ರಾಜ್ಯದಲ್ಲಿ ಕರೋನಾ ಸೋಂಕು ಹರಡುವಿಕೆ ತೀವ್ರ ಪ್ರಮಾಣದಲ್ಲಿ ಹರಿದಾಡುತ್ತಿದೆ. ಒಂದೇ ದಿನಕ್ಕೆ ನಾಲ್ಕೂವರೆ ಸಾವಿರ ಜನರಿಗೆ ಸೋಂಕು ಬರುವುದಕ್ಕೆ ಶುರುವಾಗಿದೆ. ಈ ನಡುವೆ ಈ ವರ್ಷದ ಶೈಕ್ಷಣಿಕ ವರ್ಷ ಆರಂಭ ಮಾಡುವುದು ಹೇಗೆ ಎನ್ನುವ ಚಿಂತನೆಗಳು ನಡೆಯುತ್ತಿವೆ. ಈಗಾಗಲೇ ರಾಜ್ಯ ಹೈಕೋರ್ಟ್ ಕೂಡ ಆನ್‌ಲೈನ್ ಶಿಕ್ಷಣಕ್ಕೆ ಸಮ್ಮತಿ ಸೂಚಿಸಿದೆ. ಆದರೆ ರಾಜ್ಯದಲ್ಲಿ ಆನ್‌ಲೈನ್ ಶಿಕ್ಷಣ ಸಾಧ್ಯವೇ ಎನ್ನುವ ಚಿಂತನೆ ಶುರುವಾಗಿದೆ. 1 ನೇ ತರಗತಿಯಿಂದಲೂ ಆನ್‌ಲೈನ್ ತರಗತಿ ಮಾಡುವುದಕ್ಕೆ ತಜ್ಞರು ಕೂಡ ಶಿಫಾರಸು ಮಾಡಿದ್ದಾರೆ ಎನ್ನಲಾಗ್ತಿದೆ. ಆದರೆ ಸರ್ಕಾರ ಇನ್ನೂ ಕೂಡ ಅಧಿಕೃತವಾಗಿ ಆನ್‌ಲೈನ್ ತರಗತಿ ಆರಂಭಕ್ಕೆ ಅಧಿಸೂಚನೆ ಹೊರಡಿಸಿಲ್ಲ.
ಆದರೆ, ಈಗಾಗಲೇ ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ತರಗತಿ ಆರಂಭ ಮಾಡಿವೆ. ಈಗಾಗಲೇ ಅಲ್ಪ ಪ್ರಮಾಣದಲ್ಲಿ ಫೀಸ್ ಕೂಡ ಕಟ್ಟಿಸಿಕೊಂಡು ಆಗಿದೆ. ಆದರೆ, ಈ ಶೈಕ್ಷಣಿಕ ವರ್ಷ ನಡೆಯುತ್ತೆಯೋ ಇಲ್ಲವೋ ಎನ್ನುವ ಬಗ್ಗೆಯೂ ಇನ್ನೂ ಖಚಿತತೆ ಇಲ್ಲ. ಇನ್ನೂ ಉನ್ನತ ಶಿಕ್ಷಣ ಸಚಿವ ಡಿಸಿಎಂ ಅಶ್ವತ್ಥ ನಾರಾಯಣ ಸೆಪ್ಟೆಂಬರ್‌ನಿಂದ ಆನ್‌ಲೈನ್ ಶಿಕ್ಷಣ ಆರಂಭವಾಗಲಿದ್ದು, ಅಕ್ಟೋಬರ್‌ನಿಂದ ರೆಗ್ಯೂಲರ್ ತರಗತಿಗಳು ನಡೆಯಲಿವೆ ಎಂದು ಈಗಾಗಲೇ ಘೋಷಣೆ ಮಾಡಿದ್ದಾರೆ. ಆದರೆ ಕರೋನಾ ವರ್ಷಾಂತ್ಯಕ್ಕೆ ಹೆಚ್ಚಾಗಲಿದೆ ಎನ್ನುವ ವರದಿಗಳು ಬರುತ್ತಿದ್ದು ತರಗತಿ ಆರಂಭ ಆಗುತ್ತಾ ಎನ್ನುವ ಅನುಮಾನ ಶುರುವಾಗಿದೆ.
ಸರ್ಕಾರ ಆನ್‌ಲೈನ್ ತರಗತಿ ಬಿಟ್ಟು ಹೀಗೆ ಮಾಡಬಹುದಾ..?
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕು ಸಂಪೂರ್ಣ ದಟ್ಟಾರಣ್ಯದಿಂದ ಕೂಡಿದೆ. ಅಲ್ಲಿನ ಪರಿಸ್ಥಿತಿಯಲ್ಲಿ ಆನ್‌ಲೈನ್ ಪಾಠ ಮಾಡುವುದಕ್ಕೆ ನೆಟ್‌ವರ್ಕ್ ಕೂಡ ಸಿಗಲಾರದು. ಫೋನ್ ಕಾಲ್ ಮಾಡುವುದಕ್ಕೇ ಸಿಗ್ನಲ್ ಹುಡುಕುವ ಪರಿಸ್ಥಿತಿ ಇದೆ. ಅಂಥಹ ಪರಿಸ್ಥಿತಿಯಲ್ಲೂ ಡೇರಿಯಾ ಎಂಬ ಕುಗ್ರಾಮದ 10 ಮಕ್ಕಳು ಇಂಗ್ಲಿಷ್ ಪಾಠ ಕಲಿಯುತ್ತಿದ್ದಾರೆ. ನಿತ್ಯವೂ 2 ಗಂಟೆಗಳ ಕಾಲ ಮೊಬೈಲ್ ಕಾಲ್ ಮೂಲಕವೇ ಮೈಸೂರಿನ ಶಿಕ್ಷಕಿ ಪಾಠ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದ ಪೂರ್ಣಿಮಾ, ಇದೀಗ ನಿವೃತ್ತರಾಗಿದ್ದು, ಕುಗ್ರಾಮದ ಮಕ್ಕಳಿಗೆ ನಿತ್ಯವೂ ಪಾಠ ಮಾಡುತ್ತಿದ್ದಾರೆ. ಎಲ್ಲಿ ಆನ್‌ಲೈನ್ ಪಾಠ, ಸಾಮಾನ್ಯ ಪಾಠ ಮಾಡಲು ಶಿಕ್ಷಕರು ತಲುಪಲು ಸಾಧ್ಯವಿಲ್ಲವೋ ಅಂಥಹ ದುರ್ಗಮ ಪ್ರದೇಶದ ಮಕ್ಕಳಿಗೆ ಮೊಬೈಲ್ ಮೂಲಕ ಪಾಠ ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರ, ರೈತರಿಗೆ ಕೃಷಿ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಕಿಸಾನ್ ಎಂಬ ದೂರದರ್ಶನವನ್ನು ಆರಂಭ ಮಾಡಿತ್ತು. ಅದೇ ರೀತಿ ರಾಜ್ಯ ಸರ್ಕಾರವೂ ಕೂಡ ದೂರದರ್ಶನದ ಮೂಲಕ ಎಲ್ಲಾ ಮಕ್ಕಳಿಗೂ ಒಂದೇ ರೀತಿಯ ಪಾಠವನ್ನು ಮಾಡುವ ಮೂಲಕ ಈ ಶೈಕ್ಷಣಿಕ ವರ್ಷವನ್ನೂ ಸಂಪೂರ್ಣ ಮಾಡಬಹುದು. ಶಿಕ್ಷಕರು ಸ್ವಯಂ ಅತ್ತ ಶಾಲೆಯೂ ಇಲ್ಲದೆ, ಸಂಬಳವೂ ಇಲ್ಲದೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಎಲ್ಲಾ ಮಕ್ಕಳಿಗೂ ಒಂದೇ ರೀತಿಯ ಶಿಕ್ಷಣ ಒದಗಿಸುವ ಮೂಲಕ ಶೈಕ್ಷಣಿಕ ವರ್ಷವನ್ನೂ ಪೂರ್ಣ ಮಾಡಬಹುದು. ಜೊತೆಗೆ ವೇತನವಿಲ್ಲದೆ ಇಕ್ಕಟ್ಟಿಗೆ ಸಿಲುಕಿರುವ ಶಿಕ್ಷಕರ ಸಮಸ್ಯೆಗೂ ಪರಿಹಾರ ಸಿಕ್ಕಂತಾಗುತ್ತದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಶಿಕ್ಷಕರನ್ನು ಸರ್ಕಾರ ಹೇಗೆ ಬಳಸಿಕೊಳ್ಳಬಹುದು..?
ರಾಜ್ಯ ಸರ್ಕಾರ ಕೋವಿಡ್ 19 ವಿರುದ್ಧ ಹೋರಾಟ ಮಾಡಲು ಸಾಧ್ಯವಾಗದೆ ಕಂಗಾಲಾಗಿದೆ. ಕರೋನಾ ಸೋಂಕಿತರ ಪ್ರಾಥಮಿಕ ಸಂಪರ್ಕಿತರ ಪತ್ತೆಯನ್ನು ಮಾಡಲು ಸಾಧ್ಯವಾಗ್ತಿಲ್ಲ. ದ್ವಿತಿಯ ಸಂಪರ್ಕಿತರನ್ನು ಪತ್ತೆ ಮಾಡುವ ಗೋಜಿಗೆ ಸರ್ಕಾರ ಮುಂದಾಗುತ್ತಿಲ್ಲ. ಇದೀಗ ಬೆಂಗಳೂರಿನಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನೇ ಪತ್ತೆ ಮಾಡುತ್ತಿಲ್ಲ ಎನ್ನುವ ಆರೋಪಗಳಿವೆ. ಇದೀಗ ಲಕ್ಷಾಂತರ ಶಿಕ್ಷಕರನ್ನು ಸರ್ಕಾರ ಕೋವಿಡ್ ವಾರಿಯರ್ಸ್ ಆಗಿ ಬಳಕೆ ಮಾಡಿಕೊಳ್ಳಬಹುದು. ಉತ್ತಮ ಜ್ಞಾನವುಳ್ಳ ಶಿಕ್ಷಕರು ಕೋವಿಡ್ ನಿಯಂತ್ರಣಕ್ಕ ಕಟಿಬದ್ಧರಾಗಿ ದುಡಿಯಲಿದ್ದಾರೆ. ಇನ್ನೂ 50 ವರ್ಷ ಮೇಲ್ಪಟ್ಟ ಶಿಕ್ಷಕರನ್ನು ಬೇರೆ ಇಲಾಖಾ ಕಾರ್ಯಗಳಿಗೆ ತಾತ್ಕಾಲಿಕವಾಗಿ ವರ್ಗಾವಣೆ ಮಾಡಿದರೆ ಶೈಕ್ಷಣಿಕ ವರ್ಷ, ಆನ್‌ಲೈನ್ ಶಿಕ್ಷಣದ ವ್ಯವಸ್ಥೆ, ಕೋವಿಡ್ ಟ್ರಾಕಿಂಗ್ ಸಮಸ್ಯೆ ಎಲ್ಲದಕ್ಕೂ ಉತ್ತರ ಸಿಗಲಿದೆ.
ಕೇವಲ ಆನ್‌ಲೈನ್ ಶಿಕ್ಷಣ ಎನ್ನುವ ಅಜೆಂಡ ಹಿಡಿದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಮುನ್ನುಗ್ಗುವ ಬದಲು, ಆನ್‌ಲೈನ್ ಶಿಕ್ಷಣದ ಮೂಲಕ ರಾಜ್ಯದ ಬಹುತೇಕ ಭಾಗವನ್ನು ತಲುಪಲು ಸಾಧ್ಯವಿಲ್ಲ, ದೂರದರ್ಶನ, ಆಕಾಶವಾಣಿ ಬಳಸಿಕೊಳ್ಳಬಹುದು. ಪ್ರಧಾನಿ ನರೇಂದ್ರ ಮೋದಿ ಮಾಸಿಕವಾಗಿ ದೇಶವನ್ನು ಉದ್ದೇಶಿಸಿ ಮಾಡುವ ಮನ್ ಕೀ ಬಾತ್ ಮೊಬೈಲ್ ನಂಬರ್‌ಗೆ ಮಿಸ್ ಕಾಲ್ ಕೊಟ್ಟರೆ ಸಂಪೂರ್ಣ ಆಡಿಯೋ ಸಂದೇಶ ಮೊಬೈಲ್‌ನಲ್ಲಿ ಕೇಳಿಸಲಿದೆ ಎದೇ ರೀತಿಯ ಯೋಜನೆಯಲ್ಲಿ ಈ ಬಾರಿಯ ಶೈಕ್ಷಣಿಕ ವರ್ಷದಲ್ಲಿ ಜಾರಿ ಮಾಡಿದರೆ ಅತ್ಯುತ್ತಮವಾಗಲಿದೆ. ಕೆಎಸ್‌ಒಯು ನಿವೃತ್ತ ಪ್ರೊಫೆಸರ್ ಪೂರ್ಣಿಮಾ ಪಾಠ ಮಾಡುತ್ತಿರುವ ರೀತಿ ರಾಜ್ಯಕ್ಕೆ ಮಾದರಿಯಾಗಿದೆ.