ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ), ಪಂಜಾಬ್- ಮಹಾರಾಷ್ಟ್ರ ಕೋಅಪರೇಟಿವ್ ಬ್ಯಾಂಕ್(ಪಿಎಂಸಿ) ಹಗರಣಗಳ ಬಳಿಕ ಇದೀಗ ಯೆಸ್ ಬ್ಯಾಂಕ್ ಪತನವಾಗಿದೆ. ಬರೋಬ್ಬರಿ ಮೂರು ಲಕ್ಷ ಕೋಟಿ ಸಾಲದ ಭಾರದಲ್ಲಿ ಬ್ಯಾಂಕು ಕುಸಿದು ಬಿದ್ದಿದೆ. ದೇಶದ ಖಾಸಗೀ ವಲಯದ ನಾಲ್ಕನೇ ಅತಿದೊಡ್ಡ ಬ್ಯಾಂಕಿನ ಈ ಪತನ, ಸಹಜವಾಗೇ ಈಗಾಗಲೇ ಕುಂಟುತ್ತಿದ್ದ ದೇಶದ ಅರ್ಥವ್ಯವಸ್ಥೆ ಊರುಗೋಲು ಹಿಡಿಯುವಂತೆ ಮಾಡಿದೆ.
2004ರಲ್ಲಿ ಆರಂಭವಾದ ಬ್ಯಾಂಕ್, ದೇಶದ ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಕೊಡುಗೈ ದಾನಿಯಂತೆ ಸಾಲ ನೀಡಿತ್ತು. ಇತರೆ ಯಾವುದೇ ಬ್ಯಾಂಕುಗಳಲ್ಲಿ ಸಾಲ ಪಡೆಯುವ ಅರ್ಹತೆ ಕಳೆದುಕೊಂಡ ಕಾರ್ಪೊರೇಟ್ ಕುಳಗಳನ್ನು ಹುಡುಕಿ-ಹುಡುಕಿ ಕರೆದು ಸಾಲ ನೀಡುವ ಮೂಲಕ ಅಧಿಕ ಬಡ್ಡಿ ಮತ್ತು ಸಾಲದ ಭದ್ರತೆಯ ಆಸ್ತಿ ವಶಪಡಿಸಿಕೊಳ್ಳುವ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ ಭಾರೀ ಬೆಳವಣಿಗೆ ಮತ್ತು ಷೇರುಪೇಟೆಯ ಲಾಭವನ್ನೂ ಬ್ಯಾಂಕ್ ಕಂಡಿತ್ತು. ಆದರೆ, ಅದೇ ಅಡ್ಡದಾರಿಯ ವ್ಯಾವಹಾರಿಕ ಅತಿಬುದ್ಧಿವಂತಿಕೆಯೇ ಈಗ ಬ್ಯಾಂಕಿನ ಜೊತೆಗೆ ದೇಶದ ಆರ್ಥಿಕತೆಯನ್ನೇ ಮಕಾಡೆ ಮಲಗಿಸುವ ಹಂತಕ್ಕೆ ತಲುಪಿದೆ.
ಬಹುಕೋಟಿ ರಾಫೇಲ್ ಯುದ್ಧ ವಿಮಾನ ಖರೀದಿ ವ್ಯವಹಾರದ ಭಾಗವಾಗಿರುವ ಅನಿಲ್ ಅಂಬಾನಿಯ ರಿಲೆಯನ್ಸ್ ಸಮೂಹ, ಎಸ್ಸೆಲ್ ಸಮೂಹ, ಕುಖ್ಯಾತಿಯ ಡಿಎಚ್ ಎಫ್ ಎಲ್, ಐಎಲ್ ಅಂಡ್ ಎಫ್ ಎಸ್ ಎಲ್, ವೊಡಾಫೋನ್ ಸೇರಿದಂತೆ ದೇಶದ ದೊಡ್ಡ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳೇ ಯೆಸ್ ಬ್ಯಾಂಕಿನ ಇಂದಿನ ದಿವಾಳಿ ಸ್ಥಿತಿಗೆ ಕಾರಣ ಎಂದು ಸ್ವತಃ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸಚಿವರು ಈ ಹೇಳಿಕೆ ಹೊರಬಿದ್ದು ಮೂರು ದಿನಗಳು ಕಳೆದರೂ, ಈವರೆಗೆ ಬ್ಯಾಂಕಿನ ಬಹುಕೋಟಿ ವಂಚನೆಗೆ ಸಂಬಂಧಿಸಿದಂತೆ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಅವರನ್ನು ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ ಹೊರತು, ಇನ್ನಾವುದೇ ಬಹುಕೋಟಿ ವಂಚಕರಿಗೆ ಕನಿಷ್ಠ ವಿಚಾರಣೆ ನಡೆಸುವ ಗೋಜಿಗೂ ಹೋಗಿಲ್ಲ!
ಪಿಎಂಸಿ ಬ್ಯಾಂಕ್ ಪ್ರಕರಣದಲ್ಲಿ ಕೂಡ ಬ್ಯಾಂಕಿಗೆ ವಂಚಿಸುವ ಮೂಲಕ ಅದರ ಪತನಕ್ಕೆ ಕಾರಣವಾದ ಆರೋಪ ಹೊತ್ತಿದ್ದ ಹಲವು ಕಾರ್ಪೊರೇಟ್ ಸಂಸ್ಥೆಗಳ ಪೈಕಿ ಎಚ್ ಡಿಐಎಲ್ ಸಂಸ್ಥೆಯ ಮಾಲೀಕರು ಸೇರಿದಂತೆ ಕೆಲವು ಮಂದಿಯನ್ನು ಮಾತ್ರ ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಆದರೆ, ಉಳಿದ ಪ್ರಭಾವಿ ಕಾರ್ಪೊರೇಟ್ ಕುಳಗಳ ವಿಷಯದಲ್ಲಿ ತನಿಖಾ ಸಂಸ್ಥೆಗಳು ಜಾಣಮರೆವಿಗೆ ಶರಣಾಗಿದ್ದವು. ಇದೀಗ ಯೆಸ್ ಬ್ಯಾಂಕ್ ವಿಷಯದಲ್ಲಿಯೂ ಅದೇ ವರಸೆ ಪುನರಾವರ್ತನೆಯಾಗುವ ಸಾಧ್ಯತೆ ಕಾಣುತ್ತಿದ್ದು, ಮುಖ್ಯವಾಗಿ ಬಹುಕೋಟಿ ಬಾಕಿದಾರರ ಪಟ್ಟಿಯಲ್ಲಿರುವ ಪ್ರಭಾವಿ ಉದ್ಯಮಿಗಳ ಹೆಸರು ನೋಡಿದರೆ ತನಿಖಾ ನಿಷ್ಪಕ್ಷಪಾತವಾಗಿ ಸಾಗುವ ಬಗ್ಗೆ ಅನುಮಾನಗಳು ಎದ್ದಿವೆ.
ಈ ನಡುವೆ, ಇಡೀ ಪ್ರಕರಣ ರಾಜಕೀಯ ಕೆಸರೆರಚಾಟದ ವಸ್ತುವಾಗಿದ್ದು, ಸ್ವತಃ ಹಣಕಾಸು ಸಚಿವೆಯೇ ಇಂತಹ ಹೇಯ ವರಸೆಗೆ ಹಗರಣ ಕುರಿತ ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲೇ ಚಾಲನೆ ನೀಡಿದ್ಧಾರೆ. ಬ್ಯಾಂಕಿನ ಪತನಕ್ಕೆ ಹಿಂದಿನ ಯುಪಿಎ ಸರ್ಕಾರವೇ ಕಾರಣ. ಅದರ ಆಡಳಿತ ಅವಧಿಯಲ್ಲೇ ಬ್ಯಾಂಕು ಅವ್ಯವಹಾರದಲ್ಲಿ ಮುಳುಗಿತ್ತು. ಬ್ಯಾಂಕಿನ ಎನ್ ಪಿಎ ಏರಿತ್ತು. ಆದರೆ, ಅದನ್ನೆಲ್ಲಾ ಗಮನಿಸಿಯೂ ಕಾಂಗ್ರೆಸ್ ನೇತೃತ್ವದ ಸರ್ಕಾರ ಆ ಬಗ್ಗೆ ಜಾಣಮೌನ ವಹಿಸಿತ್ತು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದರು. ಅವರ ಆ ಹೇಳಿಕೆಯ ಬೆನ್ನಿಗೇ ಬಿಜೆಪಿ ಐಟಿ ಸೆಲ್ ಪ್ರಮುಖ ಅಮಿತ್ ಮಾಳವೀಯಾ, ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ನಡುವಿನ ಕಲಾಕೃತಿಯೊಂದರ ಮಾರಾಟದ ವಿಷಯ ಪ್ರಸ್ತಾಪಿಸಿ, ದೇಶದ ಎಲ್ಲಾ ಹಣಕಾಸು ಹಗರಣಗಳ ಹಿಂದೆ ಗಾಂಧಿ ಕುಟುಂಬದ ಕೈವಾಡವಿದೆ ಎಂದು ಆರೋಪಿಸಿದ್ದರು.
ದೇಶದ ಆರ್ಥಿಕ ವ್ಯವಸ್ಥೆ ಹಳಿತಪ್ಪಿರುವಾಗ, ಇಡೀ ಬ್ಯಾಂಕಿಂಗ್ ವಲಯವೇ ಎನ್ ಪಿಎ ಮತ್ತು ಅಕ್ರಮ ವ್ಯವಹಾರಗಳಿಂದಾಗಿ ದಿವಾಳಿಯ ಅಂಚಿನಲ್ಲಿರುವಾಗ ಅದನ್ನು ಸರಿಪಡಿಸುವ ಮೂಲಕ ದೇಶದ ಇಡೀ ವ್ಯವಸ್ಥೆಯ ಪತನವನ್ನು ತಡೆಯುವ ನಿಟ್ಟಿನಲ್ಲಿ ರಚನಾತ್ಮಕ ನೀತಿ ಮತ್ತು ಯೋಜನೆಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾದ ಸರ್ಕಾರ ಮತ್ತು ಹಣಕಾಸು ಸಚಿವರ ಮುಂದೆ, ಸದ್ಯಕ್ಕೆ ದೇಶದ ಬ್ಯಾಂಕಿಂಗ್ ಮತ್ತು ಆರ್ಥಿಕ ವಲಯವನ್ನು ಪಾರು ಮಾಡುವ ಯಾವ ಸ್ಪಷ್ಟ ಯೋಜನೆ- ನೀತಿಗಳೂ ಇಲ್ಲ ಎಂಬುದು ಜಗಜ್ಜಾಹೀರು. ಅಂತಹ ಸ್ಥಿತಿಯಲ್ಲಿ ಪ್ರಮುಖ ಬ್ಯಾಂಕೊಂದು ಪತನವಾದರೆ, ಅದನ್ನು ಸರಿಪಡಿಸುವ ಬಗ್ಗೆ ಯೋಚಿಸುವ ಬದಲು, ಆಡಳಿತ ಪಕ್ಷವೇ ಇಂತಹ ಗಂಭೀರ ವಿಷಯದಲ್ಲಿ ಕ್ಷುಲ್ಲಕ, ನಾಚಿಕೆಗೇಡಿನ ರಾಜಕೀಯ ಕೆಸರೆರಚಾಟದ ಕೀಳು ವರಸೆ ಪ್ರದರ್ಶನಕ್ಕೆ ಇಳಿದಿದೆ. ನಿಜವಾಗಿಯೂ ದೇಶದ ‘ಅಚ್ಚೇದಿನ’ಗಳ ನಿರೀಕ್ಷೆಯಲ್ಲಿರುವ ಅಸಲೀ ದೇಶಪ್ರೇಮಿಗಳ ಪಾಲಿಗೆ ಸರ್ಕಾರ ಮತ್ತು ಆಡಳಿತ ಪಕ್ಷದ ಈ ವರಸೆ, ಕುಸಿದ ಬ್ಯಾಂಕು ನೀಡಿದ ಆಘಾತಕ್ಕಿಂತ ದೊಡ್ಡ ಆಘಾತ ನೀಡಿದೆ ಎಂಬುದು ದಿಟ.
ಸಹಜವಾಗೇ, ಪ್ರತಿಪಕ್ಷ ಕಾಂಗ್ರೆಸ್ ಕೂಡ ಆಡಳಿತ ಪಕ್ಷದ ವರಸೆಯನ್ನೇ ಅನುಕರಿಸಿದ್ದು, ನಿರ್ಮಲಾ ಮತ್ತು ಮಾಳವೀಯ ಅವರ ಆರೋಪಗಳಿಗೆ ತಿರುಗೇಟು ನೀಡಿದೆ. ‘ಯೆಸ್ ಬ್ಯಾಂಕ್ ಆರಂಭವಾಗಿರುವುದೇ 2004ರಲ್ಲಿ. ಆದರೆ, ಅದರ ಬಾಕಿ ಸಾಲದ ಪ್ರಮಾಣದ ಹತ್ತಾರು ಪಟ್ಟು ಏರಿದ್ದು ಯಾರ ಅವಧಿಯಲ್ಲಿ ಮತ್ತು ಏಕೆ ಎಂಬುದನ್ನು ಹಣಕಾಸು ಸಚಿವರು ದೇಶದ ಜನತೆಗೆ ತಿಳಿಸಲಿ. 2014ರಲ್ಲಿ ಕೇವಲ 55,633 ಕೋಟಿಯಷ್ಟಿದ್ದ ಸಾಲದ ಪ್ರಮಾಣ, 2019ರಲ್ಲಿ 2.41 ಲಕ್ಷ ಕೋಟಿಗೆ ಏರಿದೆ. ಅದರಲ್ಲೂ ನೋಟು ರದ್ದತಿಯ ಬಳಿಕ ಬಾಕಿ ಸಾಲದ ಪ್ರಮಾಣ ಶೇ.100ರಷ್ಟು ದಿಢೀರ್ ಏರಿಕೆ ಕಂಡಿದ್ದು ಏಕೆ? 2016ರ ಮಾರ್ಚ್ ನಲ್ಲಿ 98,210 ಕೋಟಿ ಇದ್ದ ಬಾಕಿ ಸಾಲದ ಪ್ರಮಾಣ, 2018ರ ಮಾರ್ಚ್ ಅಂತ್ಯದ ಹೊತ್ತಿಗೆ ದಿಢೀರನೇ 2.03 ಲಕ್ಷ ಕೋಟಿಗೆ ಏರಿದ್ದರ ಹಿಂದಿನ ಮರ್ಮವೇನು’ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಪ್ರಶ್ನಿಸಿದ್ದಾರೆ.
ಹಾಗೆಯೇ, ಕಲಾಕೃತಿಯ ಕುರಿತು, ತಮ್ಮ ತಂದೆ ರಾಜೀವ್ ಗಾಂಧಿಯವರ ಬಳಿ ಇದ್ದ ಎಂ ಎಫ್ ಹುಸೇನ್ ಅವರ ಕಲಾಕೃತಿಯನ್ನು ಹತ್ತು ವರ್ಷಗಳ ಹಿಂದೆ ಪ್ರಿಯಾಂಕಾ ಗಾಂಧಿ, ಬ್ಯಾಂಕ್ ಮಾಲೀಕ ರಾಣಾ ಕಪೂರ್ ಅವರಿಗೆ ಮಾರಾಟ ಮಾಡಿದ್ದಕ್ಕೂ, ಐದು ವರ್ಷಗಳ ಮೋದಿ ಆಡಳಿತದಲ್ಲಿ ಬ್ಯಾಂಕಿನ ಬಾಕಿ ಸಾಲದ ಪ್ರಮಾಣ 2 ಲಕ್ಷ ಕೋಟಿಯಷ್ಟು ಹೆಚ್ಚಳವಾಗುವುದಕ್ಕೂ ಏನು ಸಂಬಂಧ? ಎಂದೂ ಅವರು ಪ್ರಶ್ನಿಸಿದ್ದಾರೆ.
ಅಲ್ಲಿಗೆ ನಿರ್ದಿಷ್ಟವಾಗಿ ಯೆಸ್ ಬ್ಯಾಂಕಿನ ಠೇವಣಿದಾರರು ತಮ್ಮ ಬೆವರಿನ ಹಣದ ಬಗ್ಗೆ ಮತ್ತು ಒಟ್ಟಾರೆ ದೇಶದ ಜನ ನಾಳೆಯ ಭವಿಷ್ಯದ ಹಣಕಾಸು ಸ್ಥಿತಿಯ ಬಗ್ಗೆ, ವ್ಯಾಪಾರ- ಉದ್ಯೋಗದ ಬಗ್ಗೆ ಆತಂಕದಲ್ಲಿರುವಾಗ, ಯಾವ ಕ್ಷಣದಲ್ಲಿ ಯಾವ ಬ್ಯಾಂಕ್ ಮುಚ್ಚಿಹೋಗುವುದೋ, ಯಾವ ಸರ್ಕಾರಿ ಸಂಸ್ಥೆ ದಿವಾಳಿಯಾಗಿ ಬಾಗಿಲುಮುಚ್ಚುವುದೋ, ಯಾವ ಕಾರ್ಖಾನೆ ಲಾಕ್ ಔಟ್ ಆಗುವುದೋ ಎಂಬ ಭೀತಿಯಲ್ಲಿದ್ದರೆ, ದೇಶದ ಚುಕ್ಕಾಣಿ ಹಿಡಿದಿರುವ ಮತ್ತು ಆಡಳಿತದ ಮೇಲೆ ಹದ್ದಿನ ಕಣ್ಣಿಡಬೇಕಾದ ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಪರಸ್ಪರ ರಾಜಕೀಯ ಲಾಭ-ನಷ್ಟದ ಮೇಲಾಟವೇ ಮುಖ್ಯವಾಗಿದೆ.
ಯೆಸ್ ಬ್ಯಾಂಕ್ ಅವ್ಯವಹಾರಕ್ಕೆ ನಿಜವಾಗಿಯೂ ರಾಜಕೀಯೇತರವಾಗಿ ಯಾರು ಹೊಣೆ, ವಂಚನೆ ನಡೆದಿದ್ದು ಹೇಗೆ, ಯಾರೆಲ್ಲಾ ಪಾಲುದಾರರು, ಕಳೆದ ಕೆಲವು ವರ್ಷಗಳಿಂದ ಬ್ಯಾಂಕ್ ಬಾಕಿ ಸಾಲ ಮತ್ತು ವಸೂಲಾದ ಸಾಲ(ಎನ್ ಪಿಎ) ಪ್ರಮಾಣದಲ್ಲಿ ನೂರಾರು ಪಟ್ಟು ಏರಿಕೆಯಾಗುತ್ತಿದ್ದರೂ, ಆ ವ್ಯವಸ್ಥೆಯ ಕಣ್ಗಾವಲು ಸಂಸ್ಥೆ ಆರ್ ಬಿಐ ಏಕೆ ಕಣ್ಣುಮುಚ್ಚಿ ಕೂತಿತ್ತು. ತೀರಾ ವರ್ಷದ ಹಿಂದೆ ಬ್ಯಾಂಕ್ ಆಡಳಿತ ಮಂಡಳಿ ಬದಲಾಯಿಸಿದ್ದು ಹೊರತುಪಡಿಸಿದ್ದರೂ, ಆರ್ ಬಿಐನ ಆ ಕ್ರಮ ತೀರಾ ತಡವಾಗಿತ್ತು ಮತ್ತು ತೀರಾ ಅತ್ಯಲ್ಪ ಎಂಬ ಮಾತುಗಳೂ ಬ್ಯಾಂಕಿಂಗ್ ವಲಯದ ದಿಗ್ಗಜರಿಂದಲೇ ಕೇಳಿಬರುತ್ತಿವೆ. ಹಾಗಿದ್ದರೆ, ಈ ಹಗರಣದಲ್ಲಿ ಆರ್ ಬಿಐ ಮತ್ತು ಹಣಕಾಸು ಸಚಿವಾಲಯಗಳ ಪಾತ್ರವೇನು? ಆರ್ ಬಿಐ ಹಾಲಿ ಗವರ್ನರ್ ಯಾಕೆ ಈ ವಿಷಯದಲ್ಲಿ ಮುಂಜಾಗ್ರತೆ ವಹಿಸಲಿಲ್ಲ? ಎಂಬ ಪ್ರಶ್ನೆಗಳೊಂದಿಗೆ, ಈಗಲೂ ತನಿಖಾ ಸಂಸ್ಥೆಗಳು ಯಾಕೆ ಬಹುಕೋಟಿ ವಂಚಕ ಬೃಹತ್ ಕಾರ್ಪೊರೇಟ್ ಕುಳಗಳನ್ನು ಕಂಬಿ ಹಿಂದೆ ತಳ್ಳುವ ಬದಲು, ಜನರ ಕಣ್ಣೊರೆಸುವ ತಂತ್ರ ಹೆಣೆಯುತ್ತಿವೆ ಎಂಬ ಪ್ರಶ್ನೆಗಳೂ ಇವೆ.
ಜೊತೆಗೆ, ಒಂದು ಖಾಸಗಿ ಬ್ಯಾಂಕ್ ಮತ್ತು ಕೆಲವು ಪ್ರಭಾವಿ ಕಾರ್ಪರೇಟ್ ಕುಳಗಳು ಹಾಗೂ ಸರ್ಕಾರದ ಆಯಕಟ್ಟಿನ ಮಂದಿಯ ವಿಷವರ್ತುಲದ ಪಾಪದ ಕೂಸಾದ ಈ ಹಗರಣದಲ್ಲಿ ಕೊಚ್ಚಿಹೋಗಿರುವ 3 ಲಕ್ಷ ಕೋಟಿ ಹಣವನ್ನು ತುಂಬಲು ಸಾರ್ವಜನಿಕ ವಲಯದ ಎಸ್ ಬಿಐ ಬ್ಯಾಂಕಿನ ಜನರ ತೆರಿಗೆ ಹಣವನ್ನು ಬಳಸುವುದು ಯಾವ ನ್ಯಾಯ ಎಂಬ ಮೂಲಭೂತ ಪ್ರಶ್ನೆ ಕೂಡ ಇದೆ.
ಆದರೆ, ಸದ್ಯಕ್ಕೆ ಇಂತಹ ಪ್ರಶ್ನೆಗಳನ್ನು ಮರೆಮಾಚಿ, ಕಾಂಗ್ರೆಸ್, ನೆಹರು, ಮನಮೋಹನ್ ಸಿಂಗ್, ಗಾಂಧಿ ಕುಟುಂಬದಂತಹ ಸಂಗತಿಗಳನ್ನೇ ಮುಂದುಮಾಡಿ ಇಡೀ ಪ್ರಕರಣವನ್ನು ಒಂದು ಪಕ್ಷ, ಒಂದು ಕುಟುಂಬದ ಮೇಲೆ ಎಳೆಯುವ ತಂತ್ರ ಬಿಜೆಪಿಯದ್ದು. ಅದಕ್ಕೆ ತಕ್ಕಂತೆ ಕಾಂಗ್ರೆಸ್ ಕೂಡ ಬಿಜೆಪಿಯ ಅದೇ ಅಸ್ತ್ರಗಳನ್ನೇ ಬಳಸಿ ತಿರುಗೇಟು ನೀಡುವಲ್ಲಿ ವ್ಯಸ್ತವಾಗಿದೆ. ಹಾಗಾಗಿ ಮೂಲಭೂತ ಪ್ರಶ್ನೆಗಳು ಮತ್ತು ಜನರ ಮೂಲಭೂತ ಭಯ ಹಾಗೆಯೇ ಮುಂದುವರಿಯಲಿವೆ; ಈ ನಡುವೆ, ಸದ್ದಿಲ್ಲದೆ ಮತ್ತೊಂದು ಬ್ಯಾಂಕ್ ಅಥವಾ ಮತ್ತೊಂದು ಉದ್ಯಮ ಸಂಸ್ಥೆ, ಅಥವಾ ಮತ್ತೊಂದು ಸಾರ್ವಜನಿಕ ಉದ್ದಿಮೆ ಪತನದ ಪ್ರಪಾತದ ಅಂಚಿಗೆ ತಲುಪಲಿದೆ. ಸದ್ಯ ಭಾರತದ ಆರ್ಥಿಕತೆಯ ಚಹರೆ ಇದು!