ರಾಜ್ಯ ಬಿಜೆಪಿ ಸರ್ಕಾರದ ಯೂಟರ್ನ್ ಆಡಳಿತದ ವರಸೆಗೆ ರಾತ್ರಿ ಕರ್ಫ್ಯೂ ವಿಷಯ ಹೊಸ ಸೇರ್ಪಡೆ.
ರೂಪಾಂತರ ಹೊಂದಿದ ಹೊಸ ಕರೋನಾ ವೈರಾಣು ಹಲವು ದೇಶಗಳಲ್ಲಿ ಭೀತಿ ಹುಟ್ಟಿಸಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಕೇಂದ್ರ ಸರ್ಕಾರದ ಸೂಚನೆಯಂತೆ ರಾತ್ರಿ ಕರ್ಫ್ಯೂ ಜಾರಿಮಾಡುವುದಾಗಿ ಹೇಳಲಾಗಿತ್ತು. ವಾಸ್ತವವಾಗಿ ಬುಧವಾರ ರಾತ್ರಿಯಿಂದಲೇ ಅದನ್ನು ಜಾರಿಗೆ ತರಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಬಳಿಕ ಗುರುವಾರಕ್ಕೆ ಮುಂದೂಡಲಾಗಿತ್ತು. ಗುರುವಾರ ರಾತ್ರಿಯಿಂದ ಜನವರಿ 2ರವರೆಗೆ ರಾಜ್ಯಾದ್ಯಂತ ರಾತ್ರಿ ಕರ್ಫ್ಯೂ ಜಾರಿಗೊಳಿಸಿ ಅಧಿಕೃತ ಆದೇಶವನ್ನೂ ಹೊರಡಿಸಲಾಗಿತ್ತು.
ಆದರೆ, ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಜನರೆಲ್ಲಾ ಮಲಗಿರುವಾಗ, ಬಹುತೇಕ ಜನಸಂಚಾರವೇ ಸ್ಥಗಿತವಾಗಿರುವಾಗ ಕರೋನಾ ಹೇಗೆ ಹರಡುತ್ತದೆ? ಹಗಲೆಲ್ಲಾ ಜಾತ್ರೆ, ಸಂತೆ, ಮಾರುಕಟ್ಟೆ, ಚುನಾವಣಾ ರ್ಯಾಲಿಗಳಿಗೆ ಅವಕಾಶ ನೀಡಿ, ರಾತ್ರಿ ರಾಜ್ಯಾದ್ಯಂತ ಕರ್ಫ್ಯೂ ಹೇರುವುದು ಯಾವ ವಿವೇಚನೆ ಎಂಬ ಪ್ರಶ್ನೆಗಳು ಕೇಳಿಬಂದಿದ್ದವು. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ಈ ನಗೆಪಾಟಲಿನ ಆದೇಶದ ಬಗ್ಗೆ ವ್ಯಾಪಕ ಟೀಕೆ, ವಿಡಂಬನೆಗಳು ಕೇಳಿಬಂದಿದ್ದವು. ಪ್ರತಿಪಕ್ಷಗಳು ಮಾತ್ರವಲ್ಲದೆ, ಬಸನಗೌಡ ಪಾಟೀಲ್ ಯತ್ನಾಳ್, ಎಚ್ ವಿಶ್ವನಾಥ್ ಅವರಂಥ ಬಿಜೆಪಿಯ ಹಿರಿಯ ನಾಯಕರು ಕೂಡ ಮುಖ್ಯಮಂತ್ರಿ ಮತ್ತು ವೈದ್ಯಕೀಯ ಶಿಕ್ಷಣ ಸಚಿವರ ಅಂತಹ ನಿರ್ಧಾರದ ಬಗ್ಗೆ ಕಟುವ್ಯಂಗ್ಯದ ಟೀಕೆಗಳನ್ನು ಮಾಡಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಅಲ್ಲದೆ, ಸರ್ಕಾರ ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆಯನ್ನು ಗುರಿಯಾಗಿಟ್ಟುಕೊಂಡು ಈ ರಾತ್ರಿ ಕರ್ಫ್ಯೂ ಹೇರಿದೆ. ಈ ಹಿಂದೆ ಮೊಹರಂ ವೇಳೆ ಕೂಡ ಹೀಗೆಯೇ ಇನಿಲ್ಲದ ನಿರ್ಬಂಧಗಳನ್ನು ಹೇರಿದ್ದ ಬಿಜೆಪಿ ಸರ್ಕಾರ, ಗಣೇಶನ ಹಬ್ಬದ ವೇಳೆ ಯಾವುದೇ ಅಂತಹ ನಿರ್ಬಂಧಗಳನ್ನು ಹೇರಿರಲಿಲ್ಲ. ಒಂದು ಸಮುದಾಯ, ಧರ್ಮವನ್ನು ಗುರಿಯಾಗಿಟ್ಟುಕೊಂಡು ಕೋವಿಡ್ ನೆಪದಲ್ಲಿ ಹೀಗೆ ನಿರ್ಬಂಧಗಳನ್ನು ಹೇರುವ ಮೂಲಕ ಆ ಸಮುದಾಯಗಳ ಆಚರಣೆಗಳಿಗೆ ಅಡ್ಡಿಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳೂ ಕೇಳಿಬಂದಿದ್ದವು. ಜೊತೆಗೆ, ಹೊಸ ವರ್ಷಾಚರಣೆಯಂತಹ ಆಧುನಿಕ ಆಚರಣೆಗಳನ್ನು ವಿರೋಧಿಸುವ ಸಂಘಪರಿವಾರವನ್ನು ಮೆಚ್ಚಿಸುವ ಉದ್ದೇಶವೂ ಈ ರಾತ್ರಿ ಕರ್ಫ್ಯೂ ಹಿಂದೆ ಇರಬಹುದು ಎಂಬ ಟೀಕೆಗಳು ವ್ಯಕ್ತವಾಗಿದ್ದವು.
ಜೊತೆಗೆ ಕ್ರಿಸ್ ಮಸ್ ಮತ್ತು ಹೊಸ ವರ್ಷದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ತಡರಾತ್ರಿವರೆಗೆ ನಡೆಯುವ ಕ್ಲಬ್, ಹೋಟೆಲ್, ಬಾರ್ ಅಂಡ್ ರೆಸ್ಟೋರಂಟ್ ಮುಂತಾದ ಉದ್ಯಮಗಳಿಗೆ ವರ್ಷದ ಪ್ರಮುಖ ವಹಿವಾಟು ನಡೆಯುವ ಈ ಅವಧಿಯಲ್ಲೇ ಇಂತಹ ನಿರ್ಬಂಧ ಹೇರುವ ಮೂಲಕ ಸರ್ಕಾರದ ಆಯಕಟ್ಟಿನ ಸ್ಥಾನದಲ್ಲಿರುವ ಕೆಲವರು ‘ವ್ಯವಹಾರ ಕುದುರಿಸಿರುವ’ ಗಂಭೀರ ಆರೋಪವೂ ಕೇಳಿಬಂದಿತ್ತು.
ಅದೆಲ್ಲಕ್ಕಿಂತ ಮುಖ್ಯವಾಗಿ ರಾಜ್ಯದಲ್ಲಿ ರಾತ್ರಿ ವೇಳೆ ಮಾತ್ರವೇ ಕರೋನಾ ಹರಡುತ್ತದೆಯೇ? ಹಗಲು ವೇಳೆ ಎಲ್ಲಾ ಜನಜಂಗುಳಿಯ ಚಟುವಟಿಕೆಗಳಿಗೂ ಮುಕ್ತವಾಗಿ ಬಿಟ್ಟು, ರಾತ್ರಿ ಮಾತ್ರ ನಿರ್ಬಂಧ ಹೇರಿರುವುದರ ಹಿಂದೆ ಯಾವ ವೈಜ್ಞಾನಿಕ ತರ್ಕವಿದೆ? ಯಾವ ತಜ್ಞರ ಸಲಹೆ ಮೇರೆಗೆ ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗಿದೆ ಎಂಬ ಗಂಭೀರ ಪ್ರಶ್ನೆಗಳು ಸರ್ಕಾರ ಮತ್ತು ಸ್ವತಃ ಮುಖ್ಯಮಂತ್ರಿಗಳಿಗೆ ಇರಿಸುಮುರಿಸು ತಂದಿದ್ದವು.
ಅಷ್ಟೇ ಅಲ್ಲ; ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪದೇಪದೇ ಆಗುತ್ತಿರುವ ಇಂತಹ ಯಡವಟ್ಟುಗಳ ಬಗ್ಗೆ ಕೂಡ ವ್ಯಾಪಕ ಚರ್ಚೆ ನಡೆದಿತ್ತು. ಒಟ್ಟಾರೆ ಸರ್ಕಾರ ನಡೆಸುವವರಿಗೆ ವಿವೇಚನೆ ಇಲ್ಲ; ಸಾಮಾನ್ಯ ತಿಳಿವಳಿಕೆಯ ಬಲದ ಮೇಲೆ ಆಡಳಿತ ನಡೆಸುವ ಬದಲು ಬಿಜೆಪಿ ಮತ್ತು ಸಂಘಪರಿವಾರದ ಸಿದ್ಧಾಂತ, ಕೋಮು ದ್ವೇಷ, ಮತೀಯ ಭಾವನೆಗಳ ಆಧಾರದ ಮೇಲೆ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಅಂತಹದ್ದಕ್ಕೆ ಈ ರಾತ್ರಿ ಕರ್ಫ್ಯೂ ಕೂಡ ಮತ್ತೊಂದು ಸೇರ್ಪಡೆ ಎಂದೇ ಹೇಳಲಾಗಿತ್ತು.
ಬಳಿಕ ವ್ಯಾಪಕ ಸಾರ್ವಜನಿಕರು ಮತ್ತು ಸ್ವಪಕ್ಷೀಯರು ಸೇರಿದಂತೆ ರಾಜಕೀಯ ವಲಯದ ಟೀಕೆ, ವಿಡಂಬನೆಗೆ ಮಣಿದಿರುವ ಸರ್ಕಾರ, ಯೂ ಟರ್ನ್ ಹೊಡೆದು, ರಾತ್ರಿ ಕರ್ಫ್ಯೂ ನಿರ್ಧಾರವನ್ನೇ ಕೈಬಿಟ್ಟಿರುವುದಾಗಿ ಹೇಳಿದೆ.
ಹಾಗೆ ನೋಡಿದರೆ, ಯಡಿಯೂರಪ್ಪ ಸರ್ಕಾರಕ್ಕೆ ಇಂತಹ ಯೂಟರ್ನಗಳು ಹೊಸದೇನಲ್ಲ. ಅದರಲ್ಲೂ ಕರೋನಾ ವಿಷಯದಲ್ಲಿ ಈ ಸರ್ಕಾರ ಹೊಡೆದಿರುವ ಯೂ ಟರ್ನಗಳಿಗೆ ಲೆಕ್ಕವೇ ಇಲ್ಲ. ಅದು ಆರಂಭದಲ್ಲಿ ವಲಸೆ ಕಾರ್ಮಿಕರಿಗೆ ವಿಶೇಷ ರೈಲು ನೀಡುವ ಬಗ್ಗೆ ಇರಬಹುದು, ಅವರ ಪ್ರಯಾಣಕ್ಕೆ ಸರ್ಕಾರಿ ಸಾರಿಗೆ ದುಪ್ಪಟ್ಟು ದರ ವಿಧಿಸಿದ್ದಿರಬಹುದು, ಮದ್ಯದಂಗಡಿಗಳನ್ನು ನಿರ್ಬಂಧಿಸಿದ್ದು ಮತ್ತು ಲಾಕ್ ಡೌನ್ ಮುಗಿಯುವ ಮುನ್ನೇ ಇತರೆಲ್ಲಾ ಅಂಗಡಿಮುಂಗಟ್ಟುಗಳನ್ನು ತೆರೆಯುವ ಮೊದಲು ಮದ್ಯದಂಗಡಿ ತೆರೆದಿದ್ದಿರಬಹುದು, ಮಾಸ್ಕ್ ಧರಿಸದಿದ್ದರೆ 500 ರೂ ಫೈನ್ ವಿಧಿಸಿದ್ದಿರಬಹುದು, ಶಾಲೆ ಪುನರಾರಂಭ ಮತ್ತು ವಿದ್ಯಾಗಮ ಯೋಜನೆಯ ಕುರಿತ ತೀರ್ಮಾನಗಳಿರಬಹುದು,..
ಹೀಗೆ ಸಾಲು ಸಾಲು ಸಂದರ್ಭಗಳಲ್ಲಿ ಸಾರ್ವಜನಿಕ ಹಿತಕ್ಕಿಂತ ಇನ್ನಾವುದೋ ಉದ್ದೇಶ, ಯಾವುದೋ ಅನುಕೂಲಗಳಿಗಾಗಿ ಸರ್ಕಾರ ಕ್ಷಣಕ್ಕೊಂದು ತೀರ್ಮಾನ, ದಿನಕ್ಕೊಂದು ನಿರ್ಣಯ ತೆಗೆದುಕೊಂಡು, ತನ್ನದೇ ಆದೇಶ, ತೀರ್ಮಾನಗಳಿಗೆ ಮರುಕ್ಷಣದಲ್ಲೇ ಯೂ ಟರ್ನ್ ಹೊಡೆದು ನಗೆಪಾಟಲಿಗೀಡಾಗಿದೆ. ಆ ಹಿನ್ನೆಲೆಯಲ್ಲಿಯೇ ಇದು ಯೂಟರ್ನ್ ಸರ್ಕಾರ ಎಂಬ ಹಣೆಪಟ್ಟಿಯೂ ಅಂಟಿದೆ.
ಕರೋನಾ ವಿಷಯವೊಂದೇ ಅಲ್ಲದೆ, ಪಠ್ಯಪುಸ್ತಕದಲ್ಲಿ ಟಿಪ್ಪು ಕುರಿತ ಪಾಠದ ವಿಷಯದಲ್ಲಿ ಇರಬಹುದು, ಇಂದಿರಾ ಕ್ಯಾಂಟೀನ್ ವಿಷಯದಲ್ಲಿರಬಹುದು, ಅನ್ನಭಾಗ್ಯ ಅಕ್ಕಿಯ ವಿಷಯದಲ್ಲಿರಬಹುದು, .. ಜನಸಾಮಾನ್ಯರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುವ ಹಲವು ವಿಷಯಗಳಲ್ಲಿ ಕೂಡ ಇಂತಹದ್ದೇ ಅವಸರದ, ತರಾತುರಿಯ ಮತ್ತು ವಿವೇಚನಾಹೀನ ತೀರ್ಮಾನಗಳನ್ನು ಕೈಗೊಂಡು ಬಳಿಕ ಜನವಿರೋಧ, ಸಾರ್ವಜನಿಕ ಟೀಕೆಗೆ ತಲೆಬಾಗಿ ಯೂ ಟರ್ನ್ ಹೊಡೆದ ಸಾಲುಸಾಲು ಉದಾಹರಣೆಗಳಿವೆ.
ಇಂತಹ ಯಡವಟ್ಟುಗಳು ಸಾರ್ವಜನಿಕ ವಲಯದಲ್ಲಿ ಎಂತಹ ಗಂಭೀರ ಚರ್ಚೆಗಳಿಗೆ ಗ್ರಾಸವಾಗಿವೆ ಎಂದರೆ, ಸ್ವತಃ ಮುಖ್ಯಮಂತ್ರಿಗಳಿಗೆ ಆಡಳಿತದ ಮೇಲೆ ಹಿಡಿತವಿಲ್ಲ ಎಂಬಂತಹ ರಾಜಕೀಯ ಆರೋಪಗಳಿಗೆ ಇಂತಹ ತೀರ್ಮಾನಗಳು ಇಂಬು ನೀಡುತ್ತಿವೆ. ವಯೋಮಾನ ಮತ್ತು ಸಂಪುಟ ಸಹೋದ್ಯೋಗಿಗಳ ಮೇಲೆ ನಿಯಂತ್ರಣವಿಲ್ಲದ ಪರಿಸ್ಥಿತಿಯಲ್ಲಿ ಸಿಎಂ, ಇಂತಹ ತೀರ್ಮಾನಗಳು ಮತ್ತು ಯೂಟರ್ನ್ ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸರ್ಕಾರದ ಮುಖ್ಯಮಂತ್ರಿಗಳು, ಸಂಪುಟ ಸಹೋದ್ಯೋಗಿಗಳು, ಹಿರಿಯ ಅಧಿಕಾರಿಗಳು, ಸಲಹೆಗಾರರ ನಡುವೆ ಸಮನ್ವಯವೇ ಇಲ್ಲ. ಹಾಗಾಗಿಯೇ ಇಂತಹ ಯಡವಟ್ಟುಗಳು ಮತ್ತೆಮತ್ತೆ ಪುನರಾವರ್ತನೆಯಾಗುತ್ತಿವೆ. ಜೊತೆಗೆ ಕೇಂದ್ರದ ಬಿಜೆಪಿ ಸರ್ಕಾರ ಕೋವಿಡ್ ಸಂದರ್ಭದವನ್ನೇ ನೆಪವಾಗಿಟ್ಟುಕೊಂಡು ರಾಜ್ಯ ಸರ್ಕಾರಗಳ ಮೇಲೆ ಅಕ್ಷರಶಃ ಸವಾರಿ ನಡೆಸುತ್ತಿದೆ. ತೀರಾ ದೈನಂದಿನ ವ್ಯವಹಾರಗಳಲ್ಲೂ ಮೂಗು ತೂರಿಸುತ್ತಿದೆ. ಅದೂ ಕೂಡ ಇಂತಹ ಇರಿಸುಮುರಿಸಿನ ಸಂದರ್ಭಗಳನ್ನು ಮತ್ತೆ ಮತ್ತೆ ಸೃಷ್ಟಿಸುತ್ತಿದೆ ಎಂಬ ಮಾತುಗಳೂ ಇವೆ.
ಇದೀಗ ರಾತ್ರಿ ಕರ್ಫ್ಯೂ ಹೇರಿಕೆಯ ಸರ್ಕಾರದ ನಡೆ ಕೂಡ ಅಂತಹದ್ದೇ ವಿವೇಚನಾಹೀನ, ಅವಸರದ, ಇನ್ನಾರನ್ನೋ ಸಂತೃಪ್ತಿಗೊಳಿಸುವ, ಸಿದ್ಧಾಂತ ಮೆಚ್ಚಿಸುವ ಪ್ರಯತ್ನದ ಭಾಗವೇ. ಆದರೆ ,ಈಗಲೂ ಕರ್ನಾಟಕದ ಜನ ಸರ್ಕಾರದ ಕಿವಿ ಹಿಂಡಿದ್ದಾರೆ. ಮತಿಗೇಡಿತನಕ್ಕೆ ಛೀಮಾರಿ ಹಾಕಿದ್ದಾರೆ. ಹಾಗಾಗಿ ಮತ್ತೊಂದು ದೀಢೀರ್ ಯೂ ಟರ್ನ್ ಹೊಡೆಯಲಾಗಿದೆ!