ಸರಿಯುತ್ತಿದ್ದಂತೆ ಮತ್ತೆ ಭುಗಿಲೇಳಲಾರಂಭಿಸಿದೆ. ಸ್ಥಾನಮಾನಗಳಿಸಿಕೊಳ್ಳಲು, ಕೆಲವರು ಉಳಿಸಿಕೊಳ್ಳಲು ದೆಹಲಿ ದಂಡಯಾತ್ರೆ ಆರಂಭಿಸಿದ್ದಾರೆ. ಸದ್ಯ ಬಿಜೆಪಿಯ ನಾಲ್ವರು ನಾಯಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು ತಮ್ಮ ತಮ್ಮ ದಾಳ ಉರುಳಿಸುತ್ತಿದ್ದಾರೆ.
ಮತ್ತೆ ಸಕ್ರಿಯಗೊಂಡ ರಮೇಶ್ ಜಾರಕಿಹೊಳಿ
ರಾಜ್ಯದಲ್ಲಿ ಈ ಹಿಂದೆ ಇದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರ ರಚಿಸುವುದರಲ್ಲಿ ಮುಂಚೂಣಿಯಲ್ಲಿದ್ದವರು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ. ಈಗ ಅವರು ಉಪ ಮುಖ್ಯಮಂತ್ರಿ ಸ್ಥಾನ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ. ಅದಕ್ಕಾಗಿ ಇದು ಅವರ ನಾಲ್ಕನೇ ದೆಹಲಿ ಭೇಟಿ. ಈಗಾಗಲೇ ಅವರು ಒಂದು ಸುತ್ತು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ರಾಜ್ಯದಿಂದ ಕೇಂದ್ರ ಸಚಿವರಾಗಿರುವ ಡಿ.ವಿ. ಸದಾನಂದಗೌಡ, ಪ್ರಹ್ಲಾದ್ ಜೋಷಿ ಮತ್ತು ಸುರೇಶ್ ಅಂಗಡಿ ಅವರನ್ನು ಭೇಟಿ ಮಾಡಿ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ.
ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ಡಿಸಿಎಂ ಸ್ಥಾನ ನೀಡುವಂತೆ ಕೊಡಿಸುವಂತೆ ಒತ್ತಡ ಹೇರುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಶಾಸಕರನ್ನು ಸೆಳೆದು ಸರ್ಕಾರ ರಚಿಸುವಾಗ ನನಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ವಾಗ್ದಾನ ಮಾಡಲಾಗಿತ್ತು. ಬಿಜೆಪಿ ನಾಯಕರ ಮಾತಿನ ಮೇಲೆ ವಿಶ್ವಾಸವಿಟ್ಟು ಆರು ತಿಂಗಳ ಕಾಲ ಕಾಂಗ್ರೆಸ್ ಮತ್ತು ಜೆಡಿಎಸ್
ಮೈತ್ರಿ ಸರ್ಕಾರವನ್ನು ಕೆಡವಲು ಪ್ರಯತ್ನ ಮಾಡಿದ್ದೇನೆ. ಶಾಸಕರನ್ನು ಸೆಳೆಯುವಲ್ಲೂ ಶ್ರಮ ಹಾಕಿದ್ದೇನೆ. ಇವೆಲ್ಲವೂ ಫಲಕೊಟ್ಟಿವೆ. ಬಳಿಕ ಸರ್ಕಾರ ರಚಿಸುವ ವೇಳೆ ಉಂಟಾದ ಸಮಸ್ಯೆಗಳಿಂದಾಗಿ ಹಿರಿಯ ನಾಯಕರು ಸ್ವಲ್ಪ ದಿನ ಕಾಯುವಂತೆ ಸೂಚನೆ ನೀಡಿದ್ದರು. ಹಿರಿಯರ ಮಾತಿಗೆ ಬೆಲೆಕೊಟ್ಟು ಕಾದಿದ್ದೇನೆ. ಈಗಲಾದರೂ ಕೊಟ್ಟ ಮಾತಿನಂತೆ ಉಪ ಮುಖ್ಯಮಂತ್ರಿ ಹುದ್ದೆ ನೀಡಿ ಎಂದು ಕೇಳಿಕೊಂಡಿರುವುದಾಗಿ ತಿಳಿದುಬಂದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ರಮೇಶ್ ಜಾರಕಿಹೊಳಿ ಈ ರೀತಿ ಉಪ ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇಡುವ ಹಿಂದೆ ‘ಈಗ ಕೇಳಿದರೆ ಮುಂದೆ ಸಿಗುತ್ತದೆ’ ಎಂಬ ತಂತ್ರ ಅಡಗಿದೆ. ಒಂದೊಮ್ಮೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸ್ಥಾನ ಪಲ್ಲಟವಾದರೆ ಆಗ ಇರುವ ಉಪ ಮುಖ್ಯಮಂತ್ರಿಗಳ ಸ್ಥಾನವೂ ಹೋಗುತ್ತದೆ. ಬೆಳಗಾವಿ ಜಿಲ್ಲೆಯವರಾದ ಲಕ್ಷ್ಮಣ ಸವದಿ ಕೂಡ ಸ್ಥಾನ ಕಳೆದುಕೊಳ್ಳುತ್ತಾರೆ. ಆಗ ಬೆಳಗಾವಿ ಜಿಲ್ಲೆಗೆ ಎರಡೆರಡು ಉಪ ಮುಖ್ಯಮಂತ್ರಿಗಳ ಸ್ಥಾನ ಎಂಬ ವಿಷಯ ಉದ್ಭವವಾಗುವುದಿಲ್ಲ. ಕರೋನಾ ವಿಷಯದಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ವಿಫಲವಾಗಿರುವುದರಿಂದ ಪರಿಶಿಷ್ಟ ಜನಾಂಗದ ವತಿಯಿಂದ ತಮಗೇ ಅವಕಾಶ ಸಿಗಬಹುದು ಎಂಬದು ರಮೇಶ್ ಜಾರಕಿಹೊಳಿ ಲೆಕ್ಕಾಚಾರ.
ಹಿಂದೆ ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸುವ ಸಂದರ್ಭದಲ್ಲಿ ಪರಿಶಿಷ್ಟ ಜನಾಂಗಕ್ಕೆ ಡಿಸಿಎಂ ಸ್ಥಾನವನ್ನು ನೀಡುವುದಾದರೆ ಶ್ರೀರಾಮುಲು ಅವರಿಗೇ ನೀಡಬೇಕು. ನಾಯಕ ಸಮುದಾಯಕ್ಕೆ ಚುನಾವಣೆ ಸಂದರ್ಭದಲ್ಲಿ ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಭರವಸೆ ಕೊಡಲಾಗಿತ್ತು. ಇದರಿಂದ ನಾಯಕ ಸಮಾಜ ಇಡೀಯಾಗಿ ಬಿಜೆಪಿಯನ್ನು ಬೆಂಬಲಿಸಿತ್ತು. ಹಾಗಾಗಿ ಯಾರಿಗೂ ಬೇಡ ಎಂದು ಶ್ರೀರಾಮುಲು ಮತ್ತು ರಮೇಶ್ ಜಾರಕಿಹೊಳಿ ಇಬ್ವರಿಗೂ ಸ್ಥಾನ ತಪ್ಪಿಸಲಾಗಿತ್ತು.
ಮುಖ್ಯಮಂತ್ರಿ ಬದಲಾವಣೆಯಾದರೆ ಉತ್ತರ ಕರ್ನಾಟಕದವರಾದ, ಬ್ರಾಹ್ಮಣ ಸಮುದಾಯದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆ ಸ್ಥಾನಕ್ಕೆ ಬರಬಹುದು ಎಂಬ ಚರ್ಚೆ ನಡೆಯುತ್ತಿರುವುದರಿಂದ ಈಗಾಗಲೇ ರಮೇಶ್ ಜಾರಕಿಹೊಳಿ ಪ್ರಹ್ಲಾದ್ ಜೋಶಿ ಸಂಪರ್ಕದಲ್ಲೂ ಇದ್ದಾರೆ. ಕಳೆದ ಮೂರು ಬಾರಿ ದೆಹಲಿಗೆ ಬಂದಿದ್ದಾಗಲೂ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿದ್ದಾರೆ. ಅದೂ ಅಲ್ಲದೆ ಬೆಂಗಳೂರಿನಲ್ಲಿ ಪ್ರಹ್ಲಾದ್ ಜೋಶಿ ನಡೆಸಿದ ಶಾಸಕರ ಸಭೆಯಲ್ಲೂ ಭಾಗವಹಿಸಿದ್ದರು.
ಸಚಿವ ಸ್ಥಾನಕ್ಕಾಗಿ ಸೈನಿಕನ ಸರ್ಕಸ್
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲು ಶ್ರಮಿಸಿದ್ದೇನೆ. ಆಗ ನನಗೆ ಮಂತ್ರಿ ಸ್ಥಾನದ ಭರವಸೆ ನೀಡಲಾಗಿತ್ತು. ಕೊಟ್ಟ ಮಾತಿನಂತೆ ನನನ್ನು ಸಚಿವನನ್ನಾಗಿ ಮಾಡಿ ಎಂದು ಒತ್ತಡ ಹೇರಲು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಕೂಡ ದೆಹಲಿಗೆ ಧಾವಿಸಿದ್ದಾರೆ. ರಮೇಶ್ ಜಾರಕಿಹೊಳಿ ಜೊತೆ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿ ‘ಸರ್ಕಾರ ರಚನೆಯಲ್ಲಿ ನನ್ನ ಸೇವೆಯನ್ನು ಪರಿಗಣಿಸಿ ಮಂತ್ರಿ ಸ್ಥಾನ ನೀಡಿ’ ಎಂದು ಕೇಳಿಕೊಂಡಿದ್ದಾರೆ. ಇದೂ ಅಲ್ಲದೆ ಅವರು ಬಿ.ಎಲ್. ಸಂತೋಷ್ ಅವರನ್ನು ಭೇಟಿ ಮಾಡಿ ಕೂಡ ಇದೇ ಬೇಡಿಕೆ ಇಡಲಿದ್ದಾರೆ ಎಂದು ತಿಳಿದುಬಂದಿದೆ. ಇಷ್ಟು ದಿವಸ ಅವರು ವಿಧಾನ ಪರಿಷತ್ ಸದಸ್ಯ ಪಡೆಯಲು ಹರಸಾಹಸ ಪಟ್ಟರು. ಈಗ ಮಂತ್ರಿ ಸ್ಥಾನಕ್ಕಾಗಿ ಕಸರತ್ತು ನಡೆಸಿದ್ದಾರೆ. ಈ ನಡುವೆ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಬಣದಿಂದ ಬಿ.ಎಲ್. ಸಂತೋಷ್ ಬಣಕ್ಕೆ ಜಿಗಿದಿದ್ದಾರೆ.
ಸೀಟಿ ಊದಲು ದೆಹಲಿಗೆ ಬಂದಿರುವ ರವಿ
ರಮೇಶ್ ಜಾರಕಿಹೋಳಿ, ಸಿ.ಪಿ ಯೋಗೇಶ್ವರ್ ಬೆನ್ನಲ್ಲೇ ಪ್ರವಾಸೋದ್ಯಮ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ .ರವಿ ಕೂಡಾ ದೆಹಲಿಗೆ ಬಂದಿದ್ದಾರೆ. ಮೊದಲಿಂದಲೂ ಯಡಿಯೂರಪ್ಪ ವಿರುದ್ಧ ವಿರೋಧ ಹೊಂದಿರುವ ಹಾಗೂ ತಮಗೆ ಕೊಟ್ಟಿರುವ ಖಾತೆಗಳ ಬಗ್ಗೆ ಅಸಮಾಧಾನ ಹೊಂದಿರುವ ಸಿ.ಟಿ ರವಿ ಈಗ ಹೈಕಮಾಂಡ್ ನಾಯಕರೆದುರೇ ತಮ್ಮ ದುಃಖ ತೋಡಿಕೊಳ್ಳಲಿದ್ದಾರೆ. ಅವರ ಸಚಿವ ಸ್ಥಾನಕ್ಕೆ ಅಷ್ಟೇನೂ ಸಂಚಕಾರ ಇಲ್ಲದಿದ್ದರೂ ಇತ್ತ ಯಡಿಯೂರಪ್ಪ ಬಣದಲ್ಲೂ ಇಲ್ಲದ, ಅತ್ತ ಸಂತೋಷ್ ಬಣದಲ್ಲೂ ಇಲ್ಲದ ಕಾರಣಕ್ಕೆ ತೊಂದರೆ ಆಗಬಹುದೆಂದು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ದೆಹಲಿಗೆ ಆಗಮಿಸಿದ್ದಾರೆ. ಅವರು ಕೂಡ ಜೆ.ಪಿ. ನಡ್ಡಾ ಮತ್ತು ಬಿ.ಎಲ್. ಸಂತೋಷ್ ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.
ಸ್ಥಾನ ಕಳೆದುಕೊಳ್ಳುವ ಭಯದಲ್ಲಿ ಕೋಟಾ
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುತ್ತೋ ಇಲ್ಲವೋ ಶೀಘ್ರವೇ ಸಂಪುಟ ವಿಸ್ತರಣೆ ಅಥವ ಪುನಾರಚನೆಯಾಗುವ ಸಾಧ್ಯತೆಯಂತೂ ಇದೆ. ಆಗ ತನ್ನ ಸ್ಥಾನ ಉಳಿಯುವ ಸಾಧ್ಯತೆ ಬಹಳ ಕ್ಷೀಣ ಎಂದು ಅರಿತಿರುವ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಕೂಡ ಸ್ಥಾನ ಉಳಿಸಿಕೊಳ್ಳಲು ದೆಹಲಿಗೆ ಬಂದಿದ್ದಾರೆ. ಈಗಾಗಲೇ ವಿಧಾನ ಪರಿಷತ್ ವತಿಯಿಂದ ಲಕ್ಷ್ಮಣ ಸವದಿ ಸಚಿವರಾಗಿದ್ದಾರೆ. ಈಗ ಎಂ.ಟಿ.ಬಿ ನಾಗರಾಜ್, ಆರ್. ಶಂಕರ್ ಮತ್ತು ಎಚ್. ವಿಶ್ವನಾಥ್ ಅವರನ್ನು ಸಚಿವರನ್ನಾಗಿ ಮಾಡಲು ಸಿಎಂ ಯಡಿಯೂರಪ್ಪ ಉತ್ಸಾಹುಕರಾಗಿದ್ದಾರೆ. ಈ ನಡುವೆ ಸಿ.ಪಿ. ಯೋಗೇಶ್ವರ್ ಕೂಡ ಮಂತ್ರಿಯಾಗಿಬಿಟ್ಟರೆ ತನ್ನ ಸಚಿವ ಸ್ಥಾನಕ್ಕೆ ಕುತ್ತು ಬರಲಿದೆ ಎನ್ನುವುದು ಕೋಟಾ ಶ್ರೀನಿವಾಸ್ ಪೂಜಾರಿ ಅವರ ಆತಂಕ. ಆದುದರಿಂದ ಇಲಾಖೆಯ ಕೆಲಸ ನೆಪ ಇಟ್ಟುಕೊಂಡು ದೆಹಲಿಗೆ ಬಂದಿರುವ ಅವರು ಜೆ.ಪಿ. ನಡ್ಡ ಮತ್ತು ಬಿ.ಎಲ್. ಸಂತೋಷ್ ಬಳಿ ಸ್ಥಾನ ಉಳಿಸಿಕೊಡಿ ಎಂದು ಕೇಳಿಕೊಳ್ಳಲಿದ್ದಾರೆ. ತನ್ನ ಸಂಘನಿಷ್ಟೆಯನ್ನು ಪರಿಗಣಿಸಿ ಎಂದು ಮನವಿ ಮಾಡಲಿದ್ದಾರೆ ಎನ್ನಲಾಗಿದೆ.
ಕಳೆದ ಎರಡು ವಾರಗಳ ಹಿಂದ ಡಿಸಿಎಂ ಲಕ್ಷಣ್ ಸವದಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಶಶಿಕಲಾ ದೆಹಲಿ ಭೇಟಿ ನೀಡಿ ಹೈಕಮಾಂಡ್ ಭೇಟಿಯಾಗಿದ್ದರು. ಒಟ್ಟಿನಲ್ಲಿ ರಾಜ್ಯ ಬಿಜೆಪಿಯಲ್ಲಿ ಪದೋನ್ನತಿ ಪಡೆಯುವ, ಇರುವ ಸ್ಥಾನ ಉಳಿಸಿಕೊಳ್ಳುವ ಕೆಲಸ ಭರದಿಂದ ನಡೆಯುತ್ತಿದೆ.