ರಾಜಸ್ಥಾನದಲ್ಲಿ ನಡೆದ ಆಶ್ಚರ್ಯಕರ ಘಟನೆ ನಿಜಕ್ಕೂ ಎಲ್ಲರ ಹುಬ್ಬೇರಿಸಿದೆ. ರಾಜಕೀಯದಲ್ಲಿ ಬದ್ದ ವೈರಿಗಳಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿ ರಚಿಸಿ ಜಿಲ್ಲಾ ಪರಿಷತ್ನ ಅಧ್ಯಕ್ಷರನ್ನು ಆಯ್ಕೆ ಮಾಡಿದೆ. ಕಾಂಗ್ರೆಸ್ ಮತ್ತು ಬಿಜೆಪಿಯ ಮೈತ್ರಿ ಊಹಿಸಲೂ ಅಸಾಧ್ಯವಾದರೂ ಇದು ನಂಬಲೇಬೇಕಾದ ವಿಚಾರ.
ಅದರಲ್ಲೂ ಕಾಂಗ್ರೆಸ್ ತನ್ನ ಯುಪಿಎ ಮೈತ್ರಿಕೂಟದ ಭಾಗವಾಗಿರುವ ಭಾರತೀಯ ಟ್ರೈಬಲ್ ಪಾರ್ಟಿ (BTP) ವಿರುದ್ದ ಬಿಜೆಪಿಯೊಂದಿಗೆ ಕೈಜೋಡಿಸಿದ್ದು, ರಾಜಸ್ಥಾನದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಸ್ಥಿತ್ಯಂತರ ಆರಂಭವಾಗುವ ಎಲ್ಲಾ ಮುನ್ಸೂಚನೆಗಳನ್ನು ನೀಡಿದೆ. 27 ಸ್ಥಾನಗಳಿರುವ ದುಂಗಾರ್ಪುರ್ನ ಜಿಲ್ಲಾ ಪರಿಷತ್ನ ಚುನಾವಣೆಯಲ್ಲಿ ಬಿಟಿಪಿ ಬೆಂಬಲಿತ 13 ಜನ ಪಕ್ಷೇತರರು ಗೆಲು ಸಾಧಿಸಿದ್ದರು. ಬಿಜೆಪಿಗೆ ಎಂಟು ಹಾಗೂ ಕಾಂಗ್ರೆಸ್ಗೆ ಆರು ಮತಗಳು ಲಭಿಸಿದ್ದವು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಬಿಟಿಪಿ ಪಕ್ಷದಿಂದ ಯಾರೂ ಸಂಸದರಿಲ್ಲದ ಕಾರಣಕ್ಕಾಗಿ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಯನ್ನು ನೇರವಾಗಿ ಕಣಕ್ಕಿಳಿಸಲು ಸಾಧ್ಯವಾಗಿರಲಿಲ್ಲ. ಆ ಕಾರಣಕ್ಕಾಗಿ, ಕಾಂಗ್ರೆಸ್ನ ಸಹಾಯವನ್ನು ಪಡೆಯುವ ಯೋಚನೆಯನ್ನು ಬಿಟಿಪಿ ಮಾಡಿತ್ತು. ಎಲ್ಲರ ಪ್ರಕಾರ ಬಿಟಿಪಿ ಅಧ್ಯಕ್ಷ ಸ್ಥಾನವನ್ನು ಪಡೆಯುವುದು ಖಚಿತವಾಗಿತ್ತು. ಆದರೆ, ಗುರವಾರದಂದು ಚುನಾವಣೆ ನಡೆದಾಗ ಮಾತ್ರ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ.
ಗುರಾವ ಅಪರಾಹ್ನ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಹಾರಿ ಅವರು 14 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಇದೇ ವೇಳೆ ಬಿಟಿಪಿ ಬೆಂಬಲಿತ ಪಾರ್ವತಿ ದೇವಿ ಅವರು 13 ಮತಗಳನ್ನು ಪಡೆದು ಸೋಲೊಪ್ಪಿಕೊಂಡರು.
ಈ ಕುರಿತಾಗಿ ಪ್ರತಿಕ್ರಿಯಿಸಿರು ಕಾಂಗ್ರೆಸ್ ನಾಯಕರು, ಇಂತಹ ಒಂದು ಘಟನೆ ನಡೆಯುವ ಕುರಿತು ನಮಗೆ ಮಾಹಿತಿಯೇ ಇರಲಿಲ್ಲ ಎಂದು ಹೇಳಿದ್ದಾರೆ. ಬಿಜೆಪಿ ನಾಯಕರು ಇದೆಲ್ಲಾ ಮಾಮೂಲು ಎಂದು ಹೇಳಿದ್ದಾರೆ.
ಈ ಬೆಳವಣಿಗೆಯೊಂದಿಗೆ, ಬಿಟಿಪಿ ಪಕ್ಷವು ಕಾಂಗ್ರೆಸ್ನೊಂದಿಗಿನ ತನ್ನ ಸಖ್ಯವನ್ನು ಕಳೆದುಕೊಂಡಿದ್ದು, ಎಲ್ಲಾ ರೀತಿಯ ಮೈತ್ರಿಯನ್ನು ಕಡಿದುಕೊಂಡಿರುವದಾಗಿ ಘೊಷಿಸಿಕೊಂಡಿದೆ. ರಾಜ್ಯಸಭಾ ಚುನಾವಣೆಯ ವೇಳೆ ಬಿಟಿಪಿ ಪಕ್ಷವು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಸಾಕಷ್ಟು ಬೆಂಬಲ ನೀಡಿತ್ತು. ಇದರೊಂದಿಗೆ ಸಚಿನ್ ಪೈಲಟ್ ಬಣ ಕಾಂಗ್ರೆಸ್ ತೊರೆದಾಗ ನೈತಿಕವಾಗಿ ಬೆಂಬಲವನ್ನೂ ಸೂಚಿಸಿತ್ತು.
ಈಗ ಎಲ್ಲಾವೂ ಉಲ್ಟಾ ಪಲ್ಟಾ ಆಗಿದೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ದಕ್ಷಿಣ ರಾಜಸ್ಥಾನದಲ್ಲಿ ತನ್ನ ಪ್ರಾಬಲ್ಯವನ್ನು ಸಾಧಿಸಿದ್ದ ಬಿಟಿಪಿಯನ್ನು ರಾಜಕೀಯವಾಗಿ ಮುಗಿಸಲು ಈ ಮೈತ್ರಿ ರಚಿಸಲಾಗಿದೆ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ. ಏನೇ ಅದರೂ, ರಾಜಕೀಯವಾಗಿ ಎಂದೂ ಒಂದಾಗಲು ಸಾಧ್ಯವಿಲ್ಲ ಎಂಬಂತಿದ್ದ ಕಾಂಗ್ರೆಸ್-ಬಿಜೆಪಿ ಪಕ್ಷಗಳೆರಡೂ ಮೈತ್ರಿ ರಚಿಸಿದ್ದು ಮಾತ್ರ ರಾಜಕೀಯದಲ್ಲಿ ಯಾರೂ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ ಎಂಬ ಮಾತನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.