ಹಾಥ್ರಾಸ್ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ನIಡುವ ಬದಲು ಬಿಜೆಪಿ ಸರ್ಕಾರವು ಆರೋಪಿಗಳನ್ನು ರಕ್ಷಿಸುತ್ತಿದೆ ಎಂದು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಹೇಳಿದ್ದಾರೆ.
ಯುವ ಕಾಂಗ್ರೆಸ್ ವತಿಯಿಂದ ದೆಹಲಿಯ ಜಂತರ್ ಮಂತರ್‌ನಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಹಾಥ್ರಾಸ್‌ನಲ್ಲಿ ನಡೆದ ಘಟನೆ ಅಮಾನವೀಯ. ಅತ್ಯಾಚಾರದಿಂದ ಹಿಡಿದು, ಸಂತ್ರಸ್ಥೆಯ ಪೋಷಕರ ಗೈರಿನಲ್ಲಿ ಸಂತ್ರಸ್ಥೆಯ ಶವವನ್ನು ಸುಟ್ಟಿದ್ದು ಕೂಡಾ ಅಮಾನವೀಯ ಘಟನೆ. ಈ ಅನ್ಯಾಯದ ವಿರುದ್ದ ನಾವು ಹೋರಾಟ ಮಾಡುತ್ತಲೇ ಇರುತ್ತೇವೆ, ಎಂದು ಹೇಳಿದ್ದಾರೆ.
“ಯೋಗಿ ರಾಜ್ಯದಲ್ಲಿ ಸಂಪೂರ್ಣ ವ್ಯವಸ್ಥೆಯು ಜಂಗಲ್ ರಾಜ್ ಆಗಿ ಬದಲಾಗಿದೆ. ಧರ್ಮವನ್ನು ಗುತ್ತಿಗೆ ಪಡೆದವರು, ಮಾನವೀಯತೆಗೂ ಹೀಂದೂ ಸಂಸ್ಕೃತಿಗೂ ಅಪಚಾರವೆಸಗಿದ್ದಾರೆ. ಸಂತ್ರಸ್ಥೆಗೆ ನ್ಯಾಯ ಕೊಡಿಸುವ ಬದಲು, ಅವಳ ಪೋಷಕರನ್ನು ಬಂಧಿಸಲು ಯೋಗಿ ಪ್ರಯತ್ನಿಸುತ್ತಿದ್ದಾರೆ,” ಎಂದು ಶ್ರೀನಿವಾಸ್ ಆರೋಪಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಸತ್ಯಕ್ಕಾಗಿ ದನಿ ಎತ್ತುವವರನ್ನು ಅವಮಾನಿಸಲಾಗುತ್ತದೆ ಇಲ್ಲವಾದರೆ ಕೊಲ್ಲಲಾಗುತ್ತದೆ. ಜಂಗಲ್ ರಾಜ್‌ನ ಸತ್ಯವನ್ನು ಹೊರಗೆಡುವುತ್ತಾರೆಂಬ ಭಯದಲ್ಲಿ ಪತ್ರಕರ್ತರನ್ನು ಕೊಲಲಾಗುತ್ತದೆ. ಇದು ಕೃಷಿಕ ವಿರೋಧಿ, ಯುವ ವಿರೋಧಿ, ದಲಿತ ವಿರೋಧಿ, ಪತ್ರಕರ್ತ ವಿರೋಧಿ ಸರ್ಕಾರ. ಒಂದೇ ಮಾತಲ್ಲಿ ಹೇಳಬೇಕಾದರೆ, ಇದು ಸತ್ಯ ಮತ್ತು ಸಂವಿಧಾನ ವಿರೋಧಿ ಸರ್ಕಾರ, ಎಂದು ಯೋಗಿ ಆಡಳಿತವನ್ನು ಟೀಕಿಸಿದ್ದಾರೆ.