ರಾಜಸ್ಥಾನ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಸೇರಿದಂತೆ ಕಾಂಗ್ರೆಸ್ ನ 19 ಬಂಡಾಯ ಶಾಸಕರ ಗುಂಪಿಗೆ ವಿಧಾನಸಭೆ ಸ್ಪೀಕರ್ ನೀಡಿದ ಅನರ್ಹತೆ ನೋಟಿಸ್‌ನಲ್ಲಿ ರಾಜಸ್ಥಾನ ಹೈಕೋರ್ಟ್ ಶುಕ್ರವಾರ “ಯಥಾಸ್ಥಿತಿ” ಕಾಪಾಡುವಂತೆ ಆದೇಶಿಸಿದೆ. ವಿಧಾನಸಭೆಯಿಂದ ಅನರ್ಹತೆಯನ್ನು ಪ್ರಶ್ನಿಸಿ ಭಿನ್ನಮತೀಯರು ಸಲ್ಲಿಸಿದ್ದ ಅರ್ಜಿಯ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. ರಾಜಸ್ಥಾನ ಹೈಕೋರ್ಟ್ ಶುಕ್ರವಾರ, ಬಂಡಾಯ ಕಾಂಗ್ರೆಸ್ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವುದು ಸಚಿನ್ ಪೈಲಟ್ ಹಾಗೂ ತಂಡಕ್ಕೆ ದೊಡ್ಡ ಸಮಾಧಾನವನ್ನು ನೀಡಿದೆ.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ‘ಯಥಾಸ್ಥಿತಿ’ ಕಾಪಾಡಿಕೊಂಡ ರಾಜಸ್ಥಾನ್ ಹೈಕೋರ್ಟ್, ಸಚಿನ್ ಪೈಲಟ್ ಮತ್ತು ಇತರ ಬಂಡಾಯ ಕಾಂಗ್ರೆಸ್ ಶಾಸಕರ ವಿರುದ್ಧ ಸೋಮವಾರ ತನಕ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಹೇಳಿದೆ. ಬಂಡಾಯ ಶಾಸಕರಿಗೆ ಸ್ಪೀಕರ್ ನೀಡಿರುವ ಅನರ್ಹತೆ ನೋಟಿಸ್‌ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಸೋಮವಾರ ಪುನರಾರಂಭಿಸುತ್ತದೆ.
ರಾಜಸ್ಥಾನ ಹೈಕೋರ್ಟ್ ಆದೇಶ ಹೊರಡಿಸುವುದನ್ನು ತಡೆಯಲು ಬಂದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಿನ್ನೆ ನಿರಾಕರಿಸಿತ್ತು. ಅದಾದ ಒಂದು ದಿನದ ಬಳಿಕ ‘ಯಥಾಸ್ಥಿತಿ’ ಕಾಯ್ದುಕೊಳ್ಳಲು ರಾಜಸ್ಥಾನ್ ಹೈಕೋರ್ಟ್ ನಿರ್ದೇಶನ ನೀಡಿದೆ.
ಜುಲೈ 24 ರವರೆಗೆ ಅನರ್ಹತೆ ವಿಚಾರಣೆಯನ್ನು ಮುಂದೂಡುವಂತೆ ಹೈಕೋರ್ಟ್‌ನ ನಿರ್ದೇಶನದ ವಿರುದ್ಧ ರಾಜಸ್ಥಾನ್ ಸ್ಪೀಕರ್ ಸಿಪಿ ಜೋಶಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ನಿನ್ನೆ ಆಲಿಸಿತ್ತು.
ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ