ರೈತರ ಸಂಕಷ್ಟಕ್ಕೆ ಕೇಂದ್ರ ಸರಕಾರದ ಸೂಚನೆಯಂತೆ ರಾಜ್ಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಪಂದಿಸಲು ಮುಂದೆ ಬಂದಿದ್ದಾರೆ. ಪ್ರಮುಖವಾಗಿ ಚೆಕ್ ಪೋಸ್ಟ್ ಗಳಲ್ಲಿ ಸರಕು ಸಾಗಣೆ ವಾಹನಗಳಿಗೆ ಅಡ್ಡಿಪಡಿಸಿದರೆ ಅಂತಹ ಸಿಬ್ಬಂದಿಗಳ ವಿರುದ್ಧ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಹಣ್ಣುಹಂಪಲು, ತರಕಾರಿ ಮಾರುಕಟ್ಟೆ ತೆರೆಯಲು ಅವಕಾಶವಿದೆ. ಯಾವುದೇ ಗೊಂದಲ ಬೇಡ. ಆದರೆ ಆರೋಗ್ಯದ ದೃಷ್ಟಿಯಿಂದ ಸಾಮಾಜಿಕ ಅಂತರ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಇನ್ನು ರಾಜ್ಯದಿಂದ ರಫ್ತಾಗುತ್ತಿದ್ದ ತರಕಾರಿ, ಹಣ್ಣು ಹಂಪಲುಗಳ ಬೇಡಿಕೆ ಕುಸಿದಿದ್ದು, ಆದ್ದರಿಂದ ರಾಜ್ಯದಲ್ಲಿರುವ ಎಲ್ಲಾ ಹಾಪ್‌ಕಾಮ್ಸ್ ಗಳು ದಿನವಿಡೀ ತೆರೆಯಲು ಅವಕಾಶವಿದೆ. ಇನ್ನು ಹಾಪ್‌ಕಾಮ್ಸ್ ಗಳಲ್ಲಿ ಕೋಳಿ ಮೊಟ್ಟೆ ಮಾರಾಟ ಮಾಡಲು ಅವಕಾಶ ನೀಡಲಾಗಿದೆ, ಯಾವುದೇ ಸುಳ್ಳು ಸುದ್ದಿಗಳಿಗೆ ಕಿವಿಕೊಡಬೇಡಿ ಎಂದರು. ಇನ್ನು ರೈಲುಗಳ ಮೂಲಕವೂ ಹಣ್ಣು ತರಕಾರಿ ಸಾಗಾಟಕ್ಕೆ ಅವಕಾಶ ನೀಡುವ ಬಗ್ಗೆಯೂ ತೀರ್ಮಾನಿಸಲಾಗಿದೆ. ಮತ್ತು ರಾಜ್ಯದಲ್ಲಿ ಅಗತ್ಯ ಸಾಮಗ್ರಿಗಳ ಯಾವುದೇ ರೀತಿಯ ಕೊರತೆಯಿಲ್ಲ ಎಂದರು.

27 ರೇಷ್ಮೆ ಮಾರುಕಟ್ಟೆ, ಅಕ್ಕಿ ಮಿಲ್, ದಾಲ್ ಮಿಲ್ ತೆರೆಯಲು ಸೂಚಿಸಲಾಗಿದೆ. ಕೆಎಂಎಫ್ ನಲ್ಲಿ ಉಳಿಯುವ 7 ಲಕ್ಷ ಲೀಟರ್ ಹಾಲನ್ನು ಸರಕಾರ ಖರೀದಿಸಿ ಸ್ಲಂ ಜನರು ಹಾಗೂ ಬಡಜನರಿಗೆ ಉಚಿತವಾಗಿ ನಾಳೆಯಿಂದ ಒದಗಿಸಲು ನಿರ್ಧರಿಸಿಲಾಗಿದ್ದು, ಅದರಂತೆ ಆಯಾಯ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಬಡಜನರಿಗೆ ಹಾಲು ಒದಗಿಸಲು ಸೂಚಿಸಲಾಗಿದೆ ಎಂದರು..
ಇದರಿಂದಾಗಿ ಸದ್ಯ ರಾಜ್ಯಾದ್ಯಂತ ರೈತರು, ವ್ಯಾಪಾರಿಗಳು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಅಲ್ಲದೇ ವ್ಯಾಪಾರಿಗಳ, ಸಾಗಾಟದಾರರ ಮೇಲೆ ಆಗುತ್ತಿದ್ದ ಪೊಳಿಸ್ ದೌರ್ಜನ್ಯ ಕಡಿಮೆಯಾಗಬಹುದು ಅನ್ನೋ ನಿರೀಕ್ಷೆ ಹುಟ್ಟುಹಾಕಿದೆ. ಆದರೆ ನಿನ್ನೆ ರಾತ್ರಿಯೊಂದು ಘಟನೆ ನಡೆದಿದ್ದು, ಮಾಜಿ ಸಚಿವರ ಮನೆ ವಾಚ್ ಮೆನ್ ಮೇಲೆಯೇ ಬೆಂಗಳೂರು ಪೊಲೀಸರು ದೌರ್ಜನ್ಯ ನಡೆಸಿದ ಘಟನೆ ವರದಿಯಾಗಿದೆ.

ಹೌದು, ಮಾಜಿ ಸಚಿವ, ಮಂಗಳೂರು ಶಾಸಕ ಯುಟಿ ಖಾದರ್ ಅವರ ಬೆಂಗಳೂರು ನಿವಾಸದ ವಾಚ್‌ಮೆನ್ ಮಹದೇವಪ್ಪ ಎಂಬವರು ನಿನ್ನೆ ರಾತ್ರಿ ಕೆಲಸ ಮುಗಿಸಿ ಹೋಗುತ್ತಿದ್ದ ಸಂದರ್ಭ ಪೊಲೀಸರು ಲಾಠಿಯಲ್ಲಿ ಹಲ್ಲೆ ನಡೆಸಿ ನಡೆಸಿದ ಆರೋಪ ಕೇಳಿಬಂದಿದೆ. ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿ ಸೈಕಲ್ ಮೂಲಕ ಮನೆಗೆ ತೆರಳುತ್ತಿದ್ದ ಸಂದರ್ಭ ವಯೋವೃದ್ಧ ಮಹದೇವಪ್ಪ ಅವರನ್ನ ಸೈಕಲ್ ನಿಂದ ದೂಡಿಹಾಕಿ ಹಲ್ಲೆ ನಡಸಿದ್ದಾರೆ ಎನ್ನಲಾಗಿದೆ. ಹಲ್ಲೆಯಿಂದಾಗಿ 75 ರ ಹರೆಯದ ಮಹದೇವಪ್ಪ ಅವರ ಕೈ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಇಂದು ಮುಂಜಾನೆ ಸ್ವತಃ ಯುಟಿ ಖಾದರ್ ಅವರೇ ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೇ ಅವರ ಜೊತೆಗಿದ್ದ ಇನ್ನೊಬ್ಬ ವಾಚ್ ಮೆನ್ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಯುಟಿ ಖಾದರ್ ಆರೋಪಿಸಿದ್ದಾರೆ. ಅಲ್ಲದೇ ಈ ಕುರಿತು ಯುಟಿ ಖಾದರ್ ಅವರು ಗಾಯಾಳು ಮಹದೇವಪ್ಪ ಅವರನ್ನು ಮುಖ್ಯಮಂತ್ರಿ ಕಚೇರಿಗೆ ಕರೆದೊಯ್ದು ಬಿಎಸ್ ಯಡಿಯೂರಪ್ಪನವರಿಗೆ ಈ ಕುರಿತು ದೂರು ಸಲ್ಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ..