ಇತ್ತೀಚೆಗೆ ಬಂದ ಎರಡು ಸುದ್ದಿಗಳು ನಮ್ಮೆಲ್ಲರನ್ನೂ ಕ್ಷಣ ಕಾಲ ಬೆರಗಾಗುವಂತೆ ಮಾಡಿತ್ತು. ಕಾರ್ಮಿಕರಾದ ಅಮೃತ್ ರಾಂಚರಣ್ ಹಾಗೂ ಸ್ನೇಹಿತ ಮಹಮ್ಮದ್ ಯಾಕುಬ್ ಎಂಬ ಯುವಕರ ಆತ್ಮಸಂಬಂಧವಾಗಿದೆ ಮೊದಲನೆಯದ್ದು. ಇಬ್ಬರೂ ಗುಜರಾತ್ ನ ಸೂರತ್ ನಿಂದ ಉತ್ತರಪ್ರದೇಶದ ಬಸ್ತಿಯ ಕಡೆಗೆ ಹೊರಟಿದ್ದರು. ದಾರಿ ಮಧ್ಯೆ ಅಮೃತ್ ಅನಾರೋಗ್ಯದಿಂದ ಪ್ರಜ್ಞೆ ಕಳೆದುಕೊಂಡಾಗ, ಆತನಿಗೆ ಕೋವಿಡ್ ಬಾಧಿಸಿದೆ ಎಂದು ಭಯಭೀತರಾದ ಟ್ರಕ್‍ನಲ್ಲಿದ್ದ ಜನರು, ಅಮೃತ್ ನನ್ನು ಮಧ್ಯರಾತ್ರಿ ಹೊತ್ತಲ್ಲಿ, ರಸ್ತೆಬದಿಯಲ್ಲಿಯೇ ಟ್ರಕ್ ನಿಂದ ಇಳಿಸಿಬಿಟ್ಟರು. ಸ್ನೇಹಿತನನ್ನು ಬಿಟ್ಟು ಹೋಗಲು ಮನಸ್ಸು ಕೇಳದೆ ಇದ್ದಾಗ, ಯಾಕುಬ್ ಕೂಡಾ ಟ್ರಕ್‍ನಿಂದ ಇಳಿಯುತ್ತಾನೆ. ನಂತರ, ಅಮೃತ್ ನನ್ನು ಮಡಿಲಲ್ಲಿ ಮಲಗಿಸಿ, ಅಸಹಾಯಕ ಸ್ಥಿತಿಯಲ್ಲಿ ಸಹಾಯಕ್ಕಾಗಿ ಅಂಗಲಾಚುತಿದ್ದ ಯಾಕುಬ್ ನನ್ನು ನೋಡಿ ಯಾರೋ ಸ್ಥಳೀಯರು ಆಂಬುಲೆನ್ಸ್ ನ್ನ ವ್ಯವಸ್ಥೆ ಮಾಡಿಕೊಡುತ್ತಾರೆ. ಆದರೆ, ಆಸ್ಪತ್ರೆ ತಲುಪುವಷ್ಟಲ್ಲಿಯೇ ಯಾಕುಬ್‍ನ ಮಡಿಲಲ್ಲಿಯೇ ಅಮೃತ್‍ನ ಪ್ರಾಣಪಕ್ಷಿ ಹಾರಿ ಹೋಗಿತ್ತು.
Also Read: ಮತ್ತೆ ಕಣ್ಣೀರಾದ ಪ್ರಭುತ್ವ: ಮುಸ್ಲಿಂ ಗೆಳೆಯನ ಮಡಿಲಲ್ಲಿ ಅಸುನೀಗಿದ ಹಿಂದೂ ಯುವಕ.!
ಎರಡನೇ ಸುದ್ದಿಯೂ ಕೂಡಾ ಬಹಳ ವ್ಯಾಪಕವಾಗಿ ಶೇರ್ ಆದುದೇ ಆಗಿದೆ. ಹೃದಯಸ್ಪರ್ಶಿಯಾದ ಒಂದು ಪತ್ರದಿಂದಾಗಿ ಇದು ಜಾಲತಾಣಗಳಲ್ಲಿ ತುಂಬಾ ವೈರಲ್ ಆಗಿತ್ತು. ಸೈಕಲ್ ಕದ್ದ ಕಾರ್ಮಿಕನೊಬ್ಬ ಆ ಸೈಕಲ್‍ನ ಮಾಲಕನಿಗೆ ಹಿಂದಿ ಭಾಷೆಯ ಕೈಬರಹದಲ್ಲಿ ಬರೆದದ್ದಾಗಿತ್ತು ಆ ಪತ್ರ.
“ನಾನೊಬ್ಬ ಅಸಹಾಯಕನಾದ ಕಾರ್ಮಿಕನಾಗಿದ್ದೇನೆ. ತಮಗೊಂದು ತಪ್ಪೆಸಗುತ್ತಿರುವೆನು. ನಾನು ನಿಮ್ಮ ಸೈಕಲ್ ಕೊಂಡೊಯ್ಯುತ್ತಿದ್ದೇನೆ. ನನ್ನಲ್ಲಿ ಕ್ಷಮೆಯಿರಲಿ. ನನಗೆ ನನ್ನೂರು ತಲುಪಲು ಬೇರೆ ದಾರಿಯಿಲ್ಲ. ನನಗೆ ಅಂಗವೈಕಲ್ಯವಿರುವ ಮಗುವೊಂದಿದೆ. ಅಲ್ಲದೇ ದೂರದ ಬರೇಲ್ವಿ ಕಡೆಗೆ ಹೋಗಬೇಕಿದೆ.” ಹೀಗೆ ಆ ಪತ್ರದಲ್ಲಿ ಬರೆದಿತ್ತು.
ಪತ್ರವನ್ನು ಓದಿದ ಸೈಕಲ್‍ನ ಮಾಲಕ ‘ಪ್ರಭು ದಯಾಳ್’ ಪೊಲೀಸರಲ್ಲಿ ದೂರು ಕೊಡಲು ಹಿಂಜರಿಯುತ್ತಾರೆ. ಸೈಕಲ್ ಕೊಂಡು ಹೋದ ಇಕ್ಬಾಲ್ ಖಾನ್ ನ ಕೆಲಸವನ್ನು ಒಂದು ಕಳ್ಳತನವಾಗಿ ಪ್ರಭುದಯಾಳ್ ಕಾಣಲಿಲ್ಲ. ಆದರೆ, ಯಾವ ಸೈಕಲೂ ಕಳೆದುಕೊಳ್ಳದ ಮಾಧ್ಯಮದವರು ಅದನ್ನು ʼಕಳ್ಳತನʼ ಎಂದು ವರದಿ ಮಾಡಿದರು.
ಕೋವಿಡ್ ಕಾಲದ ಮೈತ್ರಿ
ಈ ಘಟನೆಗಳ ವರದಿಗಳು ಎಲ್ಲೂ ಪರಾಮರ್ಶಿಸಲ್ಪಡುವುದಿಲ್ಲವಾದರೂ, ಆ ಪತ್ರದ ಅಕ್ಷರ ಸಾಲುಗಳ ಮಧ್ಯೆ ನಮಗೆ ಓದಲು ಸಾಧ್ಯವಾಗುವ ಒಂದು ಮೌಲ್ಯವಿದೆ. ಅದೇನೆಂದರೆ, ಜೀವನದ ಅತಿ ಪ್ರಯಾಸಕರ ನಿಮಿಷಗಳಲ್ಲಿಯೂ ಕೂಡಾ ಭಾರತದ ಸೀಮಿತ ಜನಗಳ ಮಧ್ಯೆ ನೆಲೆಗೊಂಡಿರುವ ಮೈತ್ರಿಯಾಗಿದೆ ಅದು. ಮೊದಲ ಸುದ್ದಿಯಲ್ಲಿ ಮರಣ ಹೊಂದಿದ ಕಾರ್ಮಿಕ ಒಬ್ಬ ಹಿಂದುವೂ, ಅವನಿಗೆ ನೆರವಾಗಿ ಮಡಿಲಲ್ಲಿ ಮಲಗಿಸಿ, ಗೋಗರೆದ ವ್ಯಕ್ತಿ ಒಬ್ಬ ಮುಸ್ಲಿಮನಾಗಿದ್ದ. ಎರಡನೇ ಘಟನೆಯಲ್ಲಿ, ಕದ್ದು ಕೊಂಡು ಹೋದವ ಅಸಹಾಯಕನಾದ ಮುಸ್ಲಿಂ ಕಾರ್ಮಿಕನಾದರೆ, ಅನುಕಂಪ ತೋರಿದ ಮಾಲಕ ಒಬ್ಬ ಹಿಂದೂ ಆಗಿದ್ದರು. ಈ ವಾಸ್ತವ ನಮ್ಮ ಮಾಧ್ಯಮದವರ ಗಮನ ಸೆಳೆಯದೇ ಹೋದುದು ದುರ್ಭಾಗ್ಯವೆಂದೇ ಹೇಳಬೇಕು.
ಮತೀಯ ಐಕ್ಯತೆ ಮಾಧ್ಯಮಗಳಿಗೆ ಒಂದು ಸುದ್ದಿಯೇ ಅಲ್ಲ. ಅದೇ ವೇಳೆ, ಧರ್ಮದ ಹೆಸರಿನಲ್ಲಿನ ಸಂಘರ್ಷಗಳಾಗಿದ್ದರೆ ಅದು ಬೇರೆಯೇ ಸ್ವರೂಪ ಪಡೆಯುತ್ತಿತ್ತು. ಪ್ರಸ್ತುತವಿರುವ ವಿಭಾಗೀಯತೆಯನ್ನು ಇಲ್ಲವಾಗಿಸಲು ಈ ಎರಡು ಘಟನೆಗಳು ಸಾಕಾಗುತ್ತಿತ್ತು. ಆದರೆ, ಐಕ್ಯತೆಗೆ ಸುದ್ದಿ ಪ್ರಾಮುಖ್ಯತೆ ಅನ್ನೊದೇ ಇಲ್ಲವಾದರೆ..!?
ಸುದ್ದಿ ಆದರೂ, ಆಗದೇ ಹೋದರೂ ಸಾಮುದಾಯಿಕ ಸಮೈಕ್ಯತೆಯನ್ನು ಘಂಟಾಘೋಷಿಸುವಂತಹ ಸಾವಿರಾರು ಘಟನೆಗಳು ಸಾಮಾನ್ಯವಾಗಿ ನಡೆಯುತ್ತಲೇ ಇರುವ ದೇಶವಾಗಿದೆ ಇದು. ಹಿಂದೂಗಳು ಮುಸ್ಲಿಮರನ್ನೂ, ಮುಸ್ಲಿಮರು ಹಿಂದೂಗಳನ್ನೂ ಸಹಾಯ ಮಾಡುತ್ತಾರೆ. ಕಷ್ಟ ಕಾರ್ಪಣ್ಯಗಳಿಗೆ ನೆರವಾಗುತ್ತಾರೆ. ಇಸ್ಲಾಂ , ಹಿಂದೂ, ಕ್ರೈಸ್ತ, ಸಿಖ್, ಅಥವಾ ನಾಸ್ತಿಕವಾದ ಮುಂತಾದ ಯಾವುದೇ ವಿಭಾಗದವರೊಂದಿಗೂ ಐಕ್ಯತೆ ಎಂಬ ಆಶಯವು ಬಹುಭಾಗ ಜನರಲ್ಲಿದೆ.
ಐಕ್ಯತೆಯ ಹಿತದೃಷ್ಟಿಯಿಂದ ಮಾಧ್ಯಮಗಳು ಸುದ್ದಿ ಕೊಡಲು ಮುಂದಾದಲ್ಲಿ, ಈ ಮತೀಯ ಸಂಘರ್ಷಗಳ ವಿಷಮಯ ವಾತಾವರಣದಿಂದ ಪಾರಾಗಲು ಕಷ್ಟಸಾಧ್ಯವೇನಲ್ಲ. ಆದರೆ, ಅವುಗಳೇ ಮತೀಯ ದ್ವೇಷವನ್ನು ಹುಟ್ಟುಹಾಕುವ ವಾಹನಗಳಾಗಿ ಬದಲಾದರೆ ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗುವುದರಲ್ಲಿ ಸಂಶಯವೇ ಇಲ್ಲ. ಸದ್ಯಕ್ಕೆ ಆಗುತ್ತಿರುವುದೂ ಅದೇ ಆಗಿದೆ.
ಆಸ್ಪತ್ರೆಯಲ್ಲಿ ಹಿಂದು ವಾರ್ಡ್ , ಮುಸ್ಲಿಂ ವಾರ್ಡ್…
ಕೋವಿಡ್‍ನ ಈ ಸಂಕಷ್ಟ ಕಾಲದಲ್ಲಿಯೂ ಕೆಲವೊಂದು ಮತಾಂಧ ಶಕ್ತಿಗಳು ಸಾಮುದಾಯಿಕ ಛಿದ್ರತೆಗೆ ಹೆಗಲು ಕೊಟ್ಟಿರುವುದು ನಾವೇನೂ ಮರೆಯುವಂತಿಲ್ಲ. ಪಾದ್ರಿಗಳ ಸಾನ್ನಿಧ್ಯದಲ್ಲಿ, ಸ್ವಂತ ಮನೆಯಲ್ಲಿ ಪ್ರಾರ್ಥನಾ ಯೋಗ ನಡೆಸಿದರೆಂಬ ಒಬ್ಬ ಕ್ರೈಸ್ತ ಧರ್ಮದ ಅನುಯಾಯಿಯನ್ನು ಕ್ರೂರವಾಗಿ ಥಳಿಸಿದ್ದೂ ಒಂದು ಉದಾಹರಣೆ. ಕಾಮ ಸೋಡಿ ಎಂಬ ಮೂವತ್ತರ ಹರೆಯದವನನ್ನು ಹಿಂದುತ್ವ ಶಕ್ತಿಗಳು ಸೇರಿಕೊಂಡು ಥಳಿಸಿ ಪ್ರಜ್ಞೆ ಹೋಗುವಂತೆ ಮಾಡಿರೋದು ಒಡಿಶಾದ ಮಲ್ ಕಾನ್ ಗಿರಿಯ ಕೋಡಲ್ ಮೆಟ್ಲ ಎಂಬ ಗ್ರಾಮದಲ್ಲಾಗಿತ್ತು. ಇತ್ತೀಚೆಗೆ ಮಧ್ಯಪ್ರದೇಶದ ಬೈತುಲ್ ನಲ್ಲಿ ದೀಪಕ್ ಬುಂಡೆಲೆ ಎಂಬ ಗಡ್ಡ ಬಿಟ್ಟ ಹಿಂದೂ ವಕೀಲನೊಬ್ಬನನ್ನು ಆತ ಮುಸ್ಲಿಮನೆಂದು ಭಾವಿಸಿ, ಅಲ್ಲಿನ ಪೊಲೀಸರು ಥಳಿಸಿ, ನಂತರ ಕ್ಷಮೆ ಕೋರಿದರು..!
Also Read: ಮುಸ್ಲಿಮನೆಂದು ಭಾವಿಸಿ ಹಲ್ಲೆ ನಡೆಸಿದ ಬಳಿಕ ಮಧ್ಯಪ್ರದೇಶ ಪೊಲೀಸರ ಹೈಡ್ರಾಮಾ.!
ಜಾರ್ಖಂಡ್‍ನಲ್ಲಿ ಕ್ರೈಸ್ತ ಮತದಲ್ಲಿ ನಂಬಿಕೆಯಿಟ್ಟ ಕಾರಣಕ್ಕೆ 16 ಕುಟುಂಬಗಳ ಮೇಲೆ ನಿರಂತರ ದೌರ್ಜನ್ಯವೆಸಗಲಾಯಿತು. ಕ್ರೈಸ್ತಮತವನ್ನು ತೊರೆಯಬೇಕೆಂದು ಅಲ್ಲಿನ ಪ್ರಾದೇಶಿಕ ಗೂಂಡಾಗಳಿಂದ ಅಕ್ರಮಗೊಳಪಡುತ್ತಾರೆ. ಭಾಜಪಾ ನೇತೃತ್ವದಲ್ಲಿ ಮತಾಂತರ ನಿಷೇಧವನ್ನು ಜಾರಿಗೆ ತಂದ ರಾಜ್ಯವಾಗಿದೆ ಜಾರ್ಖಂಡ್ ಎಂಬುದನ್ನು ಇಲ್ಲಿ ನೆನಪಿಸಬೇಕು.
ಮತಾಂತರ ನಿಷೇಧ ಜಾರಿಗೊಳಿಸಿದ ರಾಜ್ಯಗಳಲ್ಲಿ ದೌರ್ಜನ್ಯಗಳು ಹೆಚ್ಚು ವರದಿಯಾಗಿವೆ ಎಂದು ಈ ಘಟನೆಯನ್ನು ವರದಿ ಮಾಡಿದ ಶಿಬು ಥಾಮಸ್ ಹೇಳುತ್ತಾರೆ. ಒಡಿಶ್ಶಾ ಆಗಿತ್ತು ಮೊದಲ ಬಾರಿಗೆ ಮತಾಂತರ ನಿಷೇಧ ಕಾನೂನು ಜಾರಿಗೊಳಿಸಿದ್ದು. 2017 ರಲ್ಲಿ ಜಾರ್ಖಂಡ್ ಜಾರಿಗೊಳಿಸಿತು. ನಂತರ ಗುಜರಾತ್. ಇದೇ ಗುಜರಾತ್ ನಲ್ಲಿ ಕೋವಿಡ್ ಆಸ್ಪತ್ರೆಗಳಲ್ಲಿ ಮುಸ್ಲಿಂ ರೋಗಿಗಳನ್ನು ಹಿಂದೂ ರೋಗಿಗಳಿಂದ ಬೇರ್ಪಡಿಸಲು ನಿರಂತರ ಶ್ರಮ ನಡೆಸಲಾಯಿತು. ಅದರ ಭಾಗವಾಗಿ ಕೋವಿಡ್ ವಾರ್ಡ್‍ಗಳನ್ನು ʼಹಿಂದೂ ವಾರ್ಡ್ʼ , ʼಮುಸ್ಲಿಂ ವಾರ್ಡ್ʼ ಎಂದು ಪ್ರತ್ಯೇಕಿಸಿ ಕರೆಯಲಾಗುತ್ತಿತ್ತು.
ಮುಸ್ಲಿಮರು ಕರೋನಾ ಹರಡುತ್ತಿದ್ದಾರೆನ್ನುವ ಹಿಂದುತ್ವದ ಪ್ರಚಾರ ಕಾರಣದಿಂದಲೇ, ಗುಜರಾತ್‍ನ ಕೆಲವು ಪ್ರದೇಶಗಳಲ್ಲಿ ಮುಸಲ್ಮಾನರಿಗೆ, ದಿನಬಳಕೆಯ ತರಕಾರಿ ಖರೀದಿಸಲು ಕೂಡಾ ಹೊರಗಿಳಿಯಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳಿದ್ದವು. ಮುಸ್ಲಿಂ ವ್ಯಾಪಾರಿಗಳಿಂದ ಹಿಂದುಗಳು ಸಾಮಾನುಗಳನ್ನು ಖರೀದಿಸಬಾರದು ಎಂದು ಹಲವು ಪ್ರದೇಶಗಳಲ್ಲಿ ಪ್ರಚಾರ ನಡೆಯಿತು, ಕರ್ನಾಟಕವೂ ಸೇರಿದಂತೆ ಹಲವು ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ ಬೋರ್ಡ್‍ಗಳನ್ನು ತೂಗು ಹಾಕಲಾಯಿತು. ಗುಜರಾತ್‍ನ ವಂಶ ಹತ್ಯೆಗೂ ಮುನ್ನ ಹಿಂದುತ್ವವಾದಿಗಳು ಪ್ರಯೋಗಿಸಿದ ತಂತ್ರವಾಗಿತ್ತು ಮುಸ್ಲಿಮರನ್ನು ಬಹಿಷ್ಕರಿಸಿ ಎಂಬುದು.
ಆದರೆ, ಭಾರತೀಯರಿಗೆ ಇದರಲ್ಲಿ ಅಲ್ಪವೂ ತಾತ್ಪರ್ಯವಿಲ್ಲ ಎಂಬುದು ಸತ್ಯವಾಗಿದೆ. ಕಳೆದ ಒಂದು ಶತಮಾನದಲ್ಲಿ ಹಲವು ಕೋಮು ಸಂಘರ್ಷಗಳಿಗೆ ಈ ನಾಡು ಸಾಕ್ಷಿಯಾಗಿದೆ. ದಿಲ್ಲಿಯ ಸಿಖ್ ವಂಶಹತ್ಯೆ, ಮುಂಬೈ ಗಲಭೆ, ಗುಜರಾತ್ ನರಮೇಧ, ಕಂದಮಾಲ್ ಗುಂಪುಹತ್ಯೆ, ಮುಂತಾದ ಸಂಘರ್ಷಗಳಲ್ಲಿಯೂ ನಿಮಗೆ ಅಮೃತ್-ಮುಹಮ್ಮದ್ ಯಾಕುಬ್, ಹಾಗೂ ಪ್ರಭು ದಯಾಳ್- ಮುಹಮ್ಮದ್ ಇಕ್ಬಾಲ್ ರನ್ನು ಕಾಣಬಹುದು.
ಕೋಮು ರಾಜಕಾರಣದ ಕಾರಣದಿಂದ ಗಾಯಗೊಂಡ ನಮ್ಮ ನಾಗರಿಕತೆಯಲ್ಲಿ ಐಕ್ಯತೆಗಿರುವ ನಿರ್ಣಾಯಕ ಪ್ರಾಧಾನ್ಯತೆಯನ್ನು ಹೆಚ್ಚಿನ ಜನರು ಮನದಟ್ಟು ಮಾಡುವ ಸಮಯ ಬಂದಿದೆ. ಭವಿಷ್ಯದಲ್ಲಿ, ನಮ್ಮ ಹೃದಯಗಳಲ್ಲಿ ಜೀವನೋಪಾಯಕ್ಕಾಗಿ ಸೈಕಲ್ ಕದ್ದ ಇನ್ನಷ್ಟು ಮುಹಮ್ಮದ್ ಇಕ್ಬಾಲ್ ಗಳು, ಪ್ರಭು ದಯಾಳರು ನೆಲೆಯಾಗಿರಲಿ. ಭಾರತದಲ್ಲಿ ಐಕ್ಯತೆಯ ವಿಶ್ವ ರೂಪದರ್ಶನ ರೂಪುಗೊಳ್ಳುವುದರಲ್ಲೂ, ಅದು ಬಲಿಷ್ಟವಾಗುವುದರಲ್ಲಿಯೂ, ತಮಗಿರುವ ಪಾತ್ರವೇನೆಂಬುದನ್ನು ಮನದಟ್ಟು ಮಾಡಲು ಮಾಧ್ಯಮ ಮಿತ್ರರಿಗೂ ಸಾಧ್ಯವಾಗಲಿ ಎಂದು ಹಾರೈಸುತ್ತೇನೆ.